ಚನ್ನಗಿರಿ
‘ರಾಜ್ಯದ ಲಿಂಗಾಯತ ಮಠಾಧೀಶರ ಮತ್ತು ಬಸವಭಕ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ, ಶುಕ್ರವಾರ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಬಸವ ಭಕ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಗುರುಬಸವ ಸ್ವಾಮೀಜಿ ಮಾತನಾಡುತ್ತ, ‘ನಮ್ಮ ರಾಜ್ಯದ ಲಿಂಗಾಯತ ಮಠಾಧೀಶರು ಹಾಗೂ ಬಸವಭಕ್ತರ ಬಗ್ಗೆ ಕನ್ನೇರಿ ಮಠದ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಈಗಾಗಲೇ ಸ್ವಾಮೀಜಿ ವರ್ತನೆಯ ವಿರುದ್ಧ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ವಾಮೀಜಿ ಪ್ರವೇಶಿಸದಂತೆ ಅಲ್ಲಿಯ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ’ ಎಂದರು.
‘ಇಡೀ ಜಗತ್ತಿಗೆ ಬಸವಣ್ಣ ವಿಶ್ವಗುರುಗಳಾಗಿದ್ದಾರೆ. ಇಂತಹ ಬಸವಭಕ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಎಂದಿಗೂ, ಯಾರೂ ಸಹಿಸುವುದಿಲ್ಲ. ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಹೇಳಿಕೆಗಳನ್ನು ಯಾರು ನೀಡಬಾರದು. ಆದ್ದರಿಂದ ಸರ್ಕಾರ ಕೂಡಲೇ ಸ್ವಾಮೀಜಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ,’ ಎಂದರು.

ಗ್ರಾಮದ ಬಸವ ಪ್ರತಿಮೆಯ ಮುಂದೆ ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ ಹಾಗೂ ಬಸವಪರ ಸಂಘಟನೆಗಳು ಸೇರಿ ರಾಜ್ಯ ಹೆದ್ದಾರಿ ತಡೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಂಚಿಗನಾಳ ರಾಜಪ್ಪ, ಕಾರ್ಯದರ್ಶಿ ಕೆ.ಜಿ. ಶಿವಮೂರ್ತಿ, ಬಸವ ಬಳಗದ ಕಾರ್ಯದರ್ಶಿ ಚಂದ್ರಪ್ಪ, ಎಂ.ಯು. ಚನ್ನಬಸಪ್ಪ, ಟಿ.ವಿ. ಚಂದ್ರಪ್ಪ, ಮೌನೇಶ, ಪ್ರಕಾಶ, ಆಲೂರು ಶಿವಕುಮಾರ, ಹಿರೇಕೊಳಲು ಶರಣಪ್ಪ, ಕೆ.ಜಿ.ಶಿವಮೂರ್ತಿ, ಪ್ರದೀಪ ಪಾಟೀಲ ಮತ್ತೀತರ ಶರಣರು ಭಾಗವಹಿಸಿದ್ದರು.