“ಆರೋಪಿಗಳಿಗೆ ಶಿಕ್ಷೆಯಾದರೆ ಕಲಬುರ್ಗಿ ಕೊಂದವರ ಸಿದ್ದಾಂತಕ್ಕೆ ತೊಂದರೆ ಆಗತ್ತೆ.”
ಬೆಂಗಳೂರು
(ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ.)
ಆಗಸ್ಟ್ 30, 2015, ನಾಡಿನ ಖ್ಯಾತ ಸಂಶೋಧಕ, ಎಂ ಎಂ ಕಲಬುರ್ಗಿ, ನಸುಕಿನಲ್ಲಿ ಬಂದ ಹಂತಕರ ಗುಂಡಿಗೆ ಬಲಿಯಾದರು.
ಅವರ ಬರ್ಬರ ಹತ್ಯೆ ದೊಡ್ಡ ಕೋಲಾಹಲವೆಬ್ಬಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿ ಮಾಡಿತು. ಹಂತಕರನ್ನು ಹಿಡಿಯಲು ಸರಕಾರ ವಿಶೇಷ ಪೊಲೀಸ್ ತಂಡಗಳನ್ನೂ ರಚಿಸಿ, ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಿತು.
ಆದರೆ 10 ವರ್ಷಗಳ ನಂತರ ಕಲಬುರ್ಗಿಯವರಿಗೆ ನ್ಯಾಯ ಸಿಗುವುದಿರಲಿ ಅವರ ಹತ್ಯೆಯ ಎಲ್ಲಾ ಆರೋಪಿಗಳು ಜಾಮೀನು ಪಡೆದು ಹೊರಗೆ ಬರುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈ ವರ್ಷದ ಜನವರಿಯಲ್ಲಿ ಮೂರು ಆರೋಪಿಗಳಿಗೆ ಜಾಮೀನು ನೀಡುತ್ತಾ ಪ್ರಕರಣದ ವಿಚಾರಣೆಯು ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ. ಇವರಲ್ಲಿ ಕೆಲವರಿಗೆ ಹಿಂದುತ್ವ ಗುಂಪುಗಳು ಹುರುಪಿನಿಂದ ಸನ್ಮಾನವನ್ನೂ ಮಾಡಿವೆ.
ಗೌರಿ ಹತ್ಯೆ ಪ್ರಕರಣದಲ್ಲಿಯೂ ವಿಚಾರಣೆ ವಿಳಂಬವಾಗಿದೆ ಎಂಬ ಕಾರಣದಿಂದ ಕೋರ್ಟು ಆರೋಪಿಗಳಿಗೆ ಜಾಮೀನು ನೀಡಿದೆ. 10 ವರ್ಷಗಳಲ್ಲಿ ಒಟ್ಟು 132 ಸಾಕ್ಷಿಗಳಲ್ಲಿ ಪ್ರಾಸಿಕ್ಯೂಷನ್ ಕೇವಲ 22 ಸಾಕ್ಷಿಗಳ ವಿಚಾರಣೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ವಿಚಾರಣೆಯಲ್ಲಿ ಉಂಟಾಗಿರುವ ವಿಳಂಬ ಉದ್ದೇಶಪೂರ್ವಕವೇ ಎಂದು ಕೇಳಿದಾಗ, “ಈ ಪ್ರಶ್ನೆಗೆ ಉತ್ತರ ಇಲ್ಲಾಂತ ಹೇಳಕ್ಕಾಗುವುದಿಲ್ಲ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಹೇಳಿದರು. ಕಲಬುರ್ಗಿಯವರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಜಾಮದಾರ್ ಗ್ರಹ ಖಾತೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾಯಕ ಮಾಡಿದ್ದರು.
“ಕಲಬುರ್ಗಿ ಹತ್ಯೆಯ ಆರೋಪಿಗಳಿಗೆ ಅಪರಾಧ ಸಾಭೀತಾಗಿ ಶಿಕ್ಷೆಯಾದರೆ ಅವರ ಕೊಂದವರ ಸಿದ್ದಾಂತಕ್ಕೆ ತೊಂದರೆ ಆಗತ್ತೆ. ಇದು ವಿಳಂಬಕ್ಕೆ ಕಾರಣ ಎಂದು ತೋರುತ್ತದೆ.
ಕಲಬುರ್ಗಿಯವರ ಸಂಶೋಧನೆ ಲಿಂಗಾಯತ ವೀರಶೈವರ ನಡುವಿನ ಭಿನ್ನತೆ ಮತ್ತು ಲಿಂಗಾಯತ ಹಿಂದೂಗಳ ನಡುವಿನ ಭಿನ್ನತೆಯನ್ನು ಎತ್ತಿ ತೋರಿಸಿತ್ತು. ಇದರಿಂದ ಕೆಲವರಿಗೆ ಬಹಳ ಅಸಮಾಧಾನ ಉಂಟಾಗಿತ್ತು. ಕಲ್ಬುರ್ಗಿಯವರ ಹತ್ಯೆಯನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು ಎಂದು ನೇರವಾಗಿ ಹೇಳಬಹುದು,” ಎಂದು ಜಾಮದಾರ್ ಹೇಳಿದರು.
ಕಲಬುರ್ಗಿ, ಗೌರಿಯಂತಹ ಪ್ರಸಿದ್ಧ ವ್ಯಕ್ತಿಗಳನ್ನು ಕೊಂದವರನ್ನೂ ಶಿಕ್ಷಿಸಲು ನಮ್ಮ ವ್ಯವಸ್ಥೆ ಅಸಮರ್ಥವಾಗಿದೆಯೇ?
“ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಇಂದಿನ ಪರಿಸ್ಥಿತಿಯನ್ನು ಬಿಂಬಿಸುತ್ತದೆ ಒಬ್ಬ ಮಾಜಿ ಪ್ರಧಾನಿಯ ಹತ್ಯೆ ವಿಚಾರಣೆಯೂ ಈ ದೇಶದಲ್ಲಿ 20 ವರ್ಷ ನಡೆಯಿತು. ವಿಚಾರಣೆ ಮುಗಿಸಿ ಬೇಕಾದರೆ ಕಲ್ಬುರ್ಗಿ ಹತ್ಯೆಯ ಆರೋಪಿಗಳನ್ನು ನಿರ್ದೋಷಿ ಅಂತ ಹೇಳಿ, ನಮಗೆ ಸಮಸ್ಯೆಯಿಲ್ಲ. ಆದರೆ ವಿಳಂಬ ಮಾಡಬೇಡಿ,” ಎಂದು ಜಾಮದಾರ್ ಆಗ್ರಹಿಸಿದರು.
ಈಗಾಗಲೇ ಇವರನ್ನು ಸನ್ಮಾನಿಸಿ ತಮ್ಮ ನೀಚತನವನ್ನು ಮೆರೆದಿದ್ದಾರೆ. ಇವರಿಗೆ ಜಾಗತಿಕ ಲಿಂಗಾಯತ ಸಭೆಯು ಒಂದುದಿನ ಇವರ ಕುತ್ಸಿತ ನೀಚತನಕ್ಕೆ ಪಾಠವನ್ನು ಕಲಿಸುತ್ತದೆ.