‘ಬಸವಣ್ಣನವರನ್ನು ನಂದಿಯ ಅವತಾರ ಮಾಡಿದ ವೈದಿಕ ಪ್ರಭಾವದ ಕವಿಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ:

ಬಸವ ಸಮಿತಿ ಅನುಭವ ಮಂಟಪ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂಗೈಕ್ಯ ಲಕ್ಷ್ಮಮ್ಮ ರಾಚನಗೌಡ ಮತ್ತು ಲಿಂಗೈಕ್ಯ ವಿಶ್ವನಾಥರೆಡ್ಡಿ ಮುದ್ನಾಳ ಸ್ಮರಣಾರ್ಥ ಜರುಗಿದ ಅರಿವಿನ ಮನೆ 887ನೆಯ ದತ್ತಿ ಕಾರ್ಯಕ್ರಮ ನಡೆಯಿತು.

ಅನುಭಾವ ನೀಡಿದ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿವೇಕಾನಂದ ಸಜ್ಜನ್  ಅವರು, ಕನ್ನಡ ಸಾಹಿತ್ಯ ಮತ್ತು ಜಾಗತಿಕ ಸಾಹಿತ್ಯ ಲೋಕದಲ್ಲಿ ವಚನ ಸಾಹಿತ್ಯ ವಿಶಿಷ್ಟ ಸಾಹಿತ್ಯ ಯುಗವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ರಂ. ಶ್ರೀ. ಮುಗುಳಿಯವರು ನಡುಗನ್ನಡ ಸಾಹಿತ್ಯ ಸಂದರ್ಭಕ್ಕೆ ಬಸವ ಯುಗ ಎಂದು ಕರೆದಿದ್ದಾರೆ.

ಪ್ರಾಚೀನ ವೈದಿಕ ಮತ್ತು ಜೈನ ಕೃತಿಗಳಲ್ಲಿ 18 ವರ್ಣನೆಗಳನ್ನು (ಅಷ್ಟಾದಶ ವರ್ಣನೆಗಳು ) ಕಾಣುತ್ತೇವೆ. ಆದರೆ ವಚನಕಾರರು ಈ ಕಟ್ಟಳೆಗಳನ್ನು ಕಡೆಗಣಿಸಿ ಮುಕ್ತವಾದ ವಚನಗಳನ್ನು ಬರೆಯುತ್ತಾರೆ. ಛಂದಸ್ಸು, ಗಣ, ಪ್ರಾಸಗಳನ್ನು ಕಡೆಗಣಿಸಿ ಆನು ಒಲಿದಂತೆ  ಹಾಡುವೆ ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ.

ಕರ್ಮಸಿದ್ಧಾಂತ, ಪುನರ್ಜನ್ಮಗಳನ್ನು ವಿರೋಧಿಸಿದ ವಚನಕಾರರು ವೈಚಾರಿಕ ನೆಲೆಯಲ್ಲಿ ವಚನಗಳನ್ನು ಬರೆದರು. ಹೀಗಾಗಿ ಜಾಗತಿಕ ಸಾಹಿತ್ಯಕ್ಕೆ ವಚನ ಸಾಹಿತ್ಯ ಅತ್ಯಮೂಲ್ಯ ಕೊಡುಗೆಯಾಗಿದೆ.

ಕನ್ನಡದ ಎಲ್ಲಾ ಬಸವಕಥನಗಳ ಮೇಲೆ ಹರಿಹರನ ಬಸವ ರಗಳೆಯ ಪ್ರಭಾವ ನಾವು ಕಾಣುತ್ತೇವೆ. ವಚನ ಸಾಹಿತ್ಯದಲ್ಲಿ ವಿಶ್ವಮಾನ್ಯ ತತ್ವಗಳು ಇರುವುದರಿಂದ ಅವು ಸಾರ್ವಕಾಲಿಕ ಸತ್ಯಗಳಾಗಿವೆ.

1360 ರಲ್ಲಿ ಭೀಮಕವಿ ಮತ್ತು ಗದುಗಿನ ಬಸವಲಿಂಗರ ಬಸವ ಕಾವ್ಯ ಮುಂತಾದವು ಬಸವೋತ್ತರ ಕಾಲದಲ್ಲಿ ರಚನೆಯಾದ ಕಾವ್ಯಗಳಾಗಿವೆ . ವಚನಕಾರರ ವಚನಗಳಲ್ಲಿ ಮತ್ತು ಶರಣರ ಕಥಾನಕ ಕಾವ್ಯಗಳಲ್ಲಿ ಸಾಮ್ಯತೆ ಇದೆ. ಕೆಲವೊಮ್ಮೆ ವೈರುಧ್ಯವೂ ಇದೆ .

ಭೀಮಕವಿಯು ಬಸವ ಪುರಾಣದಲ್ಲಿ ಕೈಲಾಸದ ನಂದಿ ಭೂಮಿಯ ಮೇಲೆ ಬಸವಣ್ಣನಾಗಿ ಜನಿಸುತ್ತಾನೆ ಎಂಬ ಅವತಾರದ ಪರಿಕಲ್ಪನೆ ಕಂಡುಬರುತ್ತದೆ. ಹರಿಹರ ಕೂಡ ಬಸವಣ್ಣನನ್ನು ಅವತಾರ ಪುರುಷನಾಗಿ ಚಿತ್ರಿಸಿದ್ದಾನೆ. ಇದಕ್ಕೆ ಕಾರಣ ವೈದಿಕ ಸಾಹಿತ್ಯದ ವರ್ಣಾಶ್ರಮ ವ್ಯವಸ್ಥೆಯ ಪ್ರಭಾವದಿಂದ ರಚನೆಯಾಗಿರುವುದು ಕಂಡುಬರುತ್ತದೆ. ಆದರೆ ವಚನ ಸಾಹಿತ್ಯ ಇದನ್ನೆಲ್ಲಾ ತಿರಸ್ಕರಿಸಿಸುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ.ವೀರಣ್ಣ ದಂಡೆ, ಉದ್ಯಮಿ ರಾಜೇಂದ್ರ ಕೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ದತ್ತಿ ದಾಸೋಹಿಗಳಾದ  ಹಣಮಂತರೆಡ್ಡಿ ಮುದ್ನಾಳ, ಉದ್ದಂಡಯ್ಯ ಭಾಗವಹಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *