ಕನ್ನೇರಿ ಶ್ರೀ ಅನಾಗರಿಕ ವರ್ತನೆ ನೋವಿನ ಸಂಗತಿ: ತೋಂಟದ ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಪದೇ ಪದೇ ಸುಳ್ಳು ಆರೋಪ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.

ಗದಗ

ಇತ್ತೀಚೆಗೆ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಕನ್ನೇರಿ ಕಾಡಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮಿಗಳು ನಮ್ಮ ಹೆಸರನ್ನು ಉಲ್ಲೇಖಿಸಿ ಕೆಲವೊಂದು ಆರೋಪಗಳನ್ನು ಮಾಡಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿ ಅವರ ಆರೋಪಕ್ಕೆ ಈ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿದೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದ್ದಾರೆ.

‘ಒಬ್ಬ ಸ್ವಾಮಿ’ ಎಂಬ ಏಕವಚನದ ಶಬ್ದದಿಂದ ಪ್ರಾರಂಭವಾಗುವ ಅವರ ಮಾತುಗಳಲ್ಲಿ “ನಾವು ಮರಾಠಿ ಭಾಷೆಯ ಕುರಾನನ್ನು ಕನ್ನಡಕ್ಕೆ ಅನುವಾದಿಸಿ ನಮ್ಮ ಮಠದಿಂದಲೇ ಪ್ರಕಟಿಸಿ ಹಂಚಿರುವುದಾಗಿ ಮತ್ತು ಭಗವದ್ಗೀತೆಯನ್ನು ಬಯ್ದಿರುವುದಾಗಿ ಹೇಳಿರುವುದನ್ನು ಕೇಳಿದೆವು.

ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ ಸಂತರಾದ ವಿನೋಬಾ ಭಾವೆ ಅವರ “ಇಸ್ಲಾಂ ಧರ್ಮ ಸಂದೇಶ” ಎಂಬ ಹಿಂದೀ ಭಾಷೆಯ ಕೃತಿ. ಅದು ಕುರಾನ ಅಲ್ಲ, ಮರಾಠಿ ಭಾಷೆಯ ಕೃತಿಯೂ ಅಲ್ಲ. ಅದನ್ನು ನಮ್ಮ ಮಠದಿಂದ ನಾವು ಪ್ರಕಟಿಸಿಯೂ ಇಲ್ಲ. ಆದರೂ ಅವರು ಸುಳ್ಳು ಆರೋಪ ಮಾಡಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಈ ಕೃತಿಯನ್ನು ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳನ್ನೂ ಆಹ್ವಾನಿಸಲಾಗಿತ್ತು ಎಂಬುದು ವಾಸ್ತವ ಸಂಗತಿ.

ನಾವು ಅನುವಾದಿಸಿರುವುದು ಹಿಂದೂಧರ್ಮದ ಶ್ರೇಷ್ಠ
ಸಂತರಾದ ವಿನೋಬಾ ಭಾವೆ ಅವರ “ಇಸ್ಲಾಂ ಧರ್ಮ ಸಂದೇಶ” ಎಂಬ ಹಿಂದೀ ಭಾಷೆಯ ಕೃತಿ.

ಕನ್ನೇರಿ ಶ್ರೀಗಳು ಇದೇ ಸಂದರ್ಭದಲ್ಲಿ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿಯೂ ತಿಳಿಸಿದ್ದಾರೆ. ನಾವು ಬಯ್ದಿರುವುದಕ್ಕೆ ಅವರಲ್ಲಿ ಏನಾದರೂ ಆಧಾರಗಳಿದ್ದರೆ ತಿಳಿಸಲಿ. ಈ ರೀತಿ ನಿರರ್ಥಕವಾಗಿ ಆರೋಪ ಮಾಡುವುದರ ಉದ್ದೇಶ ಎಂದರೆ ಒಬ್ಬ ವ್ಯಕ್ತಿಯ ಚಾರಿತ್ರ್ಯಹನನ ಮಾಡುವುದು ಮತ್ತು ಒಂದು ಧರ್ಮದವರನ್ನು ವ್ಯಕ್ತಿಯ ವಿರುದ್ಧ ಎತ್ತಿಕಟ್ಟುವ ಮೂಲಕ ದ್ವೇಷವನ್ನು ಹರಡುವುದೇ ಆಗಿದೆ. ಈ ರೀತಿ ಸುಳ್ಳು ಆರೋಪಗಳ ಮೂಲಕ ನಮ್ಮ ಚಾರಿತ್ರ್ಯಹನನಕ್ಕೆ ಅವರು ಪ್ರಯತ್ನಿಸುತ್ತಿರುವುದು ಇದು ಮೂರನೆಯ ಬಾರಿ.

ಜನರು ಇದೆಲ್ಲವನ್ನು ಗಮನಿಸುತ್ತಿದ್ದಾರೆ. “ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯನ್ನು ರೂಢಿಸಿಕೊಂಡಿರುವ ನಾವು ಯಾವುದೇ ಧರ್ಮ-ದೇವರು ಮತ್ತು ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ. ನಿಂದಿಸಿದ್ದೇವೆ ಎಂಬುದು ಕುತ್ಸಿತ ಬುದ್ಧಿಯ ಸುಳ್ಳು ಆರೋಪ.

ನಾವು ಯಾವುದೇ ಧರ್ಮ-ದೇವರು ಮತ್ತು
ಭಗವದ್ಗೀತೆಯನ್ನು ಎಂದೂ ನಿಂದಿಸಿರುವುದಿಲ್ಲ

ಬದಲಾಗಿ ನಾವು ಭಾರತೀಯ ತತ್ತ್ವಶಾಸ್ತ್ರ ಕೃತಿಯಲ್ಲಿ ಡಾ. ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿ ಕೊಟ್ಟಿದ್ದೇವೆ. ಇದೂ ಅಲ್ಲದೆ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ.

ಇಷ್ಟಾದರೂ ನಾವು ಭಗವದ್ಗೀತೆಯನ್ನು ಬಯ್ದಿರುವುದಾಗಿ ಕನ್ನೇರಿ ಶ್ರೀಗಳು ಹೇಳಿರುವುದರ ಉದ್ದೇಶವೇನು? ಪದೇ ಪದೇ ಇಂಥ ಆಧಾರರಹಿತ ಆರೋಪ ಮಾಡುವ ಮತ್ತು ಅನಾಗರಿಕ ಭಾಷೆಯಲ್ಲಿ ಎಲ್ಲ ಸ್ವಾಮಿಗಳನ್ನು ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು.

ಅನಾಗರಿಕ ಭಾಷೆಯಲ್ಲಿ ಎಲ್ಲ ಸ್ವಾಮಿಗಳನ್ನು
ಸಾಮೂಹಿಕವಾಗಿ ನಿಂದಿಸುವ ಮೂಲಕ ಅವರು ಏನು
ಸಾಧಿಸಲಿದ್ದಾರೆ ಎಂಬುದು ಅರ್ಥವಾಗದ ಮಾತು.

ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕನ್ನೇರಿ ಶ್ರೀಗಳು ಸಮಾಜದಲ್ಲಿ ಅಶಾಂತಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕನ್ನೇರಿ ಶ್ರೀಗಳಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈಗಾಗಲೇ ಛೀಮಾರಿ ಹಾಕಿವೆ. ಅವರಾಡುವ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹಿತ ಪದೇ ಪದೇ ಅನಾಗರಿಕರಂತೆ ಅವರು ವರ್ತಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದು ಶ್ರೀಗಳು ವಿಷಾದಿಸಿದ್ದಾರೆ.

ಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ

ಅವರು ಮಾಡಿದ ಸುಳ್ಳು ಆರೋಪಗಳನ್ನೇ ಜನರು ನಿಜವೆಂದು ಭಾವಿಸಬಾರದು ಎಂಬ ಕಾರಣಕ್ಕೆ ಮತ್ತು ಶ್ರೀಮಠದ ಸಮಸ್ತ ಸದ್ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡಿದ್ದೇವೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
3 Comments
  • ಶ್ರೀ ಗಳಿಗೆ ಶರಣು ಶರಣಾರತಿ. ಇದೇ ಸ್ಪಷ್ಟೀಕರಣ ಬಸವ ಸಂಸ್ಕ್ರತಿ ಪಾಲಿಸುವವರ ದೊಡ್ಡ ಪ್ರಮಾಣದ ಸಭೆ ಏರ್ಪಡಿಸಿ ಇನ್ನೂ ಗಟ್ಟಿಯಾದ ರೀತಿಯಲ್ಲಿ ಹೇಳುವ ಮೂಲಕ ಇನ್ನು ಮುಂದೆ ಇಂತಹ ಹೇಳಿಕೆ ಕೊಡದಂತೆ ಎಚ್ಚರಿಕೆಯ ಸಂದೇಶ ಕೊಟ್ಟಿದ್ದರೆ ಸೂಕ್ತವಾಗಿ ಇರುತ್ತಿತ್ತು.

  • ಅಕ್ಕನೇರಿ ಕಂತ್ರಿ ಸ್ವಾಮಿಗೆ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸಬೇಕು

  • ಈಗ ಲಿಂಗಾಯತ ಧರ್ಮದ ರಕ್ಷಣೆ ಹೋರಾಟ ಗದುಗಿನ ಶ್ರೀ ನೇತೃತ್ವದಲ್ಲಿಯೇ ಮುನ್ನಡೆಯಬೇಕು. ತಮ್ಮ ವಿವಾದಕ್ಕೆ ಮಾತ್ರ ಅವರು ಸೀಮಿತ ಅಲ್ಲ. ಕನ್ನರಿ ಸ್ವಾಮಿಯ ಬಾಯಿ ಮುಚ್ಚಿಸಲು ನಮ್ಮ ಮಠಾಧೀಶರಿಗೆ 24 ಗಂಟೆ ಸಾಕು. ಮಠಾದೀಶರು ಮನಸ್ಸು ಮಾಡಬೇಕು.

Leave a Reply

Your email address will not be published. Required fields are marked *