ಬೀದರ
ಹಡಪದ ಅಪ್ಪಣ್ಣನವರು ಕಲ್ಯಾಣ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸಾಹಿತಿ ರಮೇಶ ಮಠಪತಿ ಹೇಳಿದರು.
ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಗುರುವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಪ್ರಮುಖ ಶರಣರಲ್ಲೊಬ್ಬರಾಗಿದ್ದ ಅಪ್ಪಣ್ಣನವರು ಬಸವಣ್ಣನವರ ಪರಮಾಪ್ತರಾಗಿದ್ದರು. ಆರಂಭದಿಂದ ಕೊನೆವರೆಗೂ ಬಸವಣ್ಣನವರ ಜತೆಗಿದ್ದರು. ಅನೇಕ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಸವಣ್ಣನವರಿಗೆ ನಿರಾಳತೆಯನ್ನಿತ್ತ ಮಹಾನುಭಾವರು ಅವರು ಎಂದು ತಿಳಿಸಿದರು. ಮಹಾಮನೆ ಹಾಗೂ ಅನುಭವ ಮಂಟಪದಲ್ಲಿ ಅವರ ಕಾರ್ಯ ಹಿರಿದಾಗಿತ್ತು ಎಂದು ತಿಳಿಸಿದರು.
ಅಪ್ಪಣ್ಣನವರ 250 ಹಾಗೂ ಅವರ ಸತಿ ಲಿಂಗಮ್ಮನವರ 251 ವಚನಗಳು ಲಭ್ಯವಾಗಿವೆ. ಮಾನವ ಘನತೆಯಿಂದ ಹೇಗೆ ಬದುಕಬೇಕು ಎಂಬುದ್ದನ್ನು ಅಪ್ಪಣ್ಣ ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.
ಕಾಯಕ ನಿಷ್ಠೆ, ದಾಸೋಹ ಹಾಗೂ ಮೂಢಾಚಾರಗಳ ವಿಡಂಬನೆ ಅವರ ವಚನಗಳಲ್ಲಿ ಹಾಸು ಹೊಕ್ಕಿವೆ ಎಂದು ತಿಳಿಸಿದರು. ಅಪ್ಪಣ್ಣನವರ ಸತಿ ಲಿಂಗಮ್ಮ ಶಿವಯೋಗ ಶಿಖರಕ್ಕೇರಿದ ಶರಣೆ. ಯೋಗ ಸಾಧಿಸಬಯಸುವವರು ಲಿಂಗಮ್ಮನವರ ವಚನಗಳ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಅಪ್ಪಣ್ಣ ಹಾಗೂ ಲಿಂಗಮ್ಮ ಅವರು ಸಮಾಜಕ್ಕೆ ಆದರ್ಶಪ್ರಾಯರು. ಅವರ ತತ್ವಗಳನ್ನು ಅನುಸರಿಸಿದಾಗ ಮಾತ್ರ ಅವರಿಗೆ ನಿಜ ಗೌರವ ಸಲ್ಲಿಸಿದಂತಾಗುತ್ತದೆ. ಅವರ ಜಯಂತಿ ಆಚರಣೆಯು ಸಾರ್ಥಕವಾಗುತ್ತದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ ವಚನ ಪಠಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೇತೃತ್ವ ವಹಿಸಿದ್ದ ಪರುಷ ಕಟ್ಟೆಯ ಚನ್ನಬಸವಣ್ಣ ವಚನ ಗಾಯನ ಮಾಡಿದರು. ಹುಮನಾಬಾದ್‍ನ ಮಲ್ಲಿಕಾರ್ಜುನ ರಟಕಲ್ ಅಪ್ಪಣ್ಣನವರ ವಚನ ವಾಚಿಸಿದರು.
ಆರ್. ಕೆ. ಪಾಟೀಲ, ಅಶೋಕ ಎಲಿ, ವೈಜನಾಥ ಹುಣಸಗೇರಿ, ಪ್ರಕಾಶ ಮಠಪತಿ, ನೀಲಮ್ಮ ರೂಗನ್, ಸಂಗೀತಾ ಗಣಾಚಾರಿ, ಜಗದೇವಿ ಚಿಮಕೋಡೆ, ಶಿವಕುಮಾರ ಪಾಖಾಲ್ ಉಪಸ್ಥಿತರಿದ್ದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಕದಳಿಶ್ರೀ ಅವಿನಾಶ ವಂದಿಸಿದರು.