ಜಾತಿ ನಿಂದನೆಯ ವಿರುದ್ಧ ಸಿಡಿದೆದ್ದ ಶರಣೆ ಕಾಳವ್ವೆ

ಬೆಳಗಾವಿ:

ಶರಣೆ ಕಾಳವ್ವೆಯ ವಚನಗಳು ಜಾತಿ ನಿಂದನೆಯನ್ನು ಮಾಡುವವರ ಬಗ್ಗೆ ಸಿಟ್ಟು ಮತ್ತು ಆಕ್ರೋಶವನ್ನು ಹೊರಹಾಕುತ್ತವೆ. ಅವರ ವಚನಗಳಲ್ಲಿ ಅವರು ಸಮಾಜದಲ್ಲಿ ಅನುಭವಿಸಿದ ನೋವು, ಅಪಮಾನದ ಕಿಚ್ಚನ್ನು ಹೊರಹಾಕಿದ ಧ್ವನಿ ಇದೆ. ಅಂಗವನ್ನೆ ಲಿಂಗಮಯವನ್ನಾಗಿ ಮಾಡಿಕೊಂಡು ವ್ರತಾಚರಣೆಯ ಮಹತ್ವತೆಯನ್ನು ಕಾಳವ್ವೆಯ ವಚನಗಳಲ್ಲಿ ನಾವು ಕಾಣಬಹುದು ಎಂದು ಡಾ. ಸಾವಿತ್ರಿ ಕಮಲಾಪೂರ ಅವರು ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ, ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರದಂದು ನಡೆದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣೆ ಪುಣ್ಯಸ್ತ್ರೀ ಕಾಳವ್ವೆಯವರ ಪತಿ ಶರಣ ಉರಿಲಿಂಗ ಪೆದ್ದಿ ಅವರು ಒಂದು ಸಲ ಉರಿಲಿಂಗದೇವರ ಮನೆಗೇ ಕನ್ನಹಾಕುತ್ತಾರೆ. ಅಲ್ಲಿ ಗುರು ಉರಿಲಿಂಗದೇವರು ಶಿಷ್ಯರಿಗೆ ಲಿಂಗ ದೀಕ್ಷೆಯನ್ನು ಕೊಡುವುದನ್ನು ನೋಡಿ ತನ್ನ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳುತ್ತಾನೆ. ಕಳ್ಳತನ ಮಾಡುವುದನ್ನು ಬಿಟ್ಟು ಕೊನೆಗೆ, ಗುರುಗಳಿಂದ ಲಿಂಗದೀಕ್ಷೆಯನ್ನು ಕಾಡಿ-ಬೇಡಿ ಪಡೆಯುತ್ತಾರೆ. ಕೊನೆಗೆ ಅದೇ ಕೊರಳಿಮಠಕ್ಕೆ ಅವರು ಗುರು ಆದದ್ದು ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದು ಇಡುವಂತಹ ವಿಷಯವಾಗಿದೆ.

ಈ ಉರಿಲಿಂಗ ಪೆದ್ದಿಯವರ ಪತ್ನಿಯಾದ ಕಾಳವ್ವೆಯು ಸಂಸ್ಕೃತ ಪಂಡಿತೆಯೂ ಆಗಿದ್ದಳು. ಅವರ ಒಂದು ವಚನದಲ್ಲಿ ಜಾತಿ ನಿಂದನೆ ಮಾಡಿದರೆ ಕೋಟಿ ಜನ್ಮದಲ್ಲಿ ಹಂದಿಯಾಗಿ ಜನಿಸುತ್ತಾರೆ ಎಂದು ಉಲ್ಲೇಖವಿದೆ.

ಶರಣರಾದವರಲ್ಲಿ ದಾಸೋಹ ಮಾಡಲು ಅಹಂಕಾರ ಇರಬಾರದು. ಅಣ್ಣ ಬಸವಣ್ಣನವರು ಕೊಟ್ಟು ನೋಡುತ್ತಾರೆ ಕಸಿದುಕೊಂಡು ನೋಡುತ್ತಾರೆ. ಪರಮಾತ್ಮ ಬೇರೆ ಎಲ್ಲಿಯೂ ಇಲ್ಲ. ಶುದ್ಧ ಮನವನ್ನು ಹೊಂದಿದ ಪ್ರತಿ ಶರಣರಲ್ಲಿ ಇರುವನು. ಶರಣರು ಅರಿಷಡ್ವರ್ಗ್ ಗಳನ್ನು ಗೆಲ್ಲಬೇಕು, ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ಶರಣರಾಗಬೇಕೆಂದವರು. ನಾವೆಲ್ಲ ಲಿಂಗಧಾರಣೆಯನ್ನು ಮಾಡಿಕೊಂಡಿರಬೇಕು, ಯಾರು ಲಿಂಗವನ್ನು ಕಟ್ಟಿಕೊಳ್ಳುವುದಿಲ್ಲವೋ ಅವರು ಇದ್ದೂ ಸತ್ತಂತೆ. ಲಿಂಗ ಎನ್ನುವ ವೈಜ್ಞಾನಿಕ ಕುರುವುವನ್ನು ಬಸವಣ್ಣನವರು ಮೊಟ್ಟಮೊದಲಿಗೆ ಪರಿಚಯಿಸಿದರು ಎಂದು ಸಾವಿತ್ರಿ ಹೇಳಿದರು.

ಶರಣೆ ಮಹಾದೇವಿ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು. ಶರಣೆ ಜಿ.ಬಿ. ಜವಣಿ, ವಿ.ಕೆ. ಪಾಟೀಲ, ಬಸವರಾಜ ಗುರನಗೌಡ, ಆನಂದ ಕರ್ಕಿ, ಶರಣೆ ರುದ್ರಮ್ಮ ಅಕ್ಕಣ್ಣವರ, ಸುನಿಲ ಸಾಣಿಕೊಪ್ಪ, ಮಹಾದೇವಿ ಅರಳಿ ವಚನಗಳನ್ನು ಹೇಳಿದರು.

ಅಧ್ಯಕ್ಷತೆಯನ್ನು ಸಂಗಮೇಶ ಅರಳಿ ವಹಿಸಿದ್ದರು. ಸುರೇಶ ನರಗುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂ. ವೈ. ಮೆಣಸಿನಕಾಯಿ ಅವರು ಪರಿಚಯಿಸಿದರು. ಶಂಕರ ಪಡೆನ್ನವರ ದಾಸೋಹ ಸೇವೆ ನೀಡಿದರು.

ಶಾಂತಾ ಕುಂಗಿ, ಬಸವರಾಜ ಬಿಜ್ಜರಗಿ, ಗದಿಗೆಪ್ಪ ತಿಗಡಿ, ಗಂಗಪ್ಪ ಉನ್ಕಲ್, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಬಾಳಗೌಡ ದೊಡ್ಡಬಂಗಿ, ವಿರೂಪಾಕ್ಷ ದೊಡ್ಡಮನಿ, ಶಿವಾನಂದ ತಲ್ಲೂರ, ಶಿವಾನಂದ ನಾಯಕ ಮುಂತಾದ ಶರಣ, ಶರಣೆಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *