ನಾನು ವಿವಾದಿತ iLYF ಬಿಟ್ಟಿದ್ದು ಯಾಕೆ?

ಎಂ.ಲೋಕೇಶ್ (ಬಿಂದು)
ಎಂ.ಲೋಕೇಶ್ (ಬಿಂದು)

ಕನ್ನೇರಿ ಸ್ವಾಮಿ, ಅಜಿತ್ ಹನುಮಕ್ಕನವರ್ ಕರೆಸಿದ್ದು ದುರುದ್ದೇಶದಿಂದ ಅಂತ ಎಲ್ಲರಿಗೂ ಗೊತ್ತು.

ಕೊಳ್ಳೇಗಾಲ

ಲಿಂಗಾಯತ ಸಮಾಜದಲ್ಲಿ ಉದ್ಯಮಶೀಲತೆ ಬೆಳೆಸಬೇಕು ಎನ್ನುವುದು ಬಹಳ ವರ್ಷಗಳಿಂದ ನನ್ನ ಮನಸ್ಸಿನಲ್ಲಿದೆ. ನನ್ನ ವ್ಯವಹಾರದಲ್ಲಿ ಸಾಧ್ಯವಾದಷ್ಟೂ ಸಮಾಜದ ಬಂಧುಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ.

ಇದೇ ಕೆಲಸ ಮಾಡಲು ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ಮುಂದೆ ಬಂದಾಗ ನಾನು ಬಹಳ ಉತ್ಸಾಹದಿಂದ ಅದರ ಸದಸ್ಯತ್ವ ಪಡೆದು ಕೆಲವು ವರ್ಷ ಅದರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.

ಆದರೆ ಬಹು ಬೇಗನೆ ಅದರ ಬಗ್ಗೆ ನನ್ನ ಮನಸ್ಸಿನಲ್ಲಿ ಬೇಸರ ಮೂಡಿತು.

ಮುಖ್ಯವಾಗಿ iLYF ದೊಡ್ಡ ಉದ್ಯಮಿಗಳಿಗೆ ಸೃಷ್ಟಿಯಾದ ವೇದಿಕೆ ಎಂದು ಅನಿಸಿತು. ನನ್ನಂತಹ ಕೆಳಗಿನಿಂದ ಬೆಳೆದ ಸಣ್ಣ ಉದ್ದಿಮೆದಾರರಿಗೆ ಸೌಲಭ್ಯ, ನೆರವು ಕಲ್ಪಿಸುವ ಪ್ರಯತ್ನ ಅಥವಾ ಮನಸ್ಥಿತಿ ನನಗೆ ಕಾಣಿಸಲಿಲ್ಲ.

ಅವರ ಕಾರ್ಯಕ್ರಮದಲ್ಲಿ ಸಣ್ಣ ಉದ್ದಿಮೆದಾರರು ಹಣ ಕೊಟ್ಟು ಮಳಿಗೆ ಹಾಕಬಹುದಿತ್ತು. ಅದು ಬಿಟ್ಟರೆ ಬೇರೆ ಯಾವುದೇ ವೇದಿಕೆ ಅವರಿಗೆ ಲಭ್ಯವಿರಲಿಲ್ಲ. ವೇದಿಕೆಯಿದ್ದಿದೆಲ್ಲಾ ವಿಜಯ ಸಂಕೇಶ್ವರರಂತಹ ದೊಡ್ಡ ದೊಡ್ಡ ಶ್ರೀಮಂತರಿಗೆ ಮಾತ್ರ.

iLYFನಲ್ಲಿ ಸಣ್ಣವರಿಗೆ ದೊಡ್ಡ ಉದ್ದಿಮೆದಾರರಿಂದ ಸಹಾಯವಾಗುವುದಕ್ಕಿಂತಲೂ ದೊಡ್ಡ ಕೋಟ್ಯಾಧಿಪತಿಗಳು ಸಣ್ಣವರನ್ನು, ಸಮಾಜವನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದ್ದಂತೆ ಕಾಣಿಸಿತು.

