ಕನ್ನಡ ಜಾಗೃತಿ ಮೂಡಿಸಲು ದುಡಿದ ಅಬ್ಬಿಗೇರಿ ವಿರುಪಾಕ್ಷಪ್ಪ

ನರಗುಂದ

ಬಳ್ಳಾರಿ ಉಳಿಸಿ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಅಬ್ಬಿಗೇರಿ ವಿರುಪಾಕ್ಷಪ್ಪನವರು ಕನ್ನಡ ನಾಡು-ನುಡಿ ನೆಲ-ಜಲದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದ ಅವರು ಕನ್ನಡದ ಕುಲಪುತ್ರರು. ಉಪಾದ್ಯಾಯರಾಗಿದ್ದ ಅವರು ಎಳೆಯ ಮಕ್ಕಳಲ್ಲಿ ಉತ್ಸಾಹ ಉಕ್ಕುವಂತೆ ಏಕೀಕರಣದ ಹಾಡುಗಳನ್ನು ರಚಿಸಿ ಮಕ್ಕಳಿಗೆ ರಂಜನೆಯ ಜೊತೆಗೆ ಕನ್ನಡ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದು ಮುಖ್ಯೋಪಾದ್ಯಾಯ ಪಿ. ಸಿ. ಕಲಹಾಳ ಬಣ್ಣಿಸಿದರು.

ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-೪೦ ಕಾರ್ಯಕ್ರಮದಲ್ಲಿ, ಸೂಡಿ ಗ್ರಾಮದ ಅಬ್ಬಿಗೇರಿ ವೀರುಪಾಕ್ಷಪ್ಪನವರ ಬದುಕು ಮತ್ತು ಹೋರಾಟ ವಿಷಯದ ಕುರಿತು ಮಾತನಾಡಿದರು. ಹದಿ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಕಾರಾಗೃಹವಾಸ ಅನುಭವಿಸಿದ ಅಪ್ಪಟ ಕನ್ನಡ ಮಣ್ಣಿನ ಮಗನಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ನಿಷ್ಠೆ ಮತ್ತು ಛಲದಿಂದ ಹೋರಾಡಿದ ವೀರುಪಾಕ್ಷಪ್ಪನವರು, ಕನ್ನಡಿಗರನ್ನು ಬಡಿದೆಬ್ಬಿಸಲು ತಮ್ಮ ಹರಿತವಾದ ಲೇಖನಗಳಿಂದ ಜನಜಾಗೃತಿಯನ್ನು ಮೂಡಿಸಿ ಏಕೀಕರಣ ಹೋರಾಟಕ್ಕೆ ಶಕ್ತಿಯಾಗಿದ್ದರು ಎಂದು ಹೇಳಿದರು.

ಲಿಂ. ಸಮಾಜವಾದಿ ಹೋರಾಟಗಾರ ವಿರೂಪಾಕ್ಷಪ್ಪ ಅಬ್ಬಿಗೇರಿ ತಮ್ಮ ಪುಸ್ತಕಗಳ ಮಧ್ಯೆ

ಸನ್ಮಾನಿತರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ. ವೈ. ಎಂ. ಯಾಕೊಳ್ಳಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು ಕನ್ನಡ ನೆಲ-ಜಲ ಪ್ರತಿಯೊಬ್ಬ ಕನ್ನಡಿಗನ ಸ್ವತ್ತು ಅದನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ಕನ್ನಡಿಗರಾದ ನಾವೆ ಕನ್ನಡವನ್ನು ಮರೆಯುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

. ಅಂದಾನಪ್ಪ ದೊಡ್ಡಮೇಟಿ

ಶತಮಾನದಲ್ಲಿ ಸಮಾನತೆಗಾಗಿ ಬಹುದೊಡ್ಡ ಕ್ರಾಂತಿ ಮಾಡಿದ ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪದ ಬಸವಾದಿ ಶಿವಶರಣರ ಚಿತ್ರವನ್ನು ಬೆಳಗಾವಿ ಸುವರ್ಣ ವಿದಾನಸೌಧದಲ್ಲಿ ಅಳವಡಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಕರ್ನಾಟಕ ಏಕೀಕರಣದ ರೂವಾರಿ ಮುಂಬೈ ವಿಧಾನಸಭೆಯಲ್ಲಿ ಕನ್ನಡವನ್ನು ಮೊಳಗಿಸಿದ ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು ಸಂತಸದಾಯಕ. ಆದಷ್ಟು ಶೀಘ್ರದಲ್ಲಿಯೇ ಆ ಸ್ಮಾರಕ ಭವನ ಲೋಕಾರ್ಪಣೆಯಾಗಬೇಕೆಂದು ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶಿವಕುಮಾರ ಶೆಲ್ಲಿಕೇರಿ ಹಾಗೂ ಸುವರ್ಣ ಶೆಲ್ಲಿಕೇರಿ ಅವರನ್ನು ಮತ್ತು ಇತ್ತಿಚಿಗೆ ನಿವೃತ್ತರಾದ ಡಾ. ವೈ. ಎಂ. ಯಾಕೊಳ್ಳಿಯವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ನೀಲಗುಂದದ ಪೂಜ್ಯ ಶ್ರೀ ಮಂಜುನಾಥ ಶರಣರು, ಮಹಾಂತೇಶ ಸಾಲಿಮಠ, ವೀರುಪಾಕ್ಷಪ್ಪ ಶೆಲ್ಲಿಕೇರಿ, ರಮೇಶ ಅಣ್ಣಿಗೇರಿ, ಪ್ರಕಾಶ ಅಣ್ಣಿಗೇರಿ, ಬೀಮಸೇನ ಪವಾರ, ಬಿ. ಎಮ್. ಗೊಜನೂರ, ವೀರಭದ್ರಪ್ಪ ಅಣ್ಣಿಗೇರಿ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಪ್ರೋ ಆರ್. ಬಿ. ಚಿನಿವಾಲರ, ಪ್ರಕಾಶ ಚಂದನ್ನವರ ಪ್ರಮುಖರು ಉಪಸ್ಥಿತರಿದ್ದರು. ಪ್ರೋ ರಮೇಶ ಐನಾಪೂರ ಕಾರ್ಯಕ್ರಮ ನಿರೂಪಿಸಿದರು ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Share This Article
1 Comment
  • ಖುಷಿ ಆಯ್ತು. ಶ್ರೀ ಅಬ್ಬೀಗೇರಿ ವಿರೂಪಾಕ್ಷಪ್ಪ ಹಾಗೂ ಶ್ರೀ ಅಂದಾನಪ್ಪ ದೊಡ್ಡಮೇಟಿ ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದು ಅತ್ಯಂತ ಯೋಗ್ಯವಾದದ್ದು.ಯುವ ಜನಾಂಗಕ್ಕೆ ಇಂಥಹ ಆದರ್ಶ ಹಿರಿಯರ ಪರಿಚಯಿಸುವ ಕಾರ್ಯ ಶ್ಲಾಘನೀಯ. ಅಭಿನಂದನೆಗಳು.

Leave a Reply

Your email address will not be published. Required fields are marked *