ಕಲಬುರ್ಗಿ ಹುತಾತ್ಮರಾಗಿ 10 ವರ್ಷ: ಕೊಂದವರಿಗೆ ನಾವು ಕಲಿಸಬೇಕಿರುವ ಪಾಠ

ಬಸವ ಮೀಡಿಯಾ
ಬಸವ ಮೀಡಿಯಾ

ಒಬ್ಬ ಕಲಬುರ್ಗಿಯ ಜಾಗದಲ್ಲಿ ಲಕ್ಷ ಕಲಬುರ್ಗಿಯರನ್ನು ಸೃಷ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಬೆಂಗಳೂರು

ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಇನ್ನು ಕೆಲವು ದಿನಗಳಲ್ಲಿ ಹತ್ತು ವರ್ಷ ಕಳೆಯುತ್ತವೆ.

ಬಸವಣ್ಣ ಮತ್ತು ಕನ್ನಡ ತನ್ನ ಎರಡು ಕಣ್ಣುಗಳು ಎಂದುಕೊಂಡು ತಮ್ಮ ಕೊನೆಯ ದಿನದವರೆಗೆ ದಣಿವು ಲೆಕ್ಕಿಸದೆ ಕಲಬುರ್ಗಿ ದುಡಿದರು. ಸಾವಿರಾರು ಶಾಸನ ಮತ್ತು ಹಸ್ತ ಪ್ರತಿಗಳನ್ನು ಶೋಧಿಸಿ ಇತಿಹಾಸದಲ್ಲಿ ಮುಚ್ಚಿ ಹಾಕಿದ್ದ ಸತ್ಯಗಳನ್ನು ಶೋಧಿಸಿ ಬೆಳಕಿಗೆ ತಂದರು.

ಬಹಳ ಮುಖ್ಯವಾಗಿ ಅವರ ಸಂಶೋಧನೆ ಲಿಂಗಾಯತರ ಇತಿಹಾಸ, ಸಿದ್ದಾಂತ, ಪರಂಪರೆ, ಅವುಗಳಲ್ಲಿರುವ ವಿಶ್ವಬಂಧುತ್ವದ ಸಂದೇಶಗಳ ಬಗ್ಗೆ ಸ್ಪಷ್ಟತೆ ಮೂಡಿಸಿತು. ಈ ಪ್ರಯತ್ನದಲ್ಲಿ ಬಸವಾದಿ ಶರಣರು ತುಳಿದ ಹಾದಿ ವೀರಶೈವರು ಮತ್ತು ಹಿಂದೂಗಳಿಗಿಂತ ಎಷ್ಟು ಭಿನ್ನವಾಗಿತ್ತು ಎಂದು ತೋರಿಸುವ ಸಾಹಸಕ್ಕೂ ಅವರು ಅನಿವಾರ್ಯವಾಗಿ ಕೈ ಹಾಕಬೇಕಾಯಿತು.

ಅಪ್ರಿಯವಾದ ಸತ್ಯ ನುಡಿಯುವವರಿಗೆ ನಮ್ಮ ಸಮಾಜದಲ್ಲಿ ಸಿಗುವ ಬಹುಮಾನ ನಿರಂತರ ಸಂಘರ್ಷ. ಕಲಬುರ್ಗಿ ತಮ್ಮ ಜೀವನಪರ್ಯಂತ ಸಣ್ಣ ಸಣ್ಣ ಶಿಲುಬೆಯೇರಿದರು, ಕೊನೆಗೆ ಹಂತಕರ ಗುಂಡಿಗೆ ಎದೆಕೊಟ್ಟು ಹುತಾತ್ಮರಾದರು.

ಕಲಬುರ್ಗಿಯವರದು ಬಹಳ ಕಾವಿರುವ ಸಂಶೋಧನೆ. ಮನಸ್ಸುಗಳನ್ನು, ಮನಸ್ಥಿತಿಗಳನ್ನು ಸುಲುಭವಾಗಿ ಬದಲಿಸುವ ಪ್ರಭಾವ ಅವರ ಚಿಂತನೆಗಿದೆ. ಅವರ ಪುಸ್ತಕಗಳು ಬಸವಾದಿ ಶರಣರ ಸಾಧನೆಯನ್ನು ಸತ್ಯದ ಬೆಳಕಿನಲ್ಲಿ ತೋರಿಸುತ್ತವೆ. ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಜಾಗೃತಿಯನ್ನು ಅವು ಬಡಿದ್ದೆಬಿಸುತ್ತವೆ. ಪ್ರತಿಯೊಬ್ಬರೂ ಪ್ರತಿಯೊಂದನ್ನು ಪ್ರಶ್ನಿಸುವಂತೆ ಮಾಡುತ್ತವೆ.

ಕಲಬುರ್ಗಿಯವರ ಹತ್ಯೆಯಾಗಿದ್ದು ಅವರ ಶೋಧನೆಯನ್ನು ನಿಲ್ಲಿಸಲು ಮಾತ್ರವಲ್ಲ ಅದು ಎಂದೂ ಹೊರಗೆ ಬಾರದಂತೆ, ಅದರ ಪ್ರಭಾವ ಹರಡದಂತೆ ನೋಡಿಕೊಳ್ಳಲು.

ಇಂದು ಕಲಬುರ್ಗಿ ಹತ್ಯೆಯ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರಲ್ಲಿ ಕೆಲವರಿಗೆ ಸನ್ಮಾನಗಳೂ ನಡೆದಿವೆ. ಈ ಬೆಳವಣಿಗೆಗಳನ್ನು ನಾವು ಬಹುಷಃ ನಿಸ್ಸಹಾಯಕತೆಯಿಂದ ನೋಡಲು ಮಾತ್ರ ಸಾಧ್ಯ.

ಆದರೆ ಕಲಬುರ್ಗಿಯವರ ಚಿಂತನೆಯನ್ನು ಜನರಿಗೆ ಮುಟ್ಟಿಸಿ ಅವರನ್ನು ಕೊಲ್ಲಿಸಿದವರ ಉದ್ದೇಶ ಈಡೇರದಂತೆ ನೋಡಿಕೊಳ್ಳುವ ಅವಕಾಶ ನಮ್ಮೆದುರಿಗಿದೆ. ಒಬ್ಬ ಕಲಬುರ್ಗಿಯ ಜಾಗದಲ್ಲಿ ಲಕ್ಷ ಕಲಬುರ್ಗಿಯರನ್ನು ಸೃಷ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ.

ವ್ಯಕ್ತಿಯನ್ನು ಕೊಲ್ಲುವುದು ಸುಲಭ ಆದರೆ ಅವರ ಚಿಂತನೆಯನ್ನು ಅಳಿಸುವುದು ಅಸಾಧ್ಯ ಎಂದು ನಾವು ಸಾಧಿಸಿ ತೋರಿಸಬೇಕಿದೆ. ಇದು ಕಲಬುರ್ಗಿಯವರನ್ನು ಕೊಂದವರಿಗೆ, ಕೊಲ್ಲಿಸಿದವರಿಗೆ ನಾವು ಕಲಿಸಬೇಕಾಗಿರುವ ಪಾಠ.

ಇದು ಕಲಬುರ್ಗಿಯವರನ್ನು ಉಳಿಸಲು ಮಾತ್ರ ನಡೆಯಬೇಕಿರುವ ಹೋರಾಟವಲ್ಲ. ಕಲ್ಬುರ್ಗಿ ಉಳಿದರೆ ನಮ್ಮ ವೈಚಾರಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಬಹು ಸಂಸ್ಕೃತಿ ಕೊನೆಗೆ ಪ್ರಜಾಪ್ರಭುತ್ವ ಉಳಿಯುತ್ತದೆ. ಇವುಗಳ ಮೇಲೆ ಇಂದು ಆವರಿಸಿರುವ ಆತಂಕದ ಛಾಯೆಯನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.

ಈ ಸಂದರ್ಭದಲ್ಲಿ ಬಸವ ಮೀಡಿಯಾ ಸತ್ಯ ಶೋಧಕ ಚಿಂತಕ ಎಂ. ಎಂ. ಕಲಬುರ್ಗಿಯವರ ಮೇಲೆ ವಿಶೇಷ ಲೇಖನಗಳನ್ನು ಆಹ್ವಾನಿಸುತ್ತಿದೆ. ಅವರ ಸಂಶೋಧನೆ ವಿವರಿಸುವ, ವಿಶ್ಲೇಷಿಸುವ, ಅದರ ಮಹತ್ವ ತಿಳಿಸುವ, ಅವರ ವ್ಯಕ್ತಿತ್ವ, ಕಾರ್ಯ ವೈಖರಿಯನ್ನು ಪರಿಚಯಿಸುವ ಲೇಖನಗಳನ್ನು ಎದುರು ನೋಡುತ್ತಿದ್ದೇವೆ.

ಲೇಖನಗಳು ವಿದ್ವಾಂಸರಿಗಿಂತ ಜನ ಸಾಮಾನ್ಯರನ್ನು ಮುಟ್ಟುವ ಹಾಗಿರಲಿ. ನಿಮ್ಮ ಲೇಖನಗಳನ್ನು ಕಳುಹಿಸುವ ವಿಳಾಸ – basavamedia1@gmail.com

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
5 Comments
  • ಪ್ರತಿಯೊಬ್ಬ ಲಿಂಗಾಯತರಲ್ಲಿ ಕಲಬುರ್ಗಿ ಅವರನ್ನು ಕಾಣುವ ಹಾಗಾಗಬೇಕು

  • ಇವಾಗ ಯಾರೊಬ್ಬರೂ ದೊಡ್ಡ ದೊಡ್ಡ ಸಮಾರಂಭ ದಲ್ಲಿ ಕಲಬುರ್ಗಿ ಯವರ ಹುತಾತ್ಮತೆಯ ಬಗ್ಗೆ ಯಾರೂ ಮಾತಾಡುವುದಿಲ್ಲ

  • ಟೈಟಲ್ಲೇ ರೋಮಾಂಚನಕಾರಿಯಾಗಿದೆ. ನೂರಲ್ಲಾ ಸಾವಿರಾರು ಕಲಬುರ್ಗಿಯವರು ಮತ್ತು ಹಳಕಟ್ಟಿಯವರು ಹುಟ್ಟುವುದು ನಿಶ್ಚಿತ. ಶರಣು ಶರಣಾರ್ಥಿಗಳು

  • ಡಾ‌ . ಎಂ. ಎಂ. ಕಲಬುರ್ಗಿ ಅವರಿಗೆ ಬಿದ್ದ ಗುಂಡು ಅದು ಲಿಂಗಾಯತ ಅಸ್ಮಿತೆಗೆ ಹೊಡೆದ ಗುಂಡು ಎಂಬುವದನ್ನು ಮರೆಯಕೂಡದು. ಬಸವಣ್ಣನವರನ್ನು ಗಡಿಪಾರು ಮಾಡಿಸಿದವರೇ , ಗಾಂಧಿಯನ್ನು ಕೊಂದ ಶಕ್ತಿಗಳೇ ಕಲಬುರ್ಗಿಯವರನ್ನು ಕೊಂದದ್ದು.

  • ಅವರ ಹತ್ಯೆಗೆ ಕಾರಣ ಲಿಂಗಾಯತ ಧರ್ಮದ ಮೇಲಿನ ಸಂಶೋಧನೆಯ ಸತ್ಯವನ್ನು ಬಹಿರಂಗ ಪಡಿಸಿದ್ದು
    **** ಆ ಒಂದು ಅವಕಾಶಕ್ಕಾಗಿ ಕಾಯುತ್ತಿತ್ತು
    ಅವರದಲ್ಲದ ಕ್ಷುಲ್ಲಕ ಕಾರಣದ ನೆಪ ಒಡ್ಡಿ ಹತ್ಯೆ ಮಾಡಿತು

Leave a Reply

Your email address will not be published. Required fields are marked *