ಇಲಕಲ್ಲ
ಇಳಕಲ್ಲ ಪಟ್ಟಣದಲ್ಲಿ ಸೋಮವಾರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಆವರಣದಲ್ಲಿ ಎಪಿಎಂಸಿ ವರ್ತಕರು ಆಯೋಜಿಸಿದ್ದ 16 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.
ಅವರು ಮಾತನಾಡಿ, ‘ಇಳಕಲ್ಲ ಶ್ರೀಮಠ ಬಹು ಹಿಂದಿನಿಂದಲೂ ಜನಸಾಮಾನ್ಯರಿಗೆ ಒಳ್ಳೆಯದಾಗಲಿ ಎಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬಡವರು ಸಾಲದ ಸುಳಿಗೆ ಸಿಲುಕಬಾರದು ಎಂದು ಶ್ರೀಗಳು ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ. ಇಲ್ಲಿ ಮದುವೆಯಾದ ನವದಂಪತಿಗಳು ವ್ಯಸನಗಳಿಂದ ದೂರವಿದ್ದು, ಚಿಕ್ಕ ಕುಟುಂಬ ಹೊಂದಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪಾಂಡೋಮಟ್ಟಿಯ ಸಂಗನಬಸವ ಶ್ರೀಗಳು ಮಾತನಾಡಿ, ‘ಬಸವಾದಿ ಶರಣರ ತತ್ವಾದರ್ಶಗಳನ್ನು ಅರಿತುಕೊಂಡು ಆಚರಿಸುವ ಮೂಲಕ ಮೌಢ್ಯದಿಂದ ಹೊರಬರಬೇಕು. ಶರಣರ ಆಶಯದಂತೆ ಕಾಯಕ, ದಾಸೋಹ ಮಾಡಿ, ನೆಮ್ಮದಿಯ ಜೀವನ ಸಾಗಿಸಬೇಕು. ವ್ಯಸನಗಳಿದ್ದರೆ ಮಹಾಂತ ಜೋಳಿಗೆಗೆ ಹಾಕಿ ಹಸನಾದ ಬಾಳು ಬದುಕಬೇಕು’ ಎಂದು ಹೇಳಿದರು.
ಗುರುಮಹಾಂತ ಶ್ರೀ, ಬೆಲ್ಲಾಳದ ಸಿದ್ದರಾಮ ಶರಣರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು, ಶಿರೂರಿನ ಬಸವಲಿಂಗ ಶ್ರೀಗಳು, ನವಲಿಂಗ ಶರಣರು, ಎಪಿಎಂಸಿ ವರ್ತಕರು ಪಾಲ್ಗೊಂಡಿದ್ದರು. ಸಾವಿರಾರು ಭಕ್ತರು ಉಪಸ್ಥಿತರಿದ್ದರು.