ಕನ್ನಡ ನಮ್ಮ ಅಸ್ಮಿತೆ ಹಾಗೂ ಅಸ್ತಿತ್ವದ ಪ್ರತೀಕ: ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನ್ನಡದಲ್ಲಿ ಶ್ರೇಷ್ಠವಾದಂತಹ ಸಾಹಿತ್ಯ ಪರಂಪರೆ ಇದೆ. ಅದರಲ್ಲಿ ೧೨ನೇ ಶತಮಾನದ ಶರಣರ ವಚನ ಸಾಹಿತ್ಯ ವಿಶೇಷವಾದದ್ದು. ಶರಣರು ದೇವರಿಗೆ ಕನ್ನಡ ಕಲಿಸಿದ ಕನ್ನಡಾಭಿಮಾನಿಗಳು. ಕನ್ನಡದಲ್ಲಿ ಹುಟ್ಟಿದ ವಚನ ಸಾಹಿತ್ಯ ಇವತ್ತು ಜಗತ್ತಿಗೆ ದಾರಿದೀಪವಾಗಿದೆ ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

 ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಧಾತ್ರಿ ರಂಗಸಂಸ್ಥೆ ಸಿರಿಗೆರೆ ಕಲಾವಿದರಿಂದ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಶದ ಅನೇಕ ಭಾಷೆಗಳಲ್ಲಿ ವಚನಗಳ ಅನುವಾದ ನಡೆಯುತ್ತಿದೆ. ಕನ್ನಡ ನಮ್ಮ ಅಸ್ಮಿತೆಯ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರದಾಗಿದೆ. ನಾವು ಬೇರೆ ಭಾಷೆಯನ್ನು ಗೌರವಿಸಬೇಕು. ಆದರೆ ನಮಗೆ ಕನ್ನಡದ ಬಗ್ಗೆ ಅಭಿಮಾನ ಇರಬೇಕು.

ನಾವು ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಭಾಷೆಯ ಬಳಕೆಯಿಂದಲೇ ಅದು ಜೀವಂತವಾಗಿ ಉಳಿಯುತ್ತದೆ ಎಂಬುದು ಕನ್ನಡಿಗರು ಮರೆಯಬಾರದು ಎಂದರು.

ಸಮಾರಂಭದ ಉದ್ಘಾಟನೆ ನೆರವೇರಿಸಿದ ಬೀದರ ಸಂಸದರಾದ ಸಾಗರ ಖಂಡ್ರೆ ಅವರು ಮಾತನಾಡುತ್ತ, ಕನ್ನಡ ಭಾಷೆ ನಮ್ಮೆಲ್ಲರ ಮಾತೃ ಭಾಷೆ. ಕರ್ನಾಟಕದಲ್ಲಿರುವ ಎಲ್ಲರಿಗೂ ಕನ್ನಡ ಬರಲೇಬೇಕು. ಅನ್ಯ ರಾಜ್ಯದ ಜನರಿಗೆ ಅನ್ಯ ಭಾಷಿಕರಿಗೆ ನಾವು ಕನ್ನಡದ ಅರಿವು ಮೂಡಿಸಬೇಕು.

ಕರ್ನಾಟಕ ಏಕೀಕರಣಕ್ಕಾಗಿ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಲೋಕನಾಯಕ ಭೀಮಣ್ಣ ಖಂಡ್ರೆ ಮತ್ತು ಅನೇಕ ಕನ್ನಡಾಭಿಮಾನಿಗಳು ಹೋರಾಟ ಮಾಡಿದರು.

ಭಾಲ್ಕಿಯ ಮಠ ಕನ್ನಡದ ಮಠ, ಕನ್ನಡದ ಪಟ್ಟದ್ದೇವರ ಮಠ ಎಂದೇ ಖ್ಯಾತಿಯಾಗಿದೆ. ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಚನ್ನಬಸವೇಶ್ವರ ಗುರುಕುಲದ ಮೂಲಕ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ನುಡಿದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗಭೂಷಣ ಮಾಮಡಿ ಅವರು ಅಧ್ಯಕ್ಷತೆ ವಹಿಸಿ, ಕನ್ನಡ ಮತ್ತು ಕರ್ನಾಟಕ ರಾಜ್ಯೋತ್ಸವ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ಮಲ್ಲಮ್ಮ ಆರ್. ಪಾಟೀಲ ಅವರಿಗೆ ಸೇವಾ ನಿವೃತ್ತಿ ನಿಮಿತ್ಯ ವಿಶೇಷ ಸನ್ಮಾನ ಮಾಡಲಾಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.

ಜೈರಾಜ ಕೊಳ್ಳಾ, ಕೆ.ಡಿ.ಗಣೇಶ, ಸಂತೋಷ ಬಿ.ಜಿ.ಪಾಟೀಲ, ಸಂಗಮೇಶ ಗುಮ್ಮೆ, ಗಣೇಶ ಪಾಟೀಲ, ಸಂಜುಕುಮಾರ ನಾವದಗಿ, ಗೊರಕ ಶ್ರೀಮಾಳೆ, ಚಂದು ಸಂಪಗೆ, ಸುನೀತಾ ಮಮ್ಮಾ, ಸಿದ್ರಾಮಯ್ಯ ಸ್ವಾಮಿ, ಬಸವರಾಜ ಕಾರಬಾರಿ, ರಾಹುಲ ಸಿಂಧೆ, ವಿನಾಯಕ ಕಾಶಪ್ಪ ಬಿರಾದಾರ ಮುಂತಾದ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಗುರುಪ್ರಸಾದ ಶಾಲೆಯ ಐಶ್ವರ್ಯ ಮತ್ತು ಚೈತನ್ಯ ವಿದ್ಯಾರ್ಥಿಗಳಿಂದ ನಾಡಗೀತೆ ನಡೆಯಿತು. ದೀಪಕ ಠಮಕೆ ನಿರೂಪಿಸಿದರು. ರಾಜು ಜುಬರೆ ವಂದಿಸಿದರು. ಕೊನೆಯಲ್ಲಿ ಧಾತ್ರಿ ರಂಗ ಕಲಾವಿದರಿಂದ ಸಂಸಾರದಲ್ಲಿ ಸನಿದಪ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *