ಬೆವರಿನ ಹನಿಯಲ್ಲಿ ಅರಳಿದ ಸಮಾನತೆಯ ಮಹಾಕ್ರಾಂತಿ

ಸಾಯಿಕುಮಾರ ಇಜೇರಿ
ಸಾಯಿಕುಮಾರ ಇಜೇರಿ

ಇಂದು ‘ಕಾಯಕ ಶರಣರ ಜಯಂತಿ’

ಶಹಾಪುರ

ಭಾರತದ ಸಾಮಾಜಿಕ ಇತಿಹಾಸದಲ್ಲಿ ಹನ್ನೆರಡನೇ ಶತಮಾನವು ಕೇವಲ ಒಂದು ಕಾಲಘಟ್ಟವಲ್ಲ, ಅದು ಮಾನವ ಕುಲದ ಆತ್ಮಗೌರವ ಜಾಗೃತಗೊಂಡ ‘ಸುವರ್ಣ ಯುಗ’.

ಅಂದು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ವಿಶ್ವದ ಮೊದಲ ಸಂಸತ್ತು ಎನ್ನಲಾದ ‘ಅನುಭವ ಮಂಟಪ’ದ ಮೂಲಕ ಹೊಸದೊಂದು ಚರಿತ್ರೆಯನ್ನು ಬರೆಯಿತು.

ಈ ಮಹಾ ಚಳವಳಿಯ ನಿಜವಾದ ಶಕ್ತಿ ಮತ್ತು ಸೈನ್ಯವೆಂದರೆ ‘ಕಾಯಕ ಶರಣರು’. ಅಕ್ಷರ ಮತ್ತು ಅಧ್ಯಾತ್ಮ ಕೆಲವರ ಸೊತ್ತಾಗಿದ್ದ ಕಾಲದಲ್ಲಿ, ಸಮಾಜದ ಕಟ್ಟಕಡೆಯ ಸ್ತರದಲ್ಲಿದ್ದ ಶ್ರಮಿಕ ವರ್ಗಕ್ಕೆ ಜ್ಞಾನದ ದೀವಿಗೆಯನ್ನು ನೀಡಿದವರು ಈ ಶರಣರು.

ಇಂತಹ ಮಹಾಚೇತನಗಳ ಸ್ಮರಣಾರ್ಥವಾಗಿ ಕರ್ನಾಟಕ ಸರ್ಕಾರವು ಫೆಬ್ರವರಿ 10 ರಂದು ‘ಕಾಯಕ ಶರಣರ ಜಯಂತಿ’ಯನ್ನು ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.

ಕಲ್ಯಾಣ:
ಶೋಷಿತರ ಪಾಲಿನ ಆಶ್ರಯ ತಾಣ ಅಂದು ಕಲ್ಯಾಣ ಎಂಬುದು ಕೇವಲ ಒಂದು ನಗರವಾಗಿರಲಿಲ್ಲ; ಅದು ತುಳಿಯಲ್ಪಟ್ಟವರ ಪಾಲಿನ ಆಶ್ರಯ ತಾಣವಾಗಿತ್ತು. “ಅಸ್ಪೃಶ್ಯ” ಎಂಬ ಹಣೆಪಟ್ಟಿ ಹೊತ್ತು ಅಕ್ಷರ ಸಂಸ್ಕೃತಿಯಿಂದ ದೂರವಿದ್ದ ಸಮುದಾಯಗಳಿಗೆ ಬಸವಣ್ಣನವರು ನೀಡಿದ ಅತಿದೊಡ್ಡ ಉಡುಗೊರೆ ಎಂದರೆ ‘ಆತ್ಮಗೌರವ’.

ಅಂದು ಚಮ್ಮಾರಿಕೆ ಮಾಡುತ್ತಿದ್ದ ಹರಳಯ್ಯ, ಕಸ ಗುಡಿಸುತ್ತಿದ್ದ ಸತ್ಯಕ್ಕ, ಹಡಪದ ರೇಚಣ್ಣ, ಅಂಬಿಗರ ಚೌಡಯ್ಯ,ಮಡಿವಾಳ ಮಾಚಯ್ಯ, ಇನ್ನೂ ಹಲವು ಶರಣರ ಶರಣೆಯರೆಲ್ಲರೂ ಕೇವಲ ಶ್ರಮಿಕರಾಗಿ ಉಳಿಯದೆ ಅಧ್ಯಾತ್ಮದ ಶಿಖರವೇರಿದರು. ಅವರ ಈ ಅದ್ಭುತ ಬದುಕಿನ ಸ್ಮರಣೆಯೇ ಈ ಜಯಂತಿಯ ಆಶಯ.

ಕಾಯಕ ಮತ್ತು ದಾಸೋಹ: ಶರಣ ಸಿದ್ಧಾಂತದ ಮೂಲಾಧಾರ
ಶರಣ ಚಳವಳಿಯ ಪ್ರಮುಖ ಮಂತ್ರ “ಕಾಯಕವೇ ಕೈಲಾಸ”. ಇಲ್ಲಿ ಕಾಯಕವೆಂದರೆ ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸವಲ್ಲ, ಅದು ಆಧ್ಯಾತ್ಮಿಕ ಶಿಸ್ತು.

ಪ್ರಾಮಾಣಿಕತೆ:
ಕಾಯಕದಲ್ಲಿ ಯಾವುದೇ ರೀತಿಯ ವಂಚನೆ ಇರಬಾರದು.

ಸಮಾನತೆ:
ಮಾಡುವ ಕೆಲಸದಲ್ಲಿ ಹೆಚ್ಚು-ಕಡಿಮೆ ಎಂಬ ಭೇದವಿರಬಾರದು.

ದಾಸೋಹ:
ತನ್ನ ಕಾಯಕದಿಂದ ಬಂದ ಲಾಭದಲ್ಲಿ ಸಮಾಜದ ಹಿತ ಅಡಗಿರಬೇಕು.
“ದೇವರಿಗೂ ಕಾಯಕ ಅನಿವಾರ್ಯ” ಎಂದು ಸಾರಿದ ಶರಣರು ಭಿಕ್ಷಾಟನೆಯನ್ನು ವಿರೋಧಿಸಿ, ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನ ದಿಂದ ಬದುಕುವ ಹಾದಿಯನ್ನು ತೋರಿಸಿಕೊಟ್ಟರು.

ಕ್ರಾಂತಿಯ ಹರಿಕಾರರು:
ಪ್ರಮುಖ ಕಾಯಕ ಶರಣರ ಜೀವನ ದರ್ಶನ

  1. ಮಾದಾರ ಚೆನ್ನಯ್ಯ
    ಚಮ್ಮಾರ ಕಾಯಕವನ್ನು ಮಾಡುತ್ತಿದ್ದ ಚೆನ್ನಯ್ಯನವರು, ಅಧ್ಯಾತ್ಮ ಎಂಬುದು ಕೇವಲ ಮೇಲ್ವರ್ಗದ ಸ್ವತ್ತಲ್ಲ, ಅದು ಶುದ್ಧ ಮನಸ್ಸಿನ ಶ್ರಮಿಕನ ಸ್ವತ್ತು ಎಂದು ಜಗತ್ತಿಗೆ ಸಾರಿದರು. ಬಸವಣ್ಣನವರೇ ಇವರನ್ನು ತಮ್ಮ ‘ಆತ್ಮಸಂಗಾತಿ’ ಎಂದು ಕರೆದದ್ದು ಇತಿಹಾಸದ ಅತಿದೊಡ್ಡ ಸಾಮಾಜಿಕ ನ್ಯಾಯ.
    ಚಮ್ಮಾರ ಕಾಯಕ ಮಾಡುತ್ತಿದ್ದ ಇವರು ಅಂತರಂಗದ ಭಕ್ತಿಯಿಂದ ದೈವವನ್ನು ಒಲಿಸಿಕೊಂಡವರು. ಬಸವಣ್ಣನವರೇ ಇವರನ್ನು “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ಬಸವಣ್ಣನವರ ವಿನಯಕ್ಕೆ ಕಾರಣವಾಗಿದ್ದು.
  2. ಡೋಹರ ಕಕ್ಕಯ್ಯ
    ಚರ್ಮ ಹದಮಾಡುವ ಕಾಯಕವು ಅಂದು ಅಸ್ಪೃಶ್ಯವಾಗಿತ್ತು. ಆದರೆ ಡೋಹರ ಕಕ್ಕಯ್ಯನವರು ಅದೇ ಕೆಲಸದಲ್ಲಿ ಶಿವತತ್ವವನ್ನು ಕಂಡರು. “ದೇಹವೇ ದೇಗುಲ” ಎಂದು ಸಾರಿದ ಶರಣ ಸಂಕುಲದಲ್ಲಿ ಕಕ್ಕಯ್ಯನವರದು ಹಿರಿಯ ದನಿ. ಅವರು ಅನುಭವ ಮಂಟಪದಲ್ಲಿ ಕುಳಿತು ಅಧ್ಯಾತ್ಮದ ಸಾರವನ್ನು ವಿವರಿಸುವಾಗ, ಜಾತಿಯ ಬೇಲಿಗಳು ಕಳಚಿ ಬಿದ್ದವು. ಕಕ್ಕಯ್ಯನವರ ವೈಚಾರಿಕತೆ ಎಂತಹುದೆಂದರೆ, ಅವರು ಜನ್ಮದ ಹಣೆಬರಹವನ್ನು ಶ್ರಮದ ಬಲದಿಂದ ಬದಲಿಸಬಹುದು ಎಂದು ತೋರಿಸಿಕೊಟ್ಟರು.
  3. ಸಮಗಾರ ಹರಳಯ್ಯ
    ಸಮಾಜವು ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ಸೀಳುತ್ತಿರುವಾಗ, ಹರಳಯ್ಯನವರು ಸಮಾನತೆಯ ಸೇತುವೆಯಾದರು. ತಮ್ಮ ದೇಹದ ಚರ್ಮವನ್ನೇ ಪಾದರಕ್ಷೆಯಾಗಿ ನೀಡಿದ ಅವರ ಭಕ್ತಿ, ಇಂದಿಗೂ ಮನುಷ್ಯಕುಲಕ್ಕೆ ನೀಡಿದ ಅತಿದೊಡ್ಡ ಪಾಠ. ಬ್ರಾಹ್ಮಣ ವಂಶದ ಮಧುವರಸರ ಮಗಳು ಮತ್ತು ಹರಳಯ್ಯನವರ ಮಗ ಶೀಲವಂತನ ವಿವಾಹವು ಕೇವಲ ಒಂದು ಮದುವೆಯಲ್ಲ; ಅದು ವರ್ಣವ್ಯವಸ್ಥೆಯ ಬೇರುಗಳನ್ನೇ ಅಲುಗಾಡಿಸಿದ ‘ಮಹಾಕ್ರಾಂತಿ’.
  4. ಉರಿಲಿಂಗ ಪೆದ್ದಿ
    ಕಳ್ಳತನದಂತಹ ದಾರಿತಪ್ಪಿದ್ದ ಪೆದ್ದಣ್ಣನವರು ಶರಣರ ಸಂಪರ್ಕದಿಂದ ‘ಉರಿಲಿಂಗ ಪೆದ್ದಿ’ಯಾಗಿ ಬದಲಾದದ್ದು ಒಂದು ರೋಚಕ ಇತಿಹಾಸ. ಅಕ್ಷರ ಜ್ಞಾನವಿಲ್ಲದ ವ್ಯಕ್ತಿ ಮಹಾನ್ ವಿದ್ವಾಂಸನಾಗಿ ಬೆಳೆದು ‘ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ’ ಎಂಬ ಅಂಕಿತದಲ್ಲಿ ವಚನ ಬರೆದದ್ದು ಇಂದಿನ ಶಿಕ್ಷಣ ವ್ಯವಸ್ಥೆಗೂ ಪ್ರೇರಣೆ.

ಅನುಭವ ಮಂಟಪ ಮತ್ತು ವಚನ ಸಾಹಿತ್ಯ:
ಅನುಭವ ಮಂಟಪವು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ನೆಲೆಯಾಗಿತ್ತು. ಅಲ್ಲಿ ಅರಸನಿಂದ ಹಿಡಿದು ಅಂಬಿಗನವರೆಗೆ ಎಲ್ಲರಿಗೂ ಸಮಾನ ಪೀಠವಿತ್ತು. ಶರಣರು ಸಂಸ್ಕೃತದ ಬದಲು ಜನರ ಭಾಷೆಯಾದ ಕನ್ನಡವನ್ನು ಅಪ್ಪಿಕೊಂಡು ಜಾತಿ ಪದ್ಧತಿಯ ನಿರ್ಮೂಲನೆ, ಮೌಢ್ಯ ವಿರೋಧ, ಮತ್ತು ಲಿಂಗ ಸಮಾನತೆಯನ್ನು ಸಾರಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಲು ಕಾರಣ ಅವುಗಳಲ್ಲಿರುವ ನಿರ್ಭೀತ ‘ಸತ್ಯ’.
ಇಂದಿನ ಕಾಲಘಟ್ಟದಲ್ಲಿ ಶರಣರ ಪ್ರಸ್ತುತತೆ
ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ವರ್ಗ ಸಂಘರ್ಷಗಳು ಜೀವಂತವಾಗಿವೆ. ಇಂತಹ ಸಂದರ್ಭದಲ್ಲಿ ಶರಣರ ಚಿಂತನೆಗಳು ಸಂಜೀವಿನಿಯಂತೆ ಕೆಲಸ ಮಾಡುತ್ತವೆ.

ಶ್ರಮ ಗೌರವ:
ಯಾವುದೇ ಕೆಲಸ ಕೀಳಲ್ಲ ಎಂಬ ಭಾವನೆ ಬೆಳೆಯಬೇಕು. ಯುವಜನತೆ ಕೃಷಿ ಮತ್ತು ಶ್ರಮದಾಯಕ ಕಾಯಕಗಳನ್ನು ಗೌರವಿಸಬೇಕು.

ಭ್ರಷ್ಟಾಚಾರ ನಿರ್ಮೂಲನೆ:
ಕಾಯಕದಲ್ಲಿ ವಂಚನೆ ಇರಬಾರದು ಎಂಬ ತತ್ವ ಪಾಲಿಸಿದರೆ ಭ್ರಷ್ಟಾಚಾರ ಮುಕ್ತ ಸಮಾಜ ಸಾಧ್ಯ.

ಸಾಮಾಜಿಕ ನ್ಯಾಯ:
ಶರಣರು ಸಾರಿದ ಸಮಾನತೆಯ ತತ್ವವೇ ನಮ್ಮ ಸಂವಿಧಾನಕ್ಕೆ ದಾರಿದೀಪ.

ವೈಚಾರಿಕತೆ:
ಮೌಢ್ಯಗಳ ಬೆನ್ನತ್ತದೆ, ಜ್ಞಾನ ಮತ್ತು ವಿಜ್ಞಾನದ ದಾರಿಯಲ್ಲಿ ನಡೆಯಲು ಶರಣರ ವಚನಗಳು ಪ್ರೇರೇಪಿಸುತ್ತವೆ.

ನಮ್ಮ ಜವಾಬ್ದಾರಿ:
ಕಾಯಕ ಶರಣರ ಜಯಂತಿಯೆಂದರೆ ಕೇವಲ ಭಾವಚಿತ್ರಕ್ಕೆ ಹೂವು ಹಾಕಿ ಪೂಜಿಸುವುದಲ್ಲ. ಅವರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಜಾತಿಮುಕ್ತ, ಸಮಾನತೆಯ ಸಮಾಜ ನಿರ್ಮಾಣದ ಕನಸು ನನಸಾದಾಗ ಮಾತ್ರ ಈ ಜಯಂತಿ ಸಾರ್ಥಕವಾಗುತ್ತದೆ.

ಶ್ರಮಿಕನೇ ಈ ಸಮಾಜದ ಆಸ್ತಿ. ಪ್ರತಿಯೊಬ್ಬ ಶ್ರಮಜೀವಿಯನ್ನು ಗೌರವಿಸೋಣ, ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಬಿತ್ತೋಣ. ಕಾಯಕ ಶರಣರ ಈ ಮಹಾನ್ ಚೇತನಗಳು ನಮಗೆ ಸದಾ ದಾರಿ ದೀಪವಾಗಿರಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
1 Comment
  • ಇಲ್ಲಿ ಎಷ್ಟೋ ಜನಾಂಗಗಗಳು ಕಾಣಸಿಗುತ್ತವೆ ಮಾನವೀಯತೆಯ ವಿಚಾರದಲ್ಲಿ ಯಾವುದೇ ಜನಾಂಗದಲ್ಲಿ ಪೂರ್ಣರೂಪದ ಹೃದಯ ವೈಶಾಲ್ಯತೆ ಇಲ್ಲ ಇದಕ್ಕೆ ಅಪವಾದ ಎಂದರೆ ಅದು ವಚನ ಚಳುವಳಿಯ ವಚನ ಜನಾಂಗ ಮಾತ್ರ ಅಂದರೆ ವೈಚಾರಿಕ ವೈಜ್ಞಾನಿಕ ತಳಹದಿಯ ಮೇಲೆ ಬದುಕಿದ ಶಿವಶರಣರು (ಲಿಂಗಾಯತರು ) ಮಾತ್ರವೇ ಪೂರ್ಣಪ್ರಮಾಣದಲ್ಲಿ ಮನುಷ್ಯತ್ವದಿಂದ ಬದುಕಿದರು ಈ ವಿಚಾರ ನಮ್ಮ ಸುತ್ತ ಮುತ್ತಲಿನವರಿಗೆ ಗೊತ್ತಾಗದಿರುವುದು ಮಹಾ ದುರಂತವೇ ಸರಿ ಹಾಗೆ ಗೊತ್ಡಾಗದಂತೆ ಪಟ್ಟಭದ್ರರೇ ಅಡ್ಡ ನಿಂತಿರುವುದು ಗುಟ್ಟಾಗೇನು ಉಳಿದಿಲ್ಲ . ವಚನಕಾರ ಜನಾಂಗವೊಂದು ಕಾಯಾ ವಾಚಾ ಮನಸಾ ಅತ್ಯಂತ ಪರಿಶುದ್ಧವಾಗಿ ಬದುಕಿತ್ತು ಅದೂ ಕರ್ನಾಟಕದಲ್ಲಿ ಎಂಬುದು ಜಗತ್ತಿಗೆ ಗೊತ್ತಾದರೆ ವಿಶ್ವದ ಮಾನವತ್ವದ ರೇಖೆಯಲ್ಲಿ ಮೊದಲಸ್ಥಾನ ಪಡೆಯುವುದೇ ಲಿಂಗಾಯಿತ ಶರಣರು ಕೀಳು ಕುಲ ಜಾತಿಗಳನ್ಕು ಮೇಲ್ಮಟ್ಟಕ್ಕೆ ಏರಿಸಿ ಕಾಯಕವೇ. ಕೈಲಾಸ ದಾಸೋಹವೇ ಕಾರುಣ್ಯ ದೇಹವೇ ದೇವಾಲಯ ಮನುಷ್ಯತ್ವವೇ ಧರ್ಮ ಮಾತೆಂಬುದು ಜ್ಯೋತಿರ್ಲಿಂಗ ಎಂಬ ಮುಂಚೂಣಿ ಮೌಲ್ಯಗಳನ್ನು. ಪ್ರತಿಪಾದಿಸಿದರು ಇವು ಬ್ರಹ್ಮಾಂಡದ ಮತ್ತೆಲ್ಲಿಯೂ ಕಾಣಸಿಗುವುದು ವಿರಳ ಶರಣು ಶರಣಾರ್ಥಿಗಳು 🙏🙏💐💐

Leave a Reply

Your email address will not be published. Required fields are marked *