ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಕಲಬುರ್ಗಿ ನಗರದಲ್ಲಿ ಇದೇ ಆಗಸ್ಟ್ ೦೪ರಿಂದ ಸೆಪ್ಟೆಂಬರ್ ೦೩ರವರೆಗೆ ಪ್ರತಿದಿನ ಸಂಜೆ ೦೬ ಗಂಟೆಗೆ ನಗರದ ಒಂದೊಂದು ಮನೆಯಲ್ಲಿ ನುರಿತ ಅನುಭಾವಿಗಳ ಉಪನ್ಯಾಸದ “ವಚನ ವೈಭವ” ಕಾರ್ಯಕ್ರಮ ಹಾಗೂ ಮಹಿಳಾ ಘಟಕದ ಸದಸ್ಯರಿಂದ ವಚನ ಪ್ರಾರ್ಥನೆ ನಡೆಯಲಿದೆ.
ದೇಶದ ವಿವಿಧೆಡೆ ಇರುವ ಆಸಕ್ತರಿಗೆ ತಿಳಿಸುವ ಸಲುವಾಗಿ ಈ ಬಾರಿ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ಫೇಸ್ ಬುಕ್ ಮೂಲಕ ಅನುಭಾವ ಕಾರ್ಯಕ್ರಮ ಪ್ರಸಾರ ಮಾಡಲಾಗುವದು.
ಆಗಸ್ಟ್ ನಾಲ್ಕರಂದು ಶರಣ ಬಸಯ್ಯಸ್ವಾಮಿ ಸಾಲಿಮಠ ಇವರ ಮನೆಯಲ್ಲಿ ಚಾಲನೆಗೊಳ್ಳುವ ಕಾರ್ಯಕ್ರಮ, ಬಸವಾದಿ ಶರಣ ಕುಂಬಾರ ಗುಂಡಯ್ಯ, ಹಡಪದ ಅಪ್ಪಣ್ಣ, ವೈದ್ಯ ಸಂಗಣ್ಣ ಹಾಗೂ ಫ.ಗು.ಹಳಕಟ್ಟಿ ಶರಣರ ಕುರಿತಾದ ಅನುಭಾವವನ್ನು ಶರಣ ಮಹಾಂತೇಶ ಕುಂಬಾರ ಮಾಡಲಿದ್ದು, ಅಧ್ಯಕ್ಷತೆಯನ್ನು ಶರಣ ಭಗವಂತರಾಯ ದಂಡಗುಂಡ ವಹಿಸಲಿದ್ದಾರೆ.
ವಚನ ವೈಭವ
12ನೇ ಶತಮಾನದಲ್ಲಿ ಬಸವಾದಿ ಶರಣರು ವರ್ಗ, ವರ್ಣ, ಜಾತಿ, ಲಿಂಗ ಭೇದವಿಲ್ಲದ ಅರಿವು ಆಚಾರ ಅನುಭಾವದ ತಳದಿಯ ಮೇಲೆ ಹೊಸ ಧರ್ಮವನ್ನು ಕಟ್ಟಿದರು. ಪ್ರಪಂಚದಲ್ಲಿಯೇ ಮೊಟ್ಟಮೊದಲು, ಪ್ರಜಾಪ್ರಭುತ್ವ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿ ಸಕಲ ಜೀವಾತ್ಮರ ಲೇಸು ಬಯಸಿ ಮಾನವ ದೇವನಾಗುವ ಬಗೆಯ ಚಿಂಥನ ಮಂಥನ ಮಾಡಿ ವಚನ ಸಾಹಿತ್ಯದ ಮೂಲಕ ಸಾರ್ವಕಾಲಿಕ ಸಮಸ್ಯೆ, ಸಂಕಟಗಳಿಗೆ ಪರಿಹಾರವನ್ನು ಕೊಟ್ಟಿದ್ದಾರೆ.
ವಚನಗಳ ಆಚರಣೆಯ ಮೂಲಕ ಹಲವಾರು ಮೌಡ್ಯ, ಕಂದಾಚಾರ ವ್ಯವಸ್ಥೆಯನ್ನು ಸರಿಪಡಿಸಿ ನೊಂದವರಿಗೆ, ಶೋಷಿತರಿಗೆ ಹೊಸ ಪರ್ಯಾಯ ವ್ಯವಸ್ಥೆಯನ್ನು ತೋರಿಸಿ ಅವರಿವರೆನ್ನದೆ ಎಲ್ಲರೊಳಗು ಶಿವಚೈತನ್ಯವಿದೆ ಎಂದು ಅರಿವಿನ ಕುರುಹು, ಅಂತರಂಗದ ಜ್ಯೋತಿಯಾದ ಇಟ್ಟಲಿಂಗವನ್ನು ಅಂಗೈಗೆ ಕೊಟ್ಟು ಅರಿವಿನ ಪಥವನ್ನು ತೋರಿಸಿದರು. ಅಂತಹ ವಚನಗಳನ್ನು ಪಡೆದ ನಾವೇ ಭಾಗ್ಯವಂತರು. ಇಂದು ಮತ್ತೆ ನಾವೆಲ್ಲ ವಚನಗಳ ಅನುಸಂಧಾನದೊಂದಿಗೆ ಕಲ್ಯಾಣರಾಜ್ಯವನ್ನು ಕಟ್ಟಬೇಕಾಗಿದೆ.
ಅದಕ್ಕಾಗಿ ಸಂಘಟನೆಗಳು ಬಹುಮುಖಿ ಕಾರ್ಯಗಳಲ್ಲಿ ಒಂದಾದ “ವಚನ ವೈಭವ” ಕಾರ್ಯಕ್ರಮದ ಮುಖಾಂತರ ಶರಣರ ಜೀವನ ದರ್ಶನ ಎಂಬ ಮಾಲಿಕೆಯೊಂದಿಗೆ ಸಮಾಜದಲ್ಲಿ ವಚನಗಳನ್ನು ಬಿತ್ತುವ ಕೈಂಕರ್ಯದ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಚನ ಬೀಜಗಳನ್ನು ತಮ್ಮೊಳಗೆ ಬಿತ್ತಿಕೊಂಡು ಶರಣ ಬೆಳೆಯನ್ನು ಬೆಳೆಯಬೇಕಾಗಿದೆ.ಶರಣರ ಬದುಕಿನ ದರ್ಶನ ಮಾಡಿಕೊಂಡು ಶರಣ ಬದುಕನ್ನು ಬದುಕಬೇಕಾಗಿದೆ.
ಪ್ರತಿ ತಿಂಗಳು ಶರಣ ಸಂಗಮ
ಶರಣ ತತ್ವಗಳ ಜಾಗೃತಿ ಮತ್ತು ಪ್ರಚಾರಕ್ಕಾಗಿ ಪ್ರತಿ ತಿಂಗಳು 25ರಂದು ಎಲ್ಲಾ ಬಸವಪರ ಸಂಘಟನೆಗಳ, ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕ, ಯುವ ಘಟಕ ಹಾಗೂ ಕಾಯಕ ಶರಣರ ಸಂಘಟನೆಗಳ ಸಹಕಾರದೊಂದಿಗೆ ಕಲಬುರ್ಗಿ ಆನಂದ ನಗರದ ಬಸವ ಮಂಟಪದಲ್ಲಿ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಯಾ ತಿಂಗಳಲ್ಲಿ ಬರುವ ಶರಣರ ಜಯಂತಿ ಆಚರಿಸುವುದಲ್ಲದೆ, ಅವರ ವಿಚಾರಗಳ ಕುರಿತು ಅನುಭಾವ ನೀಡುವ ಕಾರ್ಯ ನಡೆಯಲಿದೆ.
ಅದಲ್ಲದೆ ಜಾಗತಿಕ ಲಿಂಗಾಯತ ಮಹಾಸಭೆಗೆ ಸದಸ್ಯರಾಗುವುದರ ಮೂಲಕ ಸಂಘಟನೆಯನ್ನು ಬಲಪಡಿಸುವ ಹೊಣೆಗಾರಿಕೆ ಎಲ್ಲಾ ಬಸವ ಅಭಿಮಾನಿಗಳ ಶರಣ ಅನುಯಾಯಿಗಳ ಮೇಲಿದೆ ಎಂದು ಸಂಘಟಕರು ಹೇಳಿದರು.