ಮಠಗಳಿಗಿಂತ ಜನರ ಮನಸ್ಸು ಕಟ್ಟುತ್ತಿರುವ ಬಸವತತ್ವದ ದಂಡನಾಯಕ

ಫೆಬ್ರವರಿ 24 ಪೂಜ್ಯ ನಿಜಗುಣಾನಂದ ಸ್ವಾಮೀಜಿ ಅವರ 63ನೇ ಜನ್ಮದಿನ

“ಆನು ಎನ್ನ ಅರಿತೆನೆಂದಾದರೆ ಅದು ನಿಮ್ಮ ಕರುಣೆ

ಆನು ಶರಣರ ಬೆರೆತೆನೆಂದಾದರೆ ಅದು ನಿಮ್ಮ ಕರುಣೆ

ಆನು ಎನ್ನೊಳಗಿಳಿವ ಚಟಕ್ಕೆ ಬಿದ್ದೆನೆಂದರೆ

ಅದು ನಿಮ್ಮ ಕರುಣೆ

ಸದುವಿನಯ, ಸದಾಚಾರ, ಸಂಯಮವ ಪಡೆದೆನೆಂದರದು ನಿಮ್ಮ ಕರುಣೆಯಯ್ಯಾ

ಅಯ್ಯಾ ನಿಜಗುಣ ಪ್ರಭುವೇ

ನಿಮ್ಮ ಸಂಗದಲಿ ಆನು ಸಂತೃಪ್ತನಾದೆನಯ್ಯಾ”

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದಿಕ ಸಂಪ್ರದಾಯದ ಕುಟುಂಬದಲ್ಲಿ ಫೆಬ್ರವರಿ 24 ರಂದು 7ನೇ ಮಗುವಾಗಿ ಮಡಿಕೇರಿಯಲ್ಲಿ ಜನಿಸಿ ಕನ್ನಡ ನಾಡಿನಾದ್ಯಂತ ಬಸವಣ್ಣನವರ ವಿಚಾರಧಾರೆಗಳನ್ನು, ವೈಚಾರಿಕ ಚಿಂತನೆಗಳನ್ನು ಪ್ರಚುರಪಡಿಸುತ್ತ ಖ್ಯಾತ ಪ್ರವಚನಕಾರರಾಗಿ ಹೆಸರಾದ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಬಸವ ಧರ್ಮ ಪ್ರಚಾರಕರಾಗಿ ಹೆಸರಾಗಿದ್ದಾರೆ.

ಇಂದು ನಿಜಗುಣಾನಂದ ಶ್ರೀಗಳ 63ನೇ ಜನ್ಮದಿನ.  ತಂದೆ ತಾಯಿಗಳು ತಮ್ಮ ವೈದಿಕ ಸಂಪ್ರದಾಯದಂತೆ ‘ಹರೀಶ’ ನೆಂದು ಪ್ರೀತಿಯಿಂದ ನಾಮಕರಣ ಮಾಡಿದರು. ಮೈಸೂರಿನ ‘ವಾಣಿ ವಿಲಾಸ’ ಅರಸು ಶಾಲೆಯಲ್ಲಿ ಪ್ರಾಥಮಿಕ ಮಾಧ್ಯಮಿಕ ಹಾಗೂ ಕಾಲೇಜು ವ್ಯಾಸಂಗ ಪೂರೈಸಿದರು. ತಮ್ಮ ಬಿಡುವಿನ ದಿನಗಳಲ್ಲಿ ಪವಿತ್ರ ತಪೋನುಷ್ಠಾನ, ಕ್ಷೇತ್ರಗಳ ದರ್ಶನ, ಸ್ವಾಮಿ ವಿವೇಕಾನಂದ, ಬುದ್ಧ, ಮಹಾವೀರ, ಏಸುಕ್ರಿಸ್ತ, ಬಸವಣ್ಣ, ಪೈಗಂಬರರ ಪವಿತ್ರ ಜೀವನ ತತ್ವಗಳಿಂದ ಪ್ರಭಾವಿತಗೊಂಡ ನಿಜಗುಣಾನಂದರ ಮನಸ್ಸು ಆಧ್ಯಾತ್ಮ ಜೀವನದತ್ತ ತಿರುಗಿತು. ಸದಾ ಶಿವಚಿಂತೆ, ಶಿವಧ್ಯಾನ ಶಿವಾರ್ಚನೆಯಲ್ಲಿರುವ ಮಗನನ್ನು ಕಂಡ ತಂದೆ ಸಿಡಿಮಿಡಿಗೊಳ್ಳುತ್ತಿದ್ದರೆ, ತಾಯಿ ಮತ್ತು ಅತ್ತೆ ಅಕ್ಕರೆಯಿಂದ ಪ್ರೋತ್ಸಾಹಿಸಿ ಬೆನ್ನು ತಟ್ಟುತ್ತಿದ್ದರು.

‘ಆರಲುಬಂದ ಕೆರೆಗೆ ತೊರೆಬಂದು ಹಾಯ್ದಂತೆ’  ಹನ್ನೆರಡನೇ ಶತಮಾನದ ಶರಣ ಚಳುವಳಿ, ಕಲ್ಯಾಣ ಕ್ರಾಂತಿಯ ನಂತರ ಮನುಷ್ಯತ್ವ ಪ್ರತಿಪಾದನೆಯ ಕಾಯಕ ಮತ್ತು ದಾಸೋಹ ತತ್ವದ ಅಡಿಯಲ್ಲಿ ನಿರ್ಮಾಣಗೊಂಡ ಬಸವಣ್ಣನವರ ಆಶಯಗಳು ಪುರೋಹಿತಶಾಹಿಗಳ ಕುತಂತ್ರದಿಂದ ಸ್ಥಗಿತಗೊಂಡಿತ್ತು. ‘ನಂತರದ ಅಫ್ಘಾನ್ ಮೂಲದ ಮೊಘಲರು, ವಿಜಾಪೂರದ ಆದಿಲ್ ಶಾಹಿಗಳ ಆಡಳಿತಾವಧಿಯಲ್ಲಿ  ನಿಸ್ತೇಜಗೊಂಡಿದ್ದ ಲಿಂಗಾಯತ ಧರ್ಮಕ್ಕೆ ಮರುಜೀವ ಕೊಟ್ಟಿದ್ದು ಪ್ರವಚನ ಪಿತಾಮಹ ಬಸವಧರ್ಮ ಪೀಠದ ಪ್ರಥಮ ಜಗದ್ಗುರು ಲಿಂಗೈಕ್ಯ ಪೂಜ್ಯಶ್ರೀ ಲಿಂಗಾನಂದ ಮಹಾಸ್ವಾಮಿಗಳು.

ಮೈಸೂರಿನ ಟೌನ್ ಹಾಲ್ ನಲ್ಲಿ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ‘ಬಸವಾದಿ ಶರಣರ ತತ್ವ ಪ್ರವಚನ’ ಹೇಳುತ್ತಿದ್ದರು. ಖಚಿತವಾದ ತಾತ್ವಿಕ ಚಿಂತನೆ, ಆಳವಾದ ಅಧ್ಯಯನ, ಅನುಭಾವ ನೇರ ನುಡಿಗಳಿಂದ ಶರಣರ ತತ್ವಚಿಂತನೆಗಳನ್ನು ಹೃದಯಕ್ಕೆ ನಾಟುವಂತೆ ಮನದಾಳದಲ್ಲಿ ಉಳಿಯುವಂತೆ ಪ್ರವಚನಗೈಯುತ್ತಿದ್ದರು.

ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ‘ಬಸವ ತತ್ವ’ ಪ್ರಚುರಪಡಿಸಿ ಬಸವ ಧ್ವಜ ಹಾರಿಸಿದ ಕೀರ್ತಿ ಅವರದು. ಈ ಪ್ರವಚನಕ್ಕೆ ನಿಜಗುಣಾನಂದ ಶ್ರೀಗಳು ನಿತ್ಯವೂ ಬಂದು ಎಲ್ಲರಿಗಿಂತಲೂ ಮುಂದಿನ ಸಾಲಿನಲ್ಲಿಯೇ ಕುಳಿತು ಮೈತುಂಬಾ ಕಿವಿಯಾಗಿ ಭಾವಪರವಶರಾಗಿ ಪ್ರವಚನವನ್ನು ಆಲಿಸುತ್ತಿದ್ದರು. ಪೂಜ್ಯ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳಿಗೆ ಹಲವು ಪ್ರಶ್ನೆಗಳನ್ನು ಹಾಕುವುದರೊಂದಿಗೆ ಮನದ ಸಂಶಯವನ್ನು ನಿವಾರಿಸಿಕೊಳ್ಳುತ್ತಿದ್ದರು.

ಅಪ್ಪ ಬಸವಣ್ಣನವರ ಕಾಯಕತತ್ವ, ದಾಸೋಹ ನಿಷ್ಠೆ, ಜಾತ್ಯಾತೀತ ಸಮಾಜ ರಚನೆ, ಸಮಾನತೆ, ವಿಶ್ವ ಬಂಧುತ್ವ, ಏಕದೇವೋಪಾಸನೆ, ಮೂಢನಂಬಿಕೆಗಳನ್ನು ಅಳಿಸುವ ವೈಚಾರಿಕತೆ, ಅನುಭವ ಮಂಟಪದ ಆಧ್ಯಾತ್ಮ ಚಿಂತನ ಗೋಷ್ಠಿ, ಕಲ್ಯಾಣ ಕ್ರಾಂತಿ ಈ ಎಲ್ಲವೂ ಇವರ ಮನದಲ್ಲಿ ಅಚ್ಚಾಗುವ ಮೂಲಕ ಬಸವಣ್ಣನವರ ವಚನಗಳು ಅವರ ಜೀವನದಲ್ಲಿ ಹೊಸದೊಂದು ಬೆಳಕು ಮೂಡಿಸಿ ಲಿಂಗಾನಂದರನ್ನೇ ತಮ್ಮ ಗುರುಗಳನ್ನಾಗಿ ಸ್ವೀಕರಿಸಿದರು.

ವಿಶ್ವಕಲ್ಯಾಣ ಮಿಶನ್’ ದಲ್ಲಿ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಆಧ್ಯಾತ್ಮ ಪಾಠ ಪ್ರವಚನಗಳು ನಿತ್ಯವೂ ನಡೆಯುತ್ತಿದ್ದವು. ಇವುಗಳ ನಂತರ ಬಸವಾದಿ ಪ್ರಮಥರ ತತ್ವ ಪ್ರಸಾರ ಸೇವೆಗೆ ಆಣಿಯಾಗುವುದು, ಈ ಎಲ್ಲವೂಗಳಲ್ಲಿ ಅತ್ಯಂತ ನಿಷ್ಠೆಯಿಂದ ತನ್ನನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು.

ಪೂಜ್ಯರ ಪ್ರವಚನದಲ್ಲಿ ಪ್ರತಿಯೊಂದು ಹಂತದಲ್ಲಿ ಸೇವೆಗೈದು ಗುರು ಮೆಚ್ಚುಗೆಗೆ ಪಾತ್ರರಾದರು. ಪೂಜ್ಯ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳು ಶಿಷ್ಯನ ಇಚ್ಛೆಯಂತೆ ಲಿಂಗದೀಕ್ಷೆಯಿತ್ತು ಜನ್ಮನಾಮ ಹರೀಶ ಬದಲಾಗಿ ‘ನಿಜಗುಣಾನಂದ’ ನೆಂದು ನಾಮಕರಣ ಮಾಡಿ ‘ನರಜನ್ಮವ ಕಳೆದು ಹರಜನ್ಮವ’ ಮಾಡಿದರು. ಪೂಜ್ಯ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಕರಕಮಲ ಸಂಜಾತರಾಗಿ ಬೆಳೆದು ನಿಜಗುಣಾನಂದರು ಬಸವ ತತ್ವ ಪ್ರಸಾರಕ್ಕೆ ಅಣಿಯಾದರು.

ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೈಯಲು ಶ್ರೀ ನಿಜಗುಣಾನಂದರಿಗೆ ಎಲ್ಲಿಲ್ಲದ ಉತ್ಸಾಹ, ಕರ್ನಾಟಕದಾದ್ಯಂತ ಪೂಜ್ಯ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳೊಂದಿಗೆ ಸಂಚಾರಗೈಯುತ್ತ, ಪ್ರವಚನ ಪೂರ್ವಸಿದ್ಧತೆ ಮಾಡುವುದರೊಂದಿಗೆ ಗುರುಸೇವೆಗೈದರು, ಅವರೊಂದಿಗೆ ಪ್ರವಚನಕ್ಕೆ ಹೋಗಿ ‘ಶರಣರ ಅನುಭವ” ವನ್ನು ಹೆಚ್ಚಿಸಿಕೊಂಡರು.

ಅನೇಕ ಸಾಧಕರೊಂದಿಗೆ ಹರಗುರು ಚರಮೂರ್ತಿಗಳೊಂದಿಗೆ ವಿನಯ ಪೂರ್ವಕವಾಗಿ ಚರ್ಚಿಸಿ ಜ್ಞಾನದ ಆಳ ವಿಸ್ತಾರಗಳನ್ನು ಹೆಚ್ಚಿಸಿಕೊಂಡರು. ಕನ್ನಡ, ತಮಿಳು, ತೆಲಗು, ಕೊಡಗು, ಮಲಯಾಳಂ, ಹಿಂದಿ, ಭಾಷೆಗಳನ್ನು ಚೆನ್ನಾಗಿ ಬಲ್ಲ ಶ್ರೀಗಳು, ಇವರ ಸಂಚಾಲಕತ್ವದಲ್ಲಿ ಬಸವ ಧರ್ಮ ಸಮ್ಮೇಳನಗಳು ಅತ್ಯಂತ ಯಶಸ್ವಿಯಾದವು. ಇವುಗಳಲ್ಲಿ ಶ್ರೀಗಳ ಕಾರ್ಯಕ್ಷಮತೆ ಶ್ಲಾಘನೀಯವಾದರು. ಬಸವ ಧರ್ಮ ಪೀಠಕ್ಕೆ ಶರಣ ತತ್ವ ಪ್ರಸಾರಕ್ಕೆ ಅವಿಶ್ರಾಂತವಾಗಿ ಸೇವೆ ಸಲ್ಲಿಸುವುದನ್ನು ಕಂಡು ಪೂಜ್ಯ ಜಗದ್ಗುರು ಶ್ರೀ ಲಿಂಗಾನಂದ ಮಹಾಸ್ವಾಮಿಗಳು. ಶ್ರೀ ನಿಜಗುಣಾನಂದರಿಗೆ ಜಂಗಮ ದೀಕ್ಷೆ ನೀಡುವ ಸಂಕಲ್ಪ ಮಾಡಿದರು. ಆ ಸಂಕಲ್ಪ ಅವರಿಂದ ಆಗಲಿಲ್ಲ. ಪೂಜ್ಯರು ಲಿಂಗೈಕ್ಯರಾದರು.

ಮಾತೃವಾತ್ಸಲ್ಯದ ಜಗದ್ಗುರು ಪೂಜ್ಯಶ್ರೀ ಲಿಂಗಾನಂದ ಮಹಾಸ್ವಾಮಿಗಳ ಅಗಲಿಕೆಯಿಂದ ದೃತಿಗೆಡದ ಶ್ರೀಗಳು ‘ನಾಳೆ ಬರುವುದು ನಮಗಿಂದೇ ಬರಲಿ, ಇಂದು ಬರುವುದು ನಮಗೀಗಲೇ ಬರಲಿ’, ಎಂಬುದನ್ನು ಅರಿತು ಮುನ್ನುಗ್ಗಿದರು. ಕನ್ನಡನಾಡಿನ ಬಸವತತ್ವ ಪೂಜ್ಯರು ಹಾಗೂ ತ್ರಿವಿಧ ದಾಸೋಹಿ, ಕನ್ನಡದ ಕುಲಗುರು, ಹಾಗೂ ಸಾಮಾನ್ಯರ ಸ್ವಾಮಿಜಿ ಗದುಗಿನ ಪೂಜ್ಯಶ್ರೀ ಜಗದ್ಗುರು ಡಾ|| ಸಿದ್ಧಲಿಂಗ ಮಹಾಸ್ವಾಮಿಗಳು ಆಶ್ರಯ ನೀಡಿದುದಷ್ಟೇ ಅಲ್ಲ, ಅಣ್ಣಿಗೇರಿಯಲ್ಲಿರುವ ತೋಂಟದಾರ್ಯ ಶಾಖಾ ಮಠವನ್ನು ಬಿಟ್ಟುಕೊಟ್ಟು ಹೆಚ್ಚಿನ ಸೇವೆ ನಿಮ್ಮಿಂದ ಸಮಾಜಕ್ಕೆ ಸಿಗಲಿ ಎಂದು ಆಶೀರ್ವದಿಸಿದರು.

ಭಕ್ತ ಜನಕೋಟಿ ತಮ್ಮ ತಮ್ಮ ಗ್ರಾಮ ಪಟ್ಟಣಗಳಲ್ಲಿ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರವಚನ ಕಾರ್ಯಕ್ರಮಕ್ಕಾಗಿ ದುಂಬಾಲು ಬಿದ್ದರು. ಶ್ರೀಗಳು ಆಂದ್ರ, ತಮಿಳುನಾಡು, ಕೇರಳ ನಾಡುಗಳಲ್ಲಿ ಬಸವಾದಿ ಪ್ರಮಥರ ತತ್ವಗಳನ್ನು ಬಿಂಬಿಸುವ ‘ಶರಣರ ಜೀವನ ದರ್ಶನ’ ಪ್ರವಚನದಿಂದ ಜನತೆಯ ಮನಸ್ಸನ್ನು ಗೆದ್ದರು, ‘ಕಾಣದ ದೇವರನ್ನು ಪ್ರೀತಿಸುವುದಕ್ಕಿಂತ ಕಾಣುವ ಮನುಷ್ಯನನ್ನು ಪ್ರೀತಿಯಿಂದ ಕಾಣುವುದು ಶ್ರೀಗಳ ಧರ್ಮ’, ‘ಸಮಯಕ್ಕೆ ಮಹತ್ವ ಕೊಡದವರು ದೇವರಿಗೆ ಮಹತ್ವ ಕೊಡಲಾರರು, ‘ಮಠಗಳನ್ನು ಕಟ್ಟುವುದಕ್ಕಿಂತ ಜನರ ಮನಸ್ಸುಗಳನ್ನು ಕಟ್ಟಬೇಕಾಗಿದೆ’. ನೈತಿಕ ಇಲ್ಲದೆ ಖಾವಿ, ಕರ್ತವ್ಯ ಮರೆತಿರುವ ಖಾಕಿಗಳಿಂದ ದೇಶ ಹಾಳಾಗುತ್ತಿದೆ’, ವಿಶ್ವ ಗುರು ಬಸವಣ್ಣನವರ ಮಾರ್ಗ ದರ್ಶನದಿಂದಲೇ ಭಾರತದ ಉದ್ದಾರ. ಭಾವೈಕ್ಯತೆ ಸಾಧ್ಯ.

ಇಂತಹ ಪ್ರಗತಿಪರ ವಿಚಾರಧಾರೆಗಳಿಂದ ಧರ್ಮ ಸಮಾಜವನ್ನು ಒಂದು ಹೊಸ ದಿಕ್ಕಿನತ್ತ ನಡೆಸುವ ಶ್ರೀಗಳು, ಈ ಕಾರಣಕ್ಕಾಗಿಯೇ ನಾಡಿನಲ್ಲೆಲ್ಲಾ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರವಚನದ ಮಾತೆ ಮಾತು! ಚರ್ಚೆಯೇ ಚರ್ಚೆ!!

ಬೈಲೂರು ಗ್ರಾಮ ಪರಿವರ್ತನೆ:

ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರವಚನವನ್ನಾಲಿಸಿದ ಸ್ವಾತಂತ್ರ್ಯ ಹೋರಾಟದ ಪ್ರಥಮ ಬೆಳ್ಳಿ ಚುಕ್ಕಿ, ವೀರರಾಣಿ ಚನ್ನಮ್ಮನ ನಾಡಿನ ಬೆಳಗಾವಿ ಜಿಲ್ಲೆಯ ಬೈಲೂರ ಗ್ರಾಮದ ಯುವಕರು ತಮ್ಮೂರಲ್ಲಿ ಪ್ರವಚನ ನೀಡುವಂತೆ ವಿನಂತಿಸಿಕೊಂಡರು. ಪೂಜ್ಯರು ಒಪ್ಪಿ ಪ್ರವಚನ ಪ್ರಾರಂಭಿಸಿದರು. ಯುವಕರ ಮನ ಪರಿವರ್ತಿತವಾಯಿತು. ಧರ್ಮ, ಸಾಮಾಜಿಕ ಕಳಕಳಿಯ ಬಗ್ಗೆ ಒಲವು ಮೂಡಿತು. ವ್ಯಸನ ಮುಕ್ತ ಸಮಾಜ, ಧಾರ್ಮಿಕ, ಸಾಮಾಜಿಕ, ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೆಸೆದು ಇದರ ಮಹತ್ವವನ್ನರಿತರು, ಊರಿನ ಹಿರಿಯರನ್ನು ಪೂಜ್ಯರ ಸಮ್ಮುಖದಲ್ಲಿ ಕೂಡಿಸಿ ‘ಬಸವ ಬೆಳಗು ಪ್ರಸಾರ ಸಮಿತಿ’ಯನ್ನು ಕಟ್ಟಿದರು.

‘ಶ್ರೀ ವಿಜಯ ಯುವಕ ಮಂಡಳ ಸೇವಾ ಸಂಘದಿಂದ ಗ್ರಾಮದಲ್ಲಿ ನಡೆಯುವ ಶ್ರೀ ಚನ್ನಬಸವೇಶ್ವರ ರಥೋತ್ಸವಕ್ಕೆ ಬೆಂಡು ಬೆತ್ತಾಸು, ಹಣ್ಣು-ಹಂಪಲ, ಉತ್ತತ್ತಿ, ಮುಂತಾದವುಗಳನ್ನು ತೇರಿನ ಮೇಲೆ ಹಾರಿಸುವುದನ್ನು ನಿಲ್ಲಿಸಿದರು. ಆ ಎಲ್ಲ ಪದಾರ್ಥಗಳನ್ನು ಒಂದು ಕಡೆ ಹಾಕಿಸಿ ಶ್ರೀ ಚನ್ನಬಸವೇಶ್ವರ ಪ್ರಸಾದವೆಂದು ಹಂಚಿದರು.

ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರೇರಣೆಯಿಂದ ಗ್ರಾಮದ ರಸ್ತೆ, ಬೀದಿಗಳ ನೈರ್ಮಲ್ಯ, ಮನೆಗಳಲ್ಲಿ ಶೌಚಾಲಯ ನಿರ್ಮಾಣ, ವೈಯುಕ್ತಿಕ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ತಿಳಿ ಹೇಳಿದುದಷ್ಟೇಯಲ್ಲದೇ, ಕಸದ ತೊಟ್ಟಿಗಳನ್ನು ನಿರ್ಮಿಸಿದರು. ಬೀದಿ ದೀಪಗಳ ವ್ಯವಸ್ಥೆಯಾಯಿತು, ಒಂದೊಂದು ಬೀದಿಗೂ ಒಬ್ಬೊಬ್ಬ ಧಾರ್ಮಿಕ ಪುರುಷ, ಶರಣ ಸಂತರ, ರಾಷ್ಟ್ರನಾಯಕರ, ಸಮಾಜ ಸೇವಕರ, ಕವಿ ಮುಂಗವರ ನಾಮಫಲಕಗಳನ್ನು ನೆಟ್ಟಿದ್ದಾರೆ.

ಜಾತಿ, ಮತ, ಪಂಥ, ಲಿಂಗ ಭೇದ ಮರೆತು ಎಲ್ಲರೂ ಒಂದಾಗಿ ವಿಜಯ ಯುವಕ ಮಂಡಳ ಹಾಗೂ ಬಸವ ಬೆಳಗು ಪ್ರಸಾರ ಸಮಿತಿಯ ಎಲ್ಲ ಸದಸ್ಯರು ವಿದಾಯಕ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಬಸ್ಸಿಳಿದು ಬೈಲೂರು ಗ್ರಾಮ ಪ್ರವೇಶಿಸುವುದು, ಶ್ರೀ ಜಗಜ್ಯೋತಿ ಬಸವೇಶ್ವರ ಮಾರ್ಗದಿಂದಲೆ, ಬಲಕ್ಕಿರುವುದೇ ನುಲಿನ ಚಂದಯ್ಯನ ಮಾರ್ಗ, ಎಡಕ್ಕಿರುವುದೇ ವೀರರಾಣಿ ಕಿತ್ತೂರು ಚನ್ನಮ್ಮ ಮಾರ್ಗ, ಹೀಗೆ ಬಸವಾದಿ ಪ್ರಮಥರು 12ನೇ ಶತಮಾನದಲ್ಲಿ ಕಟ್ಟಿದ ‘ಕಲ್ಯಾಣ ನಗರ’ ವನ್ನು ಪ್ರವೇಶಿಸಿದಂತಾಗಿ, ನಾವು ಕೂಡ ಆ ‘ಕಲ್ಯಾಣ’ ದಲ್ಲಿ ಇದ್ದೇವೆಯೇ ಎಂಬ ಭಾವ ಬರುತ್ತದೆ. ಇದೊಂದು ಅತ್ಯಂತ ಆದರ್ಶ ಗ್ರಾಮ ಮತ್ತು ಮಾದರಿ ಗ್ರಾಮ

‘ಜಂಗಮ’ ಒಂದು ಕಡೆ ನಿಲ್ಲುವುದೇ? ನಿಲ್ಲಬಾರದು. ಲೋಕೋದ್ಧಾರ ಅವರ ಧೈಯ! ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಬಂದ ಕಾರ್ಯ ಮುಗಿಯಿತೆಂಬ ತೃಪ್ತಿ ಭಾವದಿಂದ ಹೊರಡಲನುವಾದರು.

‘ವಿಜಯ ಯುವಕ ಮಂಡಳ ಹಾಗೂ ಬಸವ ಬೆಳಗು ಪ್ರಸಾರ ಸಮಿತಿಯ ಎಲ್ಲ ಪದಾಧಿಕಾರಿಗಳು ಬೈಲೂರಿನ ಸಮಸ್ತ ಜನತೆ ಪೂಜ್ಯರನ್ನು ತಮ್ಮಲ್ಲಿಯೇ ಉಳಿಯುವಂತೆ ಪರಿಪರಿಯಿಂದ ಬಿನ್ನಹ ಮಾಡಿಕೊಂಡರು. ಮಾತೃಹೃದಯಿ ಪೂಜ್ಯರು, ಭಕ್ತ ಜನಕೋಟಿಯ ಹೃದಯ ಹಂಬಲವನ್ನು ಧಿಕ್ಕರಿಸಲಾಗಲಿಲ್ಲ!! ಪೂಜ್ಯರ ವಾಸ್ತವ್ಯಕ್ಕಾಗಿ ಬೈಲೂರಿನ ಪೂಜಾರಿ ಬಂಧುಗಳು ಒಂದು ಎಕರೆ ಸ್ಥಳವನ್ನು ದಾನವಾಗಿ ನೀಡಿ, ಪ್ರಾರ್ಥನಾ, ಪ್ರವಚನ, ಪೂಜೆ, ಸಮಾಜ ಸೇವೆಯ ಸಂಕೀರ್ಣ ಕಟ್ಟಡ ‘ನಿಷ್ಕಲ ಮಂಟಪ’ ದ ನಿರ್ಮಾಣಕ್ಕೆ ಅಣಿಯಾದರು. ‘ನಿಷ್ಕಲ ಮಂಟಪ’ ಎಂದು ಪೂಜ್ಯರೇ ಆದರ ಹೆಸರನ್ನು ಸೂಚಿಸಿದರು. ಕಲ್ಯಾಣದಲ್ಲಿ ಬಸವಾದಿ ಪ್ರಮಥರು ‘ಅನುಭವ ಮಂಟಪ’ ಕಟ್ಟಿ ‘ಲಿಂಗಾಯತ’ ವೆಂಬ ಹೊಸ ಧರ್ಮಕ್ಕೆ ನಾಂದಿ ಹಾಡಿದರು! ಆದರೆ, ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಈ “ನಿಷ್ಕಲ ಮಂಟಪ’ ದಿಂದ ಬಸವಾದಿ ಪ್ರಮಥರ ತತ್ವ ಸಿದ್ಧಾಂತಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಕಾಯಕ, ದಾಸೋಹ ತತ್ವ, ವಚನ, ಪ್ರವಚನ, ಶರಣರ ‘ಕಲ್ಯಾಣ ದರ್ಶನ’ ದಂತಹ ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯಲ್ಲಿ ವೈಚಾರಿಕತೆ, ಧಾರ್ಮಿಕ ಜಾಗ್ರತೆ, ಸಾಮಾಜಿಕ ಅಭಿವೃದ್ಧಿಯತ್ತ ಅಡಿ: ಇಡುವಂತೆ ತನ್ಮೂಲಕ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಶರಣರ ‘ಕಲ್ಯಾಣ’ ಸಮಾಜ ನಿರ್ಮಾಣ ಮಾಡಬೇಕೆಂಬ ಧೈಯವನ್ನು ಇಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ.

‘ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನವರ ನುಡಿಯಂತೆ, ಜಂಗಮ ಒಂದೆಡೆ ನಿಂತು ಸ್ಥಾವರವಾಗಬಾರದು! ಜಗದ ಜನತೆಯ ಕಲ್ಯಾಣಕ್ಕಾಗಿ ವಸಂತ ಗಾಳಿಯಂತೆ ಸುಳಿದು ತನ್ನ ಕಂಪನ್ನು ಸುತ್ತೆಲ್ಲ ಸೂಸುವಂತೆ, ಶ್ರೀಗಳು ರಾಷ್ಟ್ರದುದ್ದಕ್ಕೂ ಸಂಚಾರಗೈದು ಬಸವಾದಿ ಪ್ರಮಥರ ತತ್ವ ಪ್ರಸಾರಗೈದ ‘ಲಿಂಗಾಯತ ಬಸವಧರ್ಮ ಧ್ವಜವನ್ನು ಎತ್ತಿ ಹಿಡಿಯುವುದೇ ಅವರ ಪವಿತ್ರ ಕಾಯಕವಾಗಿದೆ. ಇಂತಹ ಪೂಜ್ಯರಿಗೆ ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ ಈ ನಾಡಿಗೆ ಇನ್ನಷ್ಟು ಬಸವಣ್ಣನವರ ವಿಚಾರಧಾರೆಗಳನ್ನು ಪ್ರಚಾರ ಮಾಡಲಿ ಅಂತ ಶುಭ ಕೋರೋಣ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
3 Comments
  • “ಜಂಗಮ ಎಂದರೆ ವ್ಯಕ್ತಿ ಅಲ್ಲ;
    ಜಂಗಮ ಎಂದರೆ ಜಾತಿ ಅಲ್ಲ.
    ಜಂಗಮ ಎಂದರೆ ಅದೊಂದು ನೈತಿಕ ಜವಾಬ್ದಾರಿಗಳೊಂದಿಗೆ ಸಮಾಜದೊಳಿತಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವ ಉತ್ಕೃಷ್ಟ ತತ್ವ” ಎಂದು ಸಾರಿದ ಶರಣ ಸಂಸ್ಕೃತಿಯ ನಿಜವಾದ ವಾರಸುದಾರನಿವ.

    ಜಗಲಿ ಮೇಲಿದ್ದ ಬಸವಣ್ಣನನ್ನು ಊರ ಅಗಸಿಗೆ ತಂದು ನಿಲ್ಲಿಸಿ, ಊರೂರಿಗೆ ಕ್ರಾಂತಿಕಾರಿಯಾಗಿ ಪರಿಚಯಿಸಿದವ;
    ಕೋಮುಕಲಹ ರಹಿತವಾದ ನಿಜವಾದ ರಾಷ್ಟ್ರಪ್ರೇಮ ಬಿತ್ತಿ ಬೆಳೆಸುವವ.

    ಮಠದಲ್ಲಿ ಕೂತು ಭಕ್ತರಿಗೆ ತಾಯತ, ಚೀಟಿ ಕಟ್ಟಿ ನಿಂಬೆಹಣ್ಣು ಕೊಟ್ಟು ಮೌಢ್ಯ ಬಿತ್ತುವ ಮಜಬೂರಿ ಮಠಾಧೀಶನಲ್ಲ;
    ದುಡ್ಕೊಂಡು ತಿನ್ನೋದು ಬಿಡಬ್ಯಾಡ್ರಿ;
    ಊರು ಚಟ ಮಾಡಬ್ಯಾಡ್ರಿ ಎನ್ನುವ ನೈಜ ಸಾಮಾಜಿಕ ಕಳಕಳಿಯುಳ್ಳಂತಹ ನಿಷ್ಠುರವಾದಿ ಮಠಾಧೀಶ.

    ನನ್ನಂತಹ ಸಾವಿರಾರು ಯುವಕರಿಗೆ ಪ್ರತಿಕ್ಷಣದಲ್ಲೂ ಸದಾ ಮಾರ್ಗದರ್ಶಿಯಾಗಿರುವ *ತತ್ವ-ನಿಷ್ಟುರವಾದಿ; ಮಗುವಿನ ಮನಸ್ಸುಳ್ಳ ಪರಮಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಜಿಯವರಿಗೆ ಜನನ ಜಾಗೃತಿಯ ಹಾರ್ದಿಕ ಶುಭಾಶಯಗಳು.*

  • Nijagunananda swamiji is a true Basava tatva follower n his speeches have created awareness about Sharana philisophy across state n even outside state, He is an asset to Basava philosophy, wishing swamiji on his birthday.

  • ಶ್ರೀಗಳಿಗೆ ಅನಂತ ಕೋಟಿ ಶರಣಾರ್ಥಿಗಳು. ನನ್ನನ್ನು ಕಾಡುತ್ತಿರುವ ಒಂದು ಚಿಂತೆಯೆಂದರೆ, ಇಂತಹ ನೇರ​-ಸ್ಪಷ್ಟವಾಗಿ ತತ್ವಗಳನ್ನು ಜನರಿಗೆ ಮುಟ್ಟಿಸುವ ಪ್ರವಚನಕಾರರು ತಯಾರಾಗ್ತಾ ಇರಬೇಕು, ಅವರು ಬಸವ ತತ್ವದ ಉಸಿರು.

Leave a Reply

Your email address will not be published. Required fields are marked *