ಕಲಬುರಗಿ
ನಗರದಲ್ಲಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಬೃಹತ್ ಬೈಕ್ ರ್ಯಾಲಿ ಮೂಲಕ ಬಹುತ್ವ ಸಂಸ್ಕೃತಿ ಭಾರತೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳಗ್ಗೆ 11ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಅವರು ವಾಹನ ಜಾಥಾಕ್ಕೆ ಬಹುತ್ವ ಸಂಸ್ಕೃತಿ ಭಾರತೋತ್ಸವದ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವ್ವಾಜಿ ಅವರು, ಭವಿಷ್ಯಕ್ಕಾಗಿ ಬಹುತ್ವ ಭಾರತ ಉಳಿಸುವುದು ಅಗತ್ಯವಾಗಿದ್ದು, ಇದಕ್ಕೆ ಸಂಸ್ಥಾನ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ನಿವೃತ್ತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮತ್ತಿತರರು ಉಪಸ್ಥಿತರಿದ್ದರು.
ರ್ಯಾಲಿ ದೇವಸ್ಥಾನ ಮೂಲಕ ಕಲಬುರ್ಗಿ ನಗರದ ಮುಖ್ಯ ಸೆಂಟ್ ಜೋಸೆಫ್ ಚರ್ಚ್, ಬಸವಣ್ಣನವರ, ಅಂಬೇಡ್ಕರ್ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗುರುನಾನಕ್ ಗುರುದ್ವಾರ ಮೂಲಕ ನಗರದ ಮುಸ್ಲಿಂರ ಪವಿತ್ರ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ತಲುಪಿತು.
ದರ್ಗಾದ ಮುಖ್ಯಸ್ಥರು ಸೌಹಾರ್ದ ಕರ್ನಾಟಕದ ಈ ರ್ಯಾಲಿ, ಹಾಗೂ ದಿನಾಂಕ 19-01-2025ರಂದು ನಡೆಯುವ ಬಹುತ್ವ ಸಂಸ್ಕೃತಿ ಉತ್ಸವ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು.
ರ್ಯಾಲಿಯಲ್ಲಿ 150 ಎರಡು ಚಕ್ರವಾಹನ, 10 ನಾಲ್ಕು ಚಕ್ರ ವಾಹನಗಳು ಇದ್ದು ಒಂದು ತೆರೆದ ವಾಹನದಲ್ಲಿ ಮುಖ್ಯಸ್ಥರು ಘೋಷಣೆ, ಭಾಷಣ ಮಾಡುವ ಮೂಲಕ ಸುಮಾರು 20 ಕೀಲೋಮೀಟರ್ ಪ್ರಯಾಣ ಮಾಡಲಾಯಿತು.
ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಉಪಹಾರವಾದರೆ ಮಧ್ಯಾಹ್ನ ದರ್ಗಾದಲ್ಲಿ ಊಟ ಒದಗಿಸಲಾಯಿತು.
ವಾಹನ ಜಾಥಾದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಕೆ.ನೀಲಾ, ಆರ್.ಕೆ ಹುಡಗಿ, ಮೀನಾಕ್ಷಿ ಬಾಳಿ, ಸುರೇಶ್ ಹಾದಿಮನಿ, ಮಹಮ್ಮದ್ ಅಫಜಲ್, ಕಾಶಿನಾಥ್ ಅಂಬಲಗೆ, ಪ್ರಭು ಖಾನಾಪುರೆ, ಅಬ್ದುಲ್ ಖಾದರ್, ಅಬ್ದುಲ್ ರಹೀಂ, ರಿಜ್ವಾನ್ ಸಿದ್ದಿಕಿ, ಶಾಹನಾಜ್ ಅಖ್ತರ್, ಮಬೀನ್ ಅಹ್ಮದ್, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್, ರಾಜೇಂದ್ರ ರಾಜವಾಳ, ಸಿದ್ರಾಮ ನಾಡಗೇರಿ, ಪದ್ಮಾವತಿ ಅಂಬೊರೆ, ಮಹೇಶ್ ಕುಮಾರ್ ರಾಠೋಡ್, ಬಾಬು ಬಿ.ಪಾಟೀಲ್, ಮೌಲಾ ಮುಲ್ಲಾ, ಸುಜಾತಾ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
Super