ಕಲಬುರ್ಗಿಯಲ್ಲಿ ಏಪ್ರಿಲ್ 30 ಅದ್ಧೂರಿ ಬಸವ ಜಯಂತಿ, ಏಪ್ರಿಲ್ 29 ಬಹಿರಂಗ ಸಭೆ

ಶರಣ ಸಂಸ್ಕೃತಿ, ಸಂಪ್ರದಾಯ, ಆಚರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳು

ಕಲಬುರಗಿ

ಲಿಂಗಾಯತ-ವೀರಶೈವ ಸಮುದಾಯದ ಎಲ್ಲರೂ ಒಂದಾಗಿ ಈ ಭಾರಿ ಏ.30ರಂದು ಜಗತ್ ವೃತ್ತದಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ ಎಂದು 892ನೇ ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷನಾಗಿ ತಮಗೆ ತಿಳಿಸಲು ನನಗೆ ಹರ್ಷವೆನಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ, ಶಾಸಕ ಎಂ.ವೈ. ಪಾಟೀಲ ತಿಳಿಸಿದರು.

ನಗರದ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹಲವು ಆಯಾಮಗಳಲ್ಲಿ ಬಸವ ಜಯಂತ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಜಯಂತ್ಯೋತ್ಸವಕ್ಕೂ ಒಂದು ದಿನ ಮುಂಚಿತವಾಗಿ ಏ.29ರಂದು ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸಂಜೆ 5 ಗಂಟೆಗೆ ಬೃಹತ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಈ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕುಗಳ ಬಸವಾದಿ ಶರಣ ಸಂಘಟನೆಯ ಮುಖಂಡರು, ಯುವ ಮುಖಂಡರು, ಬಸವಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಏ.30ರಂದು ಸಂಜೆ 4 ಗಂಟೆಗೆ ನಗರೇಶ್ವರ ಶಾಲೆ ಎದುರಿನಿಂದ ಬೃಹತ್ ಮೆರವಣಿಗೆ ಆರಂಭಗೊಂಡು ಜಗತ್ ವೃತ್ತದಲ್ಲಿ ಸಮಾವೇಶಗೊಂಡ ಬಳಿಕ ಜಯಂತಿ ಆಚರಣೆ ನಡೆಯಲಿದೆ. ಇದಕ್ಕೂ ಮೊದಲು ಅರ್ಥಪೂರ್ಣ ಹಾಗೂ ಅದ್ಧೂರಿ ಜಯಂತಿ ಆಚರಣೆಯ ಭಾಗವಾಗಿ ಏ.28ರಂದು ಬೃಹತ್ ಕಾರು ರ‌್ಯಾಲಿ ಹಾಗೂ ಏ.29ರಂದು ಮಹಿಳಾ ಬೈಕ್ ರ‌್ಯಾಲಿ ಹಾಗೂ ಏ.30ರಂದು ಬೆಳಗ್ಗೆ ಬಸವೇಶ್ವರ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವೀರಶೈವ-ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳು ಇದ್ದರೂ ಒಂದೇ ವಿಚಾರಧಾರೆಗೆ ಒತ್ತು ಕೊಟ್ಟು ಎಲ್ಲರೂ ಒಟ್ಟಾಗಿ ಬಸವ ಜಯಂತಿ ಆಚರಣೆ ನಡೆಸಲಾಗುತ್ತಿದೆ. ನಮ್ಮ ವಿಚಾರಗಳು ಬೇರೆ ಬೇರೆ ಆದರೂ, ಬಸವತತ್ವ, ಕಾಯಕತತ್ವ ಒಂದೇ ಆಗಿದ್ದು, ಇದನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಪ್ರಧಾನ ವೇದಿಕೆಯಾಗಿ ಪಾತ್ರ ನಿರ್ವಹಿಸುವ ವಿಶ್ವಾಸ ನನಗಿದೆ. ಜೊತೆಗೆ ವೀರಶೈವ-ಲಿಂಗಾಯತ ಸಮಾಜದ ಎಲ್ಲರೂ ಸಂಘಟನೆಗೊಂಡು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಧರ್ಮ ಪ್ರಚಾರದಲ್ಲಿ ಕಾಯಕ ನಿಷ್ಠೆ ತೋರಬೇಕು ಎಂಬ ಸದಾಶಯದೊಂದಿಗೆ ಈ ಬಾರಿ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಸಚಿವರಾದ ಡಾ.‌ ಶರಣಪ್ರಕಾಶ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಶಶಿಲ್ ಜಿ. ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಮರನಾಥ ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅರುಣಕುಮಾರ ಪಾಟೀಲ, ಪ್ರಭುಲಿಂಗ ಮಹಾಗಾಂವಕರ, ಕಲ್ಯಾಣಪ್ಪ ಮಳಖೇಡ, ಆರ್.ಜಿ.‌ ಶೆಟಗಾರ, ರವೀಂದ್ರ ಶಾಬಾದಿ, ಪ್ರೊ. ಆರ್.ಕೆ. ಹುಡಗಿ, ಶ್ರೀಶೈಲ ಘೂಳಿ, ಸುರೇಶ ಸಜ್ಜನ, ಕಲ್ಯಾಣರಾವ ಪಾಟೀಲ, ಅಶೋಕ ಘೂಳಿ, ಸಂಗಮೇಶ ನಾಗನಹಳ್ಳಿ, ಶರಣು ಭೂಸನೂರ, ಪ್ರವೀಣ ಹರವಾಳ, ಸೋಮಶೇಖರ ಹಿರೇಮಠ, ಭೀಮಾಶಂಕರ ಮಿಟ್ಟೇಕಾರ, ಉದಯ ಪಾಟೀಲ, ಶಂಭು ಬಳಬಟ್ಟಿ, ಶರಣು ಟೆಂಗಳಿ, ಚೆನ್ನು ದಿಗ್ಗಾವಿ ಕಿರಣ ದೇಶಮುಖ ಮತ್ತು ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಹಾಜರಿದ್ದರು.

ಜಾಗೃತಿ ಕಾರ್ಯಕ್ರಮ

ಶರಣ ಸಂಸ್ಕೃತಿ ಮತ್ತು ಶರಣ ಸಂಪ್ರದಾಯ ಆಚರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಏ.16ರಂದು ಆಳಂದ, ಅಫಜಲಪುರ ಮತ್ತು ಜೇವರ್ಗಿ ಹಾಗೂ ಏ.17ರಂದು ಚಿತ್ತಾಪುರ, ಸೇಡಂ, ಚಿಂಚೋಳಿ ಪಟ್ಟಣದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆಯ ಎಲ್ಲ 51 ವಾರ್ಡುಗಳಲ್ಲಿ ಬಸವ ಜಯಂತಿ ಆಚರಣೆಯ ಸಿದ್ಧತೆ ಕುರಿತಂತೆ ಸಭೆಗಳನ್ನು ನಡೆಸಲಾಗುವುದು.

ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ್, ಹಾಗೂ ಬಿಜೆಪಿ ನಗರ ಗ್ರಾಮೀಣ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಚಂದು ಪಾಟೀಲ ಅವರ ನೇತೃತ್ವದಲ್ಲಿ ಈ ಸಭೆಗಳು ಯಶಸ್ವಿಯಾಗಿ ಜರುಗಲಿವೆ.

ಜಯಂತಿ ವಿಶೇಷಗಳು

  • ಮೆರವಣಿಗೆಯಲ್ಲಿ ಮಹಿಳೆಯರಿಂದ ಬೃಹತ್ ಕುಂಭಮೇಳ ಜರುಗಲಿದ್ದು, ಸಮಾಜದ ಸಾವಿರಾರು ಮಾತೆಯರು, ಸಹೋದರಿಯರು ಪಾಲ್ಗೊಳ್ಳಲಿದ್ದಾರೆ.
  • 50 ವಚನಗಳನ್ನು ಒಳಗೊಂಡ ವಚನ ಪುಸ್ತಕ ಬಿಡುಗಡೆ ಹಾಗೂ ವಚನ ಸಾಹಿತ್ಯ ಮೆರವಣಿಗೆ ನಡೆಯಲಿದ್ದು, ಈ ಕುರಿತು ಈಗಾಗಲೇ ಸಮಾಜದ ಹಿರಿಯರಾದ ಶ್ರೀ ಅರವಿಂದ ಜತ್ತಿ ಅವರೊಂದಿಗೆ ಚರ್ಚಿಸಲಾಗಿದೆ.
  • ಜಯಂತ್ಯೋತ್ಸವಕ್ಕೆ ಪೂರಕವಾಗಿ ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ ಸೇರಿದಂತೆ ಹಲವು ಸಮಿತಿಗಳ ರಚಿಸಲಾಗುತ್ತಿದ್ದು, ಪ್ರತಿಯೊಂದು ಸಮಿತಿಯು ತನಗೆ ವಹಿಸಿದ ಬಾಧ್ಯತೆಗಳನ್ನು ಹೊಣೆಗಾರಿಕೆಯಿಂದ ನಿಭಾಯಿಸಲಿದೆ.
  • ಬಸವಾದಿ ಶರಣರ ತತ್ವಗಳ ಕುರಿತು ಪಾಂಡಿತ್ಯ ಹೊಂದಿರುವ ವಿಷಯ ತಜ್ಞರನ್ನು ಈ ಬಾರಿಯ ಬಸವ ಜಯಂತ್ಯುತ್ಸವ ಕಾರ್ಯಕ್ರಮದ ಮುಖ್ಯ ಭಾಷಣಕಾರರನ್ನಾಗಿ ಆಮಂತ್ರಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಮಾಜದ ಎಲ್ಲ ಹಿರಿಯ ಧುರೀಣರು ಹಾಗೂ ವಿಷಯ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
  • ಬಹುಮುಖ್ಯವಾಗಿ ಬಸವ ಜಯಂತ್ಯೋತ್ಸವಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದೆ ಇರಲು ತೀರ್ಮಾನಿಸಿದ್ದು, ವೀರಶೈವ-ಲಿಂಗಾಯತ ಸಮಾಜದ ಸ್ಥಿತಿವಂತರು ಸ್ವಇಚ್ಛೆಯಿಂದ ಜಯಂತಿಯ ಯಶಸ್ಸಿಗಾಗಿ ದೇಣಿಗೆ ನೀಡಬಹುದಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *