ಸೂಫಿ ಶರಣರ ನಾಡು ಹಗಲು ಕಣ್ಕಟ್ಟು ಆಟವನ್ನು ತಿರಸ್ಕರಿಸಿದೆ. ಆದರೆ ಸೌಹಾರ್ದದ ದೀಪ ಆರದಂತೆ ನೋಡಿಕೊಳ್ಳಲು ದೊಡ್ಡ ಹೋರಾಟದ ಅವಶ್ಯವಿದೆ.
ಕಲಬುರಗಿ
ಗುಬ್ಬಿಗಳು ನೀರಲ್ಲಿ ಮೈಯದ್ದಿ ಉರಿವ ಕಾಡ್ಗಿಚ್ಚಿಗೆ ಸಿಂಪಡಿಸಿ ದ್ವೇಷಾಗ್ನಿ ನಂದಿಸುವ ಪರಿ ನೋಡಾ
ಕಾಡ್ಗಿಚ್ಚು ಧಗಧಗಿಸುವಾಗ ನೋಡುತ ನಿಂತ ಬಲಾಢ್ಯ ಪ್ರಾಣಿಗಳ ದಂಡು ನೋಡಾ
ಕಲಬುರಗಿಯು ಶರಣ ಸೂಫಿ ಸಂತರ ನೆಲ. ಇಲ್ಲಿ ದ್ವೇಷ-ಅಸೂಯೆಗೆ ಜಾಗ ಸಿಗುವುದು ಬಲು ಕಷ್ಟ. ಈ ಮಣ್ಣ ಗುಣವೇ ಅಂತಹದ್ದು. ‘ಹುಸೇನಕ್ಕಾ ಮನ್ಯಾಗ ಜರಾ ಚಾಪುಡಿ ಅದಾ ಏನ್ ಕುಡು. ಮನಿಗಿ ನೆಂಟ್ರು ಬಂದಾರ..’ ಅಂತ ಸಂಗಮ್ಮಕ್ಕ ಪಕ್ಕದ ಮನೆಯ ಹುಸೇನ್ ಬೀಗಿ ಕೇಳಿದ್ರ ‘ಅದಾ ತಗೋ ಸಂಗಮ್ಮಕ್ಕ. ಮತ್ ಹಾಲನೂ ಅವಾ. ಬೇಕಂದ್ರ ತಗೊ..’ ಅನ್ನುವ ಹುಸೇನ್ ಬಿ ಗೆ ಯಾರೂ ಕೂಡಿಸಿ ಕ್ಲಾಸ್ ಮಾಡಲಿಲ್ಲ.
ಅಮೀನಾ ಬೇಗಂ ಕೈಯ ಮದರಂಗಿ ಯಲ್ಲಮ್ಮನ ಕೈಯಲ್ಲಿಯೂ ಅರಳಿದೆ. ಮೊಹರಂ ನಲ್ಲಿ ಚೊಂಗ್ಯಾ ತಿಂದರೆ, ರಂಜಾನ್ ನಲ್ಲಿ ಸಿರಿನ ಕೂರ್ಮಾ (ಸುರಕುಂಬ) ಕುಡಿದಿದ್ದೇವೆ. ದೀವಳಿಗೆಯಲ್ಲಿ ಕರಜಿಕಾಯಿ ಕೋಡಬಳೆ ತಿಂದು ಹರಟೆ ಹೊಡೆದರೆ, ಎಳ್ಳಮವಾಸ್ಯೆಯಲ್ಲಿ ಸರ್ವೊಂದು ಶ್ರಮಿಕ ಜನಸಮುದಾಯ ಸಜ್ಜಿ ರೊಟ್ಟಿ ಭಜ್ಜಿ ಪಲ್ಯ ಉಂಡು ಮ್ಯಾಲೀಟು ಅಂಬಲಿ ಕುಡಿದು, ಸ್ವಲ್ಪ ಹೊತ್ತಿಗೆ ಕಬ್ಬು ಮೆಲ್ಲುತ್ತ ಹಸಿಗಡಲೆ ತಿನ್ನುತ ಕಷ್ಟ ಸುಖ ಹಂಚಿಕೊಂಡಿದ್ದೇವೆ.
ಸಹಜ ಒಡನಾಟ
ಬೀದರನ ಚಿಟಗುಪ್ಪದಲ್ಲಿ ನಮ್ಮ ಭಾಭಿ ಮನೆ ಇದೆ. ಅವಳು ಎಲ್ಲರಿಗೂ ಭಾಭಿ. ಗಲ್ಲಿಯಲ್ಲಿ ಯಾರದೇ ನೆಂಟಸ್ತನ, ತೊಟ್ಟಿಲು, ಕುಬುಸ ಏನೇ ಇರಲಿ ಅದೆಲ್ಲವೂ ಭಾಭಿ ಮನೆಯಂಗಳದಲ್ಲಿಯೇ ನಡೆಯುವುದು.
ಇಂತಹವೆಲ್ಲ ಪ್ರತಿ ಗಲ್ಲಿಗೂ ಹಳ್ಳಿಗೂ ಇದ್ದ ಸಹಜವಾದ ಪರಿಸರ. ಅದು ಜಲಜಲ ಹರಿವ ತಿಳಿ ನೀರಂತೆ. ಆದರೆ ಇನ್ನಷ್ಟು ಘನಿಷ್ಟ ಪರಂಪರೆಯು ಹೀಗೇ ಎಲ್ಲೆಡೆಯೂ ಇದ್ದೇ ಇದೆ. ಬಬಲಾದ ಮುತ್ಯಾನ ತಲೆಗೆ ಹಸಿರು ರುಮಾಲು, ತಿಂಥಿಣಿಯಲ್ಲಿ ದೋಸ್ತರಾಹೋದ್ದಿನ ಪರಂಪರೆ, ರಾಣೋಜಿ ಪೀರ್ ದರ್ಗಾವೂ ಇಂತಹದ್ದೇ ದೋಸ್ತರಾಹೋದ್ದಿನ ಮುಂದುವರೆದ ಭಾಗ.
ಕುಸನೂರಿನಲ್ಲಿಯೂ ಸಿದ್ದಪ್ಪಯ್ಯಾಜಿ ದೋಸ್ತನ ಮರ‍್ಗೂ ಸಿದ್ದಪ್ಪಯ್ಯಾಜಿಯ ಗುಡಿಗೂ ಯಾರೂ ಬಿಡಿಸದ ನಂಟಿದೆ. ಸ್ಥೂಲವಾಗಿ ಹೇಳುವಾಗ ಶರಣಬಸಪ್ಪ ಮತ್ತು ಖ್ವಾಜಾ ಬಂದೆನವಾಜ್ ಗೇಸುದರಾಜ ಉದಾಹರಣೆಯು ಎಂದೂ ಮುಕ್ಕಾಗದ ಅಕ್ಷಯದ ಕೂಡು ಸಂಸ್ಕೃತಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.
ಭಾವೈಕ್ಯತೆಯ ಸಹಿಸದವರು

ಆದರೆ ಆರ್ ಎಸ್ ಎಸ್ (ರಾಷ್ಟ್ರೀಯ ಸರ್ವನಾಶ ಸಮಿತಿ)ಗೆ ಈ ಭಾವೈಕ್ಯತೆ ಹೇಗೆ ಒಡೆಯಬೇಕೆಂಬುದೇ ಅವರ ದಿನ ನಿತ್ಯದ ಚಿಂತೆ. ಅವರಲ್ಲಿ ಎಂದೂ ಮುಗಿಯದಷ್ಟು ಹಣ ಇದೆ. ಚಡ್ಡಿ ಟೋಪಿ ತೊಟ್ಟು ಮಂಡ ಬಡಿಗೆ ತಿರುವುತ ಪಥಸಂಚಲನ ಮಾಡುವ ದಂಡು ಇದೆ. ಕೇಂದ್ರ ಸರಕಾರವೇ ಅವರದ್ದು. ಜಗತ್ತಿನಲ್ಲಿ ಅಮೇರಿಕದ ಹಿಟ್ಲರ್ ನಂತಹ ಸರ್ವಾಧಿಕಾರಿ ಟ್ರಂಪ್ ಇವರದೇ ದೋಸ್ತಿ. ದೇಶದ ಕಾರ್ಪೋರೆಟ್ ಕುಳಗಳು ಇವರದ್ದೇ.
ಈ ಭಾವೈಕ್ಯತೆ ಹೇಗೆ ಒಡೆಯಬೇಕೆಂಬುದೇ ಅವರ ದಿನ ನಿತ್ಯದ ಚಿಂತೆ.
ಕಂಡಕಂಡಲ್ಲಿ ವಿಷ ಹರಡುವ ಶಾಲೆಗಳು ತಿಂಗಳಾನುಗಟ್ಟಲೆ ನಡೆಯುತ್ತಲೇ ಇರುತ್ತವೆ. ಎಳೆಮಕ್ಕಳನ್ನು ಗುರಿಯಾಗಿಸಿ ಕೋಮು ವಿಷ ಬೀಜ ನೆಡುವಲ್ಲಿ ಬಹಳ ಮುಂದಿದ್ದಾರೆ. ದೇಶದಲ್ಲಿ ಅನೇಕ ಪ್ರದೇಶಗಳು ಇವರಿಗೆ ಸವಾಲಾಗಿದ್ದು ಅಲ್ಲೆಲ್ಲಾ ಕಳೆದ ಅನೇಕ ವರ್ಷಗಳಿಂದ ತಮ್ಮ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಒಬ್ಬೊಬ್ಬ ಕೇಡರ್ ತಮ್ಮ ಜೀವನವನ್ನೇ ಕೋಮಜ್ವಾಲೆ ಹಬ್ಬಿಸಲು ಹಲವಾರು ವೇಷ ತೊಡುತ್ತ ಸವೆಸಿದ್ದಾರೆ.
ಅವೈದಿಕ ನೆಲೆಯ ಚಿಂತನಧಾರೆಗಳು ಚಳುವಳಿ ಸ್ವರೂಪ ನಡೆದದ ಪ್ರದೇಶಗಳು ಇವರ ಸನಾತನಿ ಚಿಂತನೆಗೆ ಸ್ಪೇಸ್ ಕೊಡುತ್ತಿಲ್ಲವಾದ್ದರಿಂದ ಅಂತಹಲ್ಲಿ ಮರಳಿ ಪ್ರಯತ್ನವ ಮಾಡುತ್ತಲೇ ಇದ್ದಾರೆ. ಅನೇಕ ವರ್ಷಗಳಿಂದ ಈ ಕೆಲಸಕ್ಕಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನೇಮಕಗೊಂಡಿದ್ದು ಬಸವರಾಜ ಪಾಟಿಲ ಸೇಡಂ. ಹದಿಮೂರು ವರ್ಷಗಳ ಹಿಂದೆ ಕಲಬುರಗಿ ಕಂಪು ಹೆಸರಿನಲ್ಲಿ ಕಾರ್ಯಕ್ರಮ ನಡೆಸಿರುವರು. ಬಸವನುದಿಸಿದ, ಬುದ್ಧ ತತ್ವದ ನಾಡು ಎಂಬುದನ್ನು ಅಳಿಸಿ ಹಾಕಲು ಅಂದು ಕೊಟ್ಟ ಘೋಷಣೆ ಏನೆಂದರೆ ‘ಕಲ್ಯಾಣ ಕರ್ನಾಟಕವು ಹನುಮದುಸಿದ ನಾಡು’ ಎಂದು.
ಬಸವನುದಿಸಿದ, ಬುದ್ಧ ತತ್ವದ ನಾಡು ಎಂಬುದನ್ನು ಅಳಿಸಿ ಹಾಕಲು ಅಂದು ಕೊಟ್ಟ ಘೋಷಣೆ ಏನೆಂದರೆ ‘ಕಲ್ಯಾಣ ಕರ್ನಾಟಕವು ಹನುಮದುಸಿದ ನಾಡು’ ಎಂದು.
ಚಾರಿತ್ರಿಕ ತಪ್ಪು

ಆಗಲೇ ಇದಕ್ಕೆ ಹಿಮ್ಮೆಟ್ಟಿಸಬೇಕಿತ್ತು. ಅದೊಂದು ಚಾರಿತ್ರಿಕ ತಪ್ಪು ನಡೆದು ಹೋಯಿತು. ಅನೇಕ ಲಿಂಗಾಯತರು ಶರಣ ತತ್ವ ವಿರೋಧಿಗಳು ಹಾಕಿದ ಬಲೆಗೆ ಬೀಳಲು ಕ್ಯೂ ಹಚ್ಚಿದ್ದರು. ಎರಡುವರೆ ವರ್ಷಗಳ ಹಿಂದೆ ಕಲಬುರಗಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಕೇಡರ್ಸ್ ಬೈಠಕ್ ಆರ್ ಎಸ್ ಎಸ್ ನಡೆಸಿತು. ಅಲ್ಲಿ ತೀರ್ಮಾನವಾಗಿದ್ದು ಈ ಏಕ ಸಂಸ್ಕೃತಿ ಉತ್ಸವ. ಬೈಠಕ್ ನ ನಂತರದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಮಾದ್ಯಮದವರಿಗೆ ಗಣವೇಷಧಾರಿಗಳಾಗಿ ಬರಬೇಕು ಎಂದು ಫರಮಾನ್ ಹೊರಡಿಸಿದ್ದು ಮೋಹನ್ ಭಾಗವತ್. ಮಾದ್ಯಮದವರು ನಿರಾಕರಿಸಿದರು. ಕೆಲವರು ತೀವ್ರ ವಿರೋಧಿಸಿದರು.
ಅನೇಕ ಲಿಂಗಾಯತರು ಶರಣ ತತ್ವ ವಿರೋಧಿಗಳು ಹಾಕಿದ ಬಲೆಗೆ ಬೀಳಲು ಕ್ಯೂ ಹಚ್ಚಿದ್ದರು.
ಲಿಂಗಾಯತರನ್ನು ಗುರಿಯಾಗಿಸಿ, ವಚನ ಸಾಹಿತ್ಯ ನಾಶ ಮಾಡುವ ಯೋಜನೆ ಜಾರಿ ಮಾಡುವ ನೀಲನಕ್ಷೆ ಸಿದ್ಧವಾಗಿತ್ತು. ಇದನ್ನು ಗ್ರಹಿಸಿದ ನಾವು ವಿರೋಧಿಸಿ ಗಟ್ಟಿ ದನಿ ಎತ್ತಿದೆವು. ಆದರೆ ಅವರಲ್ಲಿ ಆಗಲೇ ಒಂದು ತಂಡವು ಬೆಲ್ಜಿಯಂನಲ್ಲಿ ವಚನ ಸಾಹಿತ್ಯವನ್ನು ಅಲ್ಲಗಳೆವ, ಚಳುವಳಿ ನಡೆದೇ ಇಲ್ಲ ಎನ್ನುವಂತ ವಿಚಾರಗಳನ್ನು ಹಬ್ಬಿಸುತ ಸಂಶೋಧನೆಗೆ ತೊಡಗಿದ್ದರು. ಶರಣರನ್ನು ಪುಂಡರ ಗುಂಪೆಂದು ಹೀಗಳೆದರು. ಜಾತಿ ವ್ಯವಸ್ಥೆ ವಿರುದ್ಧ ವಚನಕಾರರು ದನಿಯೇ ಎತ್ತಲಿಲ್ಲ ಎಂಬ ವಾದ ಮುಂದು ಮಾಡತೊಡಗಿದರು. ಬಹಿರಂಗವಾಗಿ ಚರ್ಚೆಗಳಿಗೆ ಮುಂದಾದೆವು. ಪಂಥಾಹ್ವಾನಕ್ಕೆ ಮುನ್ನುಡಿ ಬರೆಯಲಾಯಿತು.
ಆದರೆ ನಾಗಪುರದ ನಾಜಿ ಪಡೆಯು ಮಾಡಿದ ತೀರ್ಮಾನ ಜಾರಿಗೊಳಿಸಲು ಶೂದ್ರ ದಲಿತಾದಿಗಳನ್ನು ಮುಂದೆ ಮಾಡಿದರು. ನಮ್ಮದೇ ಕಣ್ಣು ನಮ್ಮದೇ ಬೆರಳು. ಇದು ಸಂಘಿಗಳು ಮಾಡುವ ಯಾವತ್ತಿನ ಷಡ್ಯಂತ್ರ ಕುತಂತ್ರ. ಸೀಟಿ ಅವರ ಬಾಯಲ್ಲಿ ಲಾಠಿ ನಮ್ಮ ಕೈಯಲ್ಲಿ. ಮುಂದುವರೆದ ಭಾಗವು ಯು ಟರ್ನ್ ಮೂಲಕ ಪ್ರಕಟಗೊಂಡಿತು. ಏಕೆಂದರೆ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕದ ಸರಕಾರವು ಘೋಷಣೆ ಮಾಡಿದ್ದಕ್ಕಾಗಿ ಸಂಘಿಗಳಿಗೆ ತಮ್ಮ ನೀಲನಕ್ಷೆ ಮಸಳಿಸುತ್ತಿರುವುದು ಅರಿವಿಗೆ ಬರತೊಡಗಿತು.
ನಾಗಪುರದ ನಾಜಿ ಪಡೆಯು ಮಾಡಿದ ತೀರ್ಮಾನ ಜಾರಿಗೊಳಿಸಲು ಶೂದ್ರ ದಲಿತಾದಿಗಳನ್ನು ಮುಂದೆ ಮಾಡಿದರು. ನಮ್ಮದೇ ಕಣ್ಣು ನಮ್ಮದೇ ಬೆರಳು.
ಲಿಂಗಾಯತರ ಸೆಳೆಯುವ ಹುನ್ನಾರ

ಹೀಗಾಗಿ ಯುಟರ್ನ್ ಹೊಡೆದು ‘ವಚನ ದರ್ಶನ’ ಎಂಬ ಪುಸ್ತಕದ ಮೂಲಕ ಶರಣರು ವೈದಿಕತೆಯನ್ನೇ ವಚನಗಳ ಮೂಲಕ ಸಾರಿದರು ಎಂದು ಸುಳ್ಳು ಹರಿಯಬಿಡುವ ಹುನ್ನಾರ ಹೆಣೆದರು. ಹಾವಿನ ಬುಟ್ಟಿಯಲ್ಲಿನ ಕಾರ್ಕೋಟ ವಿಷದ ಹಾವನ್ನು ಹೊರ ತೆಗೆದರು. ಆದರೆ ನಮ್ಮ ನಾಡು ಎಂದಿಗೂ ತಾತ್ವಿಕ ಚಿಂತನೆಗೂ, ಬೀದಿ ಚಳುವಳಿಗೂ ಹಿಂದೆ ಸರಿದಿದ್ದಿಲ್ಲ. ಏಕೆಂದರೆ ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದ್ದು ಎಂಬ ಶರಣ ತತ್ವದ ನೆಲ ನಮ್ಮದು. ಇವರು ಸೃಷ್ಟಿಸಿದ ದೇವರಿಗೇ ಸವಾಲೊಡ್ಡಿ ಬಾಳಬಟ್ಟೆ ನಡೆಸಿದವರು ನಾವು. ಹೀಗಾಗಿ ಸವಾಲುಗಳ ಸರಮಾಲೆಯನ್ನೇ ಈಗ ಅವರು ಎದುರಿಸಬೇಕಾಗಿದೆ.
ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದ್ದು ಎಂಬ ಶರಣ ತತ್ವದ ನೆಲ ನಮ್ಮದು
ಬಸವರಾಜ ಪಾಟಿಲ ಸೇಡಂ ಅವರು ಲಿಂಗಾಯತ ತತ್ವವನ್ನು ನಾಶ ಮಾಡುವ ಯೋಜನೆ ಜಾರಿ ಮಾಡುವ ಭಾಗವಾಗಿಯೇ ಅನೇಕ ವೇಷ ತೊಟ್ಟು ಬರುತ್ತಿದ್ದಾರೆ. ಈ ಬಾರಿ ಅವರು ಹೊಸ ತಂತ್ರಗಾರಿಕೆ ಮಾಡಿ ‘ಭಾರತೀಯ ಸಂಸ್ಕೃತಿ ಉತ್ಸವ’ ಎಂದು ಹೆಸರಿಟ್ಟು ಒಂಬತ್ತು ದಿನಗಳಲ್ಲಿ ೨೫ ಲಕ್ಷ ಜನರು ದೇಶದಾದ್ಯಂತ ಬಂದು ಭಾಗವಹಿಸುವಂತೆ ಬೃಹತ್ ಕಾರ್ಯಕ್ರಮ ರೂಪಿಸಿದರು. ಲಿಂಗಾಯತ್ ಜನರನ್ನು ಸೆಳೆದುಕೊಳ್ಳಲು ಹೊಸ ಹೊಸ ಮಾರ್ಗ ಹುಡುಕಿಕೊಳ್ಳತೊಡಗಿದರು. ಅನೇಕ ಮಠಾಧೀಶರನ್ನು ತಮ್ಮೆಡೆಗೆ ಸೆಳೆಯಲು ಹವಣಿಸಿದರು.
ಇಷ್ಟಾದಾಗ್ಯೂ ಸಂಘೋತ್ಸವದ ನವದಿನಗಳು ದಿನೇ ದಿನೇ ಜನರಿಲ್ಲದೇ ಬಿಕೋ ಎನ್ನತೊಡಗಿದ್ದು ಹೌದು. ಅವರ ಕ್ಯಾಮೆರಾಗಳು ವೇದಿಕೆಯತ್ತಲೇ ಕಣ್ಣು ನೆಟ್ಟಿದ್ದು ಬಿಟ್ಟರೆ ಜನರತ್ತ ಹೊರಳುವ ಅಲ್ಲಿನ ವಿದ್ಯಮಾನಗಳನ್ನು ದರ್ಶಿಸುವ ಧೈರ್ಯ ಮಾಡಲಿಲ್ಲ. ಬಿಜೆಪಿಗರ ದಂಡು ಬಂದು ಬೆಸ್ತು ಬಿದ್ದು ಮರಳುವಾಗ ಕೆರಳಿ ಕಂಡಾಮಂಡಲವಾಗಿದ್ದು ಈಗಾಗಲೇ ಶೋಭಾ ಕರಂದ್ಲಾಜೆ ಎಂಬ ಮಹಿಳೆಯನ್ನು ನೋಡಿದ ಮೇಲೆ ನಿಮಗೆ ಗೊತ್ತಾಗಿರಲಿಕ್ಕೆ ಸಾಕು. ಇನ್ನು ಕೆಲವು ಮಠಾಧೀಶರು ಬಸವ ಮಂತ್ರ ಜಪಿಸುತ್ತಲೇ ಹೋಗಿ ಬಸವ ವಿರೋಧಿ ವೇದಿಕೆ ಏರಿ ‘ಹಬ್ಬಕ್ಕೆ ತಂದ ಹರಕೆಯ ಕುರಿತು ತಳಿರು ಮೇಯಿತ್ತು’ ಎಂಬ ಪರಿಸ್ಥಿತಿಗೆ ಪಕ್ಕಾದರು.
ಬಸವರಾಜ ಪಾಟಿಲ ಸೇಡಂ ಅವರು ಲಿಂಗಾಯತ ತತ್ವವನ್ನು ನಾಶ ಮಾಡುವ ಯೋಜನೆ ಜಾರಿ ಮಾಡುವ ಭಾಗವಾಗಿಯೇ ಅನೇಕ ವೇಷ ತೊಟ್ಟು ಬರುತ್ತಿದ್ದಾರೆ.
ಬದ್ಧತೆಯಿಲ್ಲದ ಗುರುಗಳು

ಅವರಲ್ಲಿ ಮುಖ್ಯರಾದವರು ಭಾಲ್ಕಿ ಹಿರೆಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು. ಅವರು ಬಹುತ್ವ ಭಾರತ ಸಂಸ್ಕೃತಿ ಉತ್ಸವಕ್ಕೂ ಬಂದರು. ಮತ್ತು ಲಿಂಗಾಯತ ವಿರೋಧಿಗಳ ವೇದಿಕೆಗೂ ಹೋದರು. ಹಾಗೆಯೇ ಡಾ.ಗಂಗಾಂಬಿಕಾ ಪಾಟಿಲ ಅವರು ಸಹ ಇದೇ ಹಾದಿ ತುಳಿದರು. ಯಾಕೆ ಹೀಗೆ?
ಯಾಕೆಂದರೆ ಶರಣ ತತ್ವವೆಂಬುದು ಗರಗಸದಂತೆ. ಭಕ್ತಿಯೆಂಬುದು ಮಾಡಬಾರದಯ್ಯ, ಹೋಗುತ್ತಲೂ ಕೊಯ್ಯುವುದು ಬರುತ್ತಲೂ ಕೊಯ್ಯುವುದು. ಇದಕ್ಕೆ ಒಡ್ಡಿಕೊಂಡವರು ನಮ್ಮ ಶರಣರು. ಮತ್ತು ಅತ್ಯಂತ ದೃಢವಾಗಿ ‘ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ ಶರಣನಾರಿಗಂಜುವನಲ್ಲ, ಕೂಡಲ ಸಂಗಮದೇವರ ರಾಜತೇಜದಲ್ಲಿಪ್ಪನಾಗಿ ಎಂದು ಬಸವಣ್ಣ ಬಹಳ ದೃಢವಾಗಿ ತತ್ವಬದ್ಧತೆ ನುಡಿಯುತ್ತಾರೆ. ಮತ್ತು ನಡೆಯುತ್ತಾರೆ. ಈ ನಿಲುವಿಗೆ ಯಾರಾದರೂ ಮುನಿಯಬಹುದು. ಅದಕ್ಕಾಗಿ ಬಸವಣ್ಣ ಮೊದಲೇ ಹೇಳಿ ಬಿಡುತ್ತಾರೆ, ‘ಆರು ಮುನಿದು ನಮ್ಮನೇನು ಮಾಡುವರು, ಊರು ಮುನಿದು ನಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸ ಕೊಡಬೇಡ. ನಮ್ಮ ಸೊಣಗಂಗೆ ಹೊನ್ನತಳಿಗೆಯಲ್ಲಿಕ್ಕಬೇಡ. ಆನೆಯ ಮೇಲೆ ಹೋಹವರ ಶ್ವಾನ ಕಚ್ಚಬಲ್ಲದೇ? ನಮಗೆ ನಮ್ಮ ಕೂಡಲ ಸಂಗಮನ್ನುಳ್ಳನಕ್ಕ’ ಎಂಬ ದೃಢತೆಯ ನಿಲುವು ಡಾ.ಗಂಗಾಂಬಿಕೆ ಮತ್ತು ಬಸವಲಿಂಗಪಟ್ಟದ್ದೇವರು ಬಹಳ ಸಾರಿ ಹೇಳಿರಲಿಕ್ಕೆ ಸಾಕು.
ಈ ವಚನವು ಅವರಿಗೆ ಅರ್ಥವಾಗಿದ್ದರೆ ಇವರು ಸಂಘೋತ್ಸವಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇವರಂತೂ ಮಕ್ಕಳು ಸಂಸಾರ ಇತ್ಯಾದಿ ಇಲ್ಲದವರು. ಬಹಳ ನಿರ್ಭಯವಾಗಿರಬಹುದಿತ್ತಲ್ಲವೆ? ಇವರ ಕುನ್ನಿಗೆ ಕೂಸು ಯಾರೂ ಕೊಡಲಿಕ್ಕಿಲ್ಲ, ಸೊಣಗಂಗೆ ಹೊನ್ನ ತಳಿಗೆ ಇಕ್ಕಲಿಕ್ಕಿಲ್ಲ ಎಂಬ ಆತಂಕದ ಅಗತ್ಯವೇ ಇಲ್ಲ ಅಲ್ಲವೆ? ಆದರೆ ಇವರಿಗೆ ಭಯವಿದೆ. ಸಿದ್ದಾಂತವನ್ನು ಎದುರುಗೊಳ್ಳುವ ಭಯವಿದೆ. ಯಾಕೆ? ಶರಣ ಸಿದ್ಧಾಂತವು ಯಾವತ್ತೂ ಮನುಸ್ಮೃತಿಯೊಂದಿಗೆ, ವೈದಿಕ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನುಡಿದಂತೆ ನಡೆಯದಿದ್ದರೆ ಹಿಡಿದಿರ್ಪ ಲಿಂಗ ಘಟಸರ್ಪವಾಗಿ ಕಚ್ಚುವುದು ಖಚಿತ. ಆದರೆ ಇಂತಹ ತತ್ವವನ್ನು ಇವರು ಕಲಿತಿದ್ದು ನಾಲಿಗೆಯಿಂದೀಚೆಗೆ ಮಾತ್ರ. ಅದು ಹೃದಯಕ್ಕೂ ಮೆದುಳಿಗೂ ಇಳಿದಿಲ್ಲ.
ಇವರು ಕಲಿತಿದ್ದು ನಾಲಿಗೆಯಿಂದೀಚೆಗೆ ಮಾತ್ರ. ಅದು ಹೃದಯಕ್ಕೂ ಮೆದುಳಿಗೂ ಇಳಿದಿಲ್ಲ.

೭೭೦ ಅಮರಗಣಂಗಳೆಂಬ ಶ್ರಮಿಕ ಲೋಕವನ್ನೇ ಕೇಂದ್ರವಾಗಿಟ್ಟುಕೊಂಡು ಗಟ್ಟಿಗೊಂಡ ತತ್ವವು ಚಿಂತನೆಯೊಂದಿಗೆ ಚಳುವಳಿಯಾಗಿಯೂ ಬೆಳೆದು ಬಂದಿದೆ. ಇದನ್ನು ಎದುರುಗೊಳ್ಳುವ, ಹೃದಯಕ್ಕಿಳಿಸಿಕೊಳ್ಳುವ ತತ್ವಬದ್ಧತೆ ಇಲ್ಲವೆಂದಾದಲ್ಲಿ ವೈದಿಕರೊಂದಿಗೆ ಸರಳವಾಗಿ ಕೈಕಲೆಸಿ ಜನರಲ್ಲಿ ಕನ್ಫೂಜನ್ ಹರಡುತ್ತ ತಮ್ಮ ಮಠೀಯ ಸಾಂಸ್ಥಿಕ ಚೌಕಟ್ಟು ವಿಸ್ತರಿಸಿಕೊಳ್ಳುವ ಹಿಕಮತ್ತು ನಡೆಸುತ್ತಿದ್ದಾರೆ. ಇಲ್ಲವೆಂದಾದಲ್ಲಿ ಮತ್ತು ಇವರಿಗೆ ಬಸವ ತತ್ವ, ವಚನ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ, ಬದ್ಧತೆ ಇದ್ದಲ್ಲಿ ‘ಲಿಂಗಾಯತ ಧರ್ಮ ತಿರಸ್ಕಾರ ಮಾಡಿದವರೊಂದಿಗೆ ಹೋಗಲು ಹೇಗೆ ಸಾಧ್ಯ?
ವಚನ ದರ್ಶನ ಕೃತಿಯ ಮೂಲಕ ಇಡೀ ವಚನ ಸಿದ್ಧಾಂತವನ್ನೇ ತಿರುಚಿ ವೈದಿಕೀಕರಣ ಮಾಡುವ ಪ್ರಯತ್ನಗಳು ನಡೆಯುವಾಗ ಅಂಥವರೊಂದಿಗೆ ಕಡೆ ಪಕ್ಷ ಅಂತರವಾದರೂ ಕಾಪಾಡಿಕೊಳ್ಳಬೇಕಿತ್ತು. ಆದರೆ ಭಾಲ್ಕಿಯ ಹಿರೇಮಠದ ಸ್ವಾಮಿ ಮತ್ತು ಗಂಗಾಂಬಿಕೆಯವರು ಇಷ್ಟೊಂದು ನಿರ್ಲಜ್ಜರಾಗಿ ತತ್ವ ಬದ್ಧತೆಯನ್ನು ಗಾಳಿಗೆ ತೂರಿ ಹೋಗಿದ್ದು ಮಾತ್ರ ಅವರು ಮಾಡಿದ ಚಾರಿತ್ರಿಕ ತಪ್ಪು.
ವೈದಿಕರೊಂದಿಗೆ ಕೈಕಲೆಸಿ ಜನರಲ್ಲಿ ಕನ್ಫೂಜನ್ ಹರಡುತ್ತ ತಮ್ಮ ಮಠೀಯ ಸಾಂಸ್ಥಿಕ ಚೌಕಟ್ಟು ವಿಸ್ತರಿಸಿಕೊಳ್ಳುವ ಹಿಕಮತ್ತು ನಡೆಸುತ್ತಿದ್ದಾರೆ.
ಶರಣರಿಗೆ ತಮ್ಮ ಮಿತ್ರರು ಯಾರು ಶತೃಗಳು ಯಾರೆಂಬುದು ಸ್ಪುಟವಾಗಿ ದಾಖಲಿಸಿದರು. ಅದಕ್ಕೆಂದರೆ ಅವರು ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನ್ನಿಕ್ಕುವೆ, ತರ್ಕದ ಬೆನ್ನ ಬಾರನ್ನೆತ್ತುವೆ ಆಗಮದ ಮೂಗ ಕೊಯ್ಯುವೆ, ಮಹಾದಾನಿ ಕೂಡಲ ಸಂಗಮದೇವ, ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ’ ಎಂದು ಸಾರುತ್ತಾರೆ. ಹೀಗೆ ನಂಬಿದ ತತ್ವವನ್ನು ಬದುಕುವ ಎದುರುಗೊಳ್ಳುವ ಧೈರ್ಯ ಇವರಿಗೆ ಇದೆಯೇ? ಇಲ್ಲ. ಸಾಮಾನ್ಯವಾಗಿ ಸಾಮಾನ್ಯ ಕೆಲ ಮನುಷ್ಯರು ಹೆದರುವುದು ಯಾರಿಗೆ? ಜೀವಕ್ಕೆ, ಸಂಪತ್ತು ಅಧಿಕಾರ ಕಳೆದುಕೊಳ್ಳುವುದಕ್ಕೆ ಸಹಜವಾಗಿ ಹೆದರುತ್ತಾರೆ. ಇವುಗಳಲ್ಲಿ ಯಾವುದು ಇವರಿಗೆ ಹೊಂದುವುದು ಎಂಬುದು ಅವರೇ ನಿರ್ಣಯಿಸಬಹುದು. ಆದರೆ ಒಂದಂತೂ ಸತ್ಯ, ಅಲ್ಲಿ ಅವರ ಪರಿಸ್ಥಿತಿ ಏನಿತ್ತೆಂದರೆ ‘ಹಬ್ಬಕ್ಕೆ ತಂದ ಹರಕೆಯ ಕುರಿ ತಳಿರು ಮೇಯ್ದಂತಿತ್ತು’. ಪಾಪ!
ನವ ನಾಜಿಗಳಿಗೆ ಜಾಗವಿಲ್ಲ

ಒಂಬತ್ತು ದಿನಗಳ ಕಾರ್ಯಕ್ರಮವಂತೂ ಜನರು ಭಾಗವಹಿಸದೆ ನೆಲಕಚ್ಚಿದ್ದು ಹೌದೆಂದು ಗವಿಮಠದ ಸ್ವಾಮಿಗಳು ತಮ್ಮ ಮಾತುಗಳ ಮೂಲಕ ಅನಾವರಣಗೊಳಿಸಿದ್ದಾರೆ. ಇದಕ್ಕೆ ಏನು ಕಾರಣ? ಕಲ್ಯಾಣ ನಾಡಿನ ಬಹುತೇಕ ಲಿಂಗಾಯತ ಸಮುದಾಯವು ವೈದಿಕರೊಂದಿಗೆ ಹೋಗಬಾರದೆಂಬ ದೃಢ ನಿಲುವು ಮಾಡಿದ್ದು ಶ್ಲಾಘನೀಯವಾದದ್ದು. ದಲಿತ ದಮನಿತ ಸಮುದಾಯವು ನಾಗಪುರದ ಅಗ್ರಹಾರದ ನವ ನಾಜಿಗಳಿಗೆ ನಮ್ಮಲ್ಲಿ ಜಾಗವಿಲ್ಲ ಎಂದು ಅದರ ಪ್ರತಿಕೃತಿಯನ್ನು ದಹನ ಮಾಡಿದರು. ಸೌಹಾರ್ದ ಕರ್ನಾಟಕದ .ಸೌಹಾರ್ದ ಸಂಸ್ಕೃತಿ ಉತ್ಸವವು’ ನಿರಂತರವಾಗಿ ಮೂರು ದಿನಗಳ ಕಾಲ ವೈವಿದ್ಯಮಯವಾಗಿ ನಡೆದು ಕೊನೆಯಲ್ಲಿ ಆರು ಮುನಿದು ನಮ್ಮನೇನು ಮಾಡುವರು? ಎನ್ನುವ ಸಂದೇಶವನ್ನು ಕೊಟ್ಟಿತು.
ವೈದಿಕರ ಸಂಘೋತ್ಸವಕ್ಕೆ ಹೋಗುವಂತಿದ್ದರೆ ಲಿಂಗ ತೆಗೆದಿಟ್ಟು ಹೋಗಿ ಎಂಬ ಮಾತು ಘಂಟಾಘೋಷವಾಗಿ ಹೇಳಿದರು. ಆವ ಭಯವು ಇನ್ನೇನವಗ ಮರಣವೇ ಮಹಾನವಮಿ ಆದವಗ? ಎಂಬ ಮಾತನ್ನು ಬಸವ ತತ್ವ ರಕ್ಷಣೆಗೆ, ವಚನ ಸಿದ್ಧಾಂತ ರಕ್ಷಣೆಗೆ ಜೀವ ಭಯ ತೊರೆದು ನಿಂತಿದ್ದು ಹೌದು. ಬಂದಂತಹ ಜನಸಮುದಾಯವು ವೈದಿಕರ ಕುತಂತ್ರವನ್ನು ಅರಿತು ವಚನ ಮತ್ತು ಸಂವಿಧಾವನ್ನು ರಕ್ಷಿಸಲು ದೃಢಗೊಂಡರು. ಇದು ಸೌಹಾರ್ದ ಕರ್ನಾಟಕ ಮಾಡಿದ ಮಹತ್ವದ ಚಾರಿತ್ರಿಕ ಕೆಲಸ.
ವೈದಿಕರ ಸಂಘೋತ್ಸವಕ್ಕೆ ಹೋಗುವಂತಿದ್ದರೆ ಲಿಂಗ ತೆಗೆದಿಟ್ಟು ಹೋಗಿ ಎಂಬ ಮಾತು ಘಂಟಾಘೋಷವಾಗಿ ಹೇಳಿದರು.
ಕಾಡಿಗೆ ಬೆಂಕಿ ಹತ್ತಿದಾಗ ಗುಬ್ಬಿಗಳು ಜೀವದ ಹಂಗು ತೊರೆದು ಮೈಯನ್ನೇ ನೀರಲ್ಲದ್ದಿ ಉರಿವ ಜ್ವಾಲೆಗೆ ಚಿಮುಕಿಸಿದವು. ಹೊತ್ತಿಸಲ್ಪಟ್ಟ ಬೆಂಕಿಯನ್ನು ಆರಿಸುವ ಪಟ್ಟಿಯಲ್ಲಿ ಗುಬ್ಬಿಗಳು ಅರ್ಥಾತ್ ಶರಣ ಸಂಗಾತಿಗಳು ಇದ್ದರೆ, ಬೆಂಕಿಯನ್ನು ನೋಡುತ್ತ ನಿಂತವರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂಬುದು ನಿಚ್ಚಳವಾಗಿದೆ. ಆದರೆ ಅತ್ಯಂತ ಆತಂಕ ಮತ್ತು ಚಿಂತೆಯ ವಿಷಯವೆಂದರೆ ಬೆಂಕಿ ಆರಿಸುವ ಪೋಷಾಕು ತೊಟ್ಟು ಬೆಂಕಿ ಹಚ್ಚುವವರ ಜೊತೆ ಹೋದವು ನರಿಗಳು. ಒಂದರ್ಥದಲ್ಲಿ ಅವರು ಯಾರೆಂಬುದನ್ನು ಅನಾವರಣಗೊಳಿಸಿಕೊಂಡರು.
ಸಂಘರ್ಷದ ದಿನಗಳು ಮುಂದಿವೆ

ಹಾಗಿದ್ದರೆ ಈಗ ಅವರ ಕೈಯಿಂದಲೂ ವಚನ ಸಾಹಿತ್ಯ ತತ್ವ ಉಳಿಸಬೇಕಿದೆ. ಸಮಸ್ತ ಶರಣ ಸಂಗಾತಿಗಳ ಸಂಕುಲವು ಅತ್ಯಂತ ಐಕ್ಯತೆಯಿಂದ ನಿರ್ಭಯದಿಂದ ಭವಿಷ್ಯದ ಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕಿದೆ. ಕಲ್ಯಾಣದಲ್ಲಿ ವಿಪ್ಲವ ನಡೆದಾಗ ನಮ್ಮ ಧೀರ ಶರಣರು ವಚನಗಳನ್ನು ಬೆನ್ನಿಗೆ ಕಟ್ಟಿಕೊಂಡು ಅವುಗಳನ್ನು ಉಳಿಸಲು ರಕ್ಷಿಸಲು ಜೀವದ ಹಂಗು ತೊರೆದು ಹೋರಾಡಿದರು. ಈಗ ಅವೇ ಸಂಘರ್ಷದ ದಿನಗಳು ನಮ್ಮ ಮುಂದಿವೆ.
ನಮ್ಮ ಧೀರ ಶರಣರು ವಚನಗಳನ್ನು ಬೆನ್ನಿಗೆ ಕಟ್ಟಿಕೊಂಡು ಅವುಗಳನ್ನು ಉಳಿಸಲು ರಕ್ಷಿಸಲು ಜೀವದ ಹಂಗು ತೊರೆದು ಹೋರಾಡಿದರು
ಒಂಬತ್ತು ದಿನಗಳಲ್ಲಿ ಮತ್ತು ಈ ದಿನಗಳಿಗಾಗಿ ಕಾರ್ಯಕ್ರಮದಲ್ಲಿ ಮಾಡಲಾದ ಘನಂದಾರಿ ಕೆಲಸವೇನು?
೨೪೦ ಎಕರೆ ಫಲವತ್ತಾದ ಭೂಮಿಯನ್ನು ಒಂದು ಕಾಳೂ ಬೆಳೆಯದಂತೆ ಭೀಳು ಹಾಕಿದ್ದು. ಹಣ ಕೊಟ್ಟು ಅದನ್ನು ವಶಪಡಿಸಿಕೊಂಡಿರಬಹುದು. ಆದರೆ ಕರೆನ್ಸಿಯನ್ನು ಯಂತ್ರದಲ್ಲಿ ಮುದ್ರಿಸಲಾಗುವುದು. ಉಣ್ಣುವ ಧಾನ್ಯವನ್ನು ನೆಲದಲ್ಲಿ ಬೆಳೆಯಲಾಗುವುದು. ಧಾನ್ಯವನ್ನು ಯಂತ್ರದಲ್ಲಿ ಬೆಳಯಲು ಸಾಧ್ಯವೆ? ಈ ಪರಿಜ್ಞಾನವಿದ್ದೂ ಒಂಬತ್ತು ದಿನಗಳಲ್ಲಿ ಉಪದೇಶಗಳ ಗಿಮಿಕ್ ಮಾಡಿದ್ದಾರೆ. ರೈತರಿಗೆ, ಅನ್ನ ಉಣ್ಣುವವರಿಗೆ ದ್ರೋಹ ಎಸಗಿದ್ದಾರೆ.
ಮಕ್ಕಳಿಗೆ ಕೈ ತುತ್ತು ಕೊಡದ ಒಬ್ಬ ತಾಯಿಯಾದರೂ ನೋಡಿದಿರಾ? ತಾಯಿಯು ತನ್ನ ಜೀವವನ್ನೇ ಒತ್ತೆಯಿಟ್ಟು, ಸಾವನ್ನೂ ಎದುರುಗೊಂಡು ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ತಾಯ ಕೈ ತುತ್ತು ಎಂಬ ಭಾವನಾತ್ಮಕ ಗಿಮಿಕ್ ಯಶಸ್ವಿಯಾಗಬಹುದು ಎಂದು ಭಾವಿಸಿದ್ದಾರೆ. ತಾಯಿಯ ತಾಯ್ತನವನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವ ಮನೋಭಾವವು ಕ್ರೂರವಾದದ್ದು.
ಮಕ್ಕಳಿಗೆ ಕೈ ತುತ್ತು ಕೊಡದ ಒಬ್ಬ ತಾಯಿಯಾದರೂ ನೋಡಿದಿರಾ?
ಧರ್ಮವನ್ನು ಉಳಿಸಿದರೆ ಅದು ನಿಮ್ಮನ್ನು ಉಳಿಸುತ್ತದೆ ಎಂದು ಹೇಳಿದ್ದಾರೆ. ನಮ್ಮ ಬಸವಣ್ಣ ಹೇಳಿದ್ದಾರೆ ಧರ್ಮವೆಂದರೆ ಅದು ದಯೆ. ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ದಯೆಯನ್ನು ಕಿತ್ತು ಹಾಕಿ ಇನ್ನೊಂದು ಸಮುದಾಯದ ವಿರುದ್ಧ ಜನರನ್ನು ಎತ್ತಿ ಕಟ್ಟಿ, ಸುಳ್ಳನ್ನು ಸೃಷ್ಟಿಸಿ, ಚರಿತ್ರೆಯನ್ನು ತಿರುಚಿ ಕೋಮು ದಂಗೆ ಹಬ್ಬಿಸುವವರಿಗೆ ಶರಣರ ಕಣ್ಣೋಟದ ಧರ್ಮ ಬೇಕಿಲ್ಲ. ಮತ್ತು ನಮ್ಮ ಜನರೂ ಈ ಕಾರ್ಯಕ್ರಮವನ್ನು ತಿರಸ್ಕರಿಸುವ ಮೂಲಕ ಹೇಳಿದ್ದಾರೆ ‘ನಮಗೂ ವೈದಿಕ ನೆಲೆಯ ದ್ವೇ಼ಷ ಸಂಸ್ಕೃತಿ ಹಬ್ಬಿಸುವ ಧರ್ಮ ಬೇಕಿಲ್ಲ’ ಎಂದು. ನಮ್ಮ ಶರಣರು ಕೊಟ್ಟ ಧರ್ಮವೇ ನಮಗೆ ಸಾಕು ಎಂದು ಸಾಬೀತು ಪಡಿಸಿದ್ದಾರೆ.
ರೈತರ ಬೆಳೆದ ಬೆಳೆಯು ನೆಲಕಚ್ಚಿದೆ. ಕಾರ್ಪೋರೇಟ್ಗಳು ರೈತರ ಭೂಮಿಯನ್ನು ಕಬಳಿಸಿ ಅಲ್ಲಿ ಕಂಪನಿ ಕೃಷಿ ಆರಂಭ ಮಾಡಿದ್ದಾರೆ. ಇವರದೇ ಕೇಂದ್ರ ಸರಕಾರವು ರೈತರ ವಿರೋಧಿ ಕಾಯ್ದೆಗಳನ್ನು ತಂದು ರೈತರನ್ನು ನೇಣಿಗೆ ಹಾಕುತ್ತಿದೆ. ಕಾಯ್ದೆಗಳನ್ನು ಬದಲಾಯಿಸಿ, ರೈತರನ್ನು ಕೃಷಿಯನ್ನು ರಕ್ಷಿಸುವ ಯೋಜನೆ, ಕಾಯ್ದೆ ಕೇಂದ್ರ ಸರಕಾರ ಮಾಡುವಂತೆ ಕ್ರಮ ವಹಿಸಬಹುದಲ್ಲವೆ? ಅದು ಬಿಟ್ಟು ಸಾವಯವ ಕೃಷಿಯ ನೆಪದಲ್ಲಿ ರೈತರನ್ನು ಮತ್ತು ಜನರನ್ನು ದಿಕ್ತಪ್ಪಿಸುವ ನಾಟಕ ಮಾಡಲಾಗಿದೆ. ನಮ್ಮದು ತೊಗರಿಯ ಕಣಜ. ಈ ಬಾರಿ ತೊಗರಿ ನಟೆ ಹೋಗಿದೆ. ಬೆಳೆದ ಒಟ್ಟೂ ಬೆಳೆಯಲ್ಲಿ ನಾಲ್ಕಾಣೆ ಭಾಗವೂ ಕೈ ಸೇರಿಲ್ಲ. ಇದರ ಬಗ್ಗೆ ಚಕಾರವೆತ್ತದ ಬಸವರಾಜ ಪಾಟೀಲ ಸೇಡಂ ಮತ್ತು ಅವರ ಬಿಜೆಪಿ ಪಟಾಲಂ ಜನರಿಗೆ ಮಾಡುವ ಮೋಸವಲ್ಲವೆ? ಆದ್ದರಿಂದಲೇ ಜನತೆಯು ತಿರಸ್ಕರಿಸಿದ್ದಾರೆ.
ಬದುಕಿನ ಸಮಸ್ಯೆಗಳು ಇವರಿಗೆ ಬೇಡ
ವಿದ್ಯಾರ್ಥಿಗಳಿಗೆ ಹೆಚ್ಚಾದ ಶಿಕ್ಷಣದ ಶುಲ್ಕ ಕಟ್ಟಲು ಆಗುತ್ತಿಲ್ಲ. ಅದರ ಬಗ್ಗೆ ಮಾತಾಡುವುದಿಲ್ಲ. ಹಾಸ್ಟೆಲ್ ಗಳಿಲ್ಲ. ಬಸ್ಸುಗಳಿಲ್ಲ. ಬಾಣಂತಿಯರ ಸಾವುಗಳಾಗುತ್ತಿವೆ. ಈ ಬಾರಿಯ ಕೇಂದ್ರ ಸರಕಾರದ ಬಜೆಟ್ಟು ಕಾರ್ಪೋರೆಟ್ ಪರ ಎಂಬುದು ಸ್ಪಷ್ಟವಾಗಿದೆ. ದೇಶದ ಮೇಲೆ ಸಾಲದ ಶೂಲ ಹೊರಿಸಲಾಗಿದೆ. ದೇಶದ ಸಂಪತ್ತು ಉಳ್ಳವರ ಕೈವಶವಾಗಿದೆ. ದೇಶದಲ್ಲಿ ಬಡತನ, ನಿರುದ್ಯೋಗ, ಅನಾರೋಗ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಇವರಿಗೆ ವಿಷಯವೇ ಅಲ್ಲ.
ಟ್ರಂಪ್ ಎಂಬ ಮೋದಿಯ ಅಮೇರಿಕದ ಗೆಳೆಯ ಭಾರತದ ಪ್ರಜೆಗಳ ಕೈ ಕಾಲುಗಳಿಗೆ ಬೇಡಿ ಹಾಕಿ ಮಿಲ್ಟಿ ವಿಮಾನಗಳಲ್ಲಿ ಬಂಧಿಯಾಗಿಸಿ ಅಟ್ಟುತ್ತಿದ್ದಾನೆ. ಮೋದಿ, ಬಸವರಾಜ ಪಾಟಿಲ ಸೇಡಂ ಆದಿಯಾಗಿ ಒಬ್ಬರೂ ಬಾಯಿ ತೆರೆಯುತ್ತಿಲ್ಲ. ಅವರನ್ನು ಅಮೇರಿಕಕ್ಕೆ ಕರೆದೊಯ್ದು ತನ್ಮೂಲಕ ಕಡಿಮೆ ಕೂಲಿ ಕೊಟ್ಟು ಹೆಚ್ಚು ಲಾಭ ಗಿಟ್ಟಿಸಕೊಳ್ಳುವ ಕಂಪನಿಗಳ ಮಾಲಿಕರು ಎಲ್ಲಿದ್ದಾರೆ? ಅವರೆಲ್ಲ ಮೇಲಿಂದ ಒಬ್ಬರಿಗೊಬ್ಬರು ಗೆಳೆಯರು. ಆದರೆ ಪ್ರಜೆಗಳು ಮಾತ್ರ ಗುಲಾಮರು ಅಂತ ಹೌದಲ್ಲವೆ? ಹಾಗಿದ್ದರೆ ನಿಮ್ಮ ದೇಶಪ್ರೇಮ ಟ್ರಂಪನಿಗೆ, ಭಾರತಕ್ಕಲ್ಲ ಎಂಬುದು ಸಾಬೀತಾದಂತಲ್ಲವೆ? ಇವರಿಂದೇನೂ ದೇಶಪ್ರೇಮ ಕಲಿಯುವುದು? ಇದು ಭಾರತೀಯ ಸಂಸ್ಕೃತಿ ಅಲ್ಲ. ಮಸೀದಿಗಳನ್ನು ಕೆಡವಿ ಅಲ್ಲಿ ದೇವರ ಗುಡಿಗಳನ್ನು ಅಗೆಯುವ ಅಜೆಂಡಾ ಹೊಂದಿರುವ ಬಿಜೆಪಿಯ ಶಾಸಕ, ಸಂಸದರನ್ನು ಕರೆಯಿಸಿ ಭಾರತೀಯ ಸಂಸ್ಕೃತಿ ಎಂದು ಬಿಂಬಿಸಲು ಹೆಣಗಿದ್ದಾರೆ. ಆದರೆ ನಮ್ಮ ಕಲ್ಯಾಣ ನಾಡಿನ ಜನತೆಯು ಈ ಹಗಲು ಕಣ್ಕಟ್ಟು ಆಟವನ್ನು ತಿರಸ್ಕರಿಸಿದ್ದಾರೆ.
ಮೋದಿ, ಬಸವರಾಜ ಪಾಟಿಲ ಸೇಡಂ ಆದಿಯಾಗಿ ಒಬ್ಬರೂ ಬಾಯಿ ತೆರೆಯುತ್ತಿಲ್ಲ.
ಹಗಲು ಕಣ್ಕಟ್ಟು ಆಟದ ತಿರಸ್ಕಾರ

ರಾಮಾಯಣ, ಭರತನಾಟ್ಯ, ಸಂಸ್ಕೃತ, ಧರ್ಮ, ಕೃಷಿ, ಅದೂ ಇದೂಂತ ಉದ್ದ ಪಟ್ಟಿಯಲ್ಲಿ ಬಹುದೊಡ್ಡ ಯೋಜನೆಯೇನೋ ನಾಗಪುರದ ನಾಜಿಗಳು ಮಾಡಿ ಕಳುಹಿಸಿದ್ದಾರೆ. ಆದರೆ ಕಲ್ಯಾಣ ನಾಡಿನ ಜನತೆಗೆ ಶ್ರಮ ಸಂಸ್ಕೃತಿ ಬದುಕೇ ಆಗಿದೆ. ರಾಮಾಯಣ ಮಹಾಭಾರತ ಎರಡೂ ಮಹಾಕಾವ್ಯಗಳು ಜನಪದರದ್ದು. ಈ ವೈದಿಕರಿಗೇನು ಕೆಲಸ ಇದರಲ್ಲಿ? ಜನಪದರ ಮಹಾಕಾವ್ಯಗಳನ್ನು ವಶಪಡಿಸಿಕೊಂಡು ಅವುಗಳನ್ನು ವೈದಿಕೀಕರಣಗೊಳಿಸಿ ಟೀವಿಯಲ್ಲಿ ಪ್ರಸಾರ ಮಾಡಿ ಅದನ್ನು ಕೋಮುದಂಗೆಗೆ ಬಳಸಿಕೊಳ್ಳುವ ಹುನ್ನಾರವು ನಮ್ಮ ಜನತೆಗೆ ಗೊತ್ತು. ನಮ್ಮಲ್ಲಿ ಸಾವಿರಾರು ರಾಮಾಯಣಗಳಿವೆ.
ಬಸವರಾಜ ಪಾಟಿಲ ಸೇಡಂ ಅವರಿಗೇ ಬೇಕಾದರೆ ನಮ್ಮ ಜನಕಥನಗಳನ್ನು ಹೇಳುವರು. ಅರಿತುಕೊಳ್ಳಲಿ. ಅವಗುಣಗಳನ್ನು ಬಿಟ್ಟು ಶರಣಗುಣಗಳನ್ನು ಪಡೆಯಲಿ ಎಂಬುದಕ್ಕಾಗಿ ಜನತೆಯು ತಿರಸ್ಕರಿಸಿದ್ದಾರೆ. ನಮ್ಮ ಬೀದರ ಕನ್ನಡ ಕಲಿಯಿರಿ. ಸಂಸ್ಕೃತಕ್ಕಿಂತಲೂ ‘ಭಾಳ ಭಾರಿ ಅದಾ’. ಅದರಲ್ಲಿ ಮರಾಠಿ, ಹಿಂದಿ, ತೆಲುಗು, ಉರ್ದು ಎಲ್ಲ ಸೇರಿ ಒಂದು ಅದ್ಭುತ ಕನ್ನಡವಾಗಿ ಆಡು ಭಾಷೆಯಾಗಿ ಅರಳಿ ನಿಂತಿದೆ. ತಾಖತ್ತಿದ್ದರೆ ಅದನ್ನು ಕಲಿಯಿರಿ. ನಾವು ಎಲ್ಲ ಭಾಷೆಗಳನ್ನೂ ಗೌರವಿಸಿದ್ದೇವೆ. ಕನ್ನಡವನ್ನು ಪ್ರೀತಿಸಿದ್ದೇವೆ. ನನ್ನೆದೆಯ ಭಾವವನ್ನು ನಿನ್ನೆದೆಗೆ ತಲುಪಿಸಲು ಬೇಕಾದ ಮಾದ್ಯಮವೇ ಭಾಷೆ ಅಂತಾದಲ್ಲಿ ದೇವರಿಗೂ ಅರ್ಥವಾಗದ ಸಂಸ್ಕೃತ ಮಾತ್ರ ದೇವಭಾಷೆ ಹೇಗಾಗುವುದು? ಅದೇಕೆ ಕಲಿಯಿರಿ ಕಲಿಯಿರಿ ಎಂದು ಬೆನ್ನು ಬೀಳುತ್ತಿರುವಿರಿ? ಆದ್ದರಿಂದಲೇ ಜನತೆಯು ನಿಮ್ಮನ್ನು ತಿರಸ್ಕರಿಸಿದ್ದಾರೆ.
ಎಲ್ಲಕ್ಕೂ ಮಿಗಿಲಾಗಿ ಲಿಂಗಾಯತ್ ಪ್ರತ್ಯೇಕ ಧರ್ಮವನ್ನು ತಿರಸ್ಕರಿಸಿ ಈಗ ಇಲ್ಲಿ ಬಂದು ಭಾರತೀಯು ಸಂಸ್ಕೃತಿ ಉತ್ಸವ ಅಂತ ನಾಟಕವಾಡಿದರೆ ಅರ್ಥವಾಗದಷ್ಟು ದಡ್ಡರೇನಲ್ಲ ಯಾರೂ. ವಚನ ದರ್ಶನ ಕೃತಿಯ ಮೂಲಕ ವಚನ ತತ್ವವನ್ನೇ ನಾಶ ಮಾಡುವ ಹುನ್ನಾರ ಇಟ್ಟುಕೊಂಡು ಅದನ್ನು ಬಹಿರಂಗವಾಗಿಯೇ ಸಮರ ಸಾರಿ ಮತ್ತೆ ಒಳಗಡೆಯಿಂದ ಮರಳು ಮಾತಿನ ಜಾಲದಲಿ ಕೆಲ ಮಠಾಧೀಶರನ್ನು ಕೆಡವಿ ಹಿಂದೂ ನಾವೆಲ್ಲ ಒಂದು ಎಂಬ ಹಸಿ ಸುಳ್ಳನ್ನು ನಂಬಲು ಸಾಧ್ಯವಿಲ್ಲ. ಅವರ ಈ ಕುತಂತ್ರದ ಕಾರಣದಿಂದಲೇ ಲಿಂಗಾಯತ ತತ್ವ ಬಲ್ಲವರು ಇವರನ್ನು ತಿರಸ್ಕರಿಸಿದ್ದಾರೆ. ‘ಏನಯ್ಯ ವಿಪ್ರ ತನಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ?’ ಎಂಬ ಮಾತನ್ನು ಹೇಳಿದ್ದು ಬಸವರಾಜ ಪಾಟಿಲ ಸೇಡಂ ಮತ್ತು ನಾಗಪುರದ ನವನಾಜಿಗಳಿಗಾಗಿಯೇ.
ಲಿಂಗಾಯತ ಪ್ರತ್ಯೇಕ ಧರ್ಮವನ್ನು ತಿರಸ್ಕರಿಸಿ ಈಗ ಇಲ್ಲಿ ಬಂದು ಭಾರತೀಯು ಸಂಸ್ಕೃತಿ ಉತ್ಸವ ಅಂತ ನಾಟಕವಾಡಿದರೆ ಅರ್ಥವಾಗದಷ್ಟು ದಡ್ಡರೇನಲ್ಲ ಯಾರೂ.
ಒಟ್ಟಿನಲ್ಲಿ ಸೌಹಾರ್ದ ಕರ್ನಾಟಕದ ಅಭಿಯಾನವನ್ನು ಬೆಂಬಲಿಸಿ ಭಾಗವಹಿಸಿ ಯಶಸ್ವಿಗೊಳಿಸಿದ ಮತ್ತು ಸಂಘೋತ್ಸವವನ್ನು ತಿರಸ್ಕರಿಸಿದ ಸಮಸ್ತ ಲಿಂಗಾಯತ್ ಸಮುದಾಯ, ಅನೇಕ ಮಠಾಧೀಶರು, ದಲಿತ ದಮನಿತ, ಅಲ್ಪಸಂಖ್ಯಾತ ಸಮುದಾಯ, ಜೀವಪರ ಅನೇಕ ಸಂಘ ಸಂಸ್ಥೆಗಳು, ವ್ಯಕ್ತಿ ಶಕ್ತಿಗಳು ಎಲ್ಲರಿಗೂ ಹಣೆ ಮಣಿಯುವೆವು. ಶರಣ ಸೂಫಿ ಸಂತರು ನಮ್ಮ ಶ್ರಮಿಕರು, ಜನಪದರು ಹಚ್ಚಿದ ಸೌಹಾರ್ದ ದೀಪವನ್ನು ಆರದಂತೆ ನೋಡಿಕೊಳ್ಳಲು ಇನ್ನಷ್ಟು ಐಕ್ಯತೆಯಿಂದ ಮುನ್ನಡೆಯೋಣ. ಬಹುತ್ವ ಭಾರತ ಬಲಿಷ್ಠ ಭಾರತ ಜೈ ಹೋ.
ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತçಗಳ ನೇಣು ಬಿಗಿದು
ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು
ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಲಾಗದು
ಅಲ್ಲಮಪ್ರಭುದೇವರು.
ಇದೇ ಭವಿಷ್ಯದ ಶರಣ ಸಂಗಾತಿಗಳ ಕಾರ್ಯಯೋಜನೆ.
ಅದ್ಭುತವಾದ ಸರಳವಾದ ನೇರ ನುಡಿಯ ಸಂಕೀರ್ಣವಾದ ತಾತ್ವಿಕ ನೆಲೆಗಟ್ಟನ್ನೂ ಸ್ವಚ್ಛವಾಗಿ ಎಲ್ಲರಿಗೂ ನಿಲುಕುವಂತೆ ಬರೆದಿದ್ದೀರ. ನಿಮ್ಮ ನೇರ ನುಡಿಗಳು ಎಂದಿಗೂ ಸತ್ಯ ಇಂದಿಗೂ ಸಹ. ಎಲ್ಲರಿಗೂ ಈ ಸತ್ಯದ ಅರಿವಾಗಲಿ. ಶರಣು ಶಣಾರ್ಥಿ 🙏
ಶರಣು ವಾರೆ ವಾ ಹೆಂತ ಬರವಣಿಗೆ ಕೂದಲು ನವಿರೇಳುವದು ಅಧ್ಬುತ ಇನ್ನೂ ನಮ್ಮಲ್ಲಿ ಗಟ್ಟಿತನ ತಿಳುವಳಿಕೆ ಬೇಕು
ಅದ್ಬುತ ಲೇಖನ. ವಿಶಾಲ ಚಿಂತನೆಯ ಮಹತ್ ವಿಚಾರಗಳನ್ನ ಬರೆದಿದ್ದೀರಾ ನಿಮಗೆ ಕೋಟಿ ಕೋಟಿ ಶರಣು .ಪ್ರತಿಯೊಬ್ಬ ಲಿಂಗಾಯತ ಧರ್ಮದ ಮತ್ತು ಬಸವಣ್ಣನವರ ಅನುಯಾಯಿಗಳು ಓದಲೇ ಬೇಕು
ಲಿಂಗಾಯತರಿಗೆ ನಿಜ ಅರಿವು ಮೂಡಿಸುವ ಲೇಖನವಿದು. ನಮ್ಮವರೇ ಅನ್ಯ ಮತವಾದಿಗಳ ಆಸೆ, ಆಮಿಷಗಳಿಗೆ ಬಲಿಯಾಗದೆ ಮತ್ತು ತಮ್ಮ ತಮ್ಮ ಪ್ರತಿಷ್ಠೆಗಳಿಗೆ ಕಟ್ಟು ಬಿದ್ದು ಅತ್ಯುತ್ಕೃಷ್ಟವಾದ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಕುಂದು ತರಬೇಡಿ ಮತ್ತು ಧರ್ಮದ್ರೋಹವೆಸಗಬೇಡಿರೆಂದು ಪ್ರಾರ್ಥಿಸುವೆ. ಈ ಬಸವಸೂತ್ರದಿಂದಲೇ ಶೂದ್ರರು, ಶೋಷಿತರು, ಶ್ರಮಿಕರು ಒಂದಾಗುವ ಕಾಲ ಸನ್ನಿಹಿತವಾಗಿದೆ. ಬಸವ ಭಾರತದಿಂದ ಮಾತ್ರ ಸರ್ವರ ಹಿತ ಸಾಧ್ಯ ಶರಣು ಶರಣಾರ್ಥಿಗಳು 🌹🙏🇮🇳🙏🙏 ಸಂಗನಗೌಡ ಗುರುಪಾದಪ್ಪ ಪಾಟೀಲ ಸವದಿ
ಅದ್ಬುತವಾದ ವಿವರಣೆ ಬಸವಾಯತರಿಗೆ ಶಕ್ತಿ ತುಂಬುವ ಬರಹ, ಬಸವಾಯತವೇಷಧಾರಿಗಳಿಗೆ ಯಚ್ಚರಿಕೆಯ ಲೇಖನ .