ಇಸ್ಲಾಂನಲ್ಲೂ ಅಂತರಂಗ, ಬಹಿರಂಗ ಶುದ್ದಿಗೆ ಒತ್ತು ಕೊಡಲಾಗಿದೆ: ಈಶಣ್ಣ ಕೊರ್ಲಳ್ಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಝಕಾತ್ ಸೇರಿದಂತೆ ಹಲವು ವಿಷಯಗಳಲ್ಲಿ ಲಿಂಗಾಯತ ಧರ್ಮ ಮತ್ತು ಇಸ್ಲಾಮ್ ಧರ್ಮಕ್ಕೆ ಹತ್ತಿರದ ಸಾಮ್ಯತೆ ಇದೆ. ರಮಝಾನ್‌ನಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ದಿ ಮಾಡುವುದನ್ನು ಹೇಳಿ ಕೊಡಲಾಗಿದೆ. ಇದೇ ರೀತಿ ಬಸವಣ್ಣನವರು ಶುದ್ದಿಗಳ ಬಗ್ಗೆ ಹೇಳಿಕೊಟ್ಟಿದ್ದಾರೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಳ್ಳಿ ಹೇಳಿದ್ದಾರೆ.

ವಿಜನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮತನಾಡಿದ ಅವರು, ಪ್ರತಿದಿನ ಪ್ರವಾದಿ ಅವರ ಮನೆಯ ಮೇಲೆ ಕಸವನ್ನು ಹಾಕುತ್ತಿದ್ದ ಮಹಿಳೆ, ಒಂದು ದಿನ ಅನಾರೋಗ್ಯದಿಂದ ಕಸ ಹಾಕದಿದ್ದಾಗ ಆಕೆಯ ಮನೆಗೆ ಹೋಗಿ ಪ್ರವಾದಿ ವಿಚಾರಿಸುತ್ತಾರೆ. ಇಂತಹ ಘಟನೆಗಳು ನಮಗೆ ಮಾದರಿಯಾಗಬೇಕು. ಜ್ಞಾನ ಎಲ್ಲಿಂದಲು ಬಂದರೂ ತೆಗೆದುಕೊಳ್ಳಿ ಎಂದು ನಮ್ಮ ಧರ್ಮ ಹೇಳುತ್ತದೆ. ಪ್ರವಾದಿಗಳೂ ಅದನ್ನೇ ಹೇಳಿದ್ದಾರೆ ಎಂದು ಹೇಳಿದರು.

‘ಉಪವಾಸ ಇದ್ದೇವೆ ಎಂದರೆ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಇರಬೇಕು. ಉಪವಾಸ ಇದ್ದು ಸುಳ್ಳು ಹೇಳಿದರೆ ಅರ್ಥವಿಲ್ಲ. ಹಿಂದೂ ಧರ್ಮದಲ್ಲಿ ಕೂಡ ಉಪವಾಸದ ಉಲ್ಲೇಖವಿದ್ದು, ಅಲ್ಲದೆ ಬೈಬಲ್ ಮತ್ತು ಬೌದ್ಧ ಧರ್ಮದಲ್ಲಿ ಕೂಡ ಉಪವಾಸದ ಕಲ್ಪನೆ ಇದೆ’ ಎಂದು ಲಾಲಹುಸೇನ್ ಕಂದಗಲ್‌ ಹೇಳಿದರು.

ಯಾವ ದೇವನ ಭಯದಿಂದ ನೀವು ಉಪವಾಸ ಇರುತ್ತೀರೋ, ಅದೇ ದೇವ ಭಯ ನೀವು ಭ್ರಷ್ಟಾಚಾರ, ಅನಾಚಾರ, ಕೊಲೆ, ಸುಲಿಗೆ ಮತ್ತು ಕೋಮುವಾದಕ್ಕೆ ಪ್ರಚೋದನೆ ನೀಡುವಾಗ ನೆನಪಿಗೆ ಬರಬೇಕು. ಸಧ್ಯ ನಮ್ಮನ್ನು ಧರ್ಮ-ಜಾತಿಗಳಿಂದ ವಿಭಜಿಸಿ ಪಟ್ಟಕ್ಕೇರುವ ಪ್ರಕ್ರಿಯೆ ನಡೆಯುತ್ತಿದ್ದು, ನಾವು ಪ್ರಚೋದನಕಾರಿ ಮಾತುಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಯುದ್ಧದ ಸ್ಥಿತಿಯಲ್ಲಿ ಮಧ್ಯಪ್ರಾಚ್ಯವು ನಲುಗುತ್ತಿದೆ, ಈ ಯುದ್ಧಕ್ಕೆ ಯಾವುದೇ ಅರ್ಥ ಇಲ್ಲ. ಸ್ವಪ್ರತಿಷ್ಠೆ ಬಿಟ್ಟರೆ ಬೇರೆ ಏನು ಇಲ್ಲ, ಅನ್ಯಾಯವಾಗಿ ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವೀಯತೆಯನ್ನೇ ಕೊಂದ ಪಾಪವನ್ನು ಹೋರಬೇಕಾಗುತ್ತದೆ ಎಂದು ಕುರಾನ್ ಹೇಳುತ್ತದೆ ಎಂದು ತಿಳಿಸಿದರು.

ಉದ್ಯಮಿ, ಬಸವ ಸಮಿತಿಯ ಬಸವರಾಜ ಬಳ್ಳೊಳ್ಳಿ ಮಾತನಾಡಿ, ತಮ್ಮ ಧರ್ಮದ ಜೊತೆಗೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಶಾಹೀದ್‌ ತಹಶೀಲ್ದಾರ ವಹಿಸಿದ್ದರು.

ಕೃಪೆ: ವಾರ್ತಾಭಾರತಿ

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *