ಕಲ್ಯಾಣ ಕ್ರಾಂತಿಯಲ್ಲಿ ಶರಣೆ ಕಲ್ಯಾಣಮ್ಮ ಅವರದು ಮಹತ್ವದ ಪಾತ್ರ: ಡಿ.ಪಿ.ನಿವೇದಿತಾ

ಬಸವ ಮೀಡಿಯಾ
ಬಸವ ಮೀಡಿಯಾ

ಬೈಲಹೊಂಗಲ:

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣೆ ಕಲ್ಯಾಣಮ್ಮನವರ ಪಾತ್ರ ತುಂಬಾ ಮಹತ್ವದ್ದಿದೆ. ಅವರ ಸಲಹೆಯಿಂದಲೇ ಶರಣ ಹರಳಯ್ಯನವರು ಬಸವಣ್ಣನವರಿಗೆ ಚಮ್ಮಾವುಗೆ ಮಾಡಿಕೊಡಲು ಸಾದ್ಯವಾಯಿತು. ಶರಣು ಶರಣಾರ್ಥಿ ನಾಂದಿಯಾದರೆ, ಕಲ್ಯಾಣಮ್ಮನವರು ಆ ಕ್ರಾಂತಿಯು ಜೋರಾಗಿ ಉರಿಯಲು ಸಹಾಯ ಮಾಡಿದರು ಎಂದು ನಾಗನೂರು ಬಸವಾಶ್ರಮದ ಕಾರ್ಯದರ್ಶಿ ಡಿ.ಪಿ.ನಿವೇದಿತಾ ಹೇಳಿದರು.

ಅವರು ಬೈಲಹೊಂಗಲ ತಾಲೂಕಿನ ಮೆಟ್ಯಾಲ ಗ್ರಾಮದಲ್ಲಿ ಅ. 03ರಿಂದ ಆರಂಭಗೊಂಡ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ, ನಾಗನೂರು ಗುರುಬಸವ ಮಠದ ಬಸವಗೀತಾ ಮಾತಾಜಿ ಅವರ ಬಸವಧರ್ಮ ಪ್ರವಚನದ ಸಮಾರೋಪವು 12ರ ಶನಿವಾರದಂದು ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಮಗೆ ವಿಶ್ವದ ಪ್ರಥಮ ಮಹಿಳಾ ಚಿಂತಕರು ಅಂತಾ ಸಿಗುವುದು 16ನೇ ಶತಮಾನದ ನಂತರ. ಆದರೆ ಅದೆಲ್ಲದಕ್ಕೂ ಮೊದಲು 12 ನೇ ಶತಮಾನದಲ್ಲಿಯೇ ಹಲವಾರು ಮಹಿಳೆಯರು ಶರಣೆಯರ ರೂಪದಲ್ಲಿ ಸಮಾಜಕ್ಕೆ ಮಾದರಿಯಾಗಿ‌ ಸಿಗುತ್ತಾರೆ. ವಿಚಾರ ಪತ್ನಿಯಾಗಿ ನೀಲಮ್ಮ, ಆದರ್ಶ ತಾಯಿಯಾಗಿ ಅಕ್ಕನಾಗಲಾಂಬಿಕಾ, ಆದರ್ಶ ಸತಿಯಾಗಿ ಆಯ್ದಕ್ಕಿ ಲಕ್ಕಮ್ಮ, ದಿಟ್ಟ ಮಹಿಳೆಯಾಗಿ ಸತ್ಯಕ್ಕ ಹೀಗೆ. ಆದ್ದರಿಂದ ಮಕ್ಕಳನ್ನು ತತ್ವದೆಡೆಗೆ ತರುವಲ್ಲಿ ತಾಯಂದಿರ ಪಾತ್ರ ತುಂಬಾ ಮಹತ್ವದ್ದು ಎಂದು ನಿವೇದಿತಾ ಹೇಳಿದರು.

ಪ್ರವಚನಕಾರರಾದ ಬಸವಗೀತಾ ತಾಯಿಯವರು ಮಾತನಾಡಿ, ಸ್ತ್ರೀಯರು ಋತುಮತಿ ಆಗುವುದರಿಂದ ಮಲಿನವಾಗುತ್ತಾರೆ ಎಂಬ ಮೌಢ್ಯ ಹೇಳುತ್ತಾ ಬಂದಿದ್ದಾರೆ, ನೀವೂ ಅದನ್ನೇ ನಂಬಿಕೊಂಡು ಕುಳಿತಿದ್ದೀರಿ. ಆದರೆ ನಿಜವಾಗಿಯೂ ಮಹಿಳೆ ಅಪವಿತ್ರವಾಗುವುದು ತನ್ನ ಪತಿಯನ್ನು ಬಿಟ್ಟು ಪರಪುರುಷನನ್ನು ನೋಡಿದಾಗ ಮಾತ್ರ ಎಂದು ಹೇಳಿದರು. ಈ ವಿಷಯದಲ್ಲಿ ನಮಗೆ ಬಸವಾದಿ ಶರಣರ ಬದುಕೇ ಆದರ್ಶ ಎಂದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಬಸವಪ್ರಕಾಶ ಸ್ವಾಮಿಗಳು ಮಾತನಾಡಿ, ಅಕ್ಕಮಹಾದೇವಿ ತಾಯಿಯವರು ದೇವರಿಗೇ ನಾನು ನಿನಗೆ ಒಲಿದೆ, ಅಂದಾಗ ಮಾತ್ರ ನೀನು ನನಗೆ ಒಲಿದಿದ್ದೀಯಾ ಎಂದು ಹೇಳುತ್ತಾಳೆ. ಜಗತ್ತಿನಲ್ಲಿ ಯಾರೂ ದೇವರಿಗೆ ಒಲಿದಿಲ್ಲ ಬದಲಿಗೆ ದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇಂತಹ ಸಾಕ್ಷ್ಯಗಳು ಸಿಗುವುದು 12 ನೇ ಶತಮಾನದಲ್ಲಿ ಮಾತ್ರ ಎಂದು ಹೇಳಿದರು.

ಶರಣರಾದ ಬಸವರಾಜ ಕಡೇಮನಿ, ಶಿವಾನಂದ ಅಗಸಿಮನಿ, ಈರಣ್ಣ ಕಾರ್ಯಕ್ರಮದ ಕುರಿತು ಮಾತನಾಡಿದರು.

ಆನಂದ ಅಸುಂಡಿ ಪ್ರಾರ್ಥಿಸಿದರು. ಮಡಿವಾಳಪ್ಪ ಅಸುಂಡಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಶರಣ, ಶರಣೆಯರು ಉಪಸ್ಥಿತರಿದ್ದರು

Share This Article
1 Comment

Leave a Reply

Your email address will not be published. Required fields are marked *