ಜಯದೇವ ಜಯಂತ್ಯುತ್ಸವ: ಗೋಡೆ ಭಿತ್ತಿಚಿತ್ರ, ಕಿರುಹೊತ್ತಿಗೆ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೧೫೦ನೇ ಜಯಂತ್ಯುತ್ಸವ ಹಾಗು ಶರಣ ಸಂಸ್ಕೃತಿ-೨೦೨೪ ಕಾರ್ಯಕ್ರಮದ ಗೋಡೆ ಭಿತ್ತಿಚಿತ್ರ, ಶ್ರೀ ಜಯದೇವ ಶ್ರೀಗಳ ಕುರಿತ ಕಿರುಹೊತ್ತಿಗೆ ಹಾಗೂ ವಿವಿಧ ಕಾರ್ಯಕ್ರಮಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಜಯದೇವ ಶ್ರೀಗಳ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು ಜಯದೇವ ಜಗದ್ಗುರುಗಳೆಂದರೆ ನಡೆದಾಡುವ ಸಜ್ಜನಿಕೆ ಅವರದು. ನಾಡಿನಲ್ಲಿ ಜಯದೇವ ಶ್ರೀಗಳು ಬರದೇ ಹೋಗಿದ್ದರೆ ಕರ್ನಾಟಕ ಸಾಂಸ್ಕೃತಿಕವಾಗಿ ಬಡವಾಗುತ್ತಿತ್ತು. ನಾಡಿನ ಧಾರ್ಮಿಕ ಮುಖಂಡರುಗಳಿಗೆ ಶ್ರೀಗಳು ರಥಬೀದಿ ಇದ್ದಂತೆ. ಅವರದು ಸುವರ್ಣಯುಗ. ಅಂತಹ ಪ್ರಾತಃಸ್ಮರಣೀಯ ಮಹಾನ್ ಚೇತನ ಜಯದೇವ ಶ್ರೀಗಳ ೧೫೦ನೇ ಜಯಂತ್ಯುತ್ಸವ ಆಚರಣೆ ಒದಗಿಬಂದಿರುವುದು ನಮ್ಮ ಭಾಗ್ಯವೇ ಸರಿ ಎಂದರು.

ಗೋಡೆ ಬಿತ್ತಿಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು,
ಶ್ರೀ ಜಯದೇವ ಜಗದ್ಗುರುಗಳು ೧೯೦೩ರಲ್ಲಿ ಶ್ರೀಮಠದ ಪೀಠಕ್ಕೆ ಬಂದರು. ಅವರದು ಆದರ್ಶದ ಬದುಕು. ಅವರ ಚಿಂತನೆಗಳು ಜನರಿಗೆ ದಾರಿಯನ್ನು ತೋರಿಸುತ್ತಿವೆ. ಜಯದೇವ ಜಗದ್ಗುರುಗಳ ಬೆಳ್ಳಿಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಶ್ರೀಮಠದ ವೈಭವವನ್ನು ನಾವು ಬೆಳಗಿಸಬೇಕಿದೆ. ಆದರ್ಶ ತತ್ತ್ವ ಸಿದ್ಧಾಂತಗಳನ್ನು ನಾಡಿನಾದ್ಯಂತ ಪಸರಿಸುವ ಕಾರ್ಯ ಆಗಬೇಕಿದೆ ಎಂದು ನುಡಿದರು.

ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಕಾರ್ಯಕ್ರಮದ ಕರಪತ್ರವನ್ನು, ಆರೋಗ್ಯ ಮೇಳ ಮತ್ತು ಯೋಗ ಕಾರ್ಯಕ್ರಮದ ಕರಪತ್ರವನ್ನು ಕೊಲ್ಲಾಪುರದ ಶಿವಾನಂದ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.

Share This Article
Leave a comment

Leave a Reply

Your email address will not be published. Required fields are marked *