ಕಷ್ಟಪಟ್ಟು ಪಡೆಯದೆ ಇಷ್ಟಪಟ್ಟು ಇಷ್ಟಲಿಂಗ ದೀಕ್ಷೆ ಪಡೆಯಬೇಕು: ಸಾಣೇಹಳ್ಳಿ ಶ್ರೀ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಹೊಸದುರ್ಗ:

ಇಷ್ಟಲಿಂಗ ದೀಕ್ಷೆಯನ್ನು ಕಷ್ಟಪಟ್ಟು ಪಡೆಯದೆ ಇಷ್ಟಪಟ್ಟು ಪಡೆಯಬೇಕು. . ದೀಕ್ಷೆ ಪಡೆದ ನಂತರ ಸದಾಚಾರಿಗಳಾಗಿ, ಕಾಯಕಜೀವಿಗಳಾಗಿ ಸಮಾಜದಲ್ಲಿ ಸಚ್ಚಾರಿತ್ರ್ಯವಂತರಾಗುವುದು ಮುಖ್ಯ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠದ ಬಸವ ಮಹಾಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಭಕ್ತರಿಗೆ ದೀಕ್ಷೆ ನೀಡಿ ಮಾತನಾಡಿದರು.

ದೀಕ್ಷೆಯ ನಂತರ ಇಷ್ಟಲಿಂಗ ನೀಡಲಾಗುವುದು. ಇಡೀ ಜಗತ್ತನ್ನು ಪ್ರತಿನಿಧಿಸುವಂಥದು ಇಷ್ಟಲಿಂಗ. ಇಷ್ಟಲಿಂಗವನ್ನು ಎದೆಯ ಮೇಲಿರಿಸಿಕೊಂಡು ಇಷ್ಟ ಬಂದಾಗ ಪೂಜಿಸಬಹುದು.

ಶರಣರು ಶುಭ, ಅಶುಭ ಎಂದು ಭೇದ ಮಾಡದೆ ಎಡಗೈಯಲ್ಲಿ ಲಿಂಗ ಇಟ್ಟುಕೊಂಡು ಪೂಜಿಸಿದರು. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರು ಲಿಂಗಾಯತ ಧರ್ಮವನ್ನು ಕೊಟ್ಟರು. ಈ ಧರ್ಮಕ್ಕೆ ದೇವರು ಇಷ್ಟಲಿಂಗ. ಶರಣರು ಕಂಡ ಶಿವನ ಕಲ್ಪನೆ ನಿರಾಕಾರ. ಈ ನಿರಾಕಾರದ ಆಕಾರ ಪಡೆದುಕೊಳ್ಳಲು ಇಷ್ಟಲಿಂಗ ಇಷ್ಟಪಟ್ಟರು ಎಂದು ವಿವರಿಸಿದರು.

ಕ್ರಿಯಾದೀಕ್ಷೆ, ಮಂತ್ರದೀಕ್ಷೆ ಹಾಗೂ ವೇದಾದೀಕ್ಷೆ ಎಂಬ ಮೂರು ಪ್ರಕಾರಗಳಿವೆ. ಕ್ರಿಯಾದೀಕ್ಷೆಯಲ್ಲಿ ದೀಕ್ಷೆಯ ಕಾರ್ಯ ನಡೆಯುತ್ತದೆ. ಮಂತ್ರದೀಕ್ಷೆಯಲ್ಲಿ ಇಷ್ಟಲಿಂಗ ನೀಡಿದ ನಂತರ ಮಂತ್ರ ಹೇಳಿಕೊಡಲಾಗುತ್ತದೆ. ವೇದಾದೀಕ್ಷೆಯಲ್ಲಿ ಅರಿವನ್ನು ನೀಡುವುದಾಗಿದೆ. ದೇವರ ಬಗ್ಗೆ, ಧರ್ಮದ ಬಗ್ಗೆ ಸರಿಯಾದ ಅರಿವನ್ನು ಕೊಡುವುದರ ಜೊತೆಗೆ ಸದಾ ಜಾಗೃತವಾಗಿರಬೇಕು ಎನ್ನುವುದನ್ನು ಹೇಳಿಕೊಡಲಾಗುವುದು ಎಂದರು.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದ ಬಸವಣ್ಣನವರು ಸ್ಥಾವರ ನಿರಾಕರಿಸಿದರು. ಸ್ಥಾವರ ಎಂದರೆ ಗುಡಿಗಳು. ಇವುಗಳನ್ನು ಶರಣರು ಒಪ್ಪಿಕೊಳ್ಳಲಿಲ್ಲ. ಗುಡಿಗಳಿಗೆ ಹೋಗದೆ ಜಡತ್ವದಿಂದ ಹೊರಬರಲು ಜಂಗಮರಾಗಬೇಕು, ಅಂದರೆ ಕ್ರಿಯಾಶೀಲರಾಗಬೇಕು. ಹಾಗೆಯೇ ನಮ್ಮ ದೇಹವೇ ದೇಗುಲ ಎಂದ ಶರಣರು ದೇವರನ್ನು ಹುಡುಕಿಕೊಂಡು ಹೋಗಬೇಕಿಲ್ಲ ಎಂದು ಸ್ವಾಮೀಜಿ ಹೇಳಿದರು. ಕಲಾವಿದ ಎಚ್.ಎಸ್. ನಾಗರಾಜ ವಚನಗಳನ್ನು ಹಾಡಿದರು. ಧರ್ಮಾಸಕ್ತರು, ಇಷ್ಟಲಿಂಗ ದೀಕ್ಷಾ ಸಂಸ್ಕಾರಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *