ಧಾರವಾಡ, ಬೈಲಹೊಂಗಲ:
ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ಜರುಗಿಸಬೇಕೆಂದು ಶರಣ ಸಮಗಾರ ಹರಳಯ್ಯ ಸಮಾಜ ಸಂಘಟನೆಗಳು ಧಾರವಾಡ ನಗರ ಮತ್ತು ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದವು.
ಧಾರವಾಡದಲ್ಲಿ ಸ್ವಾಭಿಮಾನಿ ಸಮಗಾರ ಶ್ರೀ ಹರಳಯ್ಯ ಸಮುದಾಯ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಭಂಡಾರಿ, ಸಂದೀಪ ಮಿಶ್ರಿಕೋಟಿ, ರಾಜೇಂದ್ರ ಗಾಮನಗಟ್ಟಿ, ಮಂಜುಳಾ ಬೆಣಗಿ ಮಾತನಾಡಿ ಕನ್ನೇರಿ ಶ್ರೀ ವರ್ತನೆ ಮತ್ತು ಹೇಳಿಕೆಯನ್ನು ಖಂಡಿಸಿದರು. ಅವರು ಕ್ಷಮೆ ಕೇಳಬೇಕೆಂದು, ಇಲ್ಲದೇ ಹೋದರೆ ಕಾನೂನಿನ ಮೊರೆ ಹೋಗುತ್ತೇವೆಂದರು. ಸಮಾಜದ ಹಲವಾರು ಜನ ಉಪಸ್ಥಿತರಿದ್ದರು.
ಬೈಲಹೊಂಗಲದಲ್ಲಿ ಶಿವಶರಣ ಸಮಗಾರ ಹರಳಯ್ಯ ಸಂಘದಿಂದ ಪ್ರತಿಭಟಿಸಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ ಅವರ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ.
ಸಮಾಜದ ಪ್ರಮುಖರಾದ ಪರಶುರಾಮ ವೈ. ರಾಯಭಾಗ, ತಿಪ್ಪಣ್ಣ ಸವದತ್ತಿ, ಗುರುಪಾದ ಕಟ್ಟಿಮನಿ, ಅರ್ಜುನ ರಾಯಭಾಗ, ರಾಜೇಶ ತೋರಗಲ್ಲ, ಪರಶುರಾಮ ಬಿ. ರಾಯಭಾಗ, ಗಣೇಶ ಕಾಂಬಳೆ, ಅಶೋಕ ಸವದತ್ತಿ, ನಾಗರಾಜ ಅಗಾಸಿ, ಸುಭಾಸ ಸವದತ್ತಿ, ಬಸವರಾಜ ಕಿತ್ತೂರ ಮತ್ತಿತರರು ಪಾಲ್ಗೊಂಡಿದ್ದರು.

ಮನವಿ ಪತ್ರದಲ್ಲಿ ಕನ್ನೇರಿ ಸ್ವಾಮಿ ಬಬಲೇಶ್ವರದ ಹಿಂದೂ ಸಮಾವೇಶದಲ್ಲಿ ಶಿವಶರಣ ಹರಳಯ್ಯನವರನ್ನು ‘ಮಾದರ ಹರಳಯ್ಯ ಎಂದು ಸಂಬೋಧಿಸಿದ್ದಾರೆ. ಇದರಿಂದ 10 ಲಕ್ಷದಷ್ಟಿರುವ ಸಮಗಾರ/ಚಮ್ಮಾರ ಸಮುದಾಯದ ಜನರ ಭಾವನೆಗಳಗೆ ಭಾರೀ ಆಘಾತ ಮತ್ತು ನೋವು ಉಂಟು ಮಾಡಿದೆ ಎಂದು ಹೇಳಲಾಗಿದೆ.
ಅವರು ನೀಡಿದ ತಪ್ಪು ಹೇಳಿಕೆ ಹಿಂಪಡೆದು, ಸಾರ್ವಜನಿಕ ಕ್ಷಮೆ ಕೇಳಬೇಕು, ಸರಿಯಾದ ಹೇಳಿಕೆಯನ್ನು ಮಾಧ್ಯಮದ ಮುಂದೆ ಬಂದು ಹೇಳಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸುವ ಮತ್ತು ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಸಂಘಟನೆಗಳು ತಿಳಿಸಿವೆ.

ಜಿಲ್ಲಾಧಿಕಾರಿಗಳಿಗೆ ಅವರ ವಿರುದ್ಧ ಕ್ರಮಕ್ಕೆ ಅರ್ಜಿ ಸಲ್ಲಿಸಿದರೆ ಅವರು ಯಾವ ಶಿಕ್ಷೆಯನ್ನು ನೀಡಲಾರರು ಮಾನದಷ್ಟು ಸಾಂಭವಿಕವಾಗಿ ಹಾಕಿದರೆ ಒಂದೆರಡು ಕೋಟಿ ರೂಪಾಯಿಯನ್ನು ಸ್ವಾಮೀಜಿ ನೀಡಬಹುದು ಇದು ಭಾರತ ಸಂವಿಧಾನದ ಆಯ್ಕೆಯಾಗಿವೆ ಇಲ್ಲದೆ ಹೋದರೆ ಸಾಮೂಹಿಕವಾಗಿ ಅವರನ್ನು ಹಿಗ್ಗಾಮುಗ್ಗವಾಗಿ ತಿಳಿಸಬಹುದಷ್ಟೇ
ಮಾದರು ಮತ್ತು ಹೊಲೆಯ ಎಂಬ ಈ ಎರಡು ಶಬ್ಧಗಳನ್ನೇ ಸರಕಾರದ ಜಾತಿ ಕಾಲಮ್ ನಿಂದ ತಗೆಯುವಂತೆ ಒತ್ತಾಯಿಸಬೇಕು.ಸಂವಿಧಾನದ ದೃಷ್ಟಿಯಿಂದ ಎಲ್ಲರೂ ಸಮಾನರು.ಶರಣರನ್ನು ಹೃದಯದಿಂದ ಪೂಜಿಸಬೇಕೆ ಹೊರತು ಅವರ ಜಾತಿ ಅಥವಾ ವೃತ್ತಿ ಯಿಂದಲ್ಲ🙏