ಅಲ್ಲಿ ಹಪ್ಪಳ ಮಾಡುವವರೂ ಇದ್ದಾರೆ, ಏರೋಪ್ಲೇನ್ ಮಾರುವವರೂ ಇದ್ದಾರೆ. ಇವರ ಗಮನವೆಲ್ಲಾ ಏರೋಪ್ಲೇನ್ ಮಾರುವವರ ಮೇಲೆ, ಹಪ್ಪಳ ಮಾರುವವರನ್ನು ಬೆಳೆಸುವ ಯಾವುದೇ ಪ್ರಯತ್ನ ಕಾಣಿಸಲಿಲ್ಲ. ದೊಡ್ಡವರು ದೊಡ್ಡವರಿಗಾಗಿ ಮಾಡಿಕೊಂಡ ಸೇವಾಲಯ ಅಂತ ಅನಿಸಿತು.

iLYFನಲ್ಲಿ ಇನ್ನೊಂದು ಗಂಭೀರವಾದ ಸಮಸ್ಯೆಇದೆ.

ಲಿಂಗಾಯತ ಹೆಸರಿನಲ್ಲಿ ಶುರುವಾಗಿ, ಲಿಂಗಾಯತ ಸಮಾಜವನ್ನು ಬಳಸಿಕೊಂಡು ಬೆಳೆದ ಸಂಸ್ಥೆಯಾದರೂ ಇವರಲ್ಲಿ ಲಿಂಗಾಯತ ಧರ್ಮ, ಸಿದ್ದಾಂತ, ಪರಂಪರೆಯ ಬಗ್ಗೆ ಯಾವ ಆಸಕ್ತಿಯೂ ಕಾಣಿಸಲಿಲ್ಲ.

ನನ್ನನ್ನು ಮೊದಲು ಆಕರ್ಷಿಸಿದ್ದು iLYFನ ಹೆಸರಿನಲ್ಲಿರುವ ‘ಲಿಂಗಾಯತ’ ಪದ. ಆ ಖುಷಿಗೆ 5,000 ಅಲ್ಲಾ 10,000 ಕಟ್ಟಲೂ ಕಟ್ಟೋದಿಕ್ಕೂ ರೆಡಿ ಇದ್ದೆ.

ಆಮೇಲೆ ಇವರು ಯಾರ ಗಮನಕ್ಕೂ ತರದೆ ‘ವೀರಶೈವ’ ಪದ ಸೇರಿಸಿದರು. ನನಗೆ ನೆನಪಿರುವಂತೆ ಒಂದು ಪ್ರೊಮೊ ಬಿಡುಗಡೆಯಾದಾಗ ಅದರಲ್ಲಿ ಮೊದಲ ಬಾರಿಗೆ ‘ವೀರಶೈವ’ ಬಳಕೆಯಾಗಿತ್ತು.

ಲಿಂಗಾಯತ ಅನ್ನೋ ಹೆಸರಿನಲ್ಲಿ ಶುರು ಮಾಡಿ ಸ್ವಲ್ಪ ಬೆಳೆಯತ್ತೇ ಅಂತ ಗೊತ್ತಾಗುತ್ತಾ ಇದ್ದಂತೆ ‘ವೀರಶೈವ’ ತಂದು ಕೂರಿಸ್ತಾರೆ. ಅನೇಕ ಸಂಸ್ಥೆಗಳ ಕತೆ ಇದು.

iLYF ಇತ್ತೀಚೆಗೆ ಶುರುವಾದ ಸಣ್ಣ ಸಂಸ್ಥೆ. ಐದಾರು ವರ್ಷ ಕೂಡ ಇವರು ಲಿಂಗಾಯತ ಹೆಸರನ್ನು ಸಹಿಸಿಕೊಳ್ಳಲಾಗಲಿಲ್ಲ, ಲಿಂಗಾಯತ ಪದದ ಅಡಿಯಲ್ಲಿ ಇರೋದಿಕ್ಕೆ ಆಗಲಿಲ್ಲ.

ಲಿಂಗಾಯತ ಅಂತ ಹೇಳಿಕೊಂಡು ಮುಂದುವರೆಯಲು ಇವರಿಗೆ ಮನಸಿಲ್ಲ. ನಾವು ಯಾಕೆ ‘ಲಿಂಗಾಯತ’ ಮಾತ್ರ ಇರಲಿ ಅಂತ ನಿರೀಕ್ಷೆ ಮಾಡಬಾರದು.

ಆಮೇಲೆ ಕ್ರಮೇಣವಾಗಿ ಎಲ್ಲಾ ಕಡೆ ‘ವೀರಶೈವ’ ಎಂದು ಮೊದಲು ಬರಲು ಶುರುವಾಯಿತು. ಲಿಂಗಾಯತಕ್ಕಿಂತ ‘ವೀರಶೈವ’ ಎದ್ದು ಕಾಣಲು ಶುರುವಾಯಿತು.

ಇದನೆಲ್ಲಾ ಸಹಿಸಿಕೊಂಡು ಮುಂದುವರೆಯುವ ಅವಶ್ಯಕತೆ ಇರಲಿಲ್ಲ. ಸದಸ್ಯತ್ವದ ಶುಲ್ಕ ಕಟ್ಟುವುದು ನಿಲ್ಲಿಸಿದೆ, ಜೂಲೈ 2024 ನನ್ನ iLYF ಸಂಬಂಧ ಮುಗಿಯಿತು.

ಸಂತೋಷ್ ಕೆಂಚಾಂಬರಂತಹ ದೊಡ್ಡೋರೆಲ್ಲಾ ಸೇರಿದ ಮೇಲೆ iLYF ಸಣ್ಣವರಿಂದ ಇನ್ನೂ ದೂರ ಹೋಯಿತು. ಅದರಲ್ಲಿ ರಾಜಕಾರಣವೂ ಹೆಚ್ಚಾಯಿತು.

ವೈಯಕ್ತಿಕವಾಗಿ ಯಾರು ಯಾವ ರಾಜಕಾರಣ ಬೇಕಾದರೂ ಮಾಡಿಕೊಳ್ಳಲಿ. ಅಭ್ಯಂತರವಿಲ್ಲ. ಆದರೆ ಸಮಾಜದ ಸಂಸ್ಥೆಗಳನ್ನು ಬಳಸಿಕೊಂಡು ರಾಜಕಾರಣ ಮಾಡುವುದು ಅಪರಾಧ. ಈಗ ಉದ್ಯಮಶೀಲತೆ ಬೆಳಸುವ ಸಂಸ್ಥೆಗಿಂತ iLYF ರಾಜಕೀಯದ ವೇದಿಕೆ ಆಗಿದೆ.

ಬೆಂಗಳೂರು ಕಾರ್ಯಕ್ರಮಕ್ಕೆ ಬನ್ನಿ ಅಂತ iLYFನವರು ಕರೆದಿದ್ರು. ಅಲ್ಲಿ ಕನ್ನೇರಿ ಸ್ವಾಮಿ, ಅಜಿತ್ ಹನುಮಕ್ಕನವರ್ ಬರುತ್ತಿದ್ದು ನೋಡಿ ಹೋಗಲಿಲ್ಲ.

ಕನ್ನೇರಿ ಸ್ವಾಮಿ ವಿವಾದ ಇವರಿಗೆ ಗೊತ್ತಿಲ್ಲವೇ? ಅಜಿತ್ ಹನುಮಕ್ಕನವರ್ ಲಿಂಗಾಯತ ಧರ್ಮ ವಿರೋಧಿ ಅಂತ ಇವರಿಗೆ ಗೊತ್ತಿಲ್ಲವೇ? ಹಾಗಿದ್ದೂ ಇವರನ್ನು ಕರೆಸಿದ್ದು ದುರುದ್ದೇಶದಿಂದ ಅಂತ ಎಲ್ಲರಿಗೂ ಗೊತ್ತು.

ಬೆಂಗಳೂರಿನಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆದದ್ದು ಒಳ್ಳೆಯದಾಯಿತು. ಪ್ರತಿಭಟನೆ ಇನ್ನೂ ಜೋರಾಗಿ ನಡೆಯಬೇಕಿತ್ತು. ಆದರೆ ಲಿಂಗಾಯತ ಸಮಾಜದಲ್ಲಿ ಇಂತವರ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಮಾಧಾನದ ವಿಷಯ. ಯಾರೂ ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಕೆ ಮಾಡಿಕೊಳ್ಳುವುದನ್ನು ಸಹಿಸಬಾರದು.

ಸಣ್ಣ ಉದ್ದಿಮೆದಾರರನ್ನು ಬೆಳೆಸುವ, ಲಿಂಗಾಯತ ಧರ್ಮ, ಸಿದ್ದಾಂತಕ್ಕೆ ಬದ್ದವಾಗಿರುವ ಪರ್ಯಾಯ ವೇದಿಕೆ ಕಟ್ಟುವ ಅಗತ್ಯವಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
4 Comments
  • ಲಿಂಗಾಯತರು ಅಂದರೆ ಹುತ್ತ ಕಟ್ಟುವ ಗೆಜ್ಜಲು. ಆ ಹುತ್ತದಲ್ಲಿ ವಾಸಮಾಡುವರು ಯಾರು? ವೀರಶೈವರು ಇತಿಹಾಸದಲ್ಲಿ ಸ್ವಯಂ ಆಗಿ ಮುಂದೆ ಬಂದವರಲ್ಲ. ಲಿಂಗಾಯತ ಇಲ್ಲದೆ ಬದುಕುವ ಶಕ್ತಿ ಇರಿಗಿಲ್ಲ. ಇವರ ಬದುಕು ನಿರ್ಮಾಣ ಆಗುತ್ತಿರುವುದೇ ಲಿಂಗಾಯತರಿಂದ.

  • ಮೊನ್ನೆ ನಡೆದ ವೀರಶೈವ ಲಿಂಗಾಯತ ಉದ್ಯೋಗ ಸಮ್ಮೇಳದಲ್ಲಿ ಅಜಿತ್ ಹನುಮಕ್ಕನವರನ್ನು ನಾನು ಕೂಡ ನೋಡಿದೆ ಆಶ್ಚರ್ಯವಾಯಿತು ಇವನೇಕೆ ಇಲ್ಲಿ ಬಂದಿದ್ದಾನೆ ಇವನಿಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ ಅನ್ನೋ ಒಂದು ಸಂಶಯ ಮತ್ತು ಆಶ್ಚರ್ಯ ಸಂಗತಿ ನನ್ನಲ್ಲಿ ಉಂಟಾಯಿತು ನಂತರ ಗೊತ್ತಾಯಿತು ಇವನು ಲಿಂಗಾಯತ ಧರ್ಮವಿರೋಧಿ ಇವನ ಮೂಲಕವೇ ಕಣ್ಣೀರಿ ಸ್ವಾಮಿಯನ್ನು ಈ ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ ಎಂಬುದು ಲಜಘಟ್ಟ ನೀತಿಗೆಟ್ಟ ಅಂತರಾಷ್ಟ್ರೀಯ ಲಿಂಗಾಯಿತ ಯುವಪೂರಂ ನಾನು ಕೂಡ ಈ ಹಿಂದೆ ಇವರ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ ಆಗ ಗಟ್ಟಿಯಾಗಿಯೂ ಲಿಂಗಾಯತದ ಬಗ್ಗೆ ಧ್ವನಿಯನ್ನು ಎತ್ತಿ ಕಾರ್ಯಕ್ರಮವನ್ನು ನಡೆಸುತ್ತಿದ್ದರು ತದನಂತರದಲ್ಲಿ ಇದು ವೀರಶೈವ ಸೇರಿದ್ದು ಎಲ್ಲೋ ಏನೋ ನಡೆದಿದೆ ಎಂಬುದು ನನಗೆ ಸಂಶಯ ಶುರುವಾಯಿತು. ಈಗ ಅದರ ವಿರಾಟ ಸ್ವರೂಪ ಗೊತಾಗಿದೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಕೊಳ್ಳೆಗಾಲ ಘಟಕ.