ಅನುಭವ: ಕಲಬುರ್ಗಿಯಲ್ಲಿ ನಿರೀಕ್ಷೆ ಮುಟ್ಟದ ಅಭಿಯಾನ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಸ್ಪಂದನೆಯ ಕೊರತೆ, ಬೃಹತ್ ಜನಾಂದೋಲನವಾಗಲಿಲ್ಲ

ಕಲಬುರ್ಗಿ

(ವಿವಿಧ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ಕಲಬುರ್ಗಿಯಿಂದ ಶರಣು ಶಿಣ್ಣೂರ ತಮ್ಮ ಅನುಭವ ಹಂಚಿಕೊಂಡಿದ್ದಾರೆ.)

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ

ಅಭಿಯಾನದ ದಿನಾಂಕ, ಸ್ಥಳ ನಿಗದಿಯಾದ ನಂತರ ಮಠಾಧೀಶರು ಬಹುತೇಕ ಸಂಘಟನೆಗಳ ಮುಖಂಡರನ್ನು ಕರೆಸಿ ಮೂರ್ನಾಲ್ಕು ಪೂರ್ವಭಾವಿ ಸಭೆಗಳನ್ನು ನಡೆಸಿ ಕೆಲವು ಜವಾಬ್ದಾರಿಗಳನ್ನು ಸಮರ್ಥರಿಗೆ ವಹಿಸಲಾಯಿತು.

ರಾಜಕೀಯ ನಾಯಕರನ್ನು, ಪ್ರಮುಖ ಗಣ್ಯವ್ಯಕ್ತಿಗಳನ್ನು, ಚಿಂತಕರನ್ನು ಸಂಪರ್ಕಿಸಿ ಆಹ್ವಾನಿಸಲಾಯಿತು. ಯುವಕ ಮತ್ತು ಮಹಿಳಾ ಸಂಘಟನೆಗಳ ಮುಖ್ಯಸ್ಥರನ್ನು ಹಾಗೂ ಶಾಲಾ ಕಾಲೇಜುಗಳನ್ನು ಬೇಟಿ ನೀಡಿ ಸಂಪರ್ಕಿಸಿ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಲಾಯಿತು.

ಫೇಸ್ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಪೋಸ್ಟರ್ ಮುಖಾಂತರ ಪ್ರಚಾರ ಮಾಡಲಾಯಿತು.

2) ಜನರಿಂದ ಸ್ಪಂದನೆ ಹೇಗಿತ್ತು? ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಅಭಿಯಾನದ ಮುಖ್ಯಸ್ಥರಿಂದ, ಮಠಾಧೀಶರಿಂದ ಮತ್ತು ಬಸವಪರ ಸಂಘಟನೆಗಳಿಂದ ತನು ಮನ ಧನದ ನೆರವು ಸಿಕ್ಕಿದರೂ ಸಾರ್ವಜನಿಕರಿಂದ ಅಷ್ಟೊಂದು ಸ್ಪಂದನೆ ಇರದಿರುವುದು ಕಂಡುಬಂತು.

ಬಸವಣ್ಣನವರ ಮತ್ತು ಶರಣ ತತ್ವಗಳನ್ನು ಹೊತ್ತ ಆಶಯಗಳ ಪ್ರಚಾರದ ಹಾಗೂ ಬೃಹತ್ ಜನಾಂದೋಲನದ ನಿರೀಕ್ಷೆಯಿತ್ತು. ನಿರೀಕ್ಷೆಯಂತೆ ಮತ್ತು ಇನ್ನೂ ಕೆಲವು ಹೆಚ್ಚುವರಿ ವಿಷಯಗಳ ಜಾಗೃತಿಗಳು ಅಭಿಯಾನದಲ್ಲಿ ಜರುಗಿದಾಗಿಯೂ ಬೃಹತ್ ಜನಾಂದೋಲನವಾಗದೆ ಇರುವುದನ್ನು ಗಮನಿಸಲಾಯಿತು.

3) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಶರಣ ತತ್ವಗಳ ಪ್ರತಿಪಾದನೆ, ತತ್ವನಿಷ್ಠೆ, ಲಿಂಗಾಯತರ ಜಾಗೃತಿ, ವಚನ ಸಾಹಿತ್ಯದ ಪ್ರಚಾರ, ಯುವಜನತೆಯ ಪಾಲ್ಗೊಳ್ಳುವಿಕೆ, ಸಾಮೂಹಿಕ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಅಭಿಯಾನದ ಗಮನ ಸೆಳೆದ ಅಂಶಗಳಾಗಿದ್ದವು.

4) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಸರ್ವಬೇಧಗಳನ್ನು ತೊಡೆದು ಹಾಕಲು ಪಣತೊಟ್ಟ ಸಮಾನತೆಯ ಸಂದೇಶ.
ಯೋಗ್ಯ ನೀತಿಯುತ ಜೀವನವೇ ನಿಜವಾದ ಧರ್ಮ ಎಂಬ ಕಾಯಕದ ಮಹತ್ವದ ಸಂದೇಶ.

ಹೊರಗಿನ ಆಚರಣೆಗಳಿಗಿಂತ ಆಂತರಿಕ ಶುದ್ಧತೆಯ ಆತ್ಮಶುದ್ಧಿ, ನೈತಿಕ ಜೀವನದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಸಂದೇಶ.

ವಚನಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವ ಮುಖೇನ ಹಾಗೂ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಮುಖೇನ ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸಂದೇಶ.

ಸಾಮಾಜಿಕ ನ್ಯಾಯ, ಅಹಿಂಸೆ, ಸಹಿಷ್ಣುತೆ, ಸಹಬಾಳ್ವೆ ಮುಂತಾದ ಬೌದ್ಧಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂದೇಶ ಈ ಅಭಿಯಾನದಿಂದ ದೊರೆಯಿತು.

5) ಅಭಿಯಾನ ಜನರ ಮೇಲೆ, ಬಸವ ಸಂಘಟನೆಗಳ ಮೇಲೆ ಮಾಡಿರುವ ಪರಿಣಾಮವೇನು

ಈ ಅಭಿಯಾನವು ಕೇವಲ ಲಿಂಗಾಯತರಷ್ಟೇ ಅಲ್ಲದೆ ಇತರೆ ಸಮುದಾಯಗಳಿಗೂ ಬಸವತತ್ವದ ಬಗ್ಗೆ ತಕ್ಕಮಟ್ಟಿಗೆ ಗೊತ್ತಾಗಲು ಕಾರಣವಾಯಿತು.

ಜಾತಿ ಮತ್ತು ಧರ್ಮಗಳ ವ್ಯತ್ಯಾಸದ ಬಗ್ಗೆ ಹಾಗೂ ಇವುಗಳ ವೈಷಮ್ಯದ ವಿರುದ್ಧ ಜನರಲ್ಲಿ ಚಿಂತನೆ ಮೂಡಿಸಲು ಪ್ರೇರಣೆ ನೀಡಿತು.

ವಚನ ಸಾಹಿತ್ಯದ ಪ್ರಾಮುಖ್ಯತೆ ಬಗ್ಗೆ ಚರ್ಚೆ ನಡೆಯಲು ನಾಂದಿ ಹಾಡಿತು. ಯುವಜನ ವಿದ್ಯಾರ್ಥಿಗಳಲ್ಲಿ ತತ್ವದ ಬಗ್ಗೆ ಆಸಕ್ತಿ ಮೂಡಿಸಲು ನೆರವಾಯಿತು. ಹಲವಾರು ಲಿಂಗಾಯತ ಸಂಘಟನೆಗಳು ಚಟುವಟಿಕೆಯಿಂದ ಪುನಶ್ಚೇತನಗೊಂಡವು.

6) ಅಭಿಯಾನದಲ್ಲಿ ಮಠಾಧೀಶರ ಒಕ್ಕೊಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು

ಮಠಾಧೀಶರು ಮೊದಲಿಗೆ ಬಸವತತ್ವಗಳನ್ನು ಬದುಕಿನಲ್ಲಿ ನೇರವಾಗಿ ಅನ್ವಯಿಸಿಕೊಳ್ಳುವ ಪ್ರಜ್ಞಾ ಪ್ರಯತ್ನ ಕಂಡುಬಂತು. ವಿಭಜಿತವಾಗಿದ್ದ ಸಂಘಟನೆಗಳು ಅಭಿಯಾನದ ಮೂಲಕ ಒಗ್ಗಟ್ಟಾದವು ಎನ್ನಬಹುದು.

ಒಟ್ಟಾರೆಯಾಗಿ ಬಸವಪರ ಸಂಘಟನೆಗಳ ಮತ್ತು ಜನಸಾಮಾನ್ಯರ ಮೇಲೆ ಬಹುಮುಖ ಪರಿಣಾಮ ಬೀರಿದೆ. ಇದರಿಂದ ತಾತ್ವಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಕೆಲವಷ್ಟು ನಿಖರ ಬದಲಾವಣೆಗಳನ್ನು ತಂದಿದೆ ಎನ್ನಬಹುದು.

ಅಭಿಯಾನದಲ್ಲಿ ಮಠಾಧೀಶರ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಸಹಯೋಗ ಬಹಳ‌ ಮಹತ್ವಪೂರ್ಣವಾಗಿದ್ದು, ಅಭಿಯಾನದ ಒಟ್ಟು ಯಶಸ್ಸಿಗೆ ಕಾರಣವಾಗಿದೆ.

ತಾತ್ವಿಕ ಮಾರ್ಗದರ್ಶನ, ಧಾರ್ಮಿಕ ಸನ್ನಿಧಾನ, ಮಠಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳಿಗೆ ಅವಕಾಶ, ಪಾದಯಾತ್ರೆಗಳಲ್ಲಿ ಉಪಸ್ಥಿತಿ, ಪ್ರಚಾರ, ಆಯೋಜನೆ, ನಿರ್ವಹಣೆ, ಯುವಶಕ್ತಿ ಸಂಗ್ರಹ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಮುಂತಾದ ಸಹಕಾರದಿಂದಾಗಿ ತಾತ್ವಿಕ ಮಾರ್ಗದರ್ಶನದಿಂದ ಹಿಡಿದು, ಕ್ರಿಯಾತ್ಮಕ ಸಹಕಾರದವರೆಗೆ ಹಲವು ಮಗ್ಗಲುಗಳಲ್ಲಿ ಪಾಲ್ಗೊಂಡವು.

7) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು

ಈ ಅಭಿಯಾನವನ್ನು ಮುಂದಿನ ವರ್ಷವೂ ಸಲ ಮಾಡಲು ಯೋಜಿಸಿದ್ದಲ್ಲಿ, ಬಸವತತ್ವಗಳನ್ನು ಕೇವಲ ಸಾಂಕೇತಿಕ ಅಷ್ಟೇ ಅಲ್ಲ; ಅಳವಡಿಕೆಯತ್ತ ಗಮನ ಹರಿಸಲಿ.

ನಗರಗಳಿಗೆ ಮಾತ್ರ ಸೀಮಿತವಾಗಿದ್ದನ್ನು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೂ ಅಭಿಯಾನವು ತಲುಪುವಂತೆ ಮಾಡುವುದು. ಆಧುನಿಕ ತಂತ್ರಜ್ಞಾನವನ್ನು ಇನ್ನೂ ಪ್ರಬಲವಾಗಿ ಬಳಕೆ ಮಾಡಿಕೊಂಡು ಯುವಜನತೆಯನ್ನು ಇನ್ನೂ ಹೆಚ್ಚಾಗಿ ತಲುಪುವುದು.

ಶಾಲಾಕಾಲೇಜುಗಳಲ್ಲಿ ವಚನ ಸ್ಪರ್ಧೆ, ಭಾಷಣ, ಗಾಯನ, ತತ್ವ ಚರ್ಚಾ ವೇದಿಕೆಗಳ ಮೂಲಕ ತತ್ವದ ಅರಿವು ಬೆಳೆಸಲು ವಿಶೇಷ ಕಾರ್ಯಗಾರ ಹಮ್ಮಿಕೊಳ್ಳುವುದು.

ವಿವಿಧ ಜಾತಿ, ಧರ್ಮ ಸಿದ್ಧಾಂತಗಳ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಾಮಾಜಿಕ ನ್ಯಾಯ, ಧರ್ಮದ ಅರ್ಥ, ಶ್ರದ್ಧೆ, ಬೌದ್ಧಿಕ, ನೈತಿಕ ಮೌಲ್ಯಗಳ ಬಗ್ಗೆ ಸಂವಾದ ಏರ್ಪಡಿಸುವುದು. ಇದರಿಂದ ಬಿನ್ನಾಭಿಪ್ರಾಯಗಳ ನಡುವಿನ ಸೇತುವೆ ನಿರ್ಮಾಣವಾದಂತಾಗುತ್ತೆ.

ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಂಘಟನೆಗಳಿಗೆ ಎಲ್ಲಕ್ಕೂ ನಿರ್ಧಿಷ್ಟ ಉದ್ದೇಶಗಳ ಜವಾಬ್ದಾರಿ ನೀಡಿ ಸಂಯುಕ್ತ ವೇದಿಕೆಯ ಭಾಗಮಾಡಬೇಕು.

ಅಭಿಯಾನದಿಂದ ಜನರ ಮನೋಭಾವ, ಸಾಮಾಜಿಕ ನಡೆ, ಪಾಲ್ಗೊಳ್ಳುವಿಕೆಯಲ್ಲಿ ಏನು ಬದಲಾವಣೆ ಬಂದಿದೆ ಎಂಬುದನ್ನು ಮೌಲ್ಯಮಾಪನ ಮಾಡಿಸಬೇಕು. ಈ ರೀತಿಯಲ್ಲಿ ಮುಂದಿನ ಅಭಿಯಾನಕ್ಕೆ ಯೋಜನೆ ರೂಪಿಸಿದ್ದಲ್ಲಿ ಅದೊಂದು ಚಲನಾತ್ಮಕ ಜನ ಸಂವೇದನೆ ಆಗಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
4 Comments
  • ಕಲಬುರಗಿ ಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಸಂಪೂರ್ಣವಾಗಿ ದುರ್ಬಲ ವಾಗಿತ್ತು..
    ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಮಠಾಧಿಪತಿಗಳ ಒಕ್ಕೂಟದ ನಡುವೆ ಹೊಂದಾಣಿಕೆ ಇರಲಿಲ್ಲ..
    ಸುಲಫಲ ಶ್ರೀಗಳು ಸಮರ್ಪಕವಾಗಿ ಸ್ಪಂದನೆ ಕೊಡಲಿಲ್ಲ..
    ಜಾಗತಿಕ ಲಿಂಗಾಯತ ಮಹಾಸಭೆ ಯವರು

  • ಬಸವ ಮೀಡಿಯಾದಲ್ಲಿ ಪ್ರಚೂರಪಡಿಸಿದಂತ ಎಲ್ಲ ಸಂದೇಶಗಳನ್ನು ನಾನು ಒದುತ್ತೇನೆ, ಬಸವ ತತ್ವದ ಅರಿವು ಇವತ್ತಿನ ಜನ ಸಾಮಾನ್ಯರಲ್ಲಿ ಅತಿ ಅವಶ್ಯಕವಾಗಿದೆ, ಇಂಥ ಅವಶ್ಯಕ ಸಂದೇಶವನ್ಮು ಎಲ್ಲರಿಗೂ ತಲುಪಿಸುವ ತಮ್ಮ ಕಾರ್ಯಕ್ಲೆ ಧನ್ಯವಾದಗಳು, ಮುಂದೆ ಬಸವ ತತ್ವದ ಕುರಿತು ನನಗೆ ಒಂದು ಕೀರು ಸೇವೆ ಮಾಡಲು ತಾವು ಅವಕಾಶ ನೀಡಿದಲ್ಲಿ ಶೃದ್ದೆಯಿಂದ ಸೇವೆ ಮಾಡುತ್ತೇನೆ.

  • ಇವರು ವ್ಯಾಪಾರ ಮನೋಭಾವವನ್ನು ಬಿಟ್ಟು ಹೊರಗೆ ಬರಬೇಕು. ಆಗ ಇವರಿಗೆ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಬರುವುದು.

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.