ಜಹಿರಾಬಾದ (ತೆಲಂಗಾಣ)
ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದಿನಲ್ಲಿ ಗುರುವಾರ ಸಂಜೆ ಶರಣ (ಶ್ರಾವಣ) ಮಾಸದ ‘ಬಸವ ಧರ್ಮ ಪ್ರವಚನ’ ಪ್ರಾರಂಭೋತ್ಸವ ಜರುಗಿತು.
ಪ್ರಾರ್ಥನೆ ಮತ್ತು ಬಸವ ಧ್ವಜಾರೋಹಣದ ಮೂಲಕ ಆರಂಭಗೊಂಡ ಕಾರ್ಯಕ್ರಮವು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಗೊಂಡಿತು.
ಉದ್ಘಾಟಕರಾಗಿ ಆಗಮಿಸಿದ್ದ ರಾಜಕೀಯ ನಾಯಕ ಶರಣ ಡಿ. ಸಿ.ಎಮ್.ಎಸ್. ಶಿವಕುಮಾರ ಮಾತನಾಡಿ, ಇದು ತುಂಬಾ ಉತ್ತಮವಾದ ಕಾರ್ಯಕ್ರಮ. ಇದರಿಂದಾಗಿ ನಮ್ಮ ಜಂಜಾಟದ ಜೀವನಕ್ಕೆ ನೆಮ್ಮದಿ ದೊರೆತಂತಾಗುತ್ತದೆ. ಮಾತಾಜಿಯವರ ಪ್ರವಚನ ಕೇಳಿ ಪುನೀತರಾಗೋಣ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೋಗಗುರು ಶರಣ ನಾರಾಯಣರೆಡ್ಡಿ, ಮಾತನಾಡಿ, “ಶ್ರಾವಣ ಮಾಸವನ್ನು ಉತ್ತಮ ಮಾತುಗಳನ್ನು ಕೇಳಬೇಕೆಂದೇ ಮಾಡಿದ್ದಾರೆ, ಅದರ ಸದುಪಯೋಗವನ್ನು ನಾವೆಲ್ಲಾ ಪಡೆದುಕೊಳ್ಳಬೇಕು” ಎಂದರು.

ಸಮ್ಮುಖ ವಹಿಸಿದ್ದ ನಾಗನೂರ ಗುರುಬಸವ ಮಠದ ಪೂಜ್ಯ ಬಸವಪ್ರಕಾಶ ಸ್ವಾಮೀಜಿಯವರು ಮಾತನಾಡಿ, “ಮಕ್ಕಳಿಗೆ ಸಂಸ್ಕಾರವನ್ನು ಕೊಡಬೇಕು, ನಾವೆಲ್ಲಾ ಸತ್ಯಕ್ಕನ ನಿಷ್ಠೆಯನ್ನು ಬೆಳೆಸಿಕೊಂಡು ಬಸವ ತತ್ವದಲ್ಲಿ ನಿಷ್ಠೆಯುಳ್ಳವರಾಗಬೇಕು. ಮೊಟ್ಟಮೊದಲಿಗೆ ಭ್ರಷ್ಟಾಚಾರವನ್ನು ಗುರು ಬಸವಣ್ಣನವರು ತೊಡೆದು ಹಾಕಿದರು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕು” ಎಂದು ಹೇಳಿದರು.
ಪ್ರವಚನಕಾರರಾದ ರಾಮದುರ್ಗ ತಾಲ್ಲೂಕಿನ ಗುರುಬಸವ ಮಠದ ಪೂಜ್ಯ ಬಸವಗೀತಾ ತಾಯಿಯವರು ಮಾತನಾಡಿ, “ಬಂಡಿಗೆ ಕೀಲು ಎಷ್ಟು ಮುಖ್ಯವೋ ಹಾಗೇ ಮನುಷ್ಯನ ಬದುಕಿಗೂ ಶರಣರ ನುಡಿಗಡಣ ಎಂಬ ಕೀಲು ಬಹು ಮುಖ್ಯ, ಆ ಕೀಲನ್ನು ಹಾಕುವ ಕೆಲಸವನ್ನು ಮಾಡಲೆಂದೇ ನಾವು ಬಂದಿದ್ದು ಎಂದರು. ಒಂದು ತಿಂಗಳ ಪರ್ಯಂತ ನಡೆಯುವ ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಿ” ಎಂದರು.
ಇಂದಿನ ಪ್ರಸಾದ ಸೇವೆಯನ್ನು ನಡೆಸಿಕೊಟ್ಟ ರಾಘವೇಂದ್ರಸ್ವಾಮಿ ದಂಪತಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶರಣ ವೆಂಕಟೇಶಮ್, ವೆಂಕಟರೆಡ್ಡಿ ಉಪಸ್ಥಿತರಿದ್ದರು. ಅಕ್ಕನ ಬಳಗದ ತಾಯಂದಿರು ಪ್ರಾರ್ಥನೆ ಮತ್ತು ಮಂಗಲಗೀತೆಯನ್ನು ನಡೆಸಿಕೊಟ್ಟರು. ಅಣವೀರಪ್ಪ ನಿರೂಪಿಸಿದರು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಶರಣ-ಶರಣೆಯರು ಉಪಸ್ಥಿತರಿದ್ದರು.