ಗದಗ:
ಹನ್ನೆರಡನೆಯ ಶತಮಾನದಲ್ಲಿ ಜನಸಾಮಾನ್ಯರ ಬದುಕು ಶೋಚನೀಯವಾಗಿತ್ತು. ಮೇಲು-ಕೀಳು ತಾರತಮ್ಯ ಹೆಚ್ಚಾಗಿತ್ತು. ಬ್ರಾಹ್ಮಣ ಕ್ಷತ್ರೀಯ ವೈಶ್ಯ ಮತ್ತು ಶೂದ್ರ ಹೀಗೆ ನಾಲ್ಕು ಶ್ರೇಣಿಕೃತ ವರ್ಗಗಳಿದ್ದವು. ಪಂಚಮವರ್ಗ, ಅಸ್ಪೃಶ್ಯವರ್ಗ ಹೀನಾಯ ಸ್ಥಿತಿಯಲ್ಲಿ ಇತ್ತು. ಈ ಅಸಮಾನತೆ, ಅನ್ಯಾಯದ ವಿರುದ್ಧ ಬಸವಾದಿ ಶರಣರು ಕ್ರಾಂತಿ ಮಾಡಿ ಸಮಾನತೆ ತರಲು ಶ್ರಮಿಸಿದರು.
ಆದರೆ ಒಂಬೈನೂರು ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿ ಮಾಡಿದ ನಂತರವೂ, ತಾರತಮ್ಯ ಮುಂದುವರೆದಿದೆ. ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ, ಆದರೂ ಸಾಮಾಜಿಕ ಅನಿಷ್ಠಗಳಿವೆ. ಇವುಗಳನ್ನು ಹೋಗಲಾಡಿಸಲು, ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಕೊಟ್ಟರು. ಯಾರು ಬೇಕಾದರೂ ಇಷ್ಟಲಿಂಗ ಕಟ್ಟಬಹುದು. ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಶರಣರು ಕಲ್ಪಿಸಿಕೊಟ್ಟರು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2784 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಹಲವು ದೇವರ ಪೂಜೆ ಮಾಡುವ ಬದಲು, ಕಲ್ಲ ದೇವರ ಪೂಜಿಸುವ ಬದಲು ಇಷ್ಟಲಿಂಗ ಧಾರಣೆ ಮಾಡಿಕೊಂಡು ಪೂಜೆ ಮಾಡಿಕೊಳ್ಳಬಹುದು ಎಂದು ಶರಣರು ಸಮಾಜೋ ಧಾರ್ಮಿಕ ಕ್ರಾಂತಿ ಮಾಡಿದರು.
ಸಮಗಾರ ಹರಳಯ್ಯನ ಮಗ ಶೀಲವಂತನಿಗೆ ಮತ್ತು ಮಧುವರಸರ ಮಗಳು ಲಾವಣ್ಯವತಿಗೆ ಮಾಡಿಸಿದ್ದು ಅಂತರ್ಜಾತಿಯ ವಿವಾಹವಲ್ಲ. ಇಬ್ಬರೂ ಒಪ್ಪಿ ಇಷ್ಟಲಿಂಗ ಧರಿಸಿ, ಲಿಂಗಾಯತ ಧರ್ಮ ಪಾಲಿಸಿದ್ದರು ಎಂದರು. ತಾರತಮ್ಯರಹಿತ ಸಮಾಜ ನಿರ್ಮಾಣ ಮಾಡಿ, ಸಮೃದ್ದ ಭಾರತ ನಿರ್ಮಿಸಿದರೆ ಸಂತೃಪ್ತಿಯ ಭಾರತ ಕಟ್ಟಬಹುದು ಎಂದು ಆಶೀರ್ವಚನ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಬಿ.ಆಯ್. ಶಿರುಂದ ಅವರು ‘ಶರಣರ ಸಾಮಾಜಿಕ ಕ್ರಾಂತಿ’ ಕುರಿತು ಮಾತನಾಡುತ್ತಾ, ತನ್ನನ್ನು ತಾನು ಅರಿತು, ಅಹಂಕಾರವನ್ನು ಮರೆತು ನೈಜ ಬದುಕಿನ ವ್ಯಕ್ತಿತ್ವ ರೂಪಿಸಿಕೊಂಡವರು ಶರಣರಾಗಿದ್ದರು. ಅತ್ಯಲ್ಪ ಅವಧಿಯಲ್ಲಿ ಸಮಾಜದಲ್ಲಿನ ಮೂಲಭೂತ ಮೌಢ್ಯಗಳನ್ನು ಹೋಗಲಾಡಿಸಿ ಬದಲಾವಣೆ ತಂದು ಕ್ರಾಂತಿ ಮಾಡಿದವರು ಶರಣರು ಎಂದರು.
ಕಲ್ಲನಾಗರ ಮನೆಗೆ ತಂದರೆ ನಡೆಯುತ್ತದೆ. ನಿಜನಾಗರ ತಾನಾಗಿಯೇ ಮನೆಗೆ ಬಂದರೆ, ನಡೆಯುವುದಿಲ್ಲ. ಭಾವಿಯನ್ನು ತೋಡಿ ನೀರು ಬರಿಸಲು ಅಸ್ಪೃಶ್ಯ ಬೇಕು. ಅದೇ ಬಾವಿಯ ನೀರು ಕುಡಿಯಲು ಮಾತ್ರ ಅವನು ಬೇಡ. ಗ್ರಹಣ ಬಂದಾಗ ನೀರು ಚಲ್ಲುತ್ತಾರೆ, ಆದರೆ ತುಪ್ಪ ಚಲ್ಲುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ಇಂಥ ಅನೇಕ ಮೌಢ್ಯಗಳನ್ನು ತೊಡೆದು ಹಾಕಲು ಶರಣರು ವಚನಗಳ ಮೂಲಕ ಸಾಮಾಜಿಕ ಕಲ್ಯಾಣ ಕ್ರಾಂತಿ ಮಾಡಿದರು ಎಂದು ಅರ್ಥಪೂರ್ಣವಾಗಿ ಹೇಳಿದರು.
ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ಮೇಘಾ ಚಂದಪ್ಪನವರ, ವಚನ ಚಿಂತನವನ್ನು ಪೂಜಾ ಹೊನ್ನಳ್ಳಿ ಅವರು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಲಿಂಗೈಕ್ಯ ಶರಣಬಸಪ್ಪ ಸಿ. ನಂದಿಹಾಳ ಅವರ ಸ್ಮರಣಾರ್ಥ ಚನ್ನಬಸಪ್ಪ ನಂದಿಹಾಳ, ಗಜೇಂದ್ರಗಡ ಇವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಅವರು ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪರ ಸ್ವಾಗತಿಸಿದರು ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
