ದುರಗಮ್ಮ ದೇವಿಯ ಆರಾಧಕರಾಗಿದ್ದ ವೀರಭದ್ರಪ್ಪನವರು ಬಸವ ತತ್ವಕ್ಕೆ ಹೊರಳಿದರು
ಗಂಗಾವತಿ
ನೀ ಒಲಿದರೆ ಕೊರಡು ಕೊನರುವುದಯ್ಯಾ.
ಬಸವಣ್ಣನವರ ಈ ವಚನ ಓದುವಾಗಲೆಲ್ಲಾ ನನಗೆ ಅನಿಸಿದ್ದು ಹೀಗೆ, ” ಕೊಡರು ಎಲ್ಲಾದರೂ ಅರಳುವುದಾ!!?? ಹೌದು. ಹೀಗೆಲ್ಲಾ ವಿಚಾರ ಮಾಡುವಾಗ ಕೊರಡು ಸಹ ಅರಳುವುದು ಅಂತ ನನಗೆ ಗೊತ್ತಾಗಿದ್ದು ಆಮೃತ ಬಳ್ಳಿಯನ್ನು ನೋಡಿದಾಗ ಇದು ಸತ್ಯ ಅನಿಸಿತು. ಇಂದಿಗೂ ಅಮೃತ ಬಳ್ಳಿಯ ಒಣಗಿದ ಕಾಂಡವನ್ನು ನೀರಲ್ಲಿ ತೇವ ಮಾಡಿ ಮಣ್ಣಲ್ಲಿ ಹಚ್ಚಿದರೆ ಅದು ಮತ್ತೆ ಚಿಗಿಯುತ್ತದೆ. ಈ ವಿಷಯಕ್ಕೂ ಕುರುಕುಂದ ವೀರಭದ್ರಪ್ಪ ಅಪ್ಪನವರ ಬದುಕಿಗೂ ಒಂದು ಸಂಬಂಧವಿದೆ.
ಕುರುಕುಂದಾ ಗ್ರಾಮದ ಸಾಹುಕಾರರು ಅಂದ್ರೆ ಅದು ವೀರಭದ್ರಪ್ಪ ಅಪ್ಪನವರ ಕುಟುಂಬ. ಸಾಹುಕಾರ ಅಂದ್ರೆ ಸಾಹುಕಾರರೆ, ಪಕ್ಕಾ ಜಮೀನ್ದಾರಿಕೆ ಕುಟುಂಬ. ನೂರಾರು ಏಕರೆ ಆಸ್ತಿಯ ಹೊಲಗದ್ದೆಗಳು, ಅಂತಹ ಸಾಹುಕಾರಿಕೆ ಸುಪ್ತತ್ತಿಗೆಯಲ್ಲಿ ಬೆಳೆದ ವೀರಭದ್ರಪ್ಪ ಅಪ್ಪ ಜನಸಾಮಾನ್ಯರ ಮನದ ಸಾಹುಕಾರನಾಗಿದ್ದು ವಿಸ್ಮಯ.
ಕುರುಕುಂದಾ ವೀರಭದ್ರಪ್ಪ ಸಾಹುಕಾರ ಅಂದ್ರೆ ಸುತ್ತಳ್ಳಿಗೆ ಚಿರಪರಿಚಿತ. ಅಂತಹ ವೀರಭದ್ರಪ್ಪನವರು ಬದುಕು ಶರಣನಾಗುವ ಕಡೆಗಿನ ಅವರ ಬದುಕಿನ ಪಯಣ ನೋಡಿದಾಗಲೆಲ್ಲಾ ನನಗೆ ಬಸವಣ್ಣನ “ನೀ ಒಲಿದರೆ ಕೊರಡು ಕೊನರುವುದಯ್ಯಾ ” ಈ ವಚನ ಯಾವಾಗಲೂ ನೆನಪಾಗುತ್ತಿತ್ತು.

ಆಧ್ಯಾತ್ಮಿಕ ಜೀವಿಯಾಗಿದ್ದ ಕುರುಕುಂದಾ ವೀರಭದ್ರಪ್ಪನವರು, ಕುರುಕುಂದ ಗ್ರಾಮ ದೇವತೆಯಾದ ದುರಗಮ್ಮ ದೇವಿಯ ಆರಾಧಕ. ಕುರುಕುಂದ ಗುಡ್ಡದ ಮೇಲಿರುವ ಆ ದುರಗಮ್ಮದೇವಿ ಉತ್ಸವ ಅಂದ್ರೆ ಸುತ್ತ ಹತ್ತು ಹಳ್ಳಿಯ ಸಾವಿರಾರು ಜನರ ಪಾಲ್ಗೊಳ್ಳುವ ಉತ್ಸವ ಅದು. ಆ ಸಮಯದಲ್ಲಿ ದೇವಿ ಪುರಾಣವನ್ನು ಓದಿದವರು ಕುರುಕುಂದದ ವೀರಭದ್ರಪ್ಪ ಅಪ್ಪನವರು. ಇಂತಹ ದೇವಿ ಪುರಾಣದಿಂದ ಪ್ರಾರಂಭವಾದ ಅವರ ಬದುಕು ಆರೂಢ ಪರಂಪರೆಯ ಕಡೆ ವಾಲಿತು. ನಂತರ ಅವರು ನಿಜಗುಣ ಶಿವಯೋಗಿಗಳು ಕೈವಲ್ಯ ಪದ್ದತಿ ಓದುವ ಕಡೆ ವಾಲಿದರು. ಅಂದು ಆ ಭಾಗದಲ್ಲಿ ಸಿದ್ದಾರೂಢರ ಆರಾಧಕರು ಮತ್ತು ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ದತಿಯನ್ನು ಅರೆದು ಕುಡಿದವರಂತೆ ಇದ್ದ, ಅನಕ್ಷರಸ್ಥ ಮಾದಾರ ಚೆನ್ನಯ್ಯನ ಪರಂಪರೆಯ ಹುಲುಗಪ್ಪ ತಿಡಿಗೋಳ ಎನ್ನುವ ಹಿರಿಯ ಜೀವಕ್ಕೆ ಮಾರು ಹೋಗಿ ಅವರಿಂದ ನಿಜಗುಣ ಶಿವಯೋಗವನ್ನು ಅಭ್ಯಾಸ ಮಾಡಿ ಆಮೇಲೆ ಕೆಲವೊಂದು ಸತ್ಸಂಗಗಳನ್ನು ಪ್ರಾರಂಭ ಮಾಡಿದರು.
ಹೀಗೆ ನಿಜಗುಣ ಶಿವಯೋಗಿಗಳನ್ನು ಅಪ್ಪಿಕೊಂಡ ವೀರಭದ್ರಪ್ಪನವರು ಅಲ್ಲಲ್ಲಿ ಕಾರ್ಯಕ್ರಮಗಳು ಏರ್ಪಡಿಸುತ್ತಾ , ಉಪನ್ಯಾಸಕರಾಗಿ ಭಾಗವಹಿಸುತ್ತಾ ತಮ್ಮ ಆಧ್ಯಾತ್ಮಿಕ ಬದುಕುನ್ನು ಸುತ್ತೆಲ್ಲಾ ಪಸರಿಸಿಕೊಂಡರು. ಹೀಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇರುವಾಗ ಅವರು ಒಮ್ಮೆ ಗಂಗಾವತಿಯ ಹಿರೆಜಂತಕಲ್ಲದಲ್ಲಿ ಬಸವಚೇತನ ಬಳಗದಿಂದ ಬಸವಣ್ಣನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ದಿನ ಆ ಬಸವ ಚೇತನ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದರು ವೀರಭದ್ರಪ್ಪ. ಆ ಸಮಯದಲ್ಲಿ ಗಂಗಾವತಿಯ ಬಸವಚೇತನ ಬಳಗದ ಸದಸ್ಯರುಗಳಾದ ಸಿ.ಹೆಚ್. ನಾರಿನಾಳ, ಜಿ. ಶಿವಲಿಂಗಪ್ಪ, ಹೊನ್ನಪ್ಪ ಮತ್ತು ಕೆ. ಬಸವರಾಜ ಎನ್ನುವವರು ಬಸವಚೇತನ ಬಳಗದಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.

ಅಂತಹ ಕಾರ್ಯಕ್ರಮದ ಉಪನ್ಯಾಸಕರಾಗಿ ಬಂದ ವೀರಭದ್ರಪ್ಪ ಅಪ್ಪನವರು ಅರ್ಥಪೂರ್ಣವಾಗಿ ಮತಾಡಿದರು. ಆಗ ಗಂಗಾವತಿಯ ಹಿರಿಯ ಶರಣ ಜೀವ ಸಿ.ಹೆಚ್. ನಾರಿನಾಳರವರು ವೀರಭದ್ರಪ್ಪನವರನ್ನು ಕುರಿತು ” ನೋಡು ವೀರಭದ್ರಪ್ಪ ಆರೂಢ ಪರಂಪರೆಗೂ ಮತ್ತು ಶರಣ ಪರಂಪರೆಗೂ ಅಂತಹ ಭಿನ್ನತೆ ಏನೂ ಇಲ್ಲ. ಎರಡು ಒಂದೆ, ಆರೂಢ ಪರಂಪರೆಯಲ್ಲಿ ನುಡಿಯಿದೆ, ಶರಣ ಪರಂಪರೆಯಲ್ಲಿ ನಡೆ ನುಡಿ ಎರಡು ಇದೆ. ಹಾಗಾಗಿ ಶರಣ ಪರಂಪರೆ ಬರಿ ನುಡಿಯುವ ಪರಂಪರೆಯಲ್ಲ ನಡೆಯುವ ಪರಂಪರೆ ಎಂದು ” ಕಾಯಕ ಪರಿಣಾಮಿ ” ಮತ್ತು ವಚನಗಳ ಪುಸ್ತಕವನ್ನು ಅವರಿಗೆ ಕೊಟ್ಟರು.
ಅಂದಿನಿಂದ ಅವರ ಬದುಕು ಬೇರೆ ಯಾವುದರ ಕಡೆ ವಾಲದೆ ಅಪ್ಪಟ್ಟ ಬಸವಣ್ಣನ ಅನುಯಾಯಿಗಳಾಗಿ ಬಸವ ತತ್ವದ ಕಾರ್ಯ ಮಾಡುವಲ್ಲಿ ಇಡೀ ತಮ್ಮ ಬದುಕನ್ನೆ ಸವೆಸಿದ ಮಹಾನ್ ಜೀವ ವೀರಭದ್ರಪ್ಪನವರು.
ಹೀಗೆ ಪ್ರಾರಂಭವಾದ ಅವರ ಬಸವ ಬದುಕಿನ ಪಯಣ ಎಷ್ಟರ ಮಟ್ಟಿಗೆ ಹೋಯಿತು ಎಂದರೆ, ಬಸವಣ್ಣನವರ ಕಾರ್ಯಕ್ರಮ ಯಾವುದೇ ಊರಲ್ಲಿ ಇರಲಿ, ಎಷ್ಟೇ ಹೊತ್ತಾಗಲಿ ತಮ್ಮ ಕಾರು ಹತ್ತಿ ತಮ್ಮ ಬಳಗದವರೊಂದಿಗೆ ಹೊರಟು ಬಿಡುತ್ತಿದ್ದರು. ಬಸವತತ್ವ ಎಂದರೆ ಅದು ಮಾತಾಗಬಾರದು ಬದುಕಾಗಬೇಕೆಂಬ ಅವರ ಹಂಬಲ ಹೇಗಿತ್ತು ಅಂದ್ರೆ ಬಸವತತ್ವದ ನಿಜಾಚಾರಣೆಯ ಕಾರ್ಯಗಳನ್ನು ಹಳ್ಳಿ ಹಳ್ಳಿಗೂ , ಪಟ್ಟಣಗಳಿಗೂ ಹೋಗಿ ಮಾಡುತ್ತಿದ್ದರು. ಸಿಂಧನೂರಿನಿಂದ ಚಾಮರಾಜನಗರದವರೆಗೊ ಬಸವತತ್ವದ ನಿಜಾಚಾರಣೆಗಳ ಕೃಷಿ ಮಾಡಿದ ನಿಜಾಚಾರಣೆಗಳ ಯೋಗಿಯಾದರು.

ಇಂದು ನಿಜಕ್ಕೂ ಲಿಂಗಾಯತ ಧರ್ಮದ ನಿಜಾಚರಣೆಗಳನ್ನು ಮಾಡುವಂತ ಒಂದು ಕೊಂಡಿ ನಮ್ಮನ್ನು ಕಳಚಿದೆ. ಆ ರೀತಿ ನಿಜಾಚಾರಣೆಗಳನ್ನು ಮಾಡುವವರು ಎಂದರೆ ಇಬ್ಬರು ಮಾತ್ರ. ಒಬ್ಬರು ಗದಗ ಜಿಲ್ಲೆಯ ಅಶೋಕ ಬರಗುಂಡಿ ಶರಣರು, ಇನ್ನೊಬ್ಬರು ಅಂದ್ರೆ ಕುರಕುಂದಿಯ ವೀರಭದ್ರಪ್ಪ ಶರಣರು. ಇಂದು ವೀರಭದ್ರಪ್ಪ ಶರಣರು ಬಯಲೊಳು ಬಯಲಾಗಿ ನಿಜಾಚಾರಣೆಗಳನ್ನು ಮಾಡುವವರ ಕೊರತೆ ಬಸವತತ್ವ ಆಚರಣೆ ಮಾಡುವ ಲಿಂಗಾಯತದಲ್ಲಿ ಎದ್ದು ಕಾಣುತ್ತಿದೆ. ಅವರ ಬಸವಣ್ಣ, ಬಸವತತ್ವದ ಹಂಬಲ ಎಷ್ಟು ಇತ್ತು ಎಂದರೆ ತಾವು ಆನಾರೋಗ್ಯರಾದುದರ ಬಗ್ಗೆ ಅರಿವಿಲ್ಲದಂತೆ ಬಸವಣ್ಣರ ಸೇವೆ ಮಾಡಿದಂತ ಮಹಾ ಜೀವ. ಆಸ್ಪತ್ರೆಯಲ್ಲಿ ಇದ್ದರೂ ಲಿಂಗಪೂಜೆ ಬಸವಣ್ಣನವರ ನೆನವು ಎಂದೂ ಮರೆಯಲಿಲ್ಲ.
ಇಂತಹ ಅಪ್ಪಟ ಬಸವಣ್ಣನರ ಅನುಯಾಯಿಯನ್ನು ಇಂದು ನಮ್ಮ ಎದೆಯಲ್ಲಿರಿಸಿಕೊಂಡು ಸಮುದಾಯ ಮುಂದೆ ಸಾಗಬೇಕಿದೆ. ಅವರು ಭೌತಿಕವಾಗಿ ಇಲ್ಲದಿರಬಹುದು, ಆದರೆ ಅವರ ನೆನವು ಮಾತ್ರ ಸಮುದಾಯದಲ್ಲಿ, ಸಮಾಜದಲ್ಲಿ ಹಚ್ಚ ಹಸಿರಾಗಿ ಇರುತ್ತದೆ. ಸಿಂಧನೂರು ಅಂದ್ರೆ ಬಸವ ಪ್ರೇಮಿಗಳಿಗೆ ನೆನಪಾಗುವ ಮೊದಲ ಹೆಸರು ವೀರಭದ್ರಪ್ಪ, ಕುರುಕುಂದಾ ಅಂದ್ರೆ ಜನಸಾಮಾನ್ಯರಿಗೆ ಆ ಊರಿನ ಗ್ರಾಮ ದೇವತೆ ದುರುಗಮ್ಮ ನೆನಪು ಆಗ್ತಾಯಿದ್ದಳು, ಈಗ ಕುರುಕುಂದಾ ಅಂದ್ರೆ ವೀರಭದ್ರಪ್ಪ ಶರಣರು ಎನ್ನುವ ಹೆಸರು ಯಾವಾಗಲೂ ಜನಮಾನಸದಲ್ಲಿ ಉಳಿಯುತ್ತದೆ.
ಕುರಕುಂದಿ ವೀರಭದ್ರಪ್ಪನವರು ಬಸವಣ್ಣನವರ ಸಿದ್ದಾಂತವನ್ನ ಎಷ್ಟರ ಮಟ್ಟಿಗೆ ಅಪ್ಪಿಕೊಂಡಿದ್ದರೆಂದರೆ ಅವರು ಯಾವಾಗಲೂ *ಅಪ್ಪನ ವಚನಗಳು ,ಅಪ್ಪನ ತತ್ವ, ಅಪ್ಪನ ಸಿದ್ದಾಂತ*, ಅಪ್ಪನ ಮಾತು. ಅಪ್ಪ ಹೇಳುತ್ತಾರೆ.. ಅಪ್ಪನವರು ನಮಗೆ ವಚನಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ …….ಹೀಗೆ ಹೇಳುತಿದ್ದರೆ ಹೊರತು. ಬಸವಣ್ಣ ಎಂದು ಏಕವಚನ ಬಳಸುತಿದ್ದದ್ದು ಬಹಳ ವಿರಳ.
ಅದರಲ್ಲೂ ನಮ್ಮ ಚಾಮರಾಜನಗರ ಮೈಸೂರು ಭಾಗದ ಬಸವ ಭಕ್ತರಿಗೆ ವೀರಭದ್ರಪ್ಪನವರ ಲಿಂಗೈಕ್ಯರಾಗಿದ್ದು ಬಹಳ ನೋವಿನ ಸಂಗತಿಯಾಗಿದೆ
ಇಂಥಹ ಕಟ್ಟಾ ಬಸವ ತತ್ವವಾದಿಗಳು ಇನ್ನು ಇರಬೇಕಾಗಿತ್ತು
💐🙏