ಬೆಳಗಾವಿ
ಜನವರಿ 17 ಧಾರವಾಡದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯ ಸಭೆ ನಡೆಯುತ್ತಿದೆ. ಇದರ ಉದ್ದೇಶ:
1) ಶರಣ ತತ್ವದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ದಾಳಿ ತಡೆಯುವುದು
2) ಹಿಂದುತ್ವ ಸಂಘಟನೆಗಳಿಂದ ಲಿಂಗಾಯತ ಯುವಕರನ್ನು ರಕ್ಷಿಸಿಕೊಳ್ಳುವುದು ಮತ್ತು
3) ಸಮಾಜದ ಮುಂದಿರುವ ಇತರ ಸವಾಲುಗಳ ಬಗ್ಗೆ ಚರ್ಚಿಸುವುದು.
ಈ ವಿಷಯಗಳ ಕುರಿತಂತೆ ಸಲಹೆ ಸೂಚನೆಗಳ ನೀಡಲು ಕೇಳಿದ ಕಾರಣಕ್ಕಾಗಿ ಇಲ್ಲಿ ನನ್ನ ಕೆಲವು ಮಾತುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
ತಡವಾಗಿದೆ. ಈಗಲಾದರೂ ಕೆಲ ಮಠಾಧೀಶರು ಎಚ್ಚೆತ್ತುಕೊಂಡಿರುವುದು ಖಂಡಿತಾ ಒಳ್ಳೆಯದೇ ಬೆಳವಣಿಗೆಯಾಗಿದೆ. ಅಪ್ಪ ಬಸವಾದಿ ಶರಣರು; ತಮ್ಮ ಯಾವುದೇ ವರ್ಗ ವರ್ಣ ಲಿಂಗಭೇದವಿಲ್ಲದ ಸರ್ವಸಮಾನತೆಯ ನಡೆನುಡಿ ಸಾಂಗತ್ಯದ ಕಾಯಕ ದಾಸೋಹದ ವೈಚಾರಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವ ಇಷ್ಟಲಿಂಗ ಶಿವಯೋಗ ಸಾಧನೆಯ ಪ್ರಗತಿಪರ ಲಿಂಗಾಯತ ಧರ್ಮವನ್ನು ಈಗ ಉಳಿಸಿ ಬೆಳೆಸಲು ಮುಂದೆ ಬಂದಿರುವುದಂತೂ ಶ್ಲ್ಯಾಘನೀಯ ಮತ್ತು ಅಭಿನಂದನೀಯವಾಗಿದೆ.
ಸಲಹೆಗಳು:
೧) ಮಠಾಧೀಶರು; ಲಿಂಗಾಯತ ಬಂಧುಗಳಿಂದ
ಕಂಡಲ್ಲಿ ಕಾಲಿಗೆ ಬೀಳಿಸಿಕೊಳ್ಳುವ ಪರಿಪಾಠವನ್ನು ಮೊದಲು ಬಿಡಬೇಕು. ಅಂಥವರಿಗೆ ‘ಮುಗಿದ ಕೈ ಬಾಗಿದ ತಲೆ’ಯಾಗಿಸಲು ಖಡ್ಡಾಯವಾಗಿ ಪಾಠ ಮಾಡಿ, ಮೇಲರಿಮೆ ಕೀಳರಿಮೆಯ ಈ ತರತಮ ಭಾವದವ ಸಾರ್ವಜನಿಕ ಪ್ರದರ್ಶನ ನಿಲ್ಲಿಸಬೇಕು ಸರ್ವಸಮಾನತೆಯೇ ಶರಣ ಸಂಸ್ಕೃತಿಯಾಗಿದೆ.
೨) ಸಂಸ್ಕೃತ ವೇದಾಧ್ಯಯನ ಮಾಡಿ ಬಂದಿರುವ ಮಠಾಧೀಶರು; ಶರಣರ ವಚನ ಸಾಹಿತ್ಯವನ್ನು ವೇದಿಕೆಯ ಭಾಷಣ ಪ್ರವಚನಗಳಲ್ಲಿ ಮಾತ್ರವೇ ಮೆರೆಸದೆ ಅವುಗಳನ್ನ ಭಕ್ತರ ಹೃನ್ಮನಗಳಲ್ಲಿ ಬಿತ್ತಿ ಬೆಳೆ ತೆಗೆಯುವ ಕ್ರಿಯೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು.
೩) ಮಠಾಧೀಶರು; ಶರಣತತ್ವ ಸಿದ್ಧಾಂತಗಳಾದ – ಅಷ್ಟಾವರಣ ಷಟಸ್ಥಳ ಪಂಚಾಚಾರ ಸಕೀಲಗಳ ಜೊತೆಗೆ ಇಷ್ಟಲಿಂಗ ಶಿವಯೋಗದಾಚರಣೆಯನ್ನ ಅರಿತು ಆಚರಣೆ ಮಾಡುವ ಮೂಲಕ ತನ್ನನ್ನು ತಾನು ತಿಳಿಯುವ ಕಲೆಯನ್ನು ಲಿಂಗಾಯತರಿಗೆ ವಿಶೇಷವಾಗಿ ಯುವ ಜನಾಂಗಕ್ಕೆ ತಿಳಿಸಿಕೊಡುವ ವೈಚಾರಿಕ ವೈಜ್ಞಾನಿಕ ಧಾರ್ಮಿಕ ವ್ಯವಸ್ಥೆಯನ್ನು ಕಾರ್ಯಗತಗೊಳಿಸಬೇಕು.
೪) ಮಠಗಳು ಮತ್ತು ಮಠಾಧೀಶರು; ಬಸವಾದಿ ಶರಣರ ಮಹಾಮನೆಯಂತೆ ಕೆಲಸವ ನಿರ್ವಹಿಸಬೇಕು. ಶರಣರ ಲಿಂಗಾಯತ ಧರ್ಮ ಸಂಸಾರಸ್ಥ ಸಾಧಕ ಭಕ್ತ ಶರಣರ ಧರ್ಮವಾಗಿದೆ. ಹಾಗಾಗಿ ಶರಣರ ಭಾವಚಿತ್ರಗಳನ್ನು ವಿರಕ್ತರಂತೆ ಚಿತ್ರಿಸದ ಹಾಗೆ ತಿಳಿಹೇಳಿ ನೋಡಿಕೊಳ್ಳಬೇಕು.
೫) ವಚನ ಸಾಹಿತ್ಯದ ನಿಖರವಾದ, ಆಳವಾದ ಮತ್ತು ನಿಜವಾದ ಸಂಶೋಧನೆಯ ಜೊತೆಗೆನೇ ಅಧ್ಯಯನವುಳ್ಳವರ ಸಲಹೆಗಳನ್ನು ಕಾಲಕಾಲಕ್ಕೆ ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು.
೬) ಶರಣರಂತೆಯೇ ಮಠಾಧೀಶರು ಸರಳವಾದ ನಡೆ ನುಡಿಯ ಒಡನಾಟವನ್ನು ಲಿಂಗಾಯತ ಭಕ್ತ ಸಾಧಕರಿಗೆ ಕಲ್ಪಿಸುವ ಉದಾರ ಧೋರಣೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಇದರಿಂದ ಶರಣತತ್ವದ ಬೆಳವಣಿಗೆ ಅರ್ಥಪೂರ್ಣವಾಗುವ ಜೊತೆಗೆ ಸತ್ವಪೂರ್ಣ ಹಾಗೂ ಮಹತ್ವಪೂರ್ಣ ಆಗುತ್ತದೆ.
ಹೀಗೆ ಮಠಾಧೀಶರು ಕ್ರಿಯಾಶೀಲರಾದರೆ ಮಾತ್ರ ಅಪ್ಪ ಬಸವಾದಿ ಶರಣರ ಲಿಂಗಾಯತ ಧರ್ಮಕ್ಕೆ ಹೊಸ ಚೈತನ್ಯ ಬರುತ್ತದೆ. ಈಗ ಎದುರಾಗಿರುವ ಸಾಂಸ್ಕೃತಿಕ ಧಾರ್ಮಿಕ ಸಾಹಿತ್ಯಿಕ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಅನುಭವ ಜನ್ಯನುಡಿಗಳಾಗಿವೆ.
💐
ಉನ್ನತ ಬೆಳವಣಿಗೆ..ಈ ಉನ್ನತ ಕಾರ್ಯದಲ್ಲಿ ಭಾಗಿಯಾಗುವ ಎಲ್ಲಾ ಸ್ವಾಮೀಜಿಗಳಿಗೆ ಕೋಟಿ ಶರಣು
ಲಿಂಗಾಯತರು ಈ ದೋರಣೆಯನ್ನು ಅಳುವಡಿಸಿಕೊಂಡದದಲ್ಲಿ ಇದು ಎರಡೆನೆಯ ಮಹಾಕ್ರಾಂತಿ.
ಸೂಕ್ತ ಸಲಹೆಗಳು 💐🙏