ಚಾಮರಾಜನಗರ
ನಗರದ ಬಸವ ಸಂಘಟನೆಗಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕನ್ನೇರಿ ಸ್ವಾಮಿಯ ವಿರುದ್ಧ ಮಂಗಳವಾರ ದೂರು ದಾಖಲಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನ ಜಿಲ್ಲಾ ಸಮಿತಿ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್ ನೀಡಿರುವ ದೂರಿನಲ್ಲಿ ಬಸವ ಭಕ್ತರಿಗೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರನ್ನು ಆಗ್ರಹಿಸಲಾಗಿದೆ.
ಅಕ್ಟೊಬರ್ 9 ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಯರನ್ನು **ಮಕ್ಕಳೆಂದು ಮತ್ತು ಅವರುಗಳನ್ನು **ನಿಂದ ಹೊಡೆಯಬೇಕೆಂದು ಸಾರ್ವಜನಿಕರಿಗೆ ಪ್ರಚೋದಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (ಬಿ.ಏನ್.ಎಸ್) ಕಾಯಿದೆ 299, 302 ಮತ್ತು 352 ಕಾಲಂಗಳ ಅಡಿಯಲ್ಲಿ ಕನ್ನೇರಿ ಸ್ವಾಮಿ ಅಪರಾಧ ಎಸಗಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಸೆಕ್ಷನ್ 299 ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಅಥವಾ ಕೆರಳಿಸುವ ಕೃತ್ಯಗಳನ್ನು ನಿಷೇಧಿಸುತ್ತದೆ.
ಸೆಕ್ಷನ್ 302 – ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಪದ ಬಳಕೆ, ಸನ್ನೆ ಅಥವಾ ವಸ್ತುಗಳನ್ನು ಇರಿಸುವುದನ್ನು ನಿಷೇಧಿಸುತ್ತದೆ.
ಸೆಕ್ಷನ್ 352 ಶಾಂತಿ ಭಂಗವನ್ನು ಪ್ರಚೋದಿಸುವ, ಅವಮಾನ ಮಾಡುವ ಕೃತ್ಯಗಳನ್ನು ನಿಷೇದಿಸುತ್ತದೆ.

“ಈ ಕಾಯಿದೆಗಳಲ್ಲಿ ಶಿಕ್ಷೆ ಮೂರು ವರ್ಷಗಳಿಗಿಂತ ಕಡಿಮೆಯಿರುವುದರಿಂದ ಪೊಲೀಸರು ಗುರುತಿಸಲಾಗದ ಅಪರಾಧ (non-cognizable offence) ದಾಖಲಿಸಿದ್ದಾರೆ. ಪೊಲೀಸ್ ಅಧೀಕ್ಷಕರಿಗೆ ಒಂದು ಪ್ರತಿ ಕಳಿಸುತ್ತಿದ್ದೇವೆ. ಈಗ ಪೊಲೀಸರು ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟರ ಅನುಮತಿ ಅಗತ್ಯವಿದೆ. ಸಧ್ಯದಲ್ಲೇ ಕೋರ್ಟಿನಲ್ಲಿ ಖಾಸಗಿ ದೂರನ್ನೂ ದಾಖಲಿಸಲಾಗುವುದು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಾನೂನು ಸಲಹೆಗಾರ ಆರ್. ವಿರುಪಾಕ್ಷ ಹೇಳಿದರು.
ಕನ್ನೇರಿ ಸ್ವಾಮಿಯ ಮಾತಿನಿಂದ ರೊಚ್ಚಿಗೆದ್ದಿರುವ ಬಸವ ಸಂಘಟನೆಗಳು ಹಲವಾರು ಕಡೆ ದೂರು ದಾಖಲಿಸಲು ಪ್ರಯತ್ನಿಸಿದ್ದಾರೆ. ಪ್ರಕರಣ ಉಮಗಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆಯೆಂದು ದೂರು ಸ್ವೀಕರಿಸಿದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ.
“ಅನೇಕ ಸಂಘಟನೆಗಳು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕಾರಣ ನೀಡಿ ದೇಶದೆಲ್ಲೆಡೆ ದೂರು ದಾಖಲಿಸಿ ವಿಚಾರಣೆ ನಡೆಯುವಂತೆ ಮಾಡಿದ್ದಾರೆ. ಆ ಪ್ರಕರಣಗಳನ್ನು ಸರಿಯಾಗಿ ಅಧ್ಯಯನ ಮಾಡಿ ಬಸವ ಸಂಘಟನೆಗಳು ಕನ್ನೇರಿ ಸ್ವಾಮಿ ಕಂಬಿ ಎಣಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಚಾಮರಾಜನಗರದ ಸಂಘಟನೆಗಳು ಸರಿಯಾದ ಸಿದ್ಧತೆ ಮಾಡಿಕೊಂಡು ಗಂಭೀರವಾದ ಪ್ರಯತ್ನ ನಡೆಸುತ್ತಿದ್ದಾರೆ,” ಎಂದು ಬೆಂಗಳೂರಿನ ಹಿರಿಯ ಹೈಕೋರ್ಟ್ ವಕೀಲರೊಬ್ಬರು ಹೇಳಿದರು.
ಅವನನ್ನು ಕೇಸ್ ದಾಖಲಿಸಿ ಜೇಲಿಗೆ ತಳ್ಳುವದೊಂದೇ ಬಾಕಿ ಉಳಿದಿದೆ. ಇದಕ್ಕೆ ತಕ್ಕ ಶಿಕ್ಷೆ ಆಗಲೇಬೇಕು. ಜನರು ನಾವು ಸಡಿಲು ಬಿಟ್ಟರೆ ಮತ್ತೆ ಇಂತಹ ಮಾತನಾಡಲು ಹಿಂಜರಿವದಿಲ್ಲ.