ಚಿತ್ರದುರ್ಗ:
ರೈತರಿಗೆ ಹೊಲದಲ್ಲಿ ಬೆಳೆ ಯಾವುದೂ ಕಳೆ ಯಾವುದು ಗೊತ್ತಿರುತ್ತದೆ. ರೈತರು ಕಳೆಯನ್ನು ಕಿತ್ತು ಬೆಳೆ ಬೆಳೆಯುತ್ತಾರೆ. ಅದೇ ರೀತಿ ನಾವು ಸಹ ನಮ್ಮ ಮನದಲ್ಲಿ ಕಳೆ ಯಾವುದು, ಬೆಳೆ ಯಾವುದು ಎಂಬುದನ್ನು ಅರಿತು ಮನದ ಅಹಂಕಾರದ ಕಳೆಯನ್ನು ಕಿತ್ತು ಸದ್ಭಾವದ ಬೆಳೆ ಬೆಳೆಯಬೇಕು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಡಾ. ಬಸವಕುಮಾರ ಸ್ವಾಮೀಜಿ ನುಡಿದರು.
ಕಾರ್ತಿಕಮಾಸದ ನಿಮಿತ್ತ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀಕರ್ತೃ ಮುರುಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ವಚನ ಕಾರ್ತಿಕದ ೨೬ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದುಡಿದು ತಿನ್ನುವವರನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಾರೆ. ಅದೇ ಕೂತು ತಿನ್ನುವವನನ್ನು ಪುಣ್ಯವಂತ ಎನ್ನುತ್ತಾರೆ. ತಮ್ಮ ತಪ್ಪನ್ನು ಕಾಣದೇ ಬರೀ ಅನ್ಯರ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತೇವೆ. ಇಲ್ಲವೇ ಬೇರೆಯವರ ತಪ್ಪಿನ ಬಗ್ಗೆ ಮನದಲ್ಲಿ ಕೊರಗುತ್ತೇವೆ.
ಇದು ಮನುಷ್ಯನ ಸಹಜ ಗುಣ, ಬೇರೆಯವರ ತಪ್ಪನ್ನು ಎಣಿಸುವುದು ಸಹ ತಪ್ಪೇ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ನುಡಿ ಅಂತರಂಗದಲ್ಲಿ ಪರಿಣಮಿಸಬೇಕು. ನಡೆದು ನುಡಿಯಬೇಕು ಎಂದರು.

ಪೂಜ್ಯ ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಜೋದರ ಮಾಯಣ್ಣ ಒಬ್ಬ ಯೋಧ. ಆತನ ಕಾಯಕ ಆನೆಯನ್ನು ಪಳಗಿಸುವುದಾಗಿತ್ತು. ಮಾವುತನ ಕೆಲಸ ನಿರ್ವಹಿಸುತ್ತಿದ್ದ. ಅವರ ವಚನಗಳಲ್ಲಿ ಸತ್ವ, ರಜೋ ಹಾಗೂ ತಮ ಗುಣಗಳನ್ನು ತಿಳಿಸಿದ್ದಾರೆ.
ಸತ್ವ ಗುಣವೆಂದರೆ, ಯೋಗ, ಧ್ಯಾನ, ಮನಸ್ಸಿಗೆ ಸಮಾಧಾನ ನೀಡುವ ಗುಣ. ರಜೋ ಗುಣವೆಂದರೆ ಕೋಪ, ತಾಪ, ದ್ವೇಷ, ಆಕ್ರೋಶದ ಗುಣ. ತಮ ಗುಣವೆಂದರೆ, ನಕರಾತ್ಮಕ ಆಲೋಚನೆ, ಅಸೂಯೆ, ಕಿಚ್ಚು, ತಿರಸ್ಕಾರ ಮನೋಭಾವದ ಗುಣ. ಆನೆ ಪಳಗಿಸಿದ ಹಾಗೆ ಈ ತ್ರಿಗುಣಗಳನ್ನು ಪಳಗಿಸಬೇಕೆಂದು ಜೋದರ ಮಾಯಣ್ಣ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ.
ಡಕ್ಕೆಯ ಬೊಮ್ಮಣ್ಣ ಜನಪದ ಕಲಾವಿದ. ತಲೆಯ ಮೇಲೆ ಮಾರಿ ಹೊತ್ತು ಬಿಕ್ಷಾಟನೆ ಮಾಡಿ ಜೀವಿಸುತ್ತಿದ್ದ. ಆತ ತತ್ವಜ್ಞಾನಿಯಾಗಿದ್ದ. ನಮ್ಮ ಕಣ್ಣುಗಳಿರುವುದು ಗುರುಲಿಂಗ ಜಂಗಮ ನೋಡಲಿಕ್ಕೆ. ನಮ್ಮ ಕೈಯಿರುವುದು ಸತ್ಯ ಶುದ್ಧ ಕಾಯಕ ದಾಸೋಹ ಮಾಡಲಿಕ್ಕೆ ಹಾಗೂ ನಾಲಿಗೆ ಇರುವುದು ಸದಾಕಾಲ ಗುರು ಸ್ಮರಣೆ ಮಾಡಿ ವಚನ ಪಠಿಸುವುದಕ್ಕೆ. ಅನ್ಯರನ್ನು ನಿಂದಿಸಲು ಅಲ್ಲ ಎಂದು ಶರಣರು ಹೇಳಿದ್ದಾರೆ ಎಂದರು.
ಶಿವಶರಣ ದಶಗಣ ಸಿಂಗೀದೇವಯ್ಯ ಕುರಿತು ಎಸ್.ಜೆ.ಎಂ.ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಮಾಲಾ ನಾಗರಾಜ್ ಮಾತನಾಡಿ, ದಶಗಣ ಸಿಂಗೀದೇವಯ್ಯನವರ ಕಾಲಮಾನ ೧೧೬೦. ಇವರು ರಚಿಸಿದ ೪ ವಚನಗಳು ನಮಗೆ ಲಭ್ಯವಿದೆ. ಇವರು ೧೨ನೆಯ ಶತಮಾನದ ಶರಣರಲ್ಲಿ ಒಬ್ಬರಾಗಿದ್ದರು.
ಶರಣ ಸೇವಕ, ಸತ್ಯಶುದ್ಧ ಕಾಯಕ, ಸಂಗಮ ದಾಸೋಹಿ, ಪಾದೋದಕ ಪ್ರಾಣ ಜೀವ ಪೂಜೆ ನಿರತರಾಗಿರುತ್ತಾರೆ. ಇವರು ನಾಚಯ್ಯಪ್ರಿಯ ಮಲ್ಲಿನಾಥಯ್ಯ ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದ್ದಾರೆ.

ಭಕ್ತ, ಭಕ್ತರ ಲಕ್ಷಣ, ಮಹೇಶ ಮಹೇಶ್ವರರ ಸ್ವರೂಪ, ಶರಣರ ಲಕ್ಷಣ ಅವರ ಬದುಕಿನಲ್ಲಿ ಹಾಗೂ ಅವರ ವಚನಗಳಲ್ಲಿ ನಾವು ಕಾಣಬಹುದಾಗಿದೆ. ದೃಷ್ಟಿಗೆ ತಕ್ಕ ಸೃಷ್ಟಿಯೆಂಬಂತೆ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವಂತಹ ಧೋರಣೆಯನ್ನು ಈ ಶರಣರು ಹೊಂದಿದ್ದರು. ಗುರುವಿನಿಂದ ಬದುಕಿದೆ ಎಂಬ ನಿಲುವು ಅವರದ್ದಾಗಿತ್ತು ಎಂದು ತಿಳಿಸಿದರು.
ಶಿವಶರಣ ಜೋದರ ಮಾಯಣ್ಣನವರ ವಚನಗಳ ಅರ್ಥ ವಿವರಣೆ ನೀಡಿದ ಮುರುಘಾಮಠ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವೀರಭದ್ರಪ್ಪ ಎಂ. ಮಾತನಾಡಿ, ಜೋದರ ಮಾಯಣ್ಣ ಬಿಜ್ಜಳರ ಆಸ್ಥಾನದಲ್ಲಿ ಆನೆ ಪಡೆಯ ಮುಖ್ಯಸ್ಥನಾಗಿ, ಯೋಧನಾಗಿ ಕಾಯಕ ಮಾಡುತ್ತಿದ್ದರು.
ಇವರ ಕಾಲಮಾನ ೧೧೬೦. ಮೂರು ವಚನಗಳು ನಮಗೆ ಲಭ್ಯವಿದೆ. ಶಂಭುಸೋಮನಾಥಲಿಂಗ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಪುರಾತನರ ಸ್ಮರಣೆ, ನಡೆ-ನುಡಿ ನಿಷ್ಠೆ, ಗುರುವಚನದ ಮಹತ್ವವನ್ನು ಕಾಣಬಹುದು. ನಡೆ ನುಡಿ ಶುದ್ಧವಾಗಿರಬೇಕು. ವೈಯಾರದ ಕೃತಕದ ನಡೆ-ನುಡಿಯ ಕಲೆ ಸಲ್ಲದು. ಶರಣರು ಭಾಷೆಯ ಪರಿಪಾಲಕರು. ನಡೆ ಶ್ರದ್ಧೆ, ನುಡಿ ಶ್ರದ್ಧೆ, ನಿಷ್ಠೆಯಿಂದ ಬದುಕಿದವರು ಎಂದು ತಿಳಿಸಿದರು.
ಶಿವಶರಣ ಡಕ್ಕೆಯ ಬೊಮ್ಮಣ್ಣನವರ ವಚನಗಳ ಅರ್ಥ ವಿವರಣೆ ನೀಡಿದ ಎಸ್.ಜೆ.ಎಂ. ರೆಸಿಡೆನ್ಸಿಯಲ್ ಸ್ಕೂಲಿನ ಸಹ ಶಿಕ್ಷಕರಾದ ವೀಣಾ ಎಂ. ಮಾತನಾಡಿ, ಡಕ್ಕೆಯ ಬೊಮ್ಮಣ್ಣನವರು ಓರ್ವ ಜನಪದ ಕಲಾವಿದರು. ಇವರನ್ನು ಡಕ್ಕೆಯ ಮಾರಯ್ಯ ಅಂತಲೂ ಕರೆಯಲಾಗುತ್ತಿತ್ತು. ಅಲಂಕಾರ ಮಾಡಿಕೊಂಡು ತಲೆ ಮೇಲೆ ಮಾರಿ ಹೊತ್ತು ಡೊಳ್ಳು ಬಾರಿಸುತ್ತ ಬಿಕ್ಷಾಟನೆ ಮಾಡುವ ಶರಣರಾಗಿದ್ದರು.

ಇವರ ಕಾಲಮಾನ ೧೧೩೦. ಇವರ ೯೦ ವಚನಗಳು ನಮಗೆ ಲಭ್ಯವಿದೆ. ಕಾಲಾಂತಕ ಭೀಮೇಶ್ವರಲಿಂಗ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮ ಕಲೆಯ ವೇಷಭೂಷಣ, ಬಸವಾದಿ ಶರಣರ ಕುರಿತು ತಿಳಿಸಿದ್ದಾರೆ.
ಗುರುಲಿಂಗ ಜಂಗಮಕ್ಕೆ ಮೋಸ ಮಾಡದೇ ಶರೀರ, ಮನಸ್ಸು, ವಚನಗಳ ಮೂಲಕ ಶುದ್ಧವಾಗಿರುವ ಸದ್ಭಕ್ತನಿಗೆ ಭೀಮೇಶ್ವರ ಲಿಂಗವು ಕಾಲವನ್ನು ಗೆಲ್ಲುವ ಶಕ್ತಿಯನ್ನು ನೀಡುತ್ತದೆ ಎಂದು ತಿಳಿಯಬಹುದು.
ಗುರುದಕ್ಷಿಣೆಗೆ ಮೋಸ ಮಾಡದೇ ಇರುವುದು ಕರ್ಮದಿಂದ ಲಿಂಗಕ್ಕೆ ಮೋಸ ಮಾಡದೇ ಇರುವುದು. ಹಣಕ್ಕೆ ಮೋಸ ಮಾಡದೇ ಇರುವುದು. ಇದು ತ್ರಿಕರ್ಣಗಳಲ್ಲಿ ಶುದ್ಧವಾಗಿರುವವನಿಗೆ ಮಾತ್ರ ಸಾಧ್ಯ ಎಂದು ತಿಳಿದು ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು, ಹರಗುರು ಚರಮೂರ್ತಿಗಳು, ಗುರುಕುಲದ ವಿದ್ಯಾರ್ಥಿಗಳು, ವಿವಿಧ ಸಮಾಜದವರು, ಸಂಘ-ಸಂಸ್ಥೆಗಳ ಮುಖಂಡರುಗಳು, ಮಠದ ಭಕ್ತರು ಭಾಗವಹಿಸಿದ್ದರು.

ಉಮೇಶ ಪತ್ತಾರ ಪ್ರಾರ್ಥಿಸಿದರು. ಪ್ರೊ. ಅನುಷಾ ವಿ. ನಿರೂಪಿಸಿದರು. ಪಲ್ಲವಿ ಎಂ. ಸ್ವಾಗತಿಸಿದರು. ಡಾ. ಲೋಕೇಶ್ ಎಚ್.ಜೆ. ವಂದಿಸಿದರು. ನವೀನಕುಮಾರ್ ವಚನ ಪಠಿಸಿದರು.
