ಜಾಮಿಯಾ ಮಸೀದಿ ಸಭೆಯಲ್ಲಿ ಬಸವ ಪುರಾಣ ಪ್ರವಚನಕ್ಕೆ ಬರಲು ಅಹ್ವಾನ

ನಮ್ಮ ಮಠವು ಸಮಾನತೆ, ಸಹಿಷ್ಣುತೆ, ಸೌಹಾರ್ದತೆಯನ್ನು ಬಲಪಡಿಸುತ್ತ ಬಂದಿದೆ ಎಂದು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳಿದರು

ಗಜೇಂದ್ರಗಡ

ಇದೇ ನವೆಂಬರ್ 25 ರಿಂದ ಡಿಸೆಂಬರ್ 26 ರವರೆಗೆ ಹಾಲಕೆರೆ ಅನ್ನದಾನೇಶ್ವರ ಮಠದ ವತಿಯಿಂದ ಪಟ್ಟಣದಲ್ಲಿ ನಡೆಯುವ ಬಸವ ಪುರಾಣ ಕಾರ್ಯಕ್ರಮಕ್ಕೆ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಮುಸ್ಲಿಂ ಸಮಾಜ ಬಾಂಧವರನ್ನು ಆಹ್ವಾನಿಸಿದರು.

ಅವರು ನಗರದ ಜಾಮಿಯಾ ಮಸೀದಿಗೆ ಆಗಮಿಸಿ, ಅಲ್ಲಿ ಸಭೆ ಸೇರಿದ್ದ ಮುಸ್ಲಿಂ ಸಮಾಜದವರನ್ನು ಉದ್ದೇಶಿಸಿ ಮಾತನಾಡಿ, ಪುರಾಣಕ್ಕೆ ಬರಲು ವಿನಂತಿಸಿದರು. ಬಸವ ಪುರಾಣವು ಸೌಹಾರ್ದತೆ ಸಾರುವುದಾಗಿದೆ ಎಂದರು. ನಮ್ಮ ಮಠವು ಸಮಾನತೆ, ಸಹಿಷ್ಣುತೆ, ಸೌಹಾರ್ದತೆಯನ್ನು ಬಲಪಡಿಸುತ್ತ ಬಂದಿದೆ ಎಂದರು.

ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಬಂದು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.

ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೂರಲ್ಲಿ ಸೌಹಾರ್ದತೆಯ ಬೆಸುಗೆಯಿದ್ದು, ಅದನ್ನು ಮುಂದುವರೆಸುತ್ತಾ, ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ನಾವು ಈ ಪುರಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಟೆಕ್ಕೆದ ದರ್ಗಾದ ಹಜರತ್ ನಿಜಾಮುದ್ದಿನ ಮಕಾನದಾರ ಅವರು ಮಾತನಾಡಿ, ಪಟ್ಟಣದಲ್ಲಿ ಎಲ್ಲರೂ ಸೌಹಾರ್ದತೆಯ ಬದುಕು ಸಾಗಿಸುತ್ತಿರುವುದರ ಬಗ್ಗೆ ಹೇಳಿದರು.

ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಹಾಲಕೆರೆ ಸ್ವಾಮಿಗಳಿಗೆ ಸನ್ಮಾನಿಸಲಾಯಿತು.

ಸಭೆಯಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ ಹಸನಸಾಬ ತಟಗಾರ, ಮೌಲಾನ ಶಾಹೀದ ರಜಾ, ಸುಭಾನಸಾಬ ಆರಗಿದ್ದಿ, ದಾದು ಹಣಗಿ, ಮಾಸುಮಲಿ ಮದಗಾರ, ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ಶರಣಪ್ಪ ರೇವಡಿ, ನಾಸೀರ ಸುರಪುರ, ಅಶ್ರಫಲಿ ಗೋಡೇಕಾರ, ಕಸಾಪ ತಾಲೂಕು ಅಧ್ಯಕ್ಷ ಎ.ಪಿ. ಗಾಣಿಗೇರ, ದಾವಲ್ ತಾಳಿಕೋಟಿ ಸೇರಿದಂತೆ ಅನೇಕ ಮುಸ್ಲಿಂ ಸಮಾಜ ಬಾಂಧವರು, ಪುರಾಣ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹೀಗೆ ಪಟ್ಟಣದ ಎಲ್ಲಾ ಓಣಿಗಳಲ್ಲಿ ಸಭೆ ಸೇರಿಸಿ, ಸರ್ವ ಸಮಾಜದವರನ್ನು ಬಸವ ಪುರಾಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ, ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ಪುರಾಣ ಕಾರ್ಯಕ್ರಮ ಜರುಗಲಿದೆ. ಇಳಕಲ್ಲದ ಶ್ರೀ ಅನ್ನದಾನ ಶಾಸ್ತ್ರೀಗಳು ಪುರಾಣ ನಡೆಸಿಕೊಡಲಿದ್ದಾರೆ. ನಿತ್ಯ ದಾಸೋಹ ಹಮ್ಮಿಕೊಳ್ಳಲಾಗಿದೆ ಎಂದು ಪುರಾಣ ಸಮಿತಿ ಹೇಳಿದೆ.

Share This Article
4 Comments
  • ಹಾಲಕೆರೆ ಅನ್ನದಾನೀಶ್ವರ ಮಠದಿಂದ ಶ್ಲಾಘನೀಯ ಕಾರ್ಯ,, ದೇಶದಲ್ಲಿ ಮತಾಂಧರು ಸಾಮಾಜಿಕ ಸೌಹಾರ್ದ ಹಾಳುಗೆಡಿವಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ದುರಂತ ಕಾಲದಲ್ಲಿ,, ಇಂಥಾ ಕಾರ್ಯಕ್ರಮಗಳು ತೀರಾ ಅವಶ್ಯಕ ಆಗಿದೆ,, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ

  • ಬಹಳ ಉತ್ತಮ ಕೆಲಸ .

    ಹಿಂದುತ್ವದ ಯಾವುದೇ ಕಾರ್ಯಕ್ರಮಕ್ಕೂ ಹಿಂದುತ್ವವಾದಿಗಳು ಈ ರೀತಿ ಸೌಹಾರ್ದಯುತವಾಗಿ ಕರೆದದ್ದು ನಾವು ನೋಡಿಲ್ಲ

Leave a Reply

Your email address will not be published. Required fields are marked *