ಇಲಕಲ್ಲ
ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಸೋಮವಾರ ನಡೆದ ವಚನ ಯಾತ್ರೆಯಲ್ಲಿ ಬಸವಾದಿ ಶರಣರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ಸಾವಿರಾರು ಭಕ್ತರು ವಚನ ಸಾಹಿತ್ಯದ ಪುಸ್ತಕ ಕಟ್ಟಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡಿದರು.

ಗುರುಮಹಾಂತ ಶ್ರೀಗಳ ನೇತೃತ್ವದಲ್ಲಿ ಶ್ರೀಮಠದಿಂದ ಆರಂಭವಾದ ವಚನಯಾತ್ರೆಯಲ್ಲಿ ಬಸವಕೇಂದ್ರ, ವಿಜಯ ಮಹಾಂತೇಶ ತರುಣ ಸಂಘ, ಅಕ್ಕನ ಬಳಗ, ಯುವ ಸೇವಾ ಬಳಗ ಪದಾಧಿಕಾರಿಗಳು, ಹಾಗೂ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಚನಯಾತ್ರೆಯಲ್ಲಿ 30 ಕ್ಕೂ ಹೆಚ್ಚು ಶರಣರ ರೂಪಕಗಳ ಮೆರವಣಿಗೆ ನಡೆಯಿತು. ಮಾರ್ಗದುದ್ದಕ್ಕೂ ಅಶ್ವಾರೂಢ ಬಸವಣ್ಣ, ವಿಜಯಮಹಾಂತ ಶಿವಯೋಗಿಗಳು ಹಾಗೂ ಬಸವಾದಿ ಶರಣರ ವೇಷಧಾರಿ ವಿದ್ಯಾರ್ಥಿಗಳು ಗಮನ ಸೆಳೆದರು.
‘ಕರ್ತೃ ಗದ್ದುಗೆಯಲ್ಲಿ ವಚನಯಾತ್ರೆಯ ಸಮಾರೋಪದಲ್ಲಿ ಗುರುಮಹಾಂತ ಶ್ರೀಗಳು ಮಾತನಾಡಿ, ಬಸವಾದಿ ಶರಣರ ವಚನಗಳ ಪ್ರಸಾರಕ್ಕಾಗಿ ವಿಜಯಮಹಾಂತ ಶಿವಯೋಗಿಗಳು ಅಶ್ವಾರೂಢರಾಗಿ ನಾಡು ಸುತ್ತಿದ್ದರು. ಮಹಾಂತ ಶ್ರೀಗಳು ಕೂಡಾ ವಚನ ಸಾಹಿತ್ಯದಂತೆ ನಡೆ ನುಡಿ ಹೊಂದಿದ್ದರು. ಆ ಮಹಾತ್ಮರು ನಡೆದ ಮಾರ್ಗ ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಬೆಲ್ಲಾಳದ ಸಿದ್ದರಾಮ ಶರಣರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು, ಶಿರೂರಿನ ಬಸವಲಿಂಗ ಶ್ರೀಗಳು, ನವಲಿಂಗ ಶರಣರು ಉಪಸ್ಥಿತರಿದ್ದರು. ಶರಣ ಸಂಸ್ಕೃತಿಯ ಈ ಮಹೋತ್ಸವದಲ್ಲಿ ಸಾವಿರಾರು ಶರಣ ಶರಣೆಯರು ಪಾಲ್ಗೊಂಡಿದ್ದರು.