ಅಡ್ಡಪಲ್ಲಕ್ಕಿ: ನಿರ್ಣಯ ಬದಲಿಸಲು ಕಾಶಪ್ಪನವರ್ ಮೇಲೆ ಒತ್ತಡ

ಬೆಂಗಳೂರು

ಈ ವರ್ಷ ಕೂಡಲಸಂಗಮದಲ್ಲಿ ಪಂಚಾಚಾರ್ಯರನ್ನು ಆಹ್ವಾನಿಸಿ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ನಿರ್ಣಯ ಬದಲಿಸಲು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮೇಲೆ ಒತ್ತಡ ಬಂದಿದೆ.

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತ ಕೂಡಲಸಂಗಮವನ್ನು ಯಾರು ಯಾರೋ ಹೊಲಸು ಮಾಡಿದ್ದಾರೆ, ಆದ್ದರಿಂದ ಪಂಚಾಚಾರ್ಯರನ್ನು ಕರೆಸಿ ಶುದ್ದಿ ಮಾಡಿಸಬೇಕೆಂದು ಕಾಶಪ್ಪನವರ್ ಹೇಳಿದ್ದರು.

ಇದರ ವಿರುದ್ಧ ಬಸವ ಅನುಯಾಯಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶನಿವಾರ ಲಿಂಗಾಯತ ಮಠಾಧೀಶರ ಒಕ್ಕೊಟದಿಂದ ಬಂದ ಹೇಳಿಕೆಯೂ ಕಾಶೆಪ್ಪನವರನ್ನು ಖಂಡಿಸಿ “ಕಾಶಪ್ಪನವರು ಈ ರೀತಿ ಮಾಡಿದರೆ ನಾಡಿನ ಸಮಸ್ತ ಬಸವಭಕ್ತರು, ಪ್ರಗತಿಪರ ಚಿಂತಕರು, ಸಂವಿಧಾನ ಪ್ರೇಮಿಗಳು ಇದನ್ನು ಒಗ್ಗಟ್ಟಿನಿಂದ ಪ್ರತಿಭಟಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದರು.

ವಿವಾದ ಸ್ಪೋಟಗೊಂಡ ನಂತರ ಅಡ್ಡಪಲ್ಲಕ್ಕಿಯಿಂದ ರಾಜಕೀಯವಾಗಿ ಕೊಡಲಿ ಪೆಟ್ಟು ಬೀಳುವ ಬಗ್ಗೆ ಕಾಶಪ್ಪನವರ್ ಅವರೊಡನೆ ಚರ್ಚಿಸಿದ್ದೇನೆ ಎಂದು ಪಂಚಮಸಾಲಿ ಸಮಾಜದ ಮುಖಂಡರೊಬ್ಬರು ಹೇಳಿದರು. “ಅಡ್ಡಪಲ್ಲಕ್ಕಿ ನಡೆಸಿದರೆ ಲಿಂಗಾಯತ ಸಮಾಜದೊಡನೆ ಸಂಬಂಧ ಹಾಳಾಗುವ ಸ್ಪಷ್ಟತೆಯೂ ಈಗ ಅವರಲ್ಲಿದೆ,” ಎಂದು ಅವರು ಹೇಳಿದರು.

ಇದರ ಬಗ್ಗೆ ಕರೆ ಇಂದು ಮಾಡಿದಾಗ “ಈ ವಿಷಯದ ಬಗ್ಗೆ ಸದ್ಯಕ್ಕೆ ಬೇಡ, ನಂತರ ಮಾತನಾಡುತ್ತೇನೆ,” ಎಂದು ಕಾಶಪ್ಪನವರ್ ಬಸವ ಮೀಡಿಯಾಗೆ ಹೇಳಿದರು.

ಆದರೆ ಅವರ ಸಂಪರ್ಕದಲ್ಲಿರುವ ಉತ್ತರ ಕರ್ನಾಟಕದ ಲಿಂಗಾಯತ ಸ್ವಾಮೀಜಿಯವರೊಬ್ಬರಿಗೆ ಕಾಶಪ್ಪನವರ್ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

“ಕೂಡಲ ಸಂಗಮ ಶುದ್ದೀಕರಣವಾಗಬೇಕೆಂದು ಹೇಳಿದ್ದು ಪಂಚಮಸಾಲಿ ಪೀಠದ ಈಗಿನ ಸ್ವಾಮೀಜಿಯ ಮೇಲಿನ ಸಿಟ್ಟಿನಿಂದ. ತುಂಬಾ ಭಾವುಕನಾಗಿ ಮಾತನಾಡಿದೆ, ಪರಿಣಾಮ ಆಲೋಚಿಸಲಿಲ್ಲ, ಎಂದು ಅವರು ಹೇಳಿದರು. ಅವರಿಗೆ ಬಹಿರಂಗವಾಗಿ ಹೇಳಿಕೆ ನೀಡಲು ನಾವು ಸಲಹೆ ನೀಡಿದ್ದೇವೆ,” ಎಂದು ಸ್ವಾಮೀಜಿ ಬಸವ ಮೀಡಿಯಾಗೆ ಹೇಳಿದರು.

ಆದರೆ ಪಂಚಮಸಾಲಿ ಮುಖಂಡರೊಬ್ಬರು ಇದು ಭಾವುಕತೆಯಿಂದ ಆದ ಪ್ರಮಾದ ಎಂಬ ಮಾತನ್ನು ತಳ್ಳಿಹಾಕಿದರು.

“ಕಾಶಪ್ಪನವರ್ ರಾಜಕಾರಣ ಮಾಡುತ್ತಿದ್ದಾರೆ. ಪಂಚಪೀಠಗಳ ಭಕ್ತರನ್ನು ಓಲೈಸಲು ದಾವಣಗೆರೆಯ ಶೃಂಗ ಸಭೆಯಲ್ಲಿ ಮೊದಲು ಆಹ್ವಾನ ನೀಡಿದರು. ಆದರೆ ಈಗ ಅವರ ಆಹ್ವಾನ ಲಿಂಗಾಯತರನ್ನು ಕೆರಳಿಸಿದೆ ಎಂದು ಅರಿವಾಗಿದೆ.

ಜೊತೆಗೆ ಸಿದ್ದರಾಮಯ್ಯ ಬಸವಣ್ಣನವರ ಅನುಯಾಯಿ. ಈ ಕಾರಣಕ್ಕಾಗಿಯೇ ಪಂಚಾಚಾರ್ಯರು ಅವರನ್ನು ಎಲ್ಲೆಡೆ ಟೀಕಿಸುತ್ತಾರೆ. ಕೂಡಲಸಂಗಮದಲ್ಲಿ ಅಡ್ಡಪಲ್ಲಕ್ಕಿ ನಡೆದರೆ ಸಿದ್ದರಾಮಯ್ಯನವರ ವಿರೋಧವನ್ನೂ ಕಾಶಪ್ಪನವರ್ ಕಟ್ಟಿಕೊಳ್ಳಬೇಕಾಗುತ್ತದೆ,” ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
1 Comment
  • ಈ ರಾಜಕೀಯ ಮೂಢರಿಗೆ ಇಂತಹ ಕೊಳಕು ಬುದ್ದಿ ಬಂದಿರುವದು ಪಂಚಾಚಾರ್ಯರ ಒಳ ಉಪದೇಶದಿಂದ.ಒಟ್ಟಾರೆಯಾಗಿ ತಾನೂ ಶಾಮನೂರರಂತೆ ಮೆರೆಯಬೇಕೆಂಬಾಸೆ ಇದೆ. ಇವನೊಬ್ಬ ಹಸಿಹುಂಬ ರಾಜಕಾರಣಿ.

Leave a Reply

Your email address will not be published. Required fields are marked *