ಬೀದರ
ಬಸವಣ್ಣನವರು ಪ್ರತಿಪಾದಿಸಿದ ಕಾಯಕ- ದಾಸೋಹ ಸಿದ್ಧಾಂತದ ಅನುಕರಣೆಯಿಂದ ಸುಭದ್ರ ಹಾಗೂ ಸಂಪದ್ಭರಿತ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಕಲಬುರಗಿಯ ಚಿಂತಕ ಡಾ. ಬಸವರಾಜ ಮಠಪತಿ ಅಭಿಪ್ರಾಯಪಟ್ಟರು.
ನಗರದ ಬಸವಗಿರಿಯಲ್ಲಿ ಲಿಂಗಾಯತ ಮಹಾಮಠದ ವತಿಯಿಂದ ಸೋಮವಾರ ನಡೆದ ೨೫೮ನೇ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ, ಶರಣರ ಆರ್ಥಿಕ ನಿಲುವು ಕುರಿತು ಅವರು ಮಾತನಾಡಿದರು.
ಕಾಯಕ ಒಂದು ದೇಶದ ಆರ್ಥಿಕ ಸಿದ್ಧಾಂತದ ಬೆನ್ನೆಲುಬು. ಸಮಾಜದ ಪ್ರತಿಯೊಬ್ಬರೂ ದುಡಿದು ಉಣ್ಣಬೇಕು. ಕುಳಿತು ಉಣ್ಣುವುದು ಪಾಪ ಎಂದು ಹೇಳಿದರು.
ಕಾಯಕದಲ್ಲಿ ಮೇಲು-ಕೀಳು ಇಲ್ಲ. ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಉತ್ಸಾಹ ಇರಬೇಕು. ಆದರೆ, ಯುವ ಸಮೂಹ ಕಡಿಮೆ ದುಡಿದು ಹೆಚ್ಚು ಗಳಿಸುವ ಮತ್ತು ಶ್ರಮಪಡದೆ ಗಳಿಸುವ ಕಡೆಗೆ ವಾಲುತ್ತಿರುವುದು ಕಳವಳಕಾರಿ. ಸಂಪತ್ತು ಸಂಗ್ರಹಣೆಯ ಹಪಾಹಪಿತನ ಒಳ್ಳೆಯದಲ್ಲ ಎಂದು ಹೇಳಿದರು.
ಸಮಾಜ ಶೋಷಣೆ ಮುಕ್ತವಾಗಬೇಕಾದರೆ ಪ್ರತಿಯೊಬ್ಬರೂ ದುಡಿಯಲೇ ಬೇಕು. ದುಡಿದದ್ದನ್ನು ತಾನೊಬ್ಬನೇ ಉಣ್ಣದೆ ಸ್ವಲ್ಪ ಭಾಗ ದಾಸೋಹ ಮಾಡಬೇಕು. ಕಾಯಕ ಮತ್ತು ದಾಸೋಹಗಳು ಸಮಾಜದ ಎರಡು ಕಣ್ಣುಗಳಾದಾಗ ಸುಂದರ ವಿಶ್ವ ನಿರ್ಮಾಣವಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಸವಕಲ್ಯಾಣದ ಬಸವಪ್ರಭು ಸ್ವಾಮಿಜಿ ಮಾತನಾಡಿ, ಆಧುನಿಕ ಯುಗದಲ್ಲಿ ಭೌತಿಕ ಸಂಪತ್ತು ಹೆಚ್ಚಾಗುತ್ತಿದ್ದರೂ ಜನರು ಮಾನಸಿಕ ದಾರಿದ್ರ‍್ಯಕ್ಕೆ ಒಳಗಾಗುತ್ತಿದ್ದಾರೆ. ಕೀಳು ಅಭಿರುಚಿ, ಕೀಳು ಕಾರ್ಯಗಳತ್ತ ಹರಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮನದಲ್ಲಿಯ ಕ್ರೋಧ, ಕುಭಾಷೆ, ಕುತಂತ್ರತನಗಳನ್ನು ತೆಗೆಯಲು ಶರಣ ಸಂಗಮದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕಲುಷಿತ ವಾತಾವರಣ ತಿಳಿಗೊಳಿಸಲು ಶರಣರ ವಚನಗಳನ್ನು ಓದಬೇಕು. ಭಾವನೆ ಶುದ್ಧವಾಗಲು ಇಷ್ಟಲಿಂಗ ಉಪಾಸನೆ ಮಾಡಬೇಕು ಎಂದು ಸಲಹೆ ಮಾಡಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮಿಜಿ ಮಾತನಾಡಿ, ಸತ್ಯದ ದಾರಿಯಲ್ಲಿ ನಡೆದು, ಸತ್ಯ ಶುದ್ಧ ಕಾಯಕ, ದಾಸೋಹ ಮಾಡಿ, ಸಂತೃಪ್ತಿಯಿಂದ ಬದುಕುವುದೇ ಶರಣ ಜೀವನ ಎಂದು ನುಡಿದರು.
ವಚನ ವಿಜಯೋತ್ಸವ ಅಕ್ಕ ಅನ್ನಪೂರ್ಣ ತಾಯಿಯವರ ಪ್ರಾಣವಾಗಿತ್ತು. ಅವರ ಕೊನೆಯ ದಿನಗಳಲ್ಲಿ ವಚನ ವಿಜಯೋತ್ಸವದ ವೈಭವ ಮರುಕಳಿಸಬೇಕೆಂದು ಹಂಬಲಿಸಿದ್ದರು. ಲಿಂಗಾಯತ ಮಹಾಮಠದಿಂದ ಅರ್ಥಪೂರ್ಣ ವಚನ ವಿಜಯೋತ್ಸವ ಆಚರಿಸೋಣ ಎಂದರು.

ರಮೇಶ ಚಿಕ್ಕಲಿಂಗೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಖಜಾಂಚಿ ದೇವಪ್ಪ ಚಾಂಬೋಳೆ, ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು.
ಉಷಾ ರಮೇಶ ಬೆಳಕೋಟೆ ಗುರುಪೂಜೆ ನೆರವೇರಿಸಿದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆಗೈದರು. ಶ್ಯಾಮಲಾ ಅಶೋಕ ಎಲಿ ದಂಪತಿ ಭಕ್ತಿ ದಾಸೋಹಗೈದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಪ್ರವೀಣ ಬಿರಾದಾರ ವಂದಿಸಿದರು.