ಗದಗ
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ್ದಾರೆ. ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ತೋಂಟದಾರ್ಯ ಮಠದಲ್ಲಿ ಜರುಗಿದ ೨೭೨೦ ನೇ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತು ಹೋದ ಒಬ್ಬ ಶ್ರೇಷ್ಠ ದಾಸವರೆಣ್ಯ ಕನಕದಾಸರು. ಕನಕದಾಸರ ಬದುಕು ಮತ್ತು ಆದರ್ಶಗಳು ಸಾರ್ವಕಾಲಿಕ. ಶರಣರ ವಚನ ಮತ್ತು ದಾಸರ ಪದಗಳು ಸಮಾಜದಲ್ಲಿ ಜಾತಿಮತ ಪಂಥ ಬೇಧಗಳನ್ನು ಅಳಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದು ಮಾತನಾಡಿದರು.
ಕನಕದಾಸ ಜಯಂತಿಯ ನಿಮಿತ್ಯ ಸಂತ ಶ್ರೇಷ್ಠ ಕನಕದಾಸರು ಎಂಬ ವಿಷಯ ಕುರಿತು ಧಾರವಾಡ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ವಡಿಗೇರಿಯವರು ಅವರ, ಕೀರ್ತನೆಗಳ ಮುಂಡಿಗೆಗಳ, ಕೃತಿಗಳ ಕುರಿತು ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಿದರು.
ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಈ ವಿಷಯವಾಗಿ ಕೆ.ವಿ.ಎಸ್.ಆರ್. ಕಾಲೇಜು ಗದಗದ ನಿವೃತ್ತ ಪ್ರಾಚಾರ್ಯರಾದ ಅನಿಲ ವೈಧ್ಯರವರು ಮಾತನಾಡಿ, ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ತುಂಬಾ ಸುಂದರವಾಗಿ ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು. ನಗು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಗಬೇಕು ಮತ್ತೆ ಮತ್ತೆ ನಗಬೇಕು ಎಂದು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ೨೦೨೩ ನೇ ಸಾಲಿನ ಅನುವಾದಿತ ಸಾಹಿತ್ಯ ಕೃತಿ ‘ತೌಲನಿಕ ಧರ್ಮ ದರ್ಶನ’ವು ಪುಸ್ತಕ ಬಹುಮಾನ ಪಡೆದ ಪ್ರಯುಕ್ತ ಜಗದ್ಗುರು ಡಾ. ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಸರ್ವ ಪದಾಧಿಕಾರಿಗಳು ಭಕ್ತಿಪೂರ್ವಕ ಸಂಮಾನ ಮಾಡಿ ಅಭಿನಂದನಾ ಪತ್ರ ಪ್ರದಾನ ಮಾಡಿದರು.
ದೆಹಲಿಯಯ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಲ ಕವಿಯತ್ರಿ ಪ್ರಣತಿ ರಾಜೇಂದ್ರ ಗಡಾದ ಇವರನ್ನು ಮಕ್ಕಳ ದಿನಾಚರಣೆ ನಿಮಿತ್ಯ ಸಂಮಾನ ಮಾಡಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರವರು ಸಂಗೀತ ಸೇವೆ ನೇರವೇರಿಸಿದರು. ಧರ್ಮ ಗ್ರಂಥ ಪಠಣವನ್ನು ಸಂಕೇತ .ಎಸ್. ತಕ್ಕಡಿ ಹಾಗೂ ವಚನ ಚಿಂತನವನ್ನು ಭುವನ್ .ಎಸ್. ಅಕ್ಕಮ್ಮನವರ ಮಾಡಿದರು. ದಾಸೋಹ ಸೇವೆಯನ್ನು ಶರಣ ಹುಚ್ಚಣ್ಣ ಶಹಾಪೂರ, ಹಾಲೇಶ್ವರ ಟ್ರೇಡಿಂಗ್ ಕಂಪನಿ ಗದಗ ಇವರು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮಿತಿಯ ಚೇರಮನ್ರಾದ ಐ.ಬಿ.ಬೆನಕೊಪ್ಪರವರು ಸಂಮಾನಿತರನ್ನು ಪರಿಚಯಿಸಿದರು. ವಿಧ್ಯಾ ಗಂಜಿಹಾಳರವರು ಸ್ವಾಗತಿಸಿದರೆ, ಶ್ರೀಮತಿ ಗೌರಕ್ಕ ಬಡಿಗಣ್ಣವರ, ನಿರೂಪಣೆ ಮಾಡಿದರು.