ಸಂತೆಬೆನ್ನೂರು
ಮನು ಸಮಾಜದಲ್ಲಿ ಮಹಿಳೆಗೆ ಪ್ರಾಧಾನ್ಯತೆ ನೀಡಲು ನಿರಾಕರಿಸಿದರೆ, ಶರಣರು ಮಹಿಳೆಯೇ ಸಮಾಜದ ಕಣ್ಣು ಎಂದು ಸಾರಿದ್ದಾರೆ. ಮಹಿಳೆಯರಿಗೆ ಇತಿಹಾಸದಲ್ಲಿ ಮೊದಲಿಗೆ ಸಾಮಾಜಿಕ ಸಮಾನತೆ ನೀಡಿದ ಕೀರ್ತಿ ಬಸವಾದಿ ಶರಣ ಪರಂಪರೆಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ಚನ್ನಗಿರಿ ತಾಲೂಕು ಸಂತೆಬೆನ್ನೂರು ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ರಾಜ್ಯ ಮತ್ತು ತಾಲೂಕು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕುಟುಂಬ ನಿರ್ವಹಣೆ, ಸಂಸ್ಕಾರ ಹಾಗೂ ಶಿಕ್ಷಣವನ್ನು ಮಹಿಳೆಗೆ ನೀಡಿದರೆ ಕುಟುಂಬ ಮತ್ತು ಸಮಾಜ ಸುಧಾರಣೆಗೆ ನೆಲೆಯಾಗುತ್ತದೆ. ಇತಿಹಾಸ, ವಿಜ್ಞಾನ, ರಾಜಕೀಯ ಹಾಗೂ ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಪ್ರಾವೀಣ್ಯತೆ ಪಡೆದಿದ್ದಾಳೆ. ಮಹಿಳೆಯು ನಂಬಿಕೆ ಮತ್ತು ಬದ್ಧತೆಗೆ ನ್ಯಾಯ ಒದಗಿಸಿದರೆ, ಪುರುಷ ಉದಾಸೀನತೆಯಿಂದ ತನ್ನ ಜವಾಬ್ದಾರಿಯಲ್ಲಿ ಹಿಂದೆ ಉಳಿದಿದ್ದಾನೆ, ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚನ್ನಗಿರಿ ಜೆಎಂಎಫ್‌ಸಿ ನ್ಯಾಯಾಧೀಶರಾದ
ಸಿದ್ದಲಿಂಗಯ್ಯ ಗಂಗಾಧರಮಠ ಅವರು ಮಾತನಾಡಿ, ಪ್ರಸ್ತುತ ಪೋಕ್ಸೋ ಕಾಯ್ದೆ ಅವಶ್ಯಕವಾಗಿದೆ. ಮಕ್ಕಳ ಶಿಸ್ತುಬದ್ಧ ಜೀವನ ರೂಪಿಸುವ ಜವಾಬ್ದಾರಿ ಪೋಷಕರದ್ದಾಗಿದೆ.
ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ನಿಯಂತ್ರಿಸಲು ನಾಗರಿಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಜೊತೆಗೆ ಕಾನೂನು ಅರಿವು ಮೂಡಿಸಬೇಕು ಎಂದರು.

ಪ್ರಾಧ್ಯಾಪಕಿ ಟಿ.ಬಿ. ಜ್ಯೋತಿ ಮಾತನಾಡಿ, ಪ್ರಾಚೀನ, ಮಧ್ಯ, ಅದುನಿಕ ಹಾಗೂ ಸ್ವಾತಂತ್ರ್ಯ ನಂತರ ಮಹಿಳೆಯರ ಸ್ಥಾನಮಾನ ಗಮನಿಸಬೇಕು. ಪುರಾಣ ಮತ್ತು ಧರ್ಮ ಶಾಸ್ತ್ರಗಳ ಕಾಲದಲ್ಲಿ ಮಹಿಳೆಯ ಸ್ಥಿತಿ ಅಧೋಗತಿಗೆ ಹೋಗಿದೆ. ಮನು ಒಬ್ಬ ವ್ಯಕ್ತಿಯಲ್ಲ, ಅವನು ಒಂದು ಸ್ಮೃತಿಯಾಗಿದ್ದಾನೆ. ವೇದಗಳಲ್ಲಿ ಪುರುಷ ಪ್ರಧಾನತೆ ಕಾಣಬಹುದು. ಶರಣ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ನೀಡಿದ ಗೌರವ ಮತ್ತು ಸ್ಥಾನ-ಮಾನ ವಿಶೇಷವಾಗಿದೆ. ಇದಕ್ಕೆ ಶರಣೆ ಅಕ್ಕಮಹಾದೇವಿ ಅವರನ್ನು ಕಾಣಬಹುದು, ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಗಿರಿಸ್ವಾಮಿ, ತಹಶೀಲ್ದಾರ್ ಎನ್.ಜಿ. ನಾಗ ರಾಜ್, ಸಿಪಿಐ ಲಿಂಗನಗೌಡ ನಗರೂರು, ಬಿಎಸ್‌ಎನ್ ಜಯಪ್ಪ, ಜಿಲ್ಲಾ ಅಧ್ಯಕ್ಷ ಕೆ.ಜಿ.ಮಂಜುನಾಥ್, ತಾ. ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ವಕೀಲ ರಾಜಪ್ಪ, ಮಲ್ಲಯ್ಯ, ಕೆ.ಜಿ. ಶೈಲೇಶ್ ಪಟೇಲ್, ಸುಧಾಕರ್, ಗಂಗಾಧರಯ್ಯ, ಕೆ.ಬಸವರಾಜ್, ದೊಡ್ಡಬಾಯಿ ಸುರೇಶ್, ನಂಜಯ್ಯ ಕುಮಾರ್ ಇದ್ದರು.