ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕ ಉದ್ಘಾಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹೊಸದುರ್ಗ

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೊಸದುರ್ಗ ತಾಲೂಕ ಘಟಕವನ್ನು ಸೋಮವಾರ ಉದ್ಘಾಟಿಸಿದರು. ಪಟ್ಟಣದ ಸಿದ್ದರಾಮ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಘಟಕದ ಅಧ್ಯಕ್ಷ ಜಿ.ಮಲ್ಲೇಶ ವಹಿಸಿದ್ದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಲಿಂಗಾಯತ ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಯಾವಾಗ ನಡೆಸಬೇಕು ಎಂಬುದನ್ನು ಇಲ್ಲಿರುವ ಕೆಲವರೊಂದಿಗೆ ಸಭೆಯ ನಂತರ ಚರ್ಚಿಸುತ್ತೇವೆ. ನಿಮ್ಮ ಸಲಹೆಗಳನ್ನು ನಮಗಾಗಲಿ, ಜಾಮದಾರ ಅವರಿಗಾಗಲಿ ಹೇಳಬಹುದು ಎಂದರು.

ಲಿಂಗಾಯತರು ಕೇವಲ ಲಿಂಗಪೂಜೆಗೆ ಮಾತ್ರ ಸೀಮಿತವಾಗಬೇಕು ಎಂದರು. ಇಷ್ಟಲಿಂಗಪೂಜೆ ಮಾಡುವ ನಮ್ಮಜನ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮಕ್ಕೂ ಹೋಗುತ್ತಾರೆ, ತಿರುಪತಿ ತಿಮ್ಮಪ್ಪನಿಗೂ ಹೋಗುತ್ತಾರೆ, ಮನೆಯಲ್ಲಿ ಹೋಮ-ಹವನ, ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಮಾಡಿದರೆ ಏನು ಪ್ರಯೋಜನ?

ಲಿಂಗಪೂಜೆ ಮಾಡುವ ಲಿಂಗಾಯತರು ಸನಾತನ ಧರ್ಮ ಹಾಗೂ ವೈದಿಕ ಆಚರಣೆಯಿಂದ ಹೊರಬರಬೇಕು ಎಂದು ಸ್ವಾಮೀಜಿ ಹೇಳಿದರು. 12ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು ವೈದಿಕ ಪರಂಪರೆಯ ಜನರಲ್ಲ, ತಳಸಮುದಾಯದ ಹೆಣ್ಣು ಮಕ್ಕಳು. ಲಿಂಗಾಯತರು ವೈದಿಕ ಆಚರಣೆ ಮಾಡುವ ಅಗತ್ಯವಿಲ್ಲ. ಇದನ್ನು ಹೇಳಿದರೆ ನಮ್ಮ ಮೇಲೆ ಮುಗಿಬೀಳುತ್ತಾರೆ. ಸತ್ಯ ಹೇಳಲು ನಾವು ಹಿಂಜರಿಯುವುದಿಲ್ಲ, ಸತ್ಯ ಯಾವತ್ತಿಗೂ ಸತ್ಯವಾಗಿರುತ್ತದೆ. ವೇದಿಕೆ ಮೇಲಿರುವ ಸದಸ್ಯರು ಕೇವಲ ಇಂದಿನ ಕಾರ್ಯಕ್ರಮಕ್ಕೆ ಸೀಮಿತವಾಗದೆ ವಾರಕ್ಕೊಮ್ಮೆ ಸಾಮೂಹಿಕ ಇಷ್ಟಲಿಂಗ ಪೂಜೆ ಸೇರಿದಂತೆ ಲಿಂಗಾಯತ ಧರ್ಮಾಚರಣೆ ಬಗ್ಗೆ ಲಿಂಗಾಯತರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಮೈಸೂರಿನ ಬಸವ ಜ್ಞಾನ ಮಂದಿರದ ಬಸವಾಂಜಲಿ ಮಾತಾಜಿ ಮಾತನಾಡಿ, ಲಿಂಗಧಾರಿಗಳೆಲ್ಲಾ ಲಿಂಗಾಯತರೇ ಹೊರತು ವೀರಶೈವರಲ್ಲ. ನಾವು ಕಳೆದ 15-20 ವರ್ಷಗಳಿಂದ ಮಾತ್ರ ವೀರಶೈವ ಎಂದು ಕೇಳುತ್ತಿದ್ದೇವೆ. ಲಿಂಗಾಯತ ಧರ್ಮ ಕೊಟ್ಟ ಬಸವಣ್ಣನವರ ಕಾಯಕ ದಾಸೋಹದಂತೆ ಲಿಂಗಾಯತರು ಸೇವಾಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿ, ಧರ್ಮ ಜಾತಿ ಸಮಾಜ ಎಲ್ಲಕ್ಕಿಂತ ಮಿಗಿಲಾದದ್ದು ಬದುಕು. ಲಿಂಗಾಯತ ಎನ್ನುವುದು ದುಡಿಯುವ ವರ್ಗ. ಲಿಂಗಾಯತ ಧರ್ಮ ಯಾವುದೇ ಜಾತಿಗೆ ಮೀಸಲಾಗಿಲ್ಲ, ಎಲ್ಲಿಯವರೆಗೆ ಲಿಂಗಾಯತವನ್ನು ಒಂದು ಜಾತಿಯಾಗಿ ನೋಡುತ್ತೇವೆ, ಅಲ್ಲಿಯವರೆಗೆ ಲಿಂಗಾಯತ ಧರ್ಮದ ಅಭಿವೃದ್ಧಿ ಸಾಧ್ಯವಿಲ್ಲ. ಇಂದು ಮೀಸಲಾತಿಗಾಗಿ ಧರ್ಮ ಜಾತಿಗಳು ಹುಟ್ಟಿಕೊಂಡಿವೆ. ಲಿಂಗಾಯತರಲ್ಲಿ ಕುರುಬರು ಇದ್ದಾರೆ, ಮಡಿವಾಳರು ಇದ್ದಾರೆ, ಮಾದಾರರು ಇದ್ದಾರೆ ಎಂದರು.

ಮಹಾಸಭಾ ಉಪಾಧ್ಯಕ್ಷ ನಿವೃತ್ತ ನ್ಯಾಯಾಧೀಶ ಕೆಂಪಗೌಡರ ಮಾತನಾಡಿ, ಲಿಂಗಾಯತರು ಹಿಂದೂಗಳಲ್ಲ, ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಪ್ರದೇಶದ ಹೆಸರು ಎಂದು ತಿಳಿಸಿದರು.

ಬಸವರಾಜ ರೊಟ್ಟಿ, ರಾಗಿ ಶಿವಲಿಂಗಪ್ಪ, ಬಿ.ಟಿ. ನಂದೀಶ, ಬಸವರಾಜ ಕಟ್ಟಿ, ರುದ್ರಮುನಿ ಆವರಗೆರೆ, ಬಿ.ಎನ್. ಮಲ್ಲಿಕಾರ್ಜುನಪ್ಪ, ಆರ್. ಶೈಲಜಾ ಬಾಬು, ಜಯಶೀಲ ವೀರಣ್ಣ, ವಿಜಯಕುಮಾರ ಎಲ್.ಎಂ. ನಾಗಭೂಷಣ ಹೆಚ್.ಆರ್. ಸೇರಿದಂತೆ ಜಿಲ್ಲೆ, ತಾಲೂಕು ಪದಾಧಿಕಾರಿಗಳು ಹಾಗೂ ವಿವಿಧ ಒಳಪಂಗಡಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Share This Article
2 Comments
  • ಸ್ವಾಗತಾರ್ಹ ಬೆಳವಣಿಗೆ. ಹೊಸದುರ್ಗ ತಾಲ್ಲೂಕು ಜಾಲೀಮದ ಪದಾಧಿಕಾರಿಗಳಿಗೆ ಶುಭಾಶಯಗಳು 🌹🙏.

Leave a Reply

Your email address will not be published. Required fields are marked *