ಕಲ್ಯಾಣ ಪರ್ವಕ್ಕೆ ಕೊಪ್ಪಳದ ಎರಡು ಗ್ರಾಮಗಳಿಂದ 10 ಸಾವಿರ ರೊಟ್ಟಿ ದಾಸೋಹ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಕೊಪ್ಪಳ:

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ “ಕಲ್ಯಾಣ ಪರ್ವ” ಧಾರ್ಮಿಕ ಕಾರ್ಯಕ್ರಮಕ್ಕೆ ಕೊಪ್ಪಳ ಭಾಗದಿಂದ 10 ಸಾವಿರ ಜೋಳದ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ.

ಈ ಬೃಹತ್ ಕಾರ್ಯಕ್ರಮವನ್ನು ಡಾ. ಗಂಗಾ ಮಾತಾಜಿಯವರ ಬಸವಧರ್ಮ ಪೀಠದಿಂದ ಅಕ್ಟೋಬರ್ 18 ರಿಂದ 20ರವರೆಗೆ ಆಯೋಜಿಸಲಾಗಿದೆ.

ಮುಖ್ಯವಾಗಿ ಟಣಕನಕಲ್ ಗ್ರಾಮ ಹಾಗೂ ಹಟ್ಟಿ ಗ್ರಾಮದಿಂದ ಸುಮಾರು ನೂರು ಮನೆಯವರು ಇಷ್ಟೊಂದು ರೊಟ್ಟಿ ಮಾಡಿಕೊಟ್ಟಿದ್ದಾರೆ.

ಗ್ರಾಮದ ರೈತರಿಂದ ದಾಸೋಹದ ಮೂಲಕ ಸಂಗ್ರಹಿಸಲಾದ ಒಟ್ಟು ಮೂರು ಕ್ವಿಂಟಲ್ ಜೋಳವನ್ನು ಗಿರಣಿಗೆ ಹೊಯ್ದು ಹಿಟ್ಟು ಹಾಕಿಸಲಾಯಿತು. ನಂತರ ಹಿಟ್ಟನ್ನು ಹಂಚಿಕೊಂಡು ಪ್ರತಿ ಮನೆಯ ಶರಣೆಯರು ಕಳೆದೊಂದು ವಾರದಿಂದ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಗಳನ್ನು ಒಂದು ಕಡೆ ಸಂಗ್ರಹಿಸಿ ಇದೇ ಗ್ರಾಮಗಳಿಂದ ಸಮಾವೇಶದಲ್ಲಿ ಫಾಲ್ಗೊಳ್ಳುವವರ ಮೂಲಕ ವಾಹನಗಳಲ್ಲಿ ಬಸವ ಕಲ್ಯಾಣಕ್ಕೆ ಸಾಗಿಸಲಾಯಿತು.

ಕಳೆದ ಮೂರು ವರ್ಷದಿಂದ ಬಸವಭಕ್ತರಿಂದ ಈ ರೊಟ್ಟಿ ದಾಸೋಹ ಸೇವೆ ನಡೆದಿದೆ.

ಕಳೆದ ಎರಡು ವರ್ಷ ತಲಾ 05 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿತ್ತು, ಈ ವರ್ಷ 10 ಸಾವಿರ ರೊಟ್ಟಿಗಳನ್ನು ದಾಸೋಹ ಮಾಡಲಾಗಿದೆ. ಅದರಂತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದಲೂ ದಾಸೋಹ ಮಾಡಲಾಗಿದೆ ಎಂದು ಬಸವಭಕ್ತರು, ರಾಷ್ಟ್ರೀಯ ಬಸವದಳದ ಕೊಪ್ಪಳ ಜಿಲ್ಲಾ ಮುಖಂಡರು ಆಗಿರುವ ಡಿ.ಟಿ. ಶಿವಬಸಯ್ಯ ಹೇಳುತ್ತಾರೆ.

ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ ಪ್ರತಿ ಶರಣ ಮೇಳಕ್ಕೆ 5 ಕ್ವಿಂಟಲ್ ಮಾದಲಿ(ಸಿಹಿಪದಾರ್ಥ)ಯನ್ನು ಸಹ ದಾಸೋಹ ಮಾಡುತ್ತಾ ಬಂದಿದ್ದೇವೆ ಎಂದು ಶಿವಬಸಯ್ಯ ಹೇಳಿದರು.

Share This Article
2 Comments

Leave a Reply

Your email address will not be published. Required fields are marked *