30 ಜಿಲ್ಲೆಗಳಲ್ಲಿ ‘ಮತ್ತೆ ಕಲ್ಯಾಣ’ ಮಾದರಿ ಕಾರ್ಯಕ್ರಮ ನಡೆಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಬಂದಿದೆ
ಧಾರವಾಡ
ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಮತ್ತು ಆಹ್ವಾನಿತರ ವಿಶೇಷ ಸಭೆ ಗುರುವಾರ ಸಂಜೆ ನಗರದ ಮಜ್ಜಿಗೆ ಪಂಚಪ್ಪ ಸಭಾಂಗಣದಲ್ಲಿ ನಡೆಯಿತು.
ಮಹಾಸಭಾದ ಕೇಂದ್ರ ಸಮಿತಿಯ ಸದಸ್ಯರು, ವಿವಿಧ ಜಿಲ್ಲೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ವಿಶೇಷ ಆಹ್ವಾನಿತರು ಸೇರಿ ಸುಮಾರು 80-100 ಜನ ಪೂಜ್ಯ ತೋಂಟದ ಸಿದ್ದರಾಮ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು.

ಸಂಘ ಪರಿವಾರ ಶರಣ ತತ್ವಗಳನ್ನು ತಿರುಚಲು ತಂದಿರುವ ವಚನ ದರ್ಶನ ಪುಸ್ತಕಕ್ಕೆ ಪ್ರತಿಯಾಗಿ ಮಹಾಸಭಾ ಪ್ರಕಟಿಸಿರುವ ‘ವಚನ ದರ್ಶನ – ಮಿಥ್ಯ-ಸತ್ಯ’ಪುಸ್ತಕವನ್ನು ಬೆಂಗಳೂರಿನಲ್ಲಿ ದೊಡ್ಡ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ನಂತರ ವಿವಿಧ ಜಿಲ್ಲೆಗಳಲ್ಲಿ ಪುಸ್ತಕದ ಲೋಕಾರ್ಪಣೆ ನಡೆಯಲಿದೆ.

ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನಡೆಸಿಕೊಂಡು ಬಂದಿರುವ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ವಿಸ್ತರಿಸುವ ಪ್ರಯತ್ನಗಳನ್ನು ಮಹಾಸಭಾ ಸಂಪೂರ್ಣವಾಗಿ ಬೆಂಬಲಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

“‘ಮತ್ತೆ ಕಲ್ಯಾಣ’ ಸಾಣೇಹಳ್ಳಿ ಶ್ರೀಗಳ ನೇತೃತ್ವದ್ದಲ್ಲಿ ಬಹಳ ಪರಿಣಾಮಕಾರಿಯಾಗಿ ನಡೆದ ಕಾರ್ಯಕ್ರಮ. ಇದರಡಿಯಲ್ಲಿ ವಿಚಾರ ಸಂಕಿರಣ, ಮೆರವಣಿಗೆ, ಯುವಕರ ಸಂಪರ್ಕ, ಕಲಾ ಮತ್ತು ನಾಟಕೋತ್ಸವಗಳನ್ನು ನಡೆಸಲಾಗಿತ್ತು. ಈಗ ಎಲ್ಲ ಬಸವ ತತ್ವದ ಮಠಾಧೀಶರನ್ನು ಮತ್ತು ಸಂಘಟನೆಗಳನ್ನು ತೊಡಗಿಸಿಕೊಂಡು ಅದೇ ರೀತಿ ಕಾರ್ಯಕ್ರಮವನ್ನು ವಿಸ್ತಾರವಾಗಿ ನಡೆಸುವ ಬಗ್ಗೆ ಚರ್ಚೆಯಾಯಿತು,” ಎಂದು ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಅಧ್ಯಕ್ಷರೊಬ್ಬರು ಹೇಳಿದರು.
30 ಜಿಲ್ಲೆಗಳಲ್ಲಿ ‘ಮತ್ತೆ ಕಲ್ಯಾಣ’ ಮಾದರಿ ಕಾರ್ಯಕ್ರಮ ನಡೆಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಬಂದಿದೆ ಎಂದು ತಿಳಿದು ಬಂದಿದೆ.
ಇಂದು ಇದೇ ಸಭಾಂಗಣದಲ್ಲಿ ನಡೆಯುವ ಲಿಂಗಾಯತ ಮಠಾಧಿಪತಿಗಳ ಒಕ್ಕೊಟದ ಸಭೆಯಲ್ಲಿ ‘ಮತ್ತೆ ಕಲ್ಯಾಣ’ ವಿಷಯ ಚರ್ಚೆಗೆ ಬಂದು ಸ್ಪಷ್ಟ ರೂಪ ತಾಳುವ ಸಾಧ್ಯತೆಯಿದೆ. ಇಂದಿನ ಒಕ್ಕೊಟದ ಸದಸ್ಯರ ಸಭೆಯಲ್ಲಿ ಮಹಾಸಭಾದ ಸದಸ್ಯರೂ ಭಾಗವಹಿಸಲಿದ್ದಾರೆ.

ನೆನ್ನೆಯ ಮಹಾಸಭಾದ ಸಭೆಯಲ್ಲಿ ಶರಣ ಸಂಸ್ಕೃತಿಗೆ ವಿರುದ್ಧವಾಗಿ ನಿರಂತರವಾಗಿ ನಡೆಯುತ್ತಿರುವ ವಚನ ದರ್ಶನ, ಕುಂಭಮೇಳ, ಸೇಡಂನ ಭಾರತ ಸಂಸ್ಕೃತಿ ಉತ್ಸವಗಳಂತಹ ಆಕ್ರಮಣಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಿತು. ಅವುಗಳನ್ನು ತೀಕ್ಷ್ಣವಾಗಿ ಪ್ರತಿರೋಧಿಸಬೇಕೆಂಬ ಒಮ್ಮತವೂ ಸಭೆಯಲ್ಲಿ ಮೂಡಿ ಬಂದಿತು.
ಟಿ.ಆರ್. ಚಂದ್ರಶೇಖರ, ವೀರಣ್ಣ ರಾಜೂರ, ಕೆಂಪಗೌಡರ, ಎನ್. ಜಿ. ಮಹಾದೇವಪ್ಪ, ಎಂ.ವಿ. ಗೊಂಗಡಶೆಟ್ಟಿ, ಬಸವರಾಜ ಧನ್ನೂರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರು ಜಿಲ್ಲಾ ಜೆ. ಎಲ್. ಎಮ್. ನಿಂದ ಪ್ರಕಟಿಸಿದ 2025 ರ ದಿನದರ್ಶಿಕೆ ಬಿಡುಗಡೆಯಾಯಿತು.
ಸ್ವಾಗತಾರ್ಹ ನಿರ್ಧಾರಗಳು 🙏
Super
ಒಳ್ಳೆ ಒಳ್ಳೆಯ ನಿರ್ಧಾರಗಳನ್ನು ಕೇಳಿ ಖುಷಿಯಾಗಿದೆ……
👍👌🙏🙏