ಹುಬ್ಬಳ್ಳಿ
ಅಕ್ಟೋಬರ್ 15 ರಂದು ಬಯಲೊಳು ಬಯಲಾದ ಶರಣ ಕಲ್ಯಾಣಪ್ಪ ದುಂಡಪ್ಪ ಪರಮಾದಿ ಅವರ ಲಿಂಗೈಕ್ಯ ಸ್ಮರಣೋತ್ಸವ ಕಾರ್ಯಕ್ರಮ ರವಿವಾರ ನಡೆಯಿತು.
ಬಸವ ಧರ್ಮಪೀಠ ಸುಕ್ಷೇತ್ರ ಕೂಡಲಸಂಗಮದ ಪರಮ ಸದ್ಭಕ್ತರು, ಜೀವನವಿಡಿ ಶರಣ ಸಂಸ್ಕೃತಿ ಅಳವಡಿಸಿಕೊಂಡು ಸಾರ್ಥಕ ಶರಣ ಜೀವನ ಪರಮಾದಿ ನಡೆಸಿದ್ದರು.
ಹುಬ್ಬಳ್ಳಿಯ ಕೋಟಿಲಿಂಗೇಶ್ವರ -ಬಸವ ನಗರ ಬಡಾವಣೆಯ ನಿವಾಸ ‘ಬಸವ ಚೈತನ್ಯ’ದಲ್ಲಿ ಅವರ ಸ್ಮರಣೋತ್ಸವ ಕಾರ್ಯಕ್ರಮವು ಹೃದಯಸ್ಪರ್ಶಿಯಾಗಿ ನಡೆಯಿತು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಎಂ. ವಿ. ಗೊಂಗಡಶೆಟ್ಟಿ ಅವರು ಮಾತನಾಡಿ, ತಮ್ಮ ಹಾಗೂ ಕಲ್ಯಾಣಪ್ಪನವರ ಒಡನಾಟವನ್ನು ಸ್ಮರಿಸಿಕೊಂಡರು.
ಯುವ ರಾಷ್ಟ್ರೀಯ ಬಸವದಳದ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ ಅವರು ಮಾತನಾಡಿ, ಪ್ರಾಮಾಣಿಕ ಶರಣಜೀವನ ನಡೆಸಿದ ಹಿರಿಯರಾದ ಕಲ್ಯಾಣಪ್ಪ ಪರಮಾದಿ ಅವರ ಬದುಕು ನಮಗೆಲ್ಲ ಆದರ್ಶ. 87 ವರ್ಷ ತುಂಬು ಜೀವನ ನಡೆಸಿದ ಅವರ ಸಮಾಜಮುಖಿ ಕಾರ್ಯಗಳು ಅನುಕರಣೀಯ.
ಅವರ ಬಸವ ಸೇವೆಯ ಪ್ರತಿ ಹೆಜ್ಜೆಗೂ ಸಮವೇಗದಲ್ಲಿ ಹೆಜ್ಜೆಯಿಟ್ಟ ಅವರ ಧರ್ಮ ಪತ್ನಿ ಶೋಭಾತಾಯಿ ಅವರ ತ್ಯಾಗವೂ ಅಭಿನಂದನಾರ್ಹವಾದುದು ಎಂದರು.
ಉಣಕಲ್ ಕೆರೆಗೆ “ಚೆನ್ನಬಸವ ಸಾಗರ” ಎಂದು ನಾಮಕರಣ ಮಾಡಲು ಕಲ್ಯಾಣಪ್ಪನವರು ಹಾಗೂ ಅವರ ಮಗ ವಿನಯ್ ಅವರ ಪ್ರಯತ್ನ ಸ್ಮರಣೀಯವಾದುದು ಎಂದರು.
ನಿವೃತ್ತ ಅಧಿಕಾರಿ ಮಹಾಂತಪ್ಪ ನಂದೂರ್ ಅವರು ಸಹ ನುಡಿ ನಮನ ಸಲ್ಲಿಸಿದರು.
ಶೋಭಾತಾಯಿ ಕಲ್ಯಾಣಪ್ಪ ಪರಮಾದಿ, ವಿನಯ್ ಪರಮಾದಿ, ವಿವೇಕ್ ಪರಮಾದಿ, ಶೈಲಾ ಪರಮಾದಿ (ಇಟ್ನಾಳ್) ಮತ್ತು ಸೊಸೆ ಯಂದಿರು, ಮೊಮ್ಮಕ್ಕಳು ಭಾಗವಹಿಸಿದ್ದ ಭಾವಪೂರ್ಣ ಸಭೆಯಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭೆ ಸದಸ್ಯರು ಸೇರಿದಂತೆ ನೂರಾರು ಶರಣ ಶರಣೆಯರು ಪಾಲ್ಗೊಂಡಿದ್ದರು.

