ಕಪ್ಪತ್ತಗುಡ್ಡ ಸೂಕ್ಷ್ಮ ವಲಯ ಕುಗ್ಗಿಸಿರುವುದು ಆತಂಕಕಾರಿ: ತೋಂಟದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಮುಂಡರಗಿ:

‘ಮಧ್ಯ ಕರ್ನಾಟಕದ ಜೀವನಾಡಿ ಆಗಿರುವ ಕಪ್ಪತ್ತಗುಡ್ಡದ ಸುತ್ತಲಿನ ಸೂಕ್ಷ್ಮ ವಲಯವನ್ನು 10 ಕಿ.ಮೀ.ನಿಂದ ಒಂದು ಕಿಲೋಮೀಟರ್‌ಗೆ ಇಳಿಸಿದ್ದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಅವರು ಕರ್ನಾಟಕ ಪತ್ರಕರ್ತರ ಸಂಘ ಮತ್ತು ತೋಂಟದಾರ್ಯ ಮಠದ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಕಪ್ಪತ್ತಗುಡ್ಡದಲ್ಲಿ ಏರ್ಪಡಿಸಿದ್ದ 16 ಜಿಲ್ಲೆಗಳ 76 ಪತ್ರಕರ್ತರ ಕಪ್ಪತ್ತಗುಡ್ಡ ಅಧ್ಯಯನ ಪ್ರವಾಸದ ನಂತರ ನಿಯೋಗವನ್ನು ಉದ್ದೇಶಿಸಿ ಮಾತನಾಡಿದರು.

‘…ಕಪ್ಪತ್ತಗುಡ್ಡವನ್ನು ಸಂರಕ್ಷಿತ ವಲಯವನ್ನಾಗಿ ಘೋಷಿಸುವಂತೆ ನಾವು ಮಾಡಿಕೊಂಡಿದ್ದ ಮನವಿಗೆ ಆಗ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ತಕ್ಷಣ ಸ್ಪಂದಿಸಿದರು. ಈಗ 10 ಕಿ.ಮೀ.ವರೆಗೆ ಇದ್ದ ಸೂಕ್ಷ್ಮ ವಲಯವನ್ನು ಒಂದು ಕಿಲೋಮೀಟರ್‌ಗೆ ಇಳಿಸಿದ್ದು ಮಾತ್ರ ಸಮಾಧಾನ ತಂದಿಲ್ಲ,’ ಎಂದು ಹೇಳಿದರು.

‘ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ನಡೆಯಬಾರದು. ಇಲ್ಲಿ ಸ್ಥಾಪಿಸಲಾಗಿರುವ ನೂರಾರು ಗಾಳಿ ಯಂತ್ರಗಳಿಂದ ಈಗಾಗಲೇ ಇಲ್ಲಿನ ವನ್ಯಜೀವಿಗಳಿಗೆ ಬಹಳಷ್ಟು ತೊಂದರೆ ಆಗಿದೆ,’ ಎಂದು ಆಗ್ರಹಿಸಿದರು, ಎಂದು ಪ್ರಜಾವಾಣಿ ವರದಿಮಾಡಿದೆ.

ಕಪ್ಪತ್ತಗುಡ್ಡದ ಮೇಲೆ ಪತ್ರಕರ್ತರು ಮಾನವ ಸರಪಳಿ ನಿರ್ಮಿಸಿ ಕಪ್ಪತ್ತಗುಡ್ಡ ರಕ್ಷಣೆಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ, ಸಿದ್ದು ಯಾಪಲಪರವಿ, ಸಿದ್ದು ಸತ್ಯಣ್ಣವರ್, ಹರಿನಾಥ ಬಾಬು ಮಾತನಾಡಿದರು.

Share This Article
Leave a comment

Leave a Reply

Your email address will not be published. Required fields are marked *