ದಾವಣಗೆರೆ
ಜಾಗತಿಕ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಮಹಿಳಾ ಘಟಕದಿಂದ ಅರಿವಿನ ಮಹಾಮನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶರಣೆ ಕುಸುಮ ಲೋಕೇಶ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಬಸವಣ್ಣನವರ ಅಂಗೈಯಲ್ಲಿ ಅರಳಿದ ಲಿಂಗಾಯತ ಧರ್ಮದ ಪುನರುತ್ಥಾನಕ್ಕಾಗಿ 2018ರಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸ್ಥಾಪಿತವಾಗಿದೆ.
ಮಹಿಳೆಯರು ತಮ್ಮದೇ ಆದ ಒಂದು ವೇದಿಕೆಯಲ್ಲಿ ಸೇರಿ 12ನೇ ಶತಮಾನದ ಶರಣೆಯರ ವೈಚಾರಿಕ ಪ್ರಜ್ಞೆಯನ್ನು ಮುಂದಿಟ್ಟುಕೊಂಡು, ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು, ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವಂತಾಗಲಿ ಹಾಗೂ ಪ್ರಸ್ತುತ ಲೋಕ ವ್ಯವಸ್ಥೆಯಲ್ಲಿ ಪುರುಷರಿಗೆ ಸಮಾನ ಸ್ಥಾನಮಾನ ಪಡೆದುಕೊಳ್ಳುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ವಿಶ್ವ ಮಹಿಳಾ ದಿನಾಚರಣೆಯ ಉದ್ದೇಶಗಳು, ಜಾ. ಲಿಂ. ಮಹಾಸಭಾ ಆಶಯಗಳು ಒಂದೇ ಆಗಿದೆ. ಲಿಂಗಾಯತರು ಒಳಪಂಗಡಗಳನ್ನು ಬಿಟ್ಟು ಒಂದೇ ಎಂಬ ಭಾವನೆಯಿಂದ ಇರಬೇಕು. ಬಸವ ತತ್ವ ಒಪ್ಪಿಕೊಂಡು ಲಿಂಗಾಯತ ನಿಜಾಚರಣೆಗಳನ್ನು ಆಚರಿಸುವ ಎಲ್ಲರೂ ಮಹಾಸಭಾದಲ್ಲಿ ಸದಸ್ಯರಾಗಬಹುದು ಎಂದು ಹೇಳಿದರು.
ರಾಷ್ಟ್ರೀಯ ಬಸವದಳದ ಶರಣೆ ಸುವರ್ಣ ಕೊಟ್ರೇಶ್ ಬಸವಾನುಭವ ಮಾಡಿ ಬಸವ ಪುರಾಣ ವೃತ ನೆರವೇರಿಸಿದರು.
ಬಸವ ಬಳಗದ ಕಾರ್ಯದರ್ಶಿ ಶರಣೆ ವೀಣಾ ಮಂಜುನಾಥ ಅವರು ಲಿಂಗಾಯತ ನಿಜಾಚರಣೆಯ ಅಷ್ಟಾವರಣಗಳಲ್ಲಿ ಒಂದಾದ ‘ವಿಭೂತಿ’ ಮಹತ್ವವನ್ನು ತಿಳಿಸಿಕೊಟ್ಟರು.

ಉಪಾಧ್ಯಕ್ಷರಾದ ಶರಣೆ ಶಿವಬಸವರವರು ಪ್ರಸ್ತುತ ಮಹಿಳೆಯರಿಗೆ ಇರುವ ಸವಾಲುಗಳ ಬಗ್ಗೆ ಮಾತನಾಡಿದರು.
ಜಾಗತಿಕ ಲಿಂಗಾಯಿತ ಮಹಾಸಭಾ ದಾವಣಗೆರೆ ಜಿಲ್ಲಾಧ್ಯಕ್ಷರಾದ ಶರಣ ರುದ್ರಮುನಿ ಆವರಗೆರೆ ಇವರು ಬಸವ ತತ್ವ ಪ್ರಚಾರ ಮಾಡುವಲ್ಲಿ ಲಿಂಗಾಯತರ ಪಾತ್ರದ ಬಗ್ಗೆ ಮಾತನಾಡಿದರು. ಸಮಿತಿ ಸದಸ್ಯರಾದ ಸುವರ್ಣಮ್ಮನವರು ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗೌರವಾಧ್ಯಕ್ಷೆ ಮಂದಾಕಿನಿ ಸ್ವಾಮಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರೇಮ ಮಂಜುನಾಥ ಸರ್ವರನ್ನು ಸ್ವಾಗತಿಸಿದರು. ಖಜಾಂಚಿ ಮಮತಾ ನಾಗರಾಜ್ ಕಾರ್ಯಕ್ರಮದ ನಿರ್ವಹಣೆ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಅನೇಕ ಸಾಹಿತ್ಯಾಸಕ್ತರು, ಬಸವಪರ ಸಂಘಟನೆ ಸದಸ್ಯರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.