ವಚನತತ್ವಗಳನ್ನು ಉಳಿಸಲು ಸಮರಧೀರ ಹೋರಾಟಕ್ಕೆ ಸಜ್ಜಾಗಲೇಬೇಕಾಗುತ್ತದೆ

ಕೆ. ನೀಲಾ
ಕೆ. ನೀಲಾ

ವಚನ ಚಳುವಳಿಯ ಆಶಯಗಳನ್ನು ನಾಶ ಮಾಡಲು ಅನೇಕ ವರ್ಷಗಳಿಂದ ಬಾಲಗಂಗಾಧರ, ಡಂಕಿನ ಝಳಕಿ, ರಾಜಾರಾಮ್ ಎನ್ನುವ ಸನಾತನಿ ಚಿಂತಕರು ಬಹಳ ಹೈರಾಣಾಗುತ್ತಿದ್ದಾರೆ.

ಈಗ ನೇರವಾಗಿ ಬಿಜೆಪಿಯೇ ಆಖಾಡಕ್ಕಿಳಿವಂತೆ ತೀರ್ಮಾನವಾಗಿದ್ದು ಬಹುಶಃ ನಾಗಪುರದ ಆರ್ ಎಸ್ ಎಸ್ ಕಚೇರಿಯಲ್ಲಿ. ಆದ್ದರಿಂದಲೇ ವಚನ ದರ್ಶನ ಎಂಬ ಕೃತಿಯ ಬಿಡುಗಡೆಯನ್ನು ಲಕ್ಷಾಂತರ ಹಣ ಖರ್ಚು ಮಾಡಿ ರಾಜ್ಯದ ತುಂಬ ಪುಸ್ತಕ ಬಿಡುಗಡೆ ಅಭಿಯಾನವೇ ನಡೆಸಲಾಗುತ್ತಿದೆ. ಬಿಜೆಪಿಯ ಬಿಎಲ್ ಸಂತೋಷ, ಸಿಟಿ ರವಿ ಮುಂತಾದವರು ನೇರವಾಗಿ ಭಾಗವಹಿಸುತ್ತಿದ್ದಾರೆ.

ಜಾತಿ ತಾರತಮ್ಯದ ವಿರುದ್ದ ವಚನಕಾರರು ಧ್ವನಿಯೇ ಎತ್ತಿಲ್ಲ ಎಂಬುದು ಅವರ ಮೊದಲ ವಾದ. ಹೀಗೆ ಒಂದೊಂದೇ ಹೆಜ್ಜೆ ಕರ್ಮಸಿದ್ಧಾಂತವನ್ನು ಮುನ್ನೆಲೆ ತರುತ್ತ ಲಿಂಗಾಯತ ಸಮುದಾಯವನ್ನು ಪ್ರವೇಶಿಸುತ್ತ ವೈದಿಕ ಸಂಸ್ಕೃತಿಯ ಪ್ರೋಕ್ಷಣೆ ಮಾಡುತ್ತ ಬರುತ್ತಿದೆ ಆರ್ ಎಸ್ ಎಸ್. ನಿನ್ನೆ ಕಲಬುರಗಿಯಲ್ಲಿ ವಚನ ದರ್ಶನ ಕೃತಿ ಬಿಡುಗಡೆ ಇತ್ತು.

ಇಬ್ಬರು ಮುಖ್ಯ ಅತಿಥಿಗಳು ವಿಲಾಸವತಿ ಖೂಬಾ ಮತ್ತು ದ್ರಾಕ್ಷಾಯಣಮ್ಮ ಅಪ್ಪ ಇವರು ಗೈರು ಹಾಜರಾದರು. ಪುಸ್ತಕದ ಮೇಲೆ ಬಿಲ್ಲು ಬಾಣಗಳು ಬಂದಿವೆ. ಬಸವಣ್ಣನ ಭಾವಚಿತ್ರವೇ ಋಷಿ ಮುನಿಗಳಂತೆ ಪ್ರಿಂಟಿಸಿದ್ದಾರೆ.
ಹೀಗೆ ಅನೇಕ ಸಾಂಸ್ಕೃತಿಕ ವಿರೂಪಗಳನ್ನು ಹೇರಲಾಗಿದೆ. ತ್ಯಾಗ ಬಲಿದಾನದ ಮೂಲಕ ಸಮತೆಯ ನಾಡು ಕಟ್ಟಲು ಅವೈದಿಕ ಚಳುವಳಿ ಕಟ್ಟಿಕೊಟ್ಟ ಶರಣರ ಚಿಂತನೆಗಳಿಗೆ ಸನಾತನ ಬಾಣವು ಗುರಿಯಿಟ್ಟು ಹೆದೆಯೇರಿಸಿದಾಗ ವಚನತತ್ವಗಳನ್ನು ಉಳಿಸಲು ಸಮರಧೀರ ಹೋರಾಟಕ್ಕೆ ಸಜ್ಜಾಗಲೇಬೇಕಾಗುತ್ತದೆ.

ಅಂದು ಶರಣರನ್ನು ಕೊಂದವರು ಇದೇ ವೈದಿಕ ಸನಾತನಿಗಳು. ಅವೈಜ್ಞಾನಿಕ ಅಮಾನವೀಯ ಜಾತಿ ವ್ಯವಸ್ಥೆಯನ್ನು ಕಿತ್ತೊಗೆದು ತಮ್ಮ ಮಕ್ಕಳ ಮದುವೆ ನೆರವೇರಿಸಿದ ಹರಳಯ್ಯ ಮಧುವರಸ ದಂಪತಿಗಳ ಕಣ್ಣು ಕಿತ್ತು ಕಲ್ಯಾಣದ ಪಟ್ಟಣದ ತುಂಬ ಎಳೆಹೂಟೆ ಮಾಡಿದ್ದು ಇದೇ ಕುಟಿಲ ಕುತಂತ್ರ ಕಾರಸ್ತಾನದ ಸನಾತನಿಗಳು.

ಅಂದು ನರಳುತ್ತಲೇ ವಚನತತ್ವಗಳಿಗೆ ಜೈಕಾರ ಹೇಳಿದ ಶರಣರ ರಕ್ತವು ಕಲ್ಯಾಣದ ನೆಲದಂಗಳಕ್ಕೆ ಕ್ರಾಂತಿ ಚಿತ್ತಾರವನ್ನು ಬಿಡಿಸಿದೆ. ಭವಿಷ್ಯದಲ್ಲಿ ಎರಗುವ ಅಪಾಯಗಳನ್ನು ಬಿತ್ತರಿಸಿದೆ. ತ್ಯಾಗ ಬಲಿದಾನದ ಮೂಲಕವೇ ಮಾನವೀಯ ಸಂಸ್ಕೃತಿ ಕಟ್ಟಲು ಅಂದೆ ಶರಣರು ಅರುಹಿದ್ದಾರೆ.

ಪುರಾವೆಂಬುದು ಪುಂಡರ ಗೋಷ್ಠಿ, ವೇದವೆಂಬುದು ಓದಿನ ಮಾತು, ತರ್ಕವೆಂಬುದು ತಗರ ಹೋರಟೆ ಎಂಬ ಸತ್ಯವನ್ನು ಮನನ ಮಾಡಿಸಿದ್ದಾರೆ. ಹೀಗೆ ಚಾತುರ್ವರ್ಣಕ್ಕೆ ಕರ್ಮಸಿದ್ಧಾಂತಕ್ಕೆ ತಾತ್ವಿಕ ಬಲದಿಂದ ಅತ್ಯಂತ ಸಮರಧೀರತೆಯಿಂದ ಸಡ್ಡು ಹೊಡೆದಿದ್ದಾರೆ ನಮ್ಮ ಶರಣರು. ಎಲ್ಲ ತಾರತಮ್ಯಗಳನ್ನು ಗಟ್ಟಿಗೊಳಿಸುತ್ತ ಇಡೀ ಸಮಾಜವೇ ಬ್ರಾಹ್ಮಣ್ಯದ ಅಡಿಯಲ್ಲಿ ನರಳುವಂತೆ ನಿಯಮಗಳನ್ನು ಕಟ್ಟಿಕೊಟ್ಟ ಅತ್ಯಂತ ಕ್ರೂರ ಸಿದ್ಧಾಂತದ ಮನುಸ್ಮೃತಿಯನ್ನು ಪ್ರತಿಪಾದಿಸುವ ಈ ಆರ್ ಎಸ್ ಎಸ್ ಮತ್ತದ ರಾಜಕೀಯ ವಿಂಗ್ (ವಿಭಾಗ) ಬಿಜೆಪಿಯ ಈ ಕುತಂತ್ರವನ್ನು ಹಿಮ್ಮೆಟ್ಟಿಸಲು ನಿಜ ಶರಣ ಸಂಗಾತಿಗಳು ಟೊಂಕ ಕಟ್ಟಿ ನಿಲ್ಲಲೇಬೇಕಿದೆ. ಈ ಸಂಘರ್ಷದ ಹಾದಿಯಲ್ಲಿ ಮುನ್ನಡೆಯಲೇಬೇಕಿದೆ.

Share This Article
Leave a comment

Leave a Reply

Your email address will not be published. Required fields are marked *

ಕೆ ನೀಲಾ ಅವರು ಕಲಬುರಗಿಯಲ್ಲಿರುವ ಚಿಂತಕಿ, ಹೋರಾಟಗಾರ್ತಿ