’12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡು ಮಧ್ಯಾಹ್ನವೇ ವಚನಗಳ ಸಂಗ್ರಹವಿದ್ದ ಶಾಂತರಸರ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ವಚನ ಸಾಹಿತ್ಯ ಸುಟ್ಟು ಬೂದಿ ಮಾಡಿದಂಥ’ ಜನರ ತಾತ್ವಿಕ ಸಂತಾನ ಈಗ ವಚನಗಳ ಬೂದಿಯಲ್ಲಿ ದರ್ಶನ ಹುಡುಕಲು ಶುರು ಮಾಡಿದೆ ಎಂದು ಚಿಂತಕ ಆರ್.ಕೆ. ಹುಡಗಿ ಹೇಳಿದರು.
“ಆಗ ವಚನ ಸುಟ್ಟರೇಕೆ? ಈಗೇಕೆ ಮತ್ತೆ ಪ್ರೀತಿ ಹುಟ್ಟಿದೆ?” ಎಂದು ಪ್ರಶ್ನಿಸಿದರು ಎಂದು ಪ್ರಜಾವಾಣಿ ವರದಿ ಮಾಡಿದೆ.
ಅವರು ರವಿವಾರ ಕಲಬುರ್ಗಿಯಲ್ಲಿ ನಡೆದ ಬಸವಪರ ಸಂಘಟನೆಗಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ನಾವು ಈ ಪುಸ್ತಕ ಸುಡಬಹುದು. ಆದರೆ, ನಾವು ಫ್ಯಾಸಿಸ್ಟರಲ್ಲ. ಪುಸ್ತಕಗಳನ್ನು ಅಪಾರವಾಗಿ ಪ್ರೀತಿಸುವವರು. ಆದರೆ ಅದರೊಳಗಿನ ವಿಚಾರವನ್ನು ಆಧಾರಭೂತವಾಗಿ ತರ್ಕಬದ್ಧವಾಗಿ ಧಿಕ್ಕರಿಸುತ್ತೇವೆ. ಈ ಸಂಬಂಧ ಕಲ್ಬುರ್ಗಿಯಲ್ಲಿ ಶೀಘ್ರವೇ ವಿಸ್ತೃತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಆ ವಿಚಾರ ಸಂಕಿರಣಕ್ಕೆ ಆರೆಸ್ಸೆಸ್ ನವರು ಬರಲಿ, ವಚನ ಸಾಹಿತ್ಯದ ಬಗೆಗಿನ ತಮ್ಮ ವಿಚಾರ ಮಂಡಿಸಲಿ’ ಎಂದು ಸವಾಲು ಹಾಕಿದರು.
‘ಭಾರತೀಯ ಸಂಸ್ಕೃತಿ ಎಂಬುದೇ ನಾನ್ಸೆನ್ಸ್, ಅದರ ಹೆಸರಲ್ಲಿ ವೈದಿಕ ಸಂಸ್ಕೃತಿಯನ್ನು ನಮ್ಮ ತಲೆ ಮೇಲೆ ಹೇರಲಾಗುತ್ತಿದೆ ಎಂದ ಅವರು, ಭಾರತೀಯ ಸಂಸ್ಕೃತಿಗಳು ಎಂದು ಹೇಳುವುದು ಸರಿಯಾದದ್ದು’ ಎಂದು ಪ್ರತಿಪಾದಿಸಿದರು.