ಕಲ್ಯಾಣ ಮಹಾಮನೆಯಿಂದ ವಚನಸಾಹಿತ್ಯ ಪುಸ್ತಕ ವಿತರಣೆ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬೀದರ ಬಸವ ಮಿಷನ್ ಅಧ್ಯಕ್ಷರಾದ ಶರಣಯ್ಯ ಸ್ವಾಮಿಯವರು ಕಾಣಿಕೆ ರೂಪದಲ್ಲಿ ನೀಡಿದ ವಚನ ಸಾಹಿತ್ಯ ಪುಸ್ತಕ ಮತ್ತು ವಿಭೂತಿ, ರುದ್ರಾಕ್ಷಿಯನ್ನು ವಿತರಿಸುವ ಕಾರ್ಯಕ್ರಮ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಮತ್ತು ಬಸವತತ್ವ ಪ್ರಚಾರಕರಾದ ಶರಣೆ ರಂಜಿತಾ ಕೃಷ್ಣಾರೆಡ್ಡಿ ಅವರ ನೇತ್ರತ್ವದಲ್ಲಿ ರಾಚಪ್ಪ ಗೌಡಗಾವದ ಮಹಾದೇವ ಮಂದಿರದಲ್ಲಿ ನಡೆಯಿತು.

ಸಾನಿಧ್ಯ ವಹಿಸಿದ ಶ್ರೀಗಳು ಮಾತನಾಡಿ ವಚನಗಳು ಮಾನವನ ದೈನಂದಿನ ಬದುಕಿಗೆ ದಿವ್ಯ ಮಾರ್ಗದರ್ಶನಗಳಾಗಿವೆ. ಪ್ರತಿಯೊಬ್ಬರ ಮನೆಯಲ್ಲಿ ಬಸವಾದಿ ಶರಣರ ವಚನಗಳ ಪಾರಾಯಣ ಮಾಡಬೇಕು ಎಂದರು. ಇಂದಿನ ಯುವಪೀಳಿಗೆಯು ನೈತಿಕತೆಯಿಂದ ದೂರ ಉಳಿದ ಕಾರಣ ಅವರಲ್ಲಿ ಮಾನಸಿಕ ಖಿನ್ನತೆ ಉಂಟಾಗಿ ದುಶ್ಚಟಗಳಿಗೆ, ಮೊಬೈಲ್ ಜೀವನಕ್ಕೆ ದಾಸರಾಗಿದ್ದಾರೆ, ಇದರಿಂದ ಹೊರಬಂದು ಯುವಕರು ನೈತಿಕ ಸತ್ಪಥದಲ್ಲಿ ಸಾಗಬೇಕಾದರೆ ವಚನಗಳನ್ನು ಓದುವುದು, ದೇಶಭಕ್ತರ ಮತ್ತು ಮಹಾತ್ಮರ ಜೀವನ ಸಂದೇಶ ಪುಸ್ತಕಗಳನ್ನು ಓದುವದನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರಲ್ಲದೆ, ತಂದೆ ತಾಯಿಗಳು ಮಕ್ಕಳ ಮುಂದೆ ದುಶ್ಚಟ ಮಾಡುವುದು ದುರ್ವರ್ತನೆಯಿಂದ ನಡೆದುಕೊಳ್ಳುವುದು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಉದ್ಘಾಟನೆ ಮಾಡಿ ರಾಜೇಶ್ವರದ ಬಸವರಾಜ ಹೊನ್ನ ಮಾತನಾಡಿ, ಹರಿದಾಡುವ ಮನಸ್ಸು ತಿಳಿಯಾಗಬೇಕಾದರೆ ಶರಣರ ಚಿಂತನೆಗಳ ಅಧ್ಯಯನ ಮತ್ತು ಸತ್ಸಂಗದಲ್ಲಿ ಕೂಡಬೇಕು. ಇಲ್ಲವಾದರೆ ಮನಸ್ಸು ವಿಕಾರವಾಗಿ ಅನೇಕ ದುರಂತಗಳಿಗೆ ಕಾರಣವಾಗಿ ಸಮಸ್ಯೆ ತಂದೊಡ್ಡುವುದು, ಆದ್ದರಿಂದ ಮನಸ್ಸನ್ನು ನಿಯಂತ್ರಿಸಲು ವಾರಕ್ಕೊಮ್ಮೆ ನಾವು ಶರಣರ ಸಂಘದಲ್ಲಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಶರಣೆ ರಂಜಿತಾ ರೆಡ್ಡಿ ಮಾತನಾಡಿ ಬದುಕಿನ ಆನಂದ ಅನ್ನೋದು ನಾವು ಊಟ ಮಾಡುವ ಅನ್ನದಲ್ಲಿ ಅಥವಾ ಉಡುವ ಬಟ್ಟೆಯಲ್ಲಿ ತೊಡುವ ಒಡವೆಯಲ್ಲಿ ಇಲ್ಲ; ಮಹಾತ್ಮರ ಮಾತುಗಳನ್ನು ಅರಿತು ಅದರಂತೆ ನಡೆದುಕೊಂಡರೆ ಅಲ್ಲಿ ನೆಮ್ಮದಿ, ಆನಂದ ಸಿಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ವಚನ ಪುಸ್ತಕ, ವಿಭೂತಿ, ರುದ್ರಾಕ್ಷಿ ಹಂಚಲಾಯಿತು‌.

ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಸೂರ್ಯಕಾಂತ ಪಾಟೀಲ, ನಿಜಲಿಂಗಪ್ಪ ಮಾಶೆಟ್ಟೆ, ನಾಗಯ್ಯಸ್ವಾಮಿ, ರಮೇಶ ಬಿರಾದಾರ, ಶರಣಪ್ಪ ಕುಂಬಾರ, ರಂಗರಾವ, ಸಿದ್ಧರಾಮಪ್ಪ ಬಿರಾದಾರ, ರವಿ ಕುಂಬಾರ, ಸಂತೋಷ ಮಾಸೆಟ್ಟೆ, ಸೋಮಲಿಂಗ ಮಠಪತಿ, ಅಕ್ಕಮಹಾದೇವಿ ಬಳಗದ ಅಧ್ಯಕ್ಷರಾದ ಭಾಗ್ಯಶ್ರೀ ಮಾಶೆಟ್ಟೆ, ರೇಣುಕಾ ಸ್ವಾಮಿ, ಮಮಿತಾ ಮಾಶೆಟ್ಟೆ, ಮಲ್ಲಮ್ಮ ಮಟ್ಟೆ, ಉಮಾದೇವಿ ಹೊನ್ನ ಸೇರಿದಂತೆ ಊರಿನ ಅನೇಕ ಶರಣ ಶರಣೆಯರ ಉಪಸ್ಥಿತರಿದ್ದರು. ವೀರಯ್ಯಸ್ವಾಮಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *