ವಚನ ನಿರ್ವಚನ: ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ ಭಕ್ತನೆಂಬೆ

ಗುಳೇದಗುಡ್ಡ:

ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ  ಶನಿವಾರ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮನೆಯಲ್ಲಿ  ನಡೆಯಿತು.

ಚಿಂತನೆಗೆ ಆಯ್ದುಕೊಂಡ ಸಿದ್ಧರಾಮ ತಂದೆಗಳ ಈ ವಚನ

ಕೆರೆಯ ನೀರು ಮರದ ಪುಷ್ಪ

ಧರಿಸಿದಡೇನು ಅಯ್ಯ

ಆಗುವುದೆ ಆಗುವುದೆ ಲಿಂಗಾರ್ಚನೆ

ಪುಷ್ಪದಿಂದ ಧರಿಸಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?

ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?

ನಿನ್ನ ಮನವೆಂಬ ನೀರಿನಿಂದ

ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ

ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ

ಕಪಿಲಸಿದ್ಧ ಮಲ್ಲಿಕಾರ್ಜುನಾ.

ವಚನ ಚಿಂತನೆಯನ್ನು ಪ್ರಾರಂಭಿಸಿದ ಪ್ರೊ. ಶ್ರೀಕಾಂತ ಗಡೇದ ಅವರು ಶಿವಯೋಗಿ ಸಿದ್ಧರಾಮೇಶ್ವರರ ಪರಿಚಯ ಮಾಡಿಕೊಡುತ್ತ, ಪ್ರಾರಂಭದಲ್ಲಿ ಕರ್ಮಯೋಗಿಯಾಗಿ ಕೆರೆ-ಬಾವಿಗಳನ್ನು ಕಟ್ಟಿಸಿದ ಸಿದ್ಧರಾಮರು ವ್ಯೋಮಮೂರುತಿ ಅಲ್ಲಮರ ಭೇಟಿಯಾದ ನಂತರ ಶಿವಯೋಗಿಗಳಾದರು. ಷಟ್ಸ್ಥಲ ಜ್ಞಾನಿ ಚನ್ನಬಸವಣ್ಣನವರ ನಂತರ ಮೂರನೆಯ ಶೂನ್ಯಸಿಂಹಾಸನದ ಪೀಠಾಧಿಪತಿಯಾದರು.  ಸಾವಿರಾರು ವಚನಗಳನ್ನು ಬರೆದ ಸಿದ್ಧರಾಮೇಶ್ವರರು, ಮನುಷ್ಯನಾದವನು ಜನನ-ಮರಣಗಳ ನಡುವೆ ಶುದ್ಧವಾಗಿ ಬದುಕಬೇಕು.  ಅದನ್ನು ಕೈಯೊಳಗಿನ ಇಷ್ಟಲಿಂಗದಿಂದ ಸಾಧಿಸಬೇಕು.  ಇಷ್ಟಲಿಂಗವು ಮನದ ಕಸಕಳೆದು ಹೀನ ಗುಣಗಳನ್ನು ಇಲ್ಲವಾಗಿಸಿ, ಬದುಕನ್ನು ಹಸನಾಗಿಸುತ್ತದೆ ಎಂದು ಹೇಳಿದರು. 

ಶಾಲಾ ಮುಖ್ಯ ಶಿಕ್ಷಕಿ ಶರಣೆ ದಾಕ್ಷಾಯಣಿ ಹಿರೇಮಠ ಅವರು ಇದೇ ವಚನವನ್ನು ಅರ್ಥೈಸುತ್ತ, “ದೇವನನ್ನು ಅರ್ಚಿಸುವ ಲೋಕಾರೂಢಿಯನ್ನು ಶರಣರು ಅಲ್ಲಗಳೆದಿದ್ದು ವೈದಿಕರು ಆ ಪರಾವಸ್ತುವನ್ನು ವ್ಯಷ್ಠಿ ಪ್ರಜ್ಞೆಗೆ ರೂಪಗೊಳಿಸಿದ್ದನ್ನು ಖಂಡಿಸುತ್ತಾ, ಸರ್ವಾಂತರಯಾಮಿಯಾದ ಆ ಚೈತನ್ಯದಲ್ಲಿ ಸಮರಸವಾಗುವ ಪರಿಯನ್ನು ಸಿದ್ಧರಾಮ ತಂದೆಗಳು ಈ ವಚನದಲ್ಲಿ  ತೋರಿಸಿದ್ದಾರೆ. ಬಹಿರಂಗದ ವಸ್ತುಗಳ ಅರ್ಪಣೆಯಿಂದ ಆ ಚೈತನ್ಯವನ್ನು ಒಲಿಸಿಕೊಳ್ಳಲಾಗದು, ಅಂತರಂಗದ ಸ್ಥಿತಿಯನ್ನು ಆ ಚೈತನ್ಯದ ಸ್ಥಿತಿಗೆ ಸಮನ್ವಯಗೊಳಿಸುವುದನ್ನು ಶಿವಯೋಗಿಗಳು ನಮಗೆಲ್ಲ ಸೂಕ್ಷ್ಮಮತಿಯಿಂದ ಅರಿವು ಕೊಟ್ಟಿದ್ದಾರೆ. ಇಷ್ಟಲಿಂಗದಲ್ಲಿ ಪ್ರಾಣಲಿಂಗ, ಭಾವಲಿಂಗಗಳು ಅಡಕವಾಗಿವೆ. ಅದಕ್ಕೆ ಡಾಂಭಿಕ (ಬಹಿರಂಗ) ಪೂಜೆಗಿಂತ ಅಂತರಂಗದ ಪೂಜೆ ಮಿಗಿಲಾದುದು. ಶರಣರು ಮಾಡಿದ್ದು ಇದನ್ನೇ”ಎಂದು ಹೇಳಿದರು.  

ಇದೇ ವಚನ ಚಿಂತನೆಯನ್ನು ಸಮಾರೋಪಗೊಳಿಸಿದ ಡಾ. ಗಿರೀಶ ನೀಲಕಂಠಮಠ ಅವರು ಮಾತನಾಡುತ್ತ,  “ಸಾಮಾನ್ಯವಾಗಿ ಜನರು ಇಷ್ಟಲಿಂಗ ಪೂಜೆಯೆಂದರೆ ಕೊಡಗಟ್ಟಲೆ ನೀರನ್ನು ಹಾಕುವುದು, ಬಂಡಿಗಟ್ಟಲೆ ಪತ್ರಿ-ಪುಷ್ಪಗಳನ್ನು ಧರಿಸುವುದು ಎಂದು ತಿಳಿದುಕೊಂಡಿದ್ದಾರೆ. ಇದು ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದು ಖಂಡಿತಾವಾಗಿಯೂ ತಪ್ಪು. ಇದಕ್ಕೆ ಅನೇಕ ಶರಣರ ವಚನಗಳನ್ನು ತೋರಿಸಬಹುದು. ಆದರೆ ಇದು ಲಿಂಗಪೂಜೆಯ ರೀತಿಯಲ್ಲ. ಹೀಗೆ ಮಾಡಿದರೆ ಸ್ಥಾವರ ಲಿಂಗಕ್ಕೂ ಇಷ್ಟಲಿಂಗಕ್ಕೂ ಭೇದವೇನಾಯಿತು. ಇಷ್ಟಲಿಂಗಕ್ಕೆ ಹೊರಗಿನ ವಸ್ತುಗಳು ಬೇಕಾಗಿಲ್ಲ. ಅವು ಒಳಗೇ ಇವೆ. ಅವುಗಳನ್ನು ಉಪಯೋಗಿಸಿದರೆ ಸಾಕು.

ತನು-ಮನ-ಭಾವ ಶುದ್ಧಿಗಾಗಿಯೇ ಪೂಜೆ. ಹೊರಗಿನ ನೀರು-ಪುಷ್ಪ ಧರಿಸುವದನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿ ಎರಡು ಪ್ರಶ್ನೆಗಳನ್ನು ಕೇಳುತ್ತ, ಶಿವಯೋಗಿಗಳು ತಾವೇ ಉತ್ತರಿಸಿದ್ದಾರೆ. ಶುದ್ಧವಾದ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ ಪೂಜಿಸಿದರೆ ಸಾಕು. ಅಲ್ಲಿಂದ ಮನಶುದ್ಧವಾಗಿ ಪ್ರಾಣಲಿಂಗದ ಸಂಬಂಧವಾಗಿ ಮುಂದೆ ಭಾವ ಶುದ್ಧವಾಗಿ ಭ್ರಮೆಯೆಲ್ಲ ಅಳಿದು ಭಾವಲಿಂಗದ ಸಂಬಂಧವಾಗುತ್ತದೆ. ಶರಣ ಸಹಜವಾಗಿ ಲಿಂಗವೇ ಆಗುತ್ತಾನೆ. ಇದೇ ಪೂಜೆಯ ರಹಸ್ಯ ಜೊತೆಗೆ ಇದು ವೈದಿಕರ ಸ್ಥಾವರ ಪೂಜೆಗಿಂತ ಸಂಪೂರ್ಣ ಭಿನ್ನ” ವೆಂದು ಹಲವಾರು ವಚನಗಳ ಮೂಲಕ ಸ್ಪಷ್ಟ ಪಡಿಸಿದರು.

ಇಂದೇ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಅವರ ಜಾತಿನಿರಸನದ ಪದ್ಯಗಳ ಸಾಲುಗಳನ್ನು ಡಾ. ಸಣ್ಣವೀರಣ್ಣ ದೊಡ್ಡಮನಿ ಎತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಬಸವಕೇಂದ್ರದ ಅನುಭಾವಿಗಳಾದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರ “ಅನುಭಾವ ಪರಿಸರ” ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸಿ. ಎಂ. ಜೋಶಿಯವರು ವಹಿಸಿದ್ದರು.  ಶರಣ ರವೀಂದ್ರ ಪಟ್ಟಣಶೆಟ್ಟಿಯವರು  ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.  ಪುಸ್ತಕ ಅವಲೋಕನವನ್ನು ಡಾ. ಸಣ್ಣವೀರಣ್ಣ ದೊಡ್ಡಮನಿ ಅವರು ಮಾಡಿದರೆ, ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ ಅವರು ಅತಿಥಿಗಳಾಗಿ ಆಗಮಿಸಿದ್ದರು.  ಕ.ಸಾ.ಪ.ದ ಗುಳೇದಗುಡ್ಡದ ಡಾ. ಎಚ್. ಎಸ್. ಘಂಟಿಯವರು ಹಾಗೂ ಸದಸ್ಯರು ಉಪಸ್ಥಿತರಿದ್ದರು. 

ದಾನಮ್ಮ ಕುಂದರಗಿ ಹಾಗೂ ಸಂಗಡಿಗರಿಂದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಕಾರ್ಯಕ್ರಮದ ಅನುಭಾವದ ನಂತರ ವಚನ ಮಂಗಲವಾಯಿತು.  ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.

  ಮಹಾಮನೆಯ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.  ಜಾಗತಿಕ ಲಿಂಗಾಯತ ಮಹಾಸಭಾ ಗುಳೇದಗುಡ್ಡ ಘಟಕದ ಅಧ್ಯಕ್ಷ ರಾಚಣ್ಣ ಕೆರೂರ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ತಿಪ್ಪಾ, ಓದುಮನೆಯ ಡಾ. ವ್ಹಿ. ಎ. ಬೆನಕನಾಳ, ವಿಜಯಾನಂದ ಆಧ್ಯಾತ್ಮಿಕ ಕೇಂದ್ರದ ಅನುಭಾವಿಗಳಾದ ಎಸ್. ಆಯ್. ರಾಜನಾಳ, ಶಿವಶಿಂಪಿ ಸಮಾಜದ ಹುಚ್ಚೇಶ ಸಿಂದಗಿ, ಮಹಾಲಿಂಗಪ್ಪ ಕರನಂದಿ, ಶೆಟ್ಟರ ಸಮಾಜದ ಅಧ್ಯಕ್ಷ ಶಿವಾನಂದ ನಾಯನೇಗಲಿ, ಮಹಿಳಾ ಘಟಕದ ಜಯಶ್ರೀ ಬರಗುಂಡಿ, ಬಸವಕೇಂದ್ರದ ಸದಸ್ಯರಾದ ವಿಶಾಲಕ್ಷೀ ಗಾಳಿ, ದಾನಮ್ಮ ಕುಂದರಗಿ, ಪ್ರೊ. ಗಾಯತ್ರಿ ಕಲ್ಯಾಣಿ, ನೇತ್ರಾವತಿ ರಕ್ಕಸಗಿ, ಅನ್ನಪೂರ್ಣ ಕೆರೂರ, ಕವಿತಾ ಬರಗುಂಡಿ, ನಿರ್ಮಲಾ ಸಂಜಯ ಬರಗುಂಡಿ, ಬಸವರಾಜ ಬರಗುಂಡಿ, ಪುತ್ರಪ್ಪ ಬೀಳಗಿ, ಮಹಾಂತೇಶ ಸಿಂದಗಿ, ಮೋಹನ ಕರನಂದಿ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಬಸವರಾಜ ಖಂಡಿ, ಶಿವಕುಮಾರ ಶೀಪ್ರಿ, ಪ್ರೊ. ಸುರೇಶ ರಾಜನಾಳ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *