ಇಳಕಲ್ಲ
‘ಹಾವು ಹಾಲು ಕುಡಿಯುವದಿಲ್ಲ. ಹಾಲು ಹಾವಿನ ಆಹಾರವಲ್ಲ. ಪ್ರೋಟಿನಯುಕ್ತ ಪೌಷ್ಠಿಕ ಆಹಾರವಾದ ಹಾಲನ್ನು ನಂಬಿಕೆ, ಸಂಪ್ರದಾಯದ ಹೆಸರಲ್ಲಿ ಕಲ್ಲು, ಮಣ್ಣಿನ ಮೇಲೆ ಹಾಕಿ ಹಾಳು ಮಾಡಬಾರದು. ಮಕ್ಕಳಿಗೆ ಕುಡಿಸಿ ಹಬ್ಬ ಆಚರಿಸಬೇಕು’ ಎಂದು ಗುರುಮಹಾಂತ ಶ್ರೀ ಹೇಳಿದರು.

ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಮಂಗಳವಾರದಂದು ಬಸವ ಪಂಚಮಿ ನಿಮಿತ್ತ ಗುರುಮಹಾಂತ ಶ್ರೀಗಳು ವಿದ್ಯಾರ್ಥಿಗಳಿಗೆ ಹಾಲು ಕುಡಿಸುವ ಮೂಲಕ ಹಬ್ಬ ಆಚರಿಸಿದರು. ಹಾಗೂ ಅಕ್ಕ ನಾಗಮ್ಮನವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಹಾರದ ಪ್ರತಿ ಕಣದಲ್ಲೂ ಶಕ್ತಿ ಸಂಚಯವಾಗಿರುತ್ತದೆ. ಹಾಗಾಗಿ ಉಣ್ಣುವ ಪ್ರತಿ ವಸ್ತುವು ಚೈತನ್ಯರೂಪಿ. ನಂಬಿಕೆ, ಸಂಪ್ರದಾಯ, ಪರಂಪರೆ ಹೆಸರಲ್ಲಿ ಆಹಾರ ಪದಾರ್ಥಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು 12 ಶತಮಾನದಲ್ಲೇ ಶರಣರು ಅರಿವು ಮೂಡಿಸಿದ್ದರು. ಶ್ರೀ ಮಠ ಹಲವು ವರ್ಷದಿಂದ ಈ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿದ್ಯಾರ್ಥಿಗಳು ಮೂಢನಂಬಿಕೆಗೆ ಬಲಿಯಾಗದೇ ತಮ್ಮ ಕುಟುಂಬದ ಇತರರಿಗೆ ಈ ಬಗ್ಗೆ ತಿಳುವಳಿಕೆ ಹೇಳಬೇಕು’ ಎಂದರು.

ಈ ಸಂದರ್ಭದಲ್ಲಿ ನವಲಿಂಗ ಶರಣರು, ಅಕ್ಕನ ಬಳಗ ಹಾಗೂ ಬಸವಕೇಂದ್ರದ ಪದಾಧಿಕಾರಿಗಳು, ಸದಸ್ಯರು, ನಗರದ ವಿವಿಧ ಶಾಲೆಯ ಮಕ್ಕಳು ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.