ಬೆಳಗಾವಿ
ಬಬಲೇಶ್ವರದಲ್ಲಿ ಭಾಷಣ ಮಾಡುವಾಗ ಶಿವಶರಣ ಹರಳಯ್ಯನವರನ್ನು ಮಾದರ ಹರಳಯ್ಯ ಎಂದು ಕರೆದ ಕನ್ನೇರಿ ಸ್ವಾಮಿ ವಿರುದ್ಧ ಸಮಗಾರ/ಚಮ್ಮಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನೇರಿ ಸ್ವಾಮಿಯ ತಪ್ಪು ಸಂಬೋಧನೆಯಿಂದ ರಾಜ್ಯದಲ್ಲಿ ಸುಮಾರು 10 ಲಕ್ಷದಷ್ಟಿರುವ ಸಮಗಾರ/ಚಮ್ಮಾರ ಸಮುದಾಯದ ಜನರ ಭಾವನೆಗಳಗೆ ಭಾರೀ ಆಘಾತ ಮತ್ತು ನೋವು ಉಂಟು ಮಾಡಿದೆ.

“ಆದ್ದರಿಂದ ಕನ್ನೇರಿ ಸ್ವಾಮಿ ಈ ಕುರಿತು ಹರಳಯ್ಯನವರು ಸಮಗಾರ ಹರಳಯ್ಯ ಎಂದು ಸಮಜಾಯಿಷಿ ಕೊಟ್ಟು ಸಮಗಾರ ಜನತೆಯ ಭಾವನೆಗಳನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇವೆ,” ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮಹಾಸಭಾದ ಅಧ್ಯಕ್ಷ ಭೀಮರಾವ ಪವಾರ ಸಮಗಾರ ಸಮಾಜ ವ್ಯವಸ್ಥಿತ ರೀತಿಯಲ್ಲಿ ಸಂಘಟನೆಯಾಗದ ಕಾರಣ ನಮ್ಮ ಕುಲಗುರುವಿನ ಹೆಸರು ಮಾದರ ಹರಳಯ್ಯ ಎಂದೇ ಬಿಂಬಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ.
ಕನೇರಿ ಸ್ವಾಮಿಗೆ ವಾಸ್ತವ ತಿಳಿಸಲು ಮಹಾಸಭಾದ ವತಿಯಿಂದ ಪತ್ರವನ್ನು ಕಳುಹಿಸಲು ನಿರ್ಣಯಿಸಲಾಗಿದ್ದು, ರಾಜ್ಯದ ಎಲ್ಲ ಸಮಗಾರ, ಚಮ್ಮಾರ ಸಂಘಟನೆಗಳೂ ಇದೆ ರೀತಿ ಪತ್ರಗಳ್ಳನ್ನು ಕಳುಹಿಸಲು ಕರೆ ನೀಡಲಾಗಿದೆ, ಎಂದರು.
“ಹನ್ನೆರಡನೆಯ ಶತಮಾನದಲ್ಲಿ ಕ್ರಾಂತಿ ನಡೆಯಲು ಮಹಾನ್ ಶಿವಶರಣರಾದ ಹರಳಯ್ಯನವರು ಪ್ರಮುಖರು. ಶಿವಶರಣ ಹರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಮಾಡಿದ ಪಾದರಕ್ಷೆಗಳು ಈಗಲೂ ಇವೆ. ಅಂದರೆ ಶಿವಶರಣ ಹರಳಯ್ಯನವರು ಮೂಲತಃ ಪಾದರಕ್ಷೆ ಮಾಡುವ ಕಾಯಕದವರು.
ಅವರು ಹುಟ್ಟಿದ್ದು ವಿಜಯಪುರ ಜಿಲ್ಲೆ, ಕಾಯಕ ಕ್ಷೇತ್ರ ಬೀದರ ಜಿಲ್ಲೆಯ ಬಸವಕಲ್ಯಾಣ. ಈ ಎರಡೂ ಸ್ಥಳಗಳಲ್ಲಿ ಶಿವಶರಣ ಹರಳಯ್ಯನವರ ವಂಶಜರಾದ ಸಮಗಾರ ಜಾತಿಯ ಜನರು ಇಂದಿಗೂ ಪಾದರಕ್ಷೆಯ ಕಾಯಕ ಮಾಡುತ್ತ ಇದ್ದಾರೆ. ಶಿವಶರಣ ಹರಳಯ್ಯನವರು ಸಮಗಾರ ಜಾತಿಯವರು ಎನ್ನುವದಕ್ಕೆ ಹಲವಾರು ಸಂಶೋಧಕರು ಹಾಗೂ ಲೇಖಕರು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ತಮಿಳುನಾಡು ಮೂಲದ ಚೆನ್ನಯ್ಯನವರು ಮಾದರ ಜಾತಿಯವರು. ಹಲವಾರು ವಚನಗಳಲ್ಲಿಯೂ ಸಹ ಅವರ ಹೆಸರು ಮಾದರ ಚೆನ್ನಯ್ಯ ಎಂಬುದು ಪ್ರಸ್ತಾಪವಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

