ಕರ್ಮಯೋಗದಿಂದ ಶಿವಯೋಗಕ್ಕೆ ಏರಿದ ಸಿದ್ದರಾಮೇಶ್ವರರು: ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಶರಣಶ್ರೇಷ್ಠರಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಸಿದ್ದರಾಮೇಶ್ವರರು ನಿಜ ಕರ್ಮಯೋಗಿ. ಕೆರೆ, ಬಾವಿಗಳನ್ನು ಕಟ್ಟಿಸಿ, ವಚನಗಳ ಮೂಲಕ ಸಮಾಜದ ಪರಿವರ್ತನೆ ಮಾಡಿದವರು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2782 ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಬೆಳಕು ನೀಡುವ ಸೂರ್ಯ, ಚಂದ್ರ, ಬೀಸುವ ಗಾಳಿ, ಹರಿವ ಹಳ್ಳಕೊಳ್ಳಗಳು ಹೀಗೆ ಇಡೀ ಲೋಕವೇ ಅಖಂಡ ಚಲನೆಯಿಂದ ಕೂಡಿರುತ್ತದೆ. ಕರ್ಮವೇ ಯೋಗ, ಯೋಗವೇ ಕರ್ಮ ಎಂದು ಕರ್ಮಯೋಗಿಯಾಗಿ ಸಮಾಜದ ಪರಿವರ್ತನೆಗೆ ವಚನಗಳನ್ನು ರಚಿಸಿ ಅದರಂತೆ ಬಾಳಿದವರು ಸಿದ್ದರಾಮೇಶ್ವರರು.

ಶೂನ್ಯಪೀಠವನ್ನು ನಿರ್ವಹಿಸಿದರು. ಜನಸಮುದಾಯವನ್ನು ಪರಿವರ್ತನೆ ಮಾಡಿದರು‌. ನೊಳಂಬ ಜಾತಿಯವರಿಗೆ ಲಿಂಗದೀಕ್ಷೆ ಕೊಟ್ಟರು. ಇಷ್ಟಲಿಂಗ ಇದ್ದವರು ಲಿಂಗಾಂಗ ಸಾಮರಸ್ಯ ಸುಖ ಅನುಭವಿಸುತ್ತಾರೆ, ಲಿಂಗದಲ್ಲಿ ನಿಷ್ಟೆವುಳ್ಳವರಾಗಿರಬೇಕು, ಅಂತೆಯೇ ಶರಣ ಸತಿ, ಲಿಂಗ ಪತಿ ಎನ್ನುವುದು.

ಅಂಬಿಗರ ಚೌಡಯ್ಯ ಕೇವಲ ನದಿ ದಾಟಿಸದೇ ಭವಸಾಗರ ದಾಟಿಸುವ ಕೆಲಸ ಮಾಡಿದರು. ಅಂಬಿಗರ ಚೌಡಯ್ಯ ಉಳಿದ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವವುಳ್ಳವರು. ವೃತ್ತಿಯಿಂದ ಅಂಬಿಗ ಪ್ರವೃತ್ತಿಯಿಂದ ಅನುಭಾವಿ ಎಂದು ಆಶೀರ್ವಚನ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ ಕೆವಿಜಿ ಬ್ಯಾಂಕ್ ವಿಶ್ರಾಂತ ಅಧಿಕಾರಿಗಳಾದ, ಶಿವಣ್ಣ ಎ. ಮುಗದ ಅವರು ಸಿದ್ದರಾಮೇಶ್ವರ ಮತ್ತು ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕುರಿತು ಮಾತನಾಡುತ್ತಾ, ಸಿದ್ದರಾಮೇಶ್ವರರು  68,000 ಸಾವಿರ ಕೆರೆಗಳನ್ನು ಕಟ್ಟಿಸಿದರು. ಸ್ವತಃ ಅದೇ ಕಾಯಕ ಮಾಡುತ್ತಿದ್ದರು. 4000 ಜನ ಇವರೊಂದಿಗೆ ಕಾಯಕಕ್ಕೆ ನಿಲ್ಲುತ್ತಿದ್ದರು. ಇವರ ಶಾಸನಗಳು ನಾಡಿನ ತುಂಬೆಲ್ಲ ಇವೆ. ಹಸಿವು ಆಗದಂತೆ ಹೃದಯದಲ್ಲಿ ಕೆರೆಕಟ್ಟೆ ಬೇಕು. ಭಾವದಲ್ಲಿ ಪ್ರಸನ್ನತೆ ಬೇಕು. ಯೋಗಿಗಳ ಯೋಗಿ ಸಿದ್ದರಾಮ ಅವನೊಬ್ಬರೆ ಶಿವಯೋಗಿ ಎಂದರು.

ಅಂಬಿಗರ ಚೌಡಯ್ಯ ಶರಣರು ನೇರ ನಿಷ್ಟುರ ಮಾತುಗಳಿಂದ ವಚನಗಳನ್ನು ಬರೆದಿದ್ದಾರೆ. ನಿಜದ ನಗಾರಿ, ನಿರ್ಭಯತೆಯ ಭೇರಿ ಈ ಚೌಡಯ್ಯ ಎಂದು ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು. ಸಂಗೀತ ಸೇವೆಯನ್ನು ತನ್ಮಯಿ ಹೆಚ್.ಎಸ್. ಶಿವಮೊಗ್ಗ, ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು.

ಧರ್ಮ ಗ್ರಂಥ ಪಠಣವನ್ನು, ಸಿಂಚನಾ ಹೊಸಮನಿ ಹಾಗೂ ವಚನ ಚಿಂತನವನ್ನು ಸನ್ನಿಧಿ ಪಾಟೀಲ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು, ವ್ಯಾಪಾರಸ್ಥರಾದ ಉಮೇಶ ಯಳವತ್ತಿ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ರಾದ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *