ಲಿಂಗಾಯತ ವೇದಿಕೆ: ಗೌರಿ, ಕಲ್ಬುರ್ಗಿ ಹತ್ಯೆ ಆರೋಪಿಗಳ ಸನ್ಮಾನ ಖಂಡಿಸಿ ಪ್ರತಿಭಟನೆ, ಬಂಧನ

ಬಸವ ಮೀಡಿಯಾ
ಬಸವ ಮೀಡಿಯಾ

ಸಮಾಜದ ಶಾಂತಿಗೆ ಭಂಗ ತರುವ ನೀಚರನ್ನು ಹೀರೋಗಳಾಗಿ ಬಿಂಬಿಸುವುದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ

ಬೆಂಗಳೂರು

ವೀರಶೈವ ಲಿಂಗಾಯತ ಸಮನ್ವಯ ಸಮಿತಿಯ ಕಾರ್ಯಕರ್ತರು ಹಾಗೂ ಪ್ರಗತಿಪರ ಹೋರಾಟಗಾರರು ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಹಾಗೂ ಆರೋಪಿಗಳ ಸನ್ಮಾನ ಮಾಡಿದವರನ್ನು ಖಂಡಿಸಿ ಶುಕ್ರವಾರ ಪ್ರತಿಭಟಿಸಿದರು.

ಚಾಲುಕ್ಯ ಹೋಟೇಲ್‌ ಬಳಿಯಿರುವ ಬಸವೇಶ್ವರ ಪುತ್ಥಳಿ ಮುಂದೆ ಪ್ರತಿಭಟನೆಯನ್ನು ಆಯೋಜಿಸಿದ್ದ ಸಂಘಟನೆಯ ಸಹ ಸಂಚಾಲಕರಾದ ಎಂ.ಟಿ.ಸುಭಾಷ್‌ಚಂದ್ರ ಅವರನ್ನೂ ಒಳಗೊಂಡಂತೆ ಅಲ್ಲಿ ನೆರೆದಿದ್ದ ಎಲ್ಲಾ ಪ್ರತಿಭಟನಾಕಾರರನ್ನು ಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಠಾಣೆಯಲ್ಲಿ ವೈಯಕ್ತಿಕ ಮಾಹಿತಿ ಪಡೆದು ಬಿಡುಗಡೆಗೊಳಿಸಿದರು.

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಸಲಹೆಗಾರರೂ ಹಾಗೂ ಗುಲಬುರ್ಗ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ದೇಶದಲ್ಲಿ ಕೊಲೆಗೊಡಕರು, ಅತ್ಯಾಚಾರಿಗಳು ಜೈಲಿಗೆ ಹೋಗಿ ಬಂದ ಮೇಲೆ ಅವರನ್ನು ಗೌರವಿಸಿ ಸನ್ಮಾನ ಮಾಡುವ ಪರಿಪಾಟವನ್ನು ಎಲ್ಲರು ಖಂಡಿಸಬೇಕು. ಸಮಾಜದ ಶಾಂತಿಗೆ ಭಂಗ ತರುವ ನೀಚರನ್ನು ಹೀರೋಗಳಾಗಿ ಬಿಂಬಿಸುವುದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ. ಸಂಘ ಪರಿವಾರದ ಕೆಲವು ಅನಾಗರಿಕರು ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಗೌರಿಲಂಕೇಶ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಬಂದಿಯಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದರು. ಈಗ ಅವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ, ಅಂತಹವರನ್ನು ಆರೋಪ ಮುಕ್ತರಾಗಿ ಬಿಡುಗಡಗೊಂಡಂತೆ ಬಿಂಬಿಸಿ ಸಂಬ್ರಮಿಸಿ ಸನ್ಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿಬೇಕಿದೆ.

