ಜಗಳೂರು:
‘ವಚನೋತ್ಸವ’ದ ಭಾಗವಾಗಿ ಶರಣೆಯರ ವಚನ ಗಾಯನ ತರಬೇತಿ ಶಿಬಿರ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ದಾವಣಗೆರೆ ಜಿಲ್ಲಾ, ಜಗಳೂರು ತಾಲ್ಲೂಕು ಕದಳಿ ಮಹಿಳಾ ವೇದಿಕೆ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ವಚನ ಗಾಯನ ತರಬೇತಿಯನ್ನು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಗೌರವ ಸಲಹೆಗಾರರಾದ ಯಶಾ ದಿನೇಶ್ ನಡೆಸಿಕೊಟ್ಟರು. ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾದ ಮಮತಾ ನಾಗರಾಜ, ಪೂರ್ವಾಧ್ಯಕ್ಷರಾದ ಗಾಯತ್ರಿ ವಸ್ತ್ರದ, ಉಪಾಧ್ಯಕ್ಷರಾದ ವಿಜಯ ಚಂದ್ರಶೇಖರ ವಚನಗಳ ಭಾವಾರ್ಥವನ್ನು ವಿವರಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ ಪರಮೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯವೂ ವಚನಗಳನ್ನು ಕಲಿತು ಅವನ್ನು ಅರ್ಥಮಾಡಿಕೊಳ್ಳಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಪರಿಷತ್ತಿನ ಅಧ್ಯಕ್ಷರಾದ ಎನ್. ಟಿ ಯರ್ರಿಸ್ವಾಮಿ ವಚನಗಳು ದೈನಂದಿನ ಬಾಳಿಗೆ ಬಹುಮುಖ್ಯ. ಅವುಗಳನ್ನು ಕದಳಿ ವೇದಿಕೆಯವರು ಕಲಿಸುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು. ಕಾರ್ಯದರ್ಶಿ ವಸಂತ ಕೆ.ಆರ್, ಭರಮಪ್ಪ ಮೈಸೂರು, ಬಿ. ಟಿ. ಪ್ರಕಾಶ್, ಸಿದ್ದೇಶಣ್ಣ ಮುಂತಾದವರು ಇದ್ದರು.

ನಾಗರತ್ನ ಸ್ವಾಗತಿಸಿದರು. ನಿರೂಪಣೆ ಇಂದ್ರಮ್ಮ, ವಂದನಾರ್ಪಣೆ ಸುಜಾತಮ್ಮ ನಡೆಸಿಕೊಟ್ಟರು. ವೇದಿಕೆಯ ತಾಲ್ಲೂಕು ಪದಾಧಿಕಾರಿಗಳಾದ ಚಂಪಾವತಿ, ಫರ್ಜಾನ್, ಆಶಾ, ರಾಧಮ್ಮ, ವನಿತ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