ಮಹಾತ್ಮ ಗಾಂಧೀಜಿ ಅಂತಹವರನ್ನು ಕೊಂದಂತಹ ಗೋಡ್ಸೆ ವಂಶಸ್ಥರು ಹಾಗೂ ಸಂಘಪರಿವಾರದವರು ಇಂತಹ ಕೃತ್ಯವನ್ನು ಹನ್ನೆರಡನೇ ತಾರೀಖು ವಿಜಯಪುರದಲ್ಲಿ ಮಾಡಿದ್ದಾರೆ. ಇದನ್ನು ವೀರಶೈವ ಲಿಂಗಾಯತ ಸಮುದಾಯ ಹಾಗೂ ನಾಡಿನ ಪ್ರಜ್ಞಾವಂತ ಪ್ರಗತಿಪರ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಮತ್ತು ಸಹೋದರಿ ಕವಿತ ಲಂಕೇಶ್ ಅವರು ತಮ್ಮ ಆಕ್ರೋಶವನ್ನ ಹೊರಹಾಕಿ ಪ್ರತಿಭಟಿಸಿದರು. ನಮ್ಮ ಕುಟುಂಬಕ್ಕೆ ಬಹಳ ನೋವಾಗಿದೆ. ಕೊಲೆಗೊಡಕರನ್ನು ಸನ್ಮಾನಿಸುವುದೆಂದರೆ ಅದು ಗೌರಿ ಅವರನ್ನು ಪ್ರೊ. ಎಂ.ಎಂ.ಕಲಬುರ್ಗಿ ಅವರನ್ನು ಅಪಮಾನಿಸಿದಂತೆಯೇ ಸರಿ ಎಂದರು.

ಸರ್ಕಾರ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ತ್ವರಿತಗತಿಯಲ್ಲಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ವಿಳಂಭವಾದಲ್ಲಿ ಕೊಲೆಗಡುಕರು, ಅತ್ಯಾಚಾರಿಗಳು ಜಾಮೀನಿನ ಮೇಲೆ ಹೊರಬಂದು ಸಮಾಜದ ನೆಮ್ಮದಿಯನ್ನೇ ಹಾಳು ಮಾಡುತ್ತಾರೆ.

ದುರಂತವೆಂದರೇ ಜೈಲಿನಿಂದ ಹೊರಬಂದವರನ್ನು ವಿಜಯಪುರದಲ್ಲಿ ಸನ್ಮಾನಿಸಿದವರಿಗೆ ಬಂಧಿಸುವದನ್ನು ಬಿಟ್ಟು ಶಾಂತರೀತಿಯಲ್ಲಿ ಬಸವಣ್ಣನವರ ಪ್ರತಿಮೆಯ ಮುಂದೆ ಪ್ರತಿಭಟನೆ ಮಾಡುವವರನ್ನು ಸರ್ಕಾರ ಬಂಧಿಸಿ ಜೈಲಿಗೆ ಕಳುಹಿಸಲು ಮುಂದಾಗಿದೆ. ಪ್ರಗತಿಪರರನ್ನು ಕೊಂದಂತಹವರನ್ನು ಸ್ವತಂತ್ರ ಸೇನಾನಿಗಳ ರೀತಿಯಲ್ಲಿ ಬಿಂಬಿಸಿ ಗೌರವಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ವೀರಶೈವ-ಲಿಂಗಾಯತ ಸಮನ್ವಯ ಸಮಿತಿ, ಬಸವ ಸಮಿತಿ, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಬಿ.ಆರ್. ಪಾಟೀಲ, ಬಿ.ಟಿ. ಲಲಿತಾನಾಯಕ, ಇಂದ್ರಾ ಲಂಕೇಶ, ಕವಿತಾ ಲಂಕೇಶ, ಕೆ.ಆರ್. ಸುಭಾಷಚಂದ್ರ, ಅಲಿಬಾಬ, ಕೆ. ಮಹಾಂತೇಶ, ಕೆ.ಎಸ್. ವಿಮಲಾ, ಬಿಳಿದಾಳೆ ಪಾರ್ವತೀಶ, ಪಿ. ಸುರೇಂದ್ರ ಲಿಂಗರಾಜ ಆವರಗೇರೆ, ಪಾಲನೇತ್ರ, ವೆಂಕಟೇಶ, ಪ್ರಕೃತಿ ಪ್ರಸನ್ನ, ಅನಂತನಾಯಕ, ಸಚ್ಚಿದಾನಂದಮೂರ್ತಿ, ಮತ್ತೀತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share This Article
1 Comment

Leave a Reply

Your email address will not be published. Required fields are marked